ಮಾಸ್ ಹೀರೋ ಚುನಾವಣೆಗೆ ನಿಂತಾಗ– ಶಿಕ್ಷಕನ ಡೈರಿಯಿಂದ 38

ಶಿಕ್ಷಕನ ಡೈರಿಯಿಂದ

ಮಾಸ್ ಹೀರೋ ಚುನಾವಣೆಗೆ ನಿಂತಾಗ….

  ಆ ಹುಡುಗನ ಹೆಸರನ್ನಿಲ್ಲಿ ಬರೆಯುವ ಅಗತ್ಯವಿಲ್ಲ ಬಿಡಿ.. ನಾನವನನ್ನು ಹೀರೋ ಅಂದಷ್ಟೇ ಬರೆಯುತ್ತೇನೆ. ಪಕ್ಕಾ ಮಾಸ್ ಸಿನೆಮಾಗಳ ಹೀರೋಗಳಿಗಿರುವ ಸಕಲ ಕಲ್ಯಾಣ ಗುಣಗಳಿಂದಲೂ ಭೂಷಿತನಾದವನು ಈ ನಮ್ಮ ಹೀರೋ. ತರಗತಿಯ ಪರಮಪೋಕರಿಗಳ ಕುರಿತಾಗಿ ನನಗಿರುವ ಪ್ರೀತಿಯ ಬಗ್ಗೆ ನಾನು ಹಿಂದೆಲ್ಲಾ ಬರೆದದ್ದಿದೆ. ಈತನೋ ಆ ಬಗೆಯ  ಪರಮಪೋಕರಿಗಳಿಗೆಲ್ಲಾ ಮುಕುಟಪ್ರಾಯ.

      ಪಕ್ಕಾ ಮಾಸ್ ಹೀರೋನಂತೆ ಇವನೊಬ್ಬ ಸ್ಟಂಟ್ ಮಾಸ್ಟರ್. ತನ್ನ ದಾದಾಗಿರಿಯಿಂದಲೇ ಸಣ್ಣಗೆ ತರಗತಿಯ ಮಕ್ಕಳಲ್ಲಿ ಸಿಟ್ಟನ್ನೂ, ರೆಸ್ಪೆಕ್ಟನ್ನೂ ಏಕಕಾಲದಲ್ಲಿ ಪಡೆದಾತ. ಇವನೊಳಗೆ ಸದ್ಗುಣಗಳೂ ತುಂಬಿ ತುಳುಕುತ್ತಿದ್ದವು. ಪಠ್ಯಸಂಬಂಧಿ ವಿಚಾರಗಳನ್ನು ಹೊರತುಪಡಿಸಿ, ಶಿಕ್ಷಕರು ಕೊಟ್ಟ ಜವಾಬ್ದಾರಿಗಳನ್ನೆಲ್ಲಾ ಬಹಳ ಅಚ್ಚುಕಟ್ಟಿನಿಂದ ನಿಭಾಯಿಸುವಾತ; ಏನೂ ಜವಾಬ್ದಾರಿಯಿಲ್ಲದೇ ಹೋದಾಗ ಮಾತ್ರ ತನ್ನ ಕಿತಾಪತಿಯನ್ನು ಶುರು ಮಾಡುತ್ತಿದ್ದ. ಸಹಪಾಠಿಗಳ ನೆರವಿಗಂತೂ ಸದಾ ಸಿದ್ಧ, ತನ್ನಲ್ಲಿ ಹಣವಿದ್ದರೆ ಸಹಪಾಠಿಗಳಿಗೋಸ್ಕರ ಖರ್ಚು ಮಾಡಬಲ್ಲ ಮಹಾ ಉದಾರಿ. ಇವನ ಕಿತಾಪತಿಗಳಿಗೆ ಶಿಕ್ಷಕರು ಪೆಟ್ಟುಕೊಟ್ಟಾಗ ಬಂಡೆಗಲ್ಲಿನಂತೆ ನಿಂತು ಇನ್ನೂ ಹೊಡೆಯಿರಿ ಎಂಬ ಭಾವ ಸೂಸುವ ಅವನ ಭಂಗಿ ನೋಡಿದಾಗಲೇ ನನಗೆ 'ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವುದು' ಅದೆಷ್ಟು ಪವರ್ ಫುಲ್ ಎನ್ನುವುದು ಅರ್ಥವಾಗಿದ್ದು.

   ಇವನ ಮಾಸ್ ವರ್ಚಸ್ಸಿನ ತುಂಟತನ, ಚಾಲಾಕಿತನ ಮತ್ತು ಮುಗ್ಧತೆಗಳೆರಡರ ಮಿಶ್ರಣದಂತಿರುವ ಮಾತುಗಾರಿಕೆ ಊರಿನ ಯುವಕರನ್ನೂ ಇವನ ಅಭಿಮಾನಿಗಳನ್ನಾಗಿ ಮಾಡಿಸಿತ್ತು. ಊರಿನ ಕಾರ್ಯಕ್ರಮಗಳಲ್ಲಿ ಇವನು ಬಹುಮಾನ ಪಡೆಯಲು ವೇದಿಕೆಯೇರಿದರೆ ಚಪ್ಪಾಳೆ, ಶಿಳ್ಳೆಯ ಜೊತೆಗೆ ಇವನ ಹೆಸರನ್ನು ಕಿರುಚುವ ಧ್ವನಿ ಕೇಳಿಸುತ್ತಿತ್ತು. ಯಾರನ್ನು ಬೇಕಾದರೂ ಹೋಗಿ ಮಾತಾಡಿಸಬಲ್ಲ, ಅವರಿಗೆ ನಗು ತರಿಸಿ, ಸ್ನೇಹ ಗಳಿಸಬಲ್ಲ ಅದ್ಭುತ ಶಕ್ತಿ ಈ ಹುಡುಗನಿಗಿತ್ತು.

     ಇವನ ತಂದೆಗೋ ಇವನ ಬಗ್ಗೆ ವಿಪರೀತ ಹೆಮ್ಮೆ. ಆದರೆ ಇವನ ತುಂಟತನ ವಿಪರೀತವಾದಾಗ ತಡೆಯಲಾರದೇ ದನಕ್ಕೆ ಹೊಡೆದಂತೆ ಹೊಡೆಯುವುದೂ ಇದ್ದಿತ್ತು. ಆದರೂ ತನ್ನ ಉಳಿದ ಮಕ್ಕಳಿಗಿಂತ ಇವನೇ ಮೇಲೇ ಅವರಿಗೆ ಪ್ರೀತಿ ಜಾಸ್ತಿ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿತ್ತು. ಪಕ್ಕದೂರಿನಲ್ಲಿದ್ದ ಶಾಸಕರ ಮನೆಗೆ ಆಗಾಗ ಹೋಗುವ ಅವರು ಒಂದೆರಡು ಬಾರಿ ಈ ಸುಪುತ್ರನನ್ನೂ ಕರೆದುಕೊಂಡು ಹೋಗಿ ಫೋಟೋ ತೆಗೆಸಿದ್ದು, ಫೋಟೋ ವಾಟ್ಸಾಪ್ ಸ್ಟೇಟಸ್ಸಿನಲ್ಲಿ ರಾರಾಜಿಸಿದ್ದು, ಈ ಹೀರೋ ಅದನ್ನೆಲ್ಲಾ ನಮ್ಮೆದುರು ಹಂಚಿಕೊಂಡಿದ್ದು ನಮ್ಮ ಪಾಲಿಗೆ ಹಳೆಯ ಕತೆ.

    ಹೊಸಾ ಕತೆಯೆಂದರೆ ಇಂತಿಪ್ಪ ಹೀರೋ ಏಳನೇ ತರಗತಿಗೆ ಕಾಲಿಟ್ಟ ಕೆಲದಿನಗಳಲ್ಲೇ ಶಾಲಾ ಚುನಾವಣೆಗೆ ಸಜ್ಜಾಗಿದ್ದು. ಆ ದಿನ ಬೆಳಗ್ಗೆ ಶಾಲೆಗೆ ಬಂದವನೇ ನನ್ನೆದುರು ನಿಂತು ಅವನ ತಾಯಿ ಕಳುಹಿಸಿದ್ದ ಸಂದೇಶವನ್ನು ತಿಳಿಸಿದ್ದ. 

  "ಸರ್... ಅಮ್ಮ ಹೇಳಿದ್ರು.. ನೀವು ಒಮ್ಮೆ ಅಪ್ಪನಲ್ಲಿ ಮಾತಾಡ್ಬೇಕಂತೆ... ನನಗೆ ಇಲೆಕ್ಷನ್ನಿಗೆ ನಿಲ್ಲಲು ಬಿಡ್ಲಿಕ್ಕೆ ಹೇಳ್ಬೇಕಂತೆ.." 
   "ನಾನ್ಯಾಕೆ ಹೇಳ್ಬೇಕು? ಅಪ್ಪ ಯಾಕೆ ಬಿಡ್ತಿಲ್ಲ...?" ಕೇಳಿದೆ. ಉತ್ತರಿಸಿದ..
    ಅಪ್ಪನಿಗೆ ಇವನ ಪೋಕರಿತನ, ಕಿತಾಪತಿಗಳ ಅರಿವಿತ್ತು. "ನೀನು ಇದನ್ನೆಲ್ಲಾ ಬಿಡುವವನಲ್ಲ, ಶಾಲಾ ನಾಯಕನಾಗುವುದು ಬೇಡ. ಸ್ವಲ್ಪ ಶಿಸ್ತಿನಿಂದಿರುವವರು ನಾಯಕರಾಗಲಿ" ಎನ್ನುವುದು ಅವರ ಅಂಬೋಣ. ಅಮ್ಮನ ಮೊರೆ ಹೋಗಿದ್ದ ಹುಡುಗ. ಅಮ್ಮ ನನ್ನತ್ತ ಬೊಟ್ಟು ಮಾಡಿದ್ದರು. ನಾನು ಹೇಳಿದರೆ ಅವರಪ್ಪ ಒಪ್ಪುವರೆಂದು ಅವರಿಗೂ ತಿಳಿದಿತ್ತು. 
       "ನಿನಗೆ ಇಲೆಕ್ಷನ್ನಿಗೆ ನಿಲ್ಲಲೇಬೇಕಾ?" ಪ್ರಶ್ನಿಸಿದೆ. ಹೌದೆಂದು ತಲೆ ಅಲ್ಲಾಡಿಸಿದ.
        "ಸೋತರೆ ಸುಮ್ಮನೆ ಬೇಜಾರಾಗ್ತದೆ.. ಇಲೆಕ್ಷನ್ ಬೇಡ ಬಿಡು.. ಬೇರೆ ಯಾವುದಾದರೂ ಮಂತ್ರಿಯಾಗಬಹುದು" ಎಂದೆ. ಚುನಾವಣೆ ನಡೆಯುವುದು ಕೇವಲ ಶಾಲಾ ನಾಯಕನ ಹುದ್ದೆಗಾಗಿತ್ತು. ಶಾಲಾ ಮಂತ್ರಿಮಂಡಲದ ಇತರ ಹುದ್ದೆಗಳು ನೇರ‌ ಆಯ್ಕೆಯ‌ ಮೂಲಕ ನಡೆಯುತ್ತಿತ್ತು.

  "ನನಗೆ ನಾಲ್ಕನೇ ಕ್ಲಾಸಲ್ಲಿದ್ದಾಗಿಂದ ಆಸೆ ಸರ್, ನಾನು ಚುನಾವಣೆಗೆ ನಿಲ್ಬೇಕು ಅಂತ.." ಅವನ ಕಣ್ಣಲ್ಲಿ ಎಂದೂ ಕಾಣದ ಆರ್ದ್ರತೆಯನ್ನು ಕಂಡೆ. ಅವನ ಆಸೆ ಚುನಾವಣೆಗೆ ನಿಲ್ಲಬೇಕು ಎನ್ನುವುದಾಗಿರಲಿಲ್ಲ, ಗೆಲ್ಲಬೇಕು ಎನ್ನುವುದಾಗಿತ್ತು ಎಂಬುದು ನನಗೆ ತಿಳಿದಿತ್ತು.

     "ಅಪ್ಪನಲ್ಲಿ ನೀನೇ ಮಾತಾಡು.. ಇನ್ನು ತಂಟೆಯೆಲ್ಲಾ ಮಾಡುವುದಿಲ್ಲ ಎಂದು ಅವರಿಗೆ ಮಾತು ಕೊಡು.. ಒಪ್ಪಿಯೇ ಒಪ್ತಾರೆ.. ಒಪ್ಪದೇ ಇದ್ರೆ ನಾಳೆ ಹೇಳು., ನಾನೇ ಮಾತಾಡ್ತೇನೆ" ಅಂದೆ. ಮರುದಿನ ಅವನ ಯಾವುದೇ ಕೋರಿಕೆ ಬಾರದ್ದರಿಂದ ಒಪ್ಪಿಸುವಲ್ಲಿ ಅವನು ಯಶಸ್ವಿಯಾಗಿದ್ದ ಎಂದು ನಾನು ಊಹಿಸಿದೆ.

   ಇದಾದ ಒಂದೆರಡು ದಿನಗಳಲ್ಲಿ ಈ ಹೀರೋನ ತಂದೆ‌ ಅವನ ತರಗತಿ ಶಿಕ್ಷಕರಿಗೆ ಕರೆ ಮಾಡಿದ್ದರು. " ಸರ್... ನನ್ನ ಮಗನ ಕತೆ ಕೇಳಿ..." ಎಂದು ಪ್ರಾರಂಭಿಸಿದ್ದ ಅವರು ಮಗನ ಕತೆಯನ್ನು ನಗುತ್ತಲೇ ಹೇಳಿದ್ದರಂತೆ. ಚುನಾವಣೆಗೆ ಸ್ಪರ್ಧಿಸಲು ಅಪ್ಪನ ಒಪ್ಪಿಗೆ ಪಡೆದ ನಂತರ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದ ಈ ಮಹರಾಯ ಬೆಳ್ಳಂಬೆಳಗ್ಗೆ ಯಾರಿಗೂ ಹೇಳದೆ ಸೈಕಲ್ ತುಳಿದುಕೊಂಡು ಒಂದೋ ಎರಡೋ ಕಿಲೋಮೀಟರ್ ದೂರದ ಶಾಸಕರ ಮನೆಗೆ ಹೋಗಿದ್ದ. ನೇರವಾಗಿ ಅವರ ಬಳಿ ಹೋಗಿ ಕಾಲಿಗೆರಗಿ "ನಾನು ಶಾಲೆಯಲ್ಲಿ ಇಲೆಕ್ಷನ್ನಿಗೆ ನಿಲ್ಲುತ್ತಿರುವೆ. ಆಶೀರ್ವಾದ ಮಾಡಿ" ಎಂದು ಮನವಿ ಮಾಡಿದ್ದ. ಶಾಸಕರು ಆಶೀರ್ವಾದ ಮಾಡಿ ಕಳಿಸಿದ್ದರು. ನಾನಾಗಲೇ ಹೇಳಿದ ಇವನ ಮಾತಿನ ಕೌಶಲ ಮತ್ತು ವರ್ಚಸ್ಸು ಯಾವ ಮಟ್ಟಕ್ಕಿತ್ತೆಂದರೆ ಇವನ ಹೆಸರು ಮತ್ತು ಇವನ್ಯಾರ ಮಗನೆಂಬುದು ಇವನ ಹಿಂದಿನ ಭೇಟಿಗಳಿಂದಾಗಿ ಶಾಸಕರಿಗೂ ತಿಳಿದಿತ್ತೋ, ಅಥವಾ ಅವರ ಜೊತೆಗಿರುವವರು ಹೇಳಿದ್ದರೋ.., ಅಂತೂ ಶಾಸಕರು ಇವನ ತಂದೆಗೆ ಫೋನಾಯಿಸಿದ್ದರು. "ನಿನ್ನ ಮಗನ ಕತೆ ಎಂತ ಮಾರಾಯ.. ಶಾಲೆ ಇಲೆಕ್ಷನ್ನಿಗೆ ನಿಲ್ತೇನಂತ ಆಶೀರ್ವಾದ ಪಡೆಯಲು ಬಂದಿದ್ದ" ಎಂದು ತಿಳಿಸಿದ್ದರಂತೆ.  ಇದನ್ನು ಶಿಕ್ಷಕರೆದುರು ಹೇಳಿದ್ದ ತಂದೆಯಲ್ಲಿ ಒಂದೆಡೆ ನಗುವುದೋ ಅಳುವುದೋ ಎಂಬ ಭಾವವಿದ್ದರೂ, ಇನ್ನೊಂದೆಡೆ ಮಗನ ಸಾಹಸದ ಕುರಿತಾಗಿ ಹೆಮ್ಮೆಯೂ ಇತ್ತೆಂಬುದನ್ನು ನಾವೆಲ್ಲರೂ ಊಹಿಸಬಲ್ಲವರಾಗಿದ್ದೆವು.

         ಚುನಾವಣೆ ದಿನಾಂಕ ಬಂದೇ ಬಿಟ್ಟಿತು. ಐದಾರು ಅಭ್ಯರ್ಥಿಗಳಿದ್ದರು‌. ಮತದಾನ ನಡೆದು ಎಣಿಕೆಯೂ ಪ್ರಾರಂಭವಾಯಿತು. ಎಣಿಸುವಾಗ ಎಲ್ಲರ ಮತಗಳ ಸಂಖ್ಯೆ ಏರುತ್ತಲೇ ಇತ್ತು. ನಮ್ಮ  ಹೀರೋಗೆ ಜನಪ್ರಿಯತೆಯೇನೋ ಇತ್ತು, ಆದರೆ ನಾಯಕನಾಗಿ ಈತ ಬೇಡವೆಂದು ಮಕ್ಕಳು ನಿರ್ಧರಿಸಿಬಿಟ್ಟಿದ್ದರೇನೋ... ಸುಮಾರು ಹೊತ್ತು ಅವನ‌‌ ಓಟು ಶೂನ್ಯ.. ಸ್ವಲ್ಪ ಹೊತ್ತಾದ ಮೇಲೆ ಒಂದು... ಹುಡುಗನ ಮುಖದೆಡೆಗೆ ನೋಡಿದೆ... ಆರಂಭದಲ್ಲಿ ಸಪ್ಪಗಿದ್ದ ಹುಡುಗ ಆ ಮೇಲೆ ಮನಸ್ಸೊಳಗೆ ತಾನೇ ಸಾಂತ್ವನ ಹೇಳಿಕೊಂಡು ನಗಲು ಆರಂಭಿಸಿದ್ದ. ಎಣಿಕೆ ಮುಗಿಯುವಾಗ ಇವನಿಗೆ ಸಿಕ್ಕ ಓಟುಗಳ ಸಂಖ್ಯೆ ಎರಡು. 

   "ನನಗೆ ಓಟ್ ಹಾಕಿದ ಆ ಇನ್ನೊಬ್ಬರು ಯಾರು...?" ಹುಡುಕಲು ಹೊರಟವನಂತೆ  ನಗುತ್ತಲೇ ಎದ್ದ ಹುಡುಗನ ನಗುವಿನಲ್ಲಿ ನಾವೂ ಜೊತೆಯಾದೆವು. ಆ ಕ್ಷಣಕ್ಕೆ ನನಗೆ "ನಾಲ್ಕನೇ ತರಗತಿಯಿಂದ ನನಗೆ ಆಸೆ ಸರ್" ಎಂದು ಆಸೆಗಣ್ಣುಗಳೊಂದಿಗೆ ಅವನಾಡಿದ್ದ ಮಾತು ನೆನಪಾಗಿತ್ತು.
 ‌
     ನಮಗೆಲ್ಲರಿಗೂ ಗೊತ್ತಿತ್ತು, ಅವನ ಮನಸ್ಸಿನೊಳಗೆ ಎಷ್ಟು ನಿರಾಸೆ ತುಂಬಿತ್ತೆಂಬುದು. ಆದರೆ ಆ ನಿರಾಸೆಯನ್ನು ಬದಿಗಿಟ್ಟು ನಗುವನ್ನು ತಂದುಕೊಂಡ ಅವನ ಬಗ್ಗೆ ಹೆಮ್ಮೆಪಟ್ಟೆವು. ಸೋಲನ್ನು ನಗುತ್ತಾ ಸ್ವೀಕರಿಸುವುದೂ ಒಂದು ಬಹುಮುಖ್ಯವಾದ ಜೀವನ ಕೌಶಲವೆಂದು ಒಪ್ಪದವರು ಯಾರಿದ್ದಾರೆ ಹೇಳಿ....

   ಶಾಲೆಯಲ್ಲಿ ನಡೆಯುವ ಬೇರೆ ಬೇರೆ ಸ್ಪರ್ಧೆಗಳು, ಮತ್ತು ಶಾಲಾ ಚುನಾವಣೆಗಳ ಕುರಿತು ಮಕ್ಕಳ ಮನಸ್ಸಿಗೆ ಘಾಸಿಯಾಗುತ್ತದೆ ಹಾಗೆ ಹೀಗೆ ಎಂದು ಯಾರೆಷ್ಟೇ ಟೀಕಿಸಲಿ...., ನನಗವುಗಳು ಮಕ್ಕಳಿಗೆ ಸೋಲನ್ನು ಸ್ವೀಕರಿಸಲು ಕಲಿಸುವ ವೇದಿಕೆಗಳಾಗಿಯೇ ಕಾಣಿಸುತ್ತವೆ. ಈ ನಮ್ಮ‌ ಹೀರೋ ನಾಲ್ಕನೇ ತರಗತಿಯಿಂದಲೇ ಕಂಡಿದ್ದ ಕನಸು, ಅವನಿಗೆ ದಕ್ಕಿದ ಸೋಲು, ಅದನ್ನು ಅವನು ಸ್ವೀಕರಿಸಿದ ರೀತಿ ಇವೆಲ್ಲವನ್ನೂ ಮುಂದೆ ನಾನು ಹಲವು ಮಕ್ಕಳಿಗೆ ಹೇಳಬಲ್ಲೆ, ಇವನ ದೃಷ್ಟಾಂತ ಹಲವು ಮಕ್ಕಳಿಗೆ ಸೋಲನ್ನು ಸ್ವೀಕರಿಸುವುದನ್ನು ಕಲಿಸಲು ನೆರವಾಗಲಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ.

    - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

IMG 20220930 WA0030 min
Sharing Is Caring:

Leave a Comment