ಹೀಗೊಂದು ಸನ್ಮಾನವೂ, ಸನ್ಮಾನ ಪತ್ರವೂ – ಶಿಕ್ಷಕನ ಡೈರಿಯಿಂದ 44

ಶಿಕ್ಷಕನ ಡೈರಿಯಿಂದ

ಹೀಗೊಂದು ಸನ್ಮಾನವೂ, ಸನ್ಮಾನ ಪತ್ರವೂ…..‌…

          ಆ ವರ್ಷ ಶಾಲೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸುವುದೆಂದು ಸಂಬಂಧಪಟ್ಟವರೆಲ್ಲಾ ಸೇರಿ ನಿರ್ಧರಿಸಿಬಿಟ್ಟಿದ್ದರು. ಶಿಕ್ಷಕರ ದಿನಾಚರಣೆಗೂ ಐದಾರು ದಿನ ಮೊದಲು ಮುಖ್ಯಶಿಕ್ಷಕರು ನಮ್ಮೆಲ್ಲರ ವೈಯಕ್ತಿಕ ವಿವರವನ್ನು ಕಲೆಹಾಕುತ್ತಿದ್ದರು. ನಮಗೊಂದು ಸಣ್ಣ ಅನುಮಾನ.. ನನಗೆ ಹಿಂದಿನ ಶಾಲೆಯಲ್ಲೊಮ್ಮೆ ನಮಗೆಲ್ಲಾ ಸನ್ಮಾನ ಮಾಡಿದ್ದು ನೆನಪಾಯಿತು. ನನಗೋ ಈ ಸನ್ಮಾನವೆಂದರೆ ಮೂರು ಹಾದಿ ಕೂಡುವಲ್ಲಿ ಕುಳ್ಳಿರಿಸಿ ಕ್ಷೌರ ಮಾಡಿಸಿಕೊಂಡ ಅನುಭವವಾಗುವುದು. ನನ್ನ ಸಹೋದ್ಯೋಗಿಗಳಲ್ಲಿ ಹಲವರದ್ದು ಇದೇ ಅಭಿಪ್ರಾಯ. ಇದೊಂದು‌ ಕೃತಕ, ಆಡಂಬರದ ಅಭಿವ್ಯಕ್ತಿ ಎಂದು ನಾವು ಭಾವಿಸಿದ್ದೆವು. ನಾನೂ ಮತ್ತೊಬ್ಬರು ಸಹೋದ್ಯೋಗಿಯೂ ಮುಖ್ಯ ಶಿಕ್ಷಕರಲ್ಲಿ "ಶಿಕ್ಷಕರ ದಿನವನ್ನು ಚೆನ್ನಾಗೇ ಆಚರಿಸೋಣ ಸರ್, ಆದರೆ ಶಿಕ್ಷಕರಿಗೆ ಸನ್ಮಾನದ ಯೋಚನೆಯೇನಾದರೂ ಇದ್ರೆ, ಅದನ್ನು ಬಿಟ್ಬಿಡಿ ಎನ್ನೋದು ನಮ್ಮ ಕೋರಿಕೆ. ಅದು ನಮಗೆಲ್ಲಾ ಮುಜುಗರ ತರ್ತದೆ" ಎಂದು ಬಿನ್ನವಿಸಿಕೊಂಡೆವು. "ಆ ಥರದ ಪ್ಲ್ಯಾನೇನೂ ಇಲ್ಲ... ಸಿಂಪಲ್ಲಾದ ಕಾರ್ಯಕ್ರಮ ಅಷ್ಟೇ" ಎಂದರು ಮುಖ್ಯೋಪಾಧ್ಯಾಯರು. 

      ಆದರೆ ಅದು ಸಿಂಪಲ್ಲಾದ ಕಾರ್ಯಕ್ರಮವೇನಾಗಿರಲಿಲ್ಲ.. ಭರ್ಜರಿಯಾದ ಸನ್ಮಾನ ನಮಗೆ ಕಾದಿತ್ತು. ಭಾಷಣಗಳೂ, ಉಪಹಾರವೂ ಭರ್ಜರಿಯೇ ಆಗಿದ್ದವು. ಸನ್ಮಾನಕ್ಕೆ ಅರ್ಹವಾದ ಯಾವುದೇ ಸಾಧನೆಯನ್ನು ನಾವು ಮಾಡಿಲ್ಲವಾದುದರಿಂದ, ಸನ್ಮಾನ ನಮಗೆಲ್ಲಾ ಮುಜುಗರ ಹುಟ್ಟಿಸಿತ್ತು ನಿಜ, ಆದರೆ ಸಂಭ್ರಮದ ಕಾರ್ಯಕ್ರಮ ನಮಗೆ ಖುಷಿಯನ್ನಂತೂ ನೀಡಿತ್ತು. ನಾನಂತೂ "ಸನ್ಮಾನಕ್ಕೆ ನಾವು ಅರ್ಹರಲ್ಲವಾದರೂ, ಅರ್ಹರೆಂದು ಪರಿಗಣಿಸಿ ಅವರು ಸನ್ಮಾನ ಮಾಡಿದ್ದಾರೆ; ಇನ್ನು ಅದಕ್ಕೆ ಅರ್ಹರಾಗುವಷ್ಟು ಬೆಳೆಯುವುದು ನಮ್ಮ ಜವಾಬ್ದಾರಿ" ಎಂದು ಷರಾ ಬರೆದುಕೊಂಡು ಬಿಟ್ಟಿದ್ದೆ. 
         ಸನ್ಮಾನದಲ್ಲಿ ದೊರಕಿದ ಸರಕುಗಳನ್ನೆಲ್ಲಾ ಮನೆಗೆ ಹೊತ್ತೊಯ್ದದ್ದಾಯಿತು. ಜರತಾರೀ ಶಾಲು - ಮಾಲೆಗಳನ್ನು ಕಂಡ ನನ್ನವಳಿಗೆ ಬಹಳ ಖುಷಿ. ಹಣ್ಣು ಹಂಪಲುಗಳನ್ನು ತಿಂದು ತೇಗಿ ಮಿಕ್ಕಿದ್ದನ್ನು ಫ್ರಿಜ್ಜಿಗೆ ತುಂಬಿದ್ದಾಯಿತು. ಚೆಂದದ ಫ್ರೇಮಿನೊಳಗೆ ಬರೆಯಲಾದ ಸನ್ಮಾನ ಪತ್ರವನ್ನು ಹಿಡಿದು ಇದನ್ನೆಲ್ಲಿ ನೇತು ಹಾಕಲಿ ಎಂದು ನನ್ನ ಮಡದಿ ಗೋಡೆ ನೋಡುತ್ತಿರುವಾಗ ನಾನದನ್ನು ಓದತೊಡಗಿದೆ. ಮೊದಲಿಗೆ ನನ್ನ ಪೂರ್ವಾಪರಗಳು, ಆಮೇಲೆ ನಾನು ಹೆಚ್ಚು ಪುಸ್ತಕಗಳನ್ನು ಓದುತ್ತೇನೆಂಬ ಮೆಚ್ಚುಗೆ, ಕೊನೆಯಲ್ಲಿ ಒಂದು ವಿಶೇಷ ವಾಕ್ಯ : "ಮಾತೇ ಸಾಧನೆಯಾಗಬಾರದು, ಸಾಧನೆಯೇ ಮಾತಾಗಬೇಕು ಎಂದು ನಾವೆಲ್ಲಾ ಅರಿತವರಿದ್ದೇವೆ."

       ಉಬ್ಬಿದ ಬಲೂನಿಗೆ ಪಿನ್ನು ಚುಚ್ಚಿದಂತಾಗಿತ್ತು. ನಾನು ಹೆಚ್ಚು ಮಾತನಾಡುತ್ತೇನೆ ಎಂಬುದು ನನ್ನನ್ನು ಬಲ್ಲವರೆಲ್ಲರೂ ಒಪ್ಪುವ ವಿಚಾರವೇ ಆಗಿತ್ತಾದರೂ, ಮಾತೇ ನನ್ನ ಸಾಧನೆ ಎಂಬ ಅಭಿಪ್ರಾಯ ಯಾರಲ್ಲೂ ಇರಲು ಸಾಧ್ಯವಿರಲಿಲ್ಲ. ಆದರೆ ಈ ವಾಕ್ಯ ಆ ಅರ್ಥವನ್ನೇ ಸೂಸುತ್ತಿರುವ ಹಾಗೆ ನನಗನಿಸಿತು. 

      ಆ ವಾಕ್ಯ ಬರೆದವರಲ್ಲಿ ಕುಹಕವೇ ತುಂಬಿರಬಹುದು ಎಂದು ನಾನು ಭಾವಿಸಿದೆ. ಒಂದು ಕ್ಷಣ ಅದೊಂದು ವಾಕ್ಯದ ವಿರುದ್ಧ ಮಾತನಾಡಬೇಕೆಂದು ನನಗನಿಸಿತ್ತಾದರೂ, ಮರುಕ್ಷಣದಲ್ಲಿ ಹಾಗೆ ಮಾಡಿದರೆ ನಾನು ಇನ್ನೂ ನಗೆಪಾಟಲಿಗೀಡಾದೇನು ಅನ್ನಿಸತೊಡಗಿತು. ಆ ವಾಕ್ಯವನ್ನು ಗಂಭೀರವಾಗಿ ಪರಿಗಣಿಸಬಾರದು, ಹಾಗೇ ಸುಮ್ಮನಿರಬೇಕೆಂದು ನಿರ್ಧರಿಸಿದೆ. ‌ಆದರೆ ಮನಸ್ಸು ಕೇಳಬೇಕಲ್ಲಾ..? ಬೇಸರ, ಅಸಹನೆ, ಆಕ್ರೋಶ... ಸನ್ಮಾನ ಪತ್ರದ ಫೋಟೋದೊಂದಿಗೆ ವ್ಯಂಗ್ಯದ ಮೆಸೇಜೊಂದನ್ನು ಟೈಪಿಸಿ ವಾಟ್ಸಾಪ್ ಗ್ರೂಪಿಗೆ ಹರಿಯಬಿಡುವ ಮೂಲಕ ಮನಸ್ಸಿಗೆ ಸಾಂತ್ವನ ಹೇಳಿಕೊಳ್ಳುವ ಯೋಚನೆ ಬಂತಾದರೂ, ಅದೂ ಸರಿಯೆನಿಸಲಿಲ್ಲ.. ಅರ್ಧ ಟೈಪಿಸಿದ ಮೆಸೇಜನ್ನು ಡಿಲೀಟಿಸಿದೆ. ಕೊನೆಗೊಂದು ಯೋಚನೆ ಬಂತು, ನಾನು ಅದರಲ್ಲಿರುವ ಮಾತನ್ನು ನಿಜಮಾಡಬೇಕು, ನನ್ನ ಸಾಧನೆಯೇ ಮಾತಾಗುವಷ್ಟು ಪ್ರಸಿದ್ಧನಾಗಬೇಕು...  ಈ ಯೋಚನೆ ಮನಸ್ಸಿಗೆ ತುಸು ಸಮಾಧಾನ ನೀಡಿತು.

       ನಾಲ್ಕೈದು ದಿನ ಕಳೆದ ಮೇಲೆ ಈ ವಿಚಾರದ ಕುರಿತು ನಾನು ಸಮಚಿತ್ತನಾಗಿದ್ದೆ. ನನ್ನ ಮನಸ್ಸಿನೊಳಗೆ ಮತ್ತೊಂದು ಯೋಚನೆ ಹುಟ್ಟಿತ್ತು.. ಸನ್ಮಾನ ಪತ್ರದಲ್ಲಿ ಹೀಗೆ ಬರೆದಿರುವ ವ್ಯಕ್ತಿ ಹಿಂದೆ ನನ್ನನ್ನು ಸುಖಾಸುಮ್ಮನೆ ಮತ್ತು‌ ಸುಳ್ಳುಸುಳ್ಳೇ ಹೊಗಳಿದ ಉದಾಹರಣೆಗಳು ಬಹಳಿದ್ದವು. ಆಗೆಲ್ಲಾ ಕಿರಿಕಿರಿ, ಮುಜುಗರವೇ ಆಗಿದ್ದರೂ ಅದಕ್ಕೆಲ್ಲಾ ನಗುತ್ತಲೇ ಪ್ರತಿಕ್ರಿಯಿಸುತ್ತಿದ್ದೆ. ಹಾಗಿರುವಾಗ ಇದೊಂದು ವಾಕ್ಯಕ್ಕೆ ವ್ಯಗ್ರನಾಗುವುದರಲ್ಲಿ ಅರ್ಥವಿದೆಯೇ...? ಅದರಂತೆ ಇದಕ್ಕೂ ನಗುವಷ್ಟೇ ನನ್ನ ಪ್ರತಿಕ್ರಿಯೆಯಾಗಬೇಕಿತ್ತು. ಇದೊಂದು ಯೋಚನೆ ಮನಸ್ಸಿಗೆ ಸಂಪೂರ್ಣ ಶಾಂತಿಯನ್ನು ನೀಡಿತ್ತು.

     ಈಗೆಲ್ಲಾ ಶಿಕ್ಷಕರ ದಿನ ಹತ್ತಿರ ಬಂದಾಗ ನನಗೆ ಇದನ್ನೆಲ್ಲಾ ನೆನೆದು ನಗುಬರುತ್ತದೆ... ಈ ನಗು ಆ ಸನ್ಮಾನ ಪತ್ರವನ್ನು ಮೊದಲ ಬಾರಿ ಓದಿದಾಗಲೇ ಬಂದಿದ್ದರೆ ಚೆನ್ನಿತ್ತು ಎಂದು‌‌ ನನಗನಿಸುತ್ತದೆ. ಆ ಮಟ್ಟದ ಸ್ಥಿತಪ್ರಜ್ಞತೆಯನ್ನು  ಬೆಳೆಸಿಕೊಳ್ಳಲು ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯೂ ಮನಸ್ಸಿನಲ್ಲಿ ಮೂಡುತ್ತದೆ.

    - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment