ನನ್ನ ಕೈ ಬೆರಳು ನೇತಾಡುತ್ತಿದೆ ನೋಡಿ – ಶಿಕ್ಷಕನ ಡೈರಿಯಿಂದ 21

ಶಿಕ್ಷಕನ ಡೈರಿಯಿಂದ

ನನ್ನ ಕೈ ಬೆರಳು ನೇತಾಡುತ್ತಿದೆ ನೋಡಿ….

    ಇಂಗ್ಲೀಷ್‌ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಪರಿಶೀಲಿಸುತ್ತಿದ್ದೆ. "What happened to Rafer Johnson's leg?" ಎನ್ನುವ ಪ್ರಶ್ನೆಗೆ ಹುಡುಗಿಯೊಬ್ಬಳು ಬಹಳ ಜಾಣ್ಮೆಯಿಂದ ತನ್ನದೇ ವಾಕ್ಯದ ಉತ್ತರ ಬರೆದಿದ್ದಳು. "Rafer johnson's leg machinege sikki  beralu cut agi nethadutthitthu." ಅವಳ ಗ್ರಹಿಕೆ ಸರಿಯಾಗಿಯೇ ಇತ್ತು. ಇದೇ ಉತ್ತರ ಇಂಗ್ಲೀಷ್ ಭಾಷೆಯಲ್ಲೇ ಇದ್ದಿದ್ದರೆ ಉತ್ತರ ಸರಿಯೇ.. ಆದರೆ ಇಲ್ಲಿ ಇಂಗ್ಲೀಷಿನಲ್ಲಿದ್ದದ್ದು ಲಿಪಿ ಮಾತ್ರ. ಮಾರ್ಕ್ ಕೊಡಲಾಗದಿದ್ದರೇನಂತೆ, ಮುಖದ ಮೇಲೆ ಕಿರುನಗು ಮೂಡಿಸಲಾದರೂ ಉತ್ತರ ಯಶಸ್ವಿಯಾಯಿತಲ್ಲಾ ಎಂದುಕೊಂಡೆ. ಜೊತೆಯಲ್ಲೇ "ಬೆರಳು ನೇತಾಡುತ್ತಿತ್ತು" ಎನ್ನುವ ಸಾಲು ನನಗೆ ನನ್ನ ಹಳೆ ವಿದ್ಯಾರ್ಥಿ ಅಂಕಿತ್ ನ ನೆನಪು ಮಾಡಿಸಿತ್ತು.

              *                 *                   *

        ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ಅಂಕಿತ್ ಎನ್ನುವ ಹುಡುಗ "ಇಲ್ಲಿ ನೋಡಿ ... ನನ್ನ ಕೈಬೆರಳು ನೇತಾಡುತ್ತಿದೆ" ಎಂದು ಉದ್ಗರಿಸಿದ್ದ. ಹಾಗೆ ಹೇಳುವಾಗ ಅವನ ಕೈ ಬೆರಳು ನಿಜವಾಗಿಯೂ ಗಾಯಗೊಂಡು ನೇತಾಡುತ್ತಿತ್ತು. ಆದರೆ ಈ ಹುಡುಗ ನೋವಿನ ಯಾವ ಭಾವವೂ, ಭಯವೂ ಇಲ್ಲದೆ, ಬರಿಯ ಅಚ್ಚರಿಯೊಂದನ್ನು ಕಂಡವನ ಹಾಗೆ ಕೂಗಿಕೊಂಡಿದ್ದ.
          ಅದು ಶಾಲಾ ವಾರ್ಷಿಕೋತ್ಸವದ ಮುನ್ನಾದಿನವಾಗಿತ್ತು. ಶಿಕ್ಷಕರೆಲ್ಲರೂ ಮರುದಿನದ ಕಾರ್ಯಕ್ರಮಗಳ ತಯಾರಿಯಲ್ಲಿದ್ದೆವು. ಶಾಲಾ ಹಳೆವಿದ್ಯಾರ್ಥಿಗಳು, ಪೋಷಕರು  ಮೈದಾನವನ್ನು ಸಿಂಗರಿಸುವಲ್ಲಿ ಮಗ್ನರಾಗಿದ್ದರು. ಆರು ಏಳನೆಯ ತರಗತಿಯ ಕೆಲವು ಹುಡುಗರೂ ಅವರೊಂದಿಗೆ ಸೇರಿಕೊಂಡಿದ್ದರು. ಎರಡನೇ ತರಗತಿಯ ಚಿನಕುರಳಿಯಂತಹ ಪುಟಾಣಿ ಅಂಕಿತ್ ಕೂಡಾ ಈ ಗುಂಪಿನೊಂದಿಗೆ ಸೇರಿಕೊಂಡುಬಿಟ್ಟಿದ್ದ. ಅಷ್ಟು ಪುಟ್ಟ ಹುಡುಗ ಅವರ ಕೆಲಸದ ಮಧ್ಯೆ ಸೇರಿಕೊಂಡಿದ್ದು ಈಗಲೂ ನಮಗೆ ಅಚ್ಚರಿಯ ಸಂಗತಿಯೇ..
          ನಾನು ಆ ಸಂದರ್ಭದ ಪ್ರತ್ಯಕ್ಷದರ್ಶಿಯೇನಾಗಿರಲಿಲ್ಲ. ಕೊಠಡಿಯೊಂದರಲ್ಲಿ ಮಕ್ಕಳನ್ನು ಮರುದಿನದ ನಿರೂಪಣೆಗೆ ಅಣಿಗೊಳಿಸುತ್ತಿದ್ದಲ್ಲಿಗೆ  ಮಕ್ಕಳು ಬಂದು "ಸರ್, ಅಂಕಿತ್ನ ಬೆರಳು ಕಟ್ಟಾಗಿದೆ" ಎಂದಾಗ ನಾನೂ ಮೈದಾನಕ್ಕೆ ಧಾವಿಸಿದ್ದೆ. ಅಲಂಕಾರದ ಸಂದರ್ಭದಲ್ಲಿ ಸಣ್ಣ ಸಣ್ಣ ಗೂಟಗಳನ್ನು ಹಾಕಲು ಸಣ್ಣ ಗುಳಿಗಳನ್ನು ತೆಗೆಯುವ ಕೆಲಸವನ್ನು ಮಾಡಲಾಗುತ್ತಂತೆ. ಹುಡುಗನೊಬ್ಬ ಸಣ್ಣ ಹಾರೆಗೋಲಿನಿಂದ ಗುಳಿ ತೆಗೆಯತ್ತಿರುವಾಗ ಈ ಪುಟಾಣಿ ಗರಟೆ(ತೆಂಗಿನ ಚಿಪ್ಪು)ಯಿಂದ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದನಂತೆ. ಅವರಿಬ್ಬರ ನಡುವಲ್ಲಿ ಸಣ್ಣ ಗೊಂದಲವಾಗಿ ಆ ಹಾರೆಗೋಲು ಅವನ ತೋರ್ಬೆರಳನ್ನು ಸ್ವಲ್ಪ ಕತ್ತರಿಸಿಬಿಟ್ಟಿತ್ತು. ಎಲ್ಲರೂ ಏನಾಯಿತು ಎಂದು ಗ್ರಹಿಸುವಷ್ಟರಲ್ಲೇ ಈ ಹುಡುಗ "ನನ್ನ ಬೆರಳು ನೇತಾಡುತ್ತಿದೆ " ಎಂದು ಕೈಯೆತ್ತಿ ತೋರಿಸುತ್ತಿದ್ದನಂತೆ.

               ಆ ಕ್ಷಣ ಎಲ್ಲರೂ ಭಯಗೊಂಡಿದ್ದರು. ತಕ್ಷಣ ಪ್ರಥಮ ಚಿಕಿತ್ಸೆ ಮಾಡಲಾಯಿತು. ಅವನ ಪೋಷಕರನ್ನು ತಕ್ಷಣ ಕರೆತಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನೋವಿಗೆ ಹೆದರದ ಹುಡುಗ ಅಪ್ಪ ಬರುವ ಹೊತ್ತಿಗೆ ಅಪ್ಪ ತನ್ನ ಮೇಲೆ ಕೋಪಗೊಂಡಾರೇನೋ ಎಂದು ಹೆದರಿದ್ದನಷ್ಟೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುವಾಗ ಇವನಿಗೆ ಮತ್ತೊಂದು ಚಿಂತೆ ಪ್ರಾರಂಭವಾಗಿತ್ತು. "ನಾಳೆ ಸ್ಕೂಲ್ಡೇ ಇದೆ, ಅಲ್ಲಿ ನನಗೆ ಬಹುಮಾನವಿದೆ, ನಾನು ಶಾಲೆಗೆ ಹೋಗಬೇಕು" ಎಂದು ಗೋಗರೆಯಲು ಪ್ರಾರಂಭಿಸಿದ್ದ‌.  ಡಾಕ್ಟರ್ ಅನುಮತಿ ನೀಡಿದ್ದರು. ಮರುದಿನ ಕಾರ್ಯಕ್ರಮಕ್ಕೆ ಬಂದು ಹುಡುಗ ಬಹುಮಾನ ಪಡೆದೇ ಆಸ್ಪತ್ರೆಗೆ ಮರಳಿದ್ದ.

         ಪ್ರಾಯಶಃ ಅವಘಡದ ದಿನ ಉಪಸ್ಥಿತರಿದ್ದ ಪ್ರತಿಯೊಬ್ಬರೂ ಸಣ್ಣಗೆ ಅಪರಾಧಿ ಪ್ರಜ್ಞೆಯನ್ನು ಹೊಂದಿರಬಹುದು. ಆದರೆ ಅಂಕಿತ್ನ ಪೋಷಕರು ಯಾರನ್ನೂ ದೂರಿರಲಿಲ್ಲ, ಪ್ರಶ್ನಿಸಿರಲಿಲ್ಲ. ನಾವೆಲ್ಲರೂ ಅವನ ಗಾಯದ ಕುರಿತು ಬಹಳ ಭಯಗೊಂಡಿದ್ದೆವು. ಬಲಗೈ ತೋರ್ಬೆರಳಿಗೆ ಗಾಯವಾಗಿದ್ದರಿಂದ ಬರವಣಿಗೆ ಕಷ್ಟವಾಗಬಹುದೇನೋ ಎಂಬ ಭಯವೂ ಇತ್ತು. ಆದರೆ ಅಂಕಿತ್ ನ ಮನೋಬಲ ಅವನನ್ನು ರಕ್ಷಿಸಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿ ಕೆಲವೇ ದಿನಗಳಲ್ಲಿ ಅವನ ಗಾಯ ಸಂಪೂರ್ಣ ಗುಣವಾಗಿತ್ತು. ಮುಂದಿನ ದಿನಗಳಲ್ಲಿ ಅಂಕಿತ್ ಎಲ್ಲಾ ಕ್ಷೇತ್ರಗಳಲ್ಲೂ ಶಾಲೆಗೆ ಅಗ್ರಗಣ್ಯ ಎನಿಸಿಕೊಂಡಿದ್ದ. ಶಾಲೆ ಕಂಡ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ತಾನೂ ಒಬ್ಬನೆನಿಸಿದ್ದ. ಆ  ದಿನ ಅವನಲ್ಲಿ ಕಂಡ ಸೇವಾ ಮನೋಭಾವ, ಉತ್ಸಾಹ ಮತ್ತು ಎಲ್ಲಕ್ಕಿಂತ ಮಿಗಿಲಾದ ಮನೋಬಲ ನಾವು ಎಂದಿಗೂ ಮರೆಯಬಾರದ ಸಂಗತಿಗಳು.  

            *                *               *
           ಮನೋಬಲ ಮತ್ತು ಕಠಿಣ ಪರಿಶ್ರಮದ ಕುರಿತಾಗಿಯೇ  ವಿಲ್ಮಾ ರುಡಾಲ್ಫ್ ಮತ್ತು ರೇಫರ್ ಜಾನ್ಸನ್ ಎಂಬ ಕ್ರೀಡಾಪಟುಗಳ ಕತೆಗಳನ್ನು ಆರನೆಯ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ಸೇರಿಸಲಾಗಿದೆ. 'ಈ ಅಂತರಾಷ್ಟ್ರೀಯ ತಾರೆಗಳಷ್ಟೇ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕೇ? ಅಂಕಿತ್ ನಂತಹ ಮಕ್ಕಳ ಮನೋಬಲವೂ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರೆ ಎಷ್ಟು ಚೆನ್ನ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ರೇಫರ್ ಜಾನ್ಸನ್ನನ ಕುರಿತ ಪ್ರಶ್ನೆಗೆ ಕಂಗ್ಲಿಷ್ ಉತ್ತರ ಬರೆದು ಇಷ್ಟೆಲ್ಲ ಚಿಂತನೆ ಹುಟ್ಟಿಸಿದ ವಿದ್ಯಾರ್ಥಿಗೆ ನಾನು ಆಭಾರಿಯಾಗಬೇಕು ಎಂದುಕೊಳ್ಳುತ್ತಾ ಮುಂದಿನ ವರ್ಷ ಈ ಪಾಠ ಮಾಡುವಾಗ ಈ ಘಟನೆಯನ್ನು ಉಲ್ಲೇಖಿಸಲೇಬೇಕು ಎಂದು ನಿರ್ಧರಿಸಿದೆ.

                                       - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment