“ದೆಕ್ಕ್ ದ್ ದೀಲಾ ಆವಾ” ಗಳೂ, ಸಹಪಂಕ್ತಿ ಭೋಜನಗಳೂ, ಬೀಳುವ ಬೊಂಡದ ಸದ್ದುಗಳೂ– ಶಿಕ್ಷಕನ ಡೈರಿಯಿಂದ 39

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

“ದೆಕ್ಕ್ ದ್ ದೀಲಾ ಆವಾ” ಗಳೂ, ಸಹಪಂಕ್ತಿ ಭೋಜನಗಳೂ, ಬೀಳುವ ಬೊಂಡದ ಸದ್ದುಗಳೂ…..

  "ದೆಕ್ಕ್ ದ್ ದೀಲಾ ಆವಾ...( ತೊಳೆದಿಡು ಆಯ್ತಾ)" ಹೀಗೆಂದು ನನ್ನ ಜೊತೆಯಲ್ಲಿ ಬಂದಿದ್ದ ಹುಡುಗನಲ್ಲಿ ಮೆಲ್ಲನೆ ತುಳುವಿನಲ್ಲಿ ಹೇಳಿದ ಆಕೆಯ ಧ್ವನಿ, ಆ ಮಾತು ಆ ಹುಡುಗನೊಬ್ಬನಿಗೆ‌ ಕೇಳಿದರೆ‌ ಸಾಕು ಎಂಬಷ್ಟು ಸಣ್ಣಗಿದ್ದರೂ ನನಗೆ ಕೇಳಿಸಿತ್ತು. ನನಗೆ ತುಳು ಬರುವುದಿಲ್ಲವಾದ್ದರಿಂದ ಕೇಳಿಸಿದರೂ ಪರವಾಗಿಲ್ಲ ಎಂದಾಕೆ ಭಾವಿಸಿರಲೂಬಹುದೇನೋ.. ಆಕೆ ಕೊಟ್ಟ ಬಿಸಿಯಾದ ಬಾದಾಮಿ ಹಾಲು ಕುಡಿಯುತ್ತಿದ್ದ ನಾನು ನಸುನಕ್ಕೆ..
    ಸ್ವಂತ ಬೈಕಿಲ್ಲದ ಆ ದಿನಗಳಲ್ಲಿ ಗಣತಿಕಾರ್ಯಕ್ಕೆ ಮನೆಮನೆಗೆ ಭೇಟಿಕೊಡುವಾಗ ದಾರಿ ತೋರಿಸಲು ಮತ್ತು ಬೇಜಾರು ಕಳೆಯಲು ಹುಡುಗನೊಬ್ಬನನ್ನು ಜೊತೆಗೆ ಕರೆದೊಯ್ದಿದ್ದೆ. ಆ ದಿನ ನಾವು ಹೋಗಿದ್ದು ಶಾಲೆಯಿಂದ ತುಂಬಾ ದೂರವಿರುವ ಜಾಗಕ್ಕೆ. 'ಮೇಲ್ಜಾತಿಗೆ' ಸೇರಿದ್ದ ಆ ಮನೆಯಲ್ಲಿದ್ದ ಮಹಿಳೆ ನನಗಾಗಲೀ ಆ‌ ಹುಡುಗನಿಗಾಗಲೀ ಪರಿಚಯವಿಲ್ಲದವರಾದರೂ ಬಹಳ ಗೌರವಯುತವಾಗಿ ಮಾತಾಡಿ, ನಮ್ಮ ಸುಖಕಷ್ಟಗಳನ್ನೆಲ್ಲಾ ವಿಚಾರಿಸಿದರು. ಮಾಹಿತಿಗಳನ್ನೆಲ್ಲಾ ನೀಡಿದವರು ಬಾದಾಮಿ ಹಾಲನ್ನು ನಮ್ಮ ಮುಂದಿಟ್ಟರು. ಕುಡಿಯುವಾಗ ಮೆಲ್ಲನೇ ಹುಡುಗನ ಬಳಿ ಹೋಗಿ ಹಾಗೆಂದು ಉಸುರಿ ಸಣ್ಣತನ ಪ್ರದರ್ಶಿಸಿಬಿಟ್ಟರು.

    ಅದ್ಯಾಕೋ ಆ ಕ್ಷಣಕ್ಕೆ ನನಗೆ ಸಣ್ಣಗೆ ನಗು ಬಂದುಬಿಟ್ಟಿತ್ತು. ನಾನು ತಿಂದ ಪಾತ್ರೆಯನ್ನು ನಾನು ತೊಳೆಯುವುದರಲ್ಲಿ ಅವಮಾನವೇನಿಲ್ಲ ಎಂಬ ವಿಚಾರ ಬೇರೆ ತಲೆಯಲ್ಲಿತ್ತು. ಕುಡಿದು ಮುಗಿಸಿದವನು ಥಟ್ಟನೆ ಅಲ್ಲೇ ಪಕ್ಕದಲ್ಲಿದ್ದ ನಳ್ಳಿಯಲ್ಲಿ ಲೋಟ ತೊಳೆದಿಟ್ಟೆ. ಹುಡುಗನೂ ಅವನ‌ ಲೋಟ ತೊಳೆದ. ನಾನು ಲೋಟ ತೊಳೆದಾಗ ಆಕೆಯ ಮುಖ ತುಸು ಪೆಚ್ಚಾದಂತೆ ಕಂಡಿತು. "ನಿಮಗೆ ತುಳು ಅರ್ಥವಾಗ್ತದಾ..." ತುಸು ಅನುಮಾನದ ದನಿಯಲ್ಲೇ ಕೇಳಿದರು ಆಕೆ. ಬಹುಶಃ ನಾನು ಲೋಟ ತೊಳೆಯುತ್ತೇನೆಂದು ಆಕೆ ನಿರೀಕ್ಷಿಸಿರಲಿಲ್ಲವೇನೋ... ಆ ಮನೆಯಿಂದ ಮುಂದೆ ಹೋಗುತ್ತಿರುವಾಗ 'ನಾನು ಕೇವಲ ನನ್ನ ಲೋಟವನ್ನಷ್ಟೇ ತೊಳೆಯಬಾರದಿತ್ತು; ಆ ಹುಡುಗನ‌ ಲೋಟವನ್ನೂ ನಾನು ತೊಳೆದಿರಬೇಕಿತ್ತು; ಆಕೆಗೆ ಇನ್ನೂ ಒಂಚೂರು ಪಿಚ್ಚೆನಿಸಬೇಕಿತ್ತು..' ಎಂದೆಲ್ಲಾ ಅಂದುಕೊಂಡೆ.

     ಮರುಕ್ಷಣದಲ್ಲಿ ನನ್ನಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು. ಜಾತಿಯ ಕುರಿತಾಗಿ ಅಷ್ಟೊಂದು ಸಂಕುಚಿತ ಮನೋಭಾವ ಆಕೆಗಿದ್ದುದಾದರೆ ನಮ್ಮನ್ನು ಅಷ್ಟೊಂದು ಉಪಚಾರ ಮಾಡುವ ಅಗತ್ಯವೇನಿತ್ತು? ನಾನು ಲೋಟ ತೊಳೆಯಬಾರದೆಂದ ಮೇಲೆ ಆ ಹುಡುಗ ಲೋಟ ತೊಳೆಯಬೇಕೆಂದು ಆಕೆ ಬಯಸಿದ್ದಾದರೂ ಯಾಕೆ? ಬಹುಶಃ ಸಮಾಜ ಆಕೆಯಲ್ಲಿ ತುಂಬಿರುವ ಆ ಬಗೆಯ ಮನೋಭಾವದಿಂದ ಸಂಪೂರ್ಣ ಹೊರಬರಲು ಸಾಧ್ಯವಾಗಿಲ್ಲ.., ಆದರೆ ನನ್ನ ವೃತ್ತಿಯ ಕಾರಣದಿಂದ ನನ್ನನ್ನು ಮೇಲ್ಜಾತಿಗೆ ಸಮಾನನೆಂದು ಪರಿಗಣಿಸಿದರೇನೋ ಎಂದುಕೊಂಡೆ.

       *       *        *
       ಆಗೆಲ್ಲಾ ಗಣತಿಕಾರ್ಯವೆಂದರೆ ಉದ್ದಕ್ಕೆ‌ನಡೆದುಕೊಂಡು ಮನೆಯಿಂದ ಮನೆಗೆ ಹೋಗುತ್ತಲಿರುವುದೇ ಆಗಿತ್ತು. ಮಧ್ಯಾಹ್ನದ ಹೊತ್ತಿಗೆ ಊಟಕ್ಕೆ ಮನೆಗೆ ಹೋಗುವ ಯೋಚನೆಯಿರಲಿಲ್ಲ.. ಊಟದ ಹೊತ್ತಿಗೆ ಯಾರ ಮನೆಯಲ್ಲಾದರೂ "ಊಟ ಮಾಡುವ ಸರ್..." ಎಂದುಬಿಡುತ್ತಿದ್ದರು. ಯಾವುದೇ ಮುಜುಗರವಿಲ್ಲದೇ ಜೈ ಎಂದು ಊಟಕ್ಕೆ ಕೂರುತ್ತೇನೆ.

      ಹಾಗೇ ಒಮ್ಮೆ ನನ್ನ ವಿದ್ಯಾರ್ಥಿಯೊಬ್ಬನ‌‌ ಮನೆಯಲ್ಲಿ ಊಟಕ್ಕೆ ನಿಲ್ಲಿಸಿದ್ದರು. ಅದೊಂದು ಬ್ರಾಹ್ಮಣರ ಮನೆ. ನಿಮಗೆ ತಿಳಿದಿರಬಹುದು., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಸಮಾರಂಭಗಳಲ್ಲಿ ಬ್ರಾಹ್ಮಣರಿಗೆ ಮತ್ತು ಜೈನರಿಗೆ ಪ್ರತ್ಯೇಕ ಪಂಕ್ತಿಗಳಿರುತ್ತವೆ. ನಾನು ಹಿಂದೆಯೂ ಹಲವು ಬ್ರಾಹ್ಮಣರ ಮನೆಯಲ್ಲಿ ಜೈನರ ಮನೆಯಲ್ಲಿ ಊಟ ಮಾಡಿದ್ದಿದೆ. ಎಲ್ಲಾ ಕಡೆಯೂ ಗೌರವಯುತ ಆತಿಥ್ಯವೇ ನನಗೆ ಸಿಕ್ಕಿತ್ತು. ಆದರೆ ಈ ಮನೆಯಲ್ಲಿ ನಾನು ಅವರ ಕುಟುಂಬದವರೆಲ್ಲರೊಡನೆ ಊಟಕ್ಕೆ ಕುಳಿತಿದ್ದೆ. ನನ್ನ ವಿದ್ಯಾರ್ಥಿ ಹುಡುಗ, ಅವನ ತಂದೆ ಮತ್ತು ವಯಸ್ಸಾಗಿದ್ದ ಅವನ ಅಜ್ಜ ನನ್ನೊಂದಿಗೆ ಸಾಲಾಗಿ ಕುಳಿತಿದ್ದರು. ಊಟ ಮಾಡುವ ಮುಂಚೆ ಅವರದ್ದೊಂದಿಷ್ಟು ಪದ್ಧತಿಗಳಿದ್ದವು. ನಾನು ಸುಮ್ಮನೆ ನೋಡುತ್ತಿದ್ದೆ. ತುಸು ಮುಜುಗರದಲ್ಲಿ ಕುಳಿತುಕೊಂಡಿದ್ದ ನನ್ನ ಮುಜುಗರಕ್ಕೆ ಕಾರಣ ಕೀಳರಿಮೆಯೇನಾಗಿರಲಿಲ್ಲ. ಆದರೆ ನನ್ನ ಉಪಸ್ಥಿತಿ ಹುಡುಗನ ಅಜ್ಜನಿಗೆ ಸಹ್ಯವಿಲ್ಲದಿದ್ದರೆ....? ಸಣ್ಣವನಿದ್ದಾಗ ಬ್ರಾಹ್ಮಣರ ಮನೆಯಲ್ಲಿ ಹೊರಗಡೆ ಊಟ ಮಾಡಿದ್ದರೂ ಸೆಗಣಿ ಸಾರಿಸಬೇಕಿದ್ದ ನೆನಪಾಗಿತ್ತು. ಒಳ್ಳೆಯದೋ, ಕೆಟ್ಟದ್ದೋ - ಮನೆಯ ಹಿರಿಯರಿಗೆ ತಾವು ಅನಾದಿಕಾಲದಿಂದ ಆಚರಿಸಿಕೊಂಡು ಬಂದ ಪದ್ಧತಿಗಳಿಂದ ಹೊರಬರುವುದು ಸುಲಭದ ವಿಚಾರವೇನಲ್ಲ. ಆದರೆ ಆ ಹಿರಿಯರು ಅಂತಹ ಸಂಕುಚಿತತೆಯಿಂದ ಹೊರಬಂದವರಾಗಿದ್ದರು. ಖುಷಿಯಿಂದ ನನ್ನೊಡನೆ ಊಟ ಮಾಡಿದ್ದರು. ನನಗೂ ಖುಷಿಯಾಗಿತ್ತು.

    ಇನ್ಯಾವುದೋ ಸಂದರ್ಭದಲ್ಲಿ ಈ ಸಹಪಂಕ್ತಿ ಭೋಜನದ ನೆನಪಾದಾಗ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಆ ಮನೆಗೆ ಬರುವ ಇತರ ಅನ್ಯಜಾತೀಯ ಅತಿಥಿಗಳಿಗೆ, ತೋಟದ ಕೆಲಸಕ್ಕೆ ಬರುವ ಕೆಲಸಗಾರರಿಗೆ ಇದೇ ಬಗೆಯ ಗೌರವಯುತ ಆತಿಥ್ಯ ದೊರಕೀತೇ? ಅಥವಾ "ಶಿಕ್ಷಕ" ಎನ್ನುವ ಕಾರಣದಿಂದ ನನಗೆ ವಿಶೇಷ ಗೌರವ ದೊರಕಿತೇ? ಪ್ರತೀಬಾರಿ ನನ್ನ ವೃತ್ತಿಯ ಕಾರಣದಿಂದ ಸಿಗುವ ವಿಶೇಷ ಗೌರವವನ್ನು ಆನಂದಿಸುವ ನಾನು, ಈ ಸನ್ನಿವೇಶದಲ್ಲಿ ದೊರಕಿದ ಆತಿಥ್ಯ ಕೇವಲ ನನ್ನ ವೃತ್ತಿಯ ಕಾರಣದಿಂದ ಆಗಿರದಿರಲಿ ಎಂದು ಹಾರೈಸಿಕೊಂಡೆ.

     *         *        *  

   ಕೆಲವು ಮನೆಗಳಲ್ಲಿ ಸಿಗುವ ಆತಿಥ್ಯ ಇನ್ನೂ ವಿಶಿಷ್ಟ. ಅವರಿಗೆ ಮನೆಗೆ ಬಂದ ಮಾಸ್ಟ್ರಿಗೆ ಸತ್ಕಾರ ಮಾಡುವ ಮನಸ್ಸಿದ್ದರೂ, ಮಾಸ್ಟ್ರು ನಮಗಿಂತ ಮೇಲಿನ ಜಾತಿಯವರು, ನಮ್ಮ ಮನೆಯಲ್ಲಿ ಮಾಡಿದ್ದನ್ನು ತಿನ್ನಲಾರರೇನೋ ಎನ್ನುವ ಅನುಮಾನವೇನೋ... ನಾನು ಮಾಹಿತಿ ಬರೆದುಕೊಳ್ಳುತ್ತಿರುವಾಗ ಮನೆಯ ಸದಸ್ಯರ ಕಣ್ಣುಗಳು ಮಾತಾಡಿಕೊಳ್ಳುತ್ತವೆ. ಅಷ್ಟರಲ್ಲಿ ಒಬ್ಬ ಸದಸ್ಯ ಅಲ್ಲಿಂದ ಮಾಯವಾಗಿರುತ್ತಾರೆ. ತುಸು ಹೊತ್ತಲ್ಲಿ ಧೊಪ್ ಎಂಬ ಶಬ್ದ. ಕೆಲವೇ ಕ್ಷಣದಲ್ಲಿ ಮಾಯವಾಗಿದ್ದ ವ್ಯಕ್ತಿ ಎಳನೀರನ್ನು ಕೈಯಲ್ಲಿ ಹಿಡಿದು ಪ್ರತ್ಯಕ್ಷನಾಗುತ್ತಾರೆ.

   ಬೆನ್ನಿಂದ ಬೆನ್ನಿಗೆ ಚಹವೋ, ಜ್ಯೂಸೋ ಏನೋ ಒಂದನ್ನು ಕೊಟ್ಟಾಗ, ತಿರಸ್ಕರಿಸುವುದು ಸೌಜನ್ಯವಲ್ಲವೆಂದು, ಕಷ್ಟಪಟ್ಟು ಸ್ವೀಕರಿಸುತ್ತಾ ಬಂದವರಿಗೆ ಬೊಂಡವನ್ನು ಕಂಡಾಗ ಮುಖದಲ್ಲಿ ಮಂದಹಾಸ ಮೂಡುತ್ತದೆ. ಆತಿಥ್ಯವನ್ನು ಆನಂದಿಸುತ್ತೇನೆ. 'ಎಳನೀರೇ ಕೊಡಬೇಕಂದೇನಿಲ್ಲ, ನಿಮ್ಮ ಮನೆಯೊಳಗೆ ತಯಾರಿಸಿದ್ದೇನಾದರೂ ಕೊಟ್ಟರೂ ನಾನು ಕುಡಿಯುತ್ತೇನೆ' ಎಂಬ ಮಾತನ್ನು ನಾನು ಹೇಳಬೇಕಿತ್ತು, ಆ ಮೂಲಕ ಅವರಲ್ಲಿ ಕೀಳರಿಮೆಯಿದ್ದರೆ ಅದನ್ನು ದೂರ ಮಾಡಬಹುದಿತ್ತು ಅಥವಾ ನನ್ನೊಳಗೆ ಸಂಕುಚಿತ ಯೋಚನೆಗಳಿಲ್ಲ ಎನ್ನುವುದನ್ನು ಅವರಿಗೆ ತಿಳಿಸಬೇಕಿತ್ತು ಎಂದು ಈಗ ನನಗನಿಸುತ್ತಿದೆ. ಬಹುಶಃ ಮುಂದಿನ ಗಣತಿಗಳಲ್ಲಿ ಸಿಗುವ ಎಳನೀರನ್ನು ತಪ್ಪಿಸಿಕೊಳ್ಳುವುದು ಬೇಡ ಎಂದು ಆಗ ನನಗನಿಸಿತ್ತೇನೋ...!

     *       *       *
ಗಣತಿ ಮಾಡುವುದೆಂದರೆ ಕೇವಲ ಅಂಕಿ ಅಂಶಗಳ‌ ಸಂಗ್ರಹವಲ್ಲ. ಆ ಪ್ರಕ್ರಿಯೆ ನಮಗರಿವಿಲ್ಲದಂತೆ ಒಂದಿಷ್ಟು ಸಾಮಾಜಿಕ ಮತ್ತು ಮನೋವೈಜ್ಞಾನಿಕ ಅಧ್ಯಯನ ಮಾಡಿಸಿಬಿಟ್ಟಿರುತ್ತವೆ. ಅಲ್ಲಿ ಹುಟ್ಟುವ ಚಿಂತನೆಗಳು ಮತ್ತು ಒಳನೋಟಗಳು ಶಿಕ್ಷಕನ ವೃತ್ತಿ ಬದುಕನ್ನು ಇನ್ನಷ್ಟು ಸಮೃದ್ಧಗೊಳಿಸಿರುತ್ತವೆ.

         - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment