ಜಿತೇಶ ತಂದ ದಾಳಿಂಬೆ ಹಣ್ಣು– ಶಿಕ್ಷಕನ ಡೈರಿಯಿಂದ 11

ಶಿಕ್ಷಕನ ಡೈರಿಯಿಂದ

ಜಿತೇಶ ತಂದ ದಾಳಿಂಬೆ ಹಣ್ಣು

 ಆವತ್ತೊಂದಿನ ಶಾಲೆಗೆ ಹೋಗುವಾಗಲೇ ನಮ್ಮೆಲ್ಲರ ಮೇಜಿನ ಮೇಲೆ ಒಂದೊಂದು ಪುಟ್ಟ ದಾಳಿಂಬೆ ಹಣ್ಣಿತ್ತು... "೪ನೇ ತರಗತಿಯ ಜಿತೇಶ ಕೊಟ್ಟು ಹೋದ, ಅವನ ಮನೆಯಿಂದ ತಂದಿದ್ದು" ಎಂದರು ಮುಖ್ಯಶಿಕ್ಷಕರು. ನನಗೋ ಆಶ್ಚರ್ಯ...
   ತರಗತಿಯೆದುರು ಬಿದ್ದಿದ್ದ ಕಸ ಹೆಕ್ಕುತ್ತಿದ್ದ ಜಿತೇಶನಲ್ಲಿ  "ಅದೆಲ್ಲಿಂದ?" ಕೇಳಿದೆ... "ನಮ್ಮ ಮನೆಯಲ್ಲೇ ಆಗಿದ್ದು ಸರ್" ಎಂದ ಹುಡುಗ... "ದಾಳಿಂಬೆ ಮರ ನಿಮ್ಮನೇಲಿದೆಯಾ?" ಆಶ್ಚರ್ಯದಿಂದ ಕೇಳಿದೆ... "ಹೌದು ಸರ್.. ನನ್ನ ಮಾವ ಎಲ್ಲಿಂದಲೋ ತಂದು ನೆಟ್ಟಿದ್ದು" ಅಂದ... 
 ಸಾಮಾನ್ಯವಾಗಿ ದಾಳಿಂಬೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಬೆಳೆಯಲ್ಲ.. ಆದರೂ ಮಂಗಳೂರಿನಲ್ಲಿ ನಮ್ಮ ಕಾಲೇಜಿನ ಹತ್ತಿರವಿದ್ದ ಮನೆಯೊಂದರ ಆವರಣದೊಳಗೆ ಒಂದು ಪುಟ್ಟ ದಾಳಿಂಬೆ ಗಿಡವನ್ನೂ, ಅದರಲ್ಲಿ ಒಂದೆರಡು ಹಣ್ಣುಗಳನ್ನೂ ನೋಡಿದ್ದ ನೆನಪು.. ಬಹುಷಃ ನಮ್ಮ ಜಿತೇಶನ ಮನೆಯಲ್ಲೂ ಅಂತಹದ್ದೊಂದು ಗಿಡ ಇದ್ದಿರಬಹುದು… ಆದರೂ ಈ ಅಪರೂಪದ ಬೆಳೆಯನ್ನು ನಮಗೆ ತಂದುಕೊಡುವ ಅಗತ್ಯವಿರಲಿಲ್ಲ ಅನಿಸಿತು.. "ಇದನ್ಯಾಕೆ ನಮಗೆಲ್ಲಾ ತರ್ಲಿಕ್ ಹೋದಿ? ಮನೆಯವರೇ ತಿಂದು ಮುಗಿಸುವುದು ಬಿಟ್ಟು ……" ಎಂದೆ.. "ಇರ್ಲಿ ಸರ್… ಮನೆಯಲ್ಲಿ ಇನ್ನೂ ಇದೆ." ಎಂದ…

  ತರಗತಿಯಲ್ಲಿ ಎಲ್ಲರಿಗಿಂತ ಪುಟ್ಟ ದೇಹದವನಾದರೂ, ತುಂಟತನದಲ್ಲಿ ಎಲ್ಲರಿಗಿಂತ ಮುಂದೆ ಇದ್ದ ಜಿತೇಶ ೪ನೇ ತರಗತಿಯ ಮಕ್ಕಳ ಅಘೋಷಿತ ನಾಯಕನಾಗಿದ್ದ. ಕಲಿಕೆಯಲ್ಲಿ ಕೆಲವೊಮ್ಮೆ ನಿರಾಸಕ್ತಿ ತೋರಿಸುವುದಿತ್ತಾದರೂ ತನ್ನ ಸಹಜ ಬುದ್ಧಿವಂತಿಕೆಯಿಂದ, ಆತ್ಮವಿಶ್ವಾಸದಿಂದ ಎಲ್ಲರ ಮನಸ್ಸನ್ನೂ ಗೆದ್ದಿದ್ದವ.. ಇಂತಿಪ್ಪ ಜಿತೇಶ ತಂದ ದಾಳಿಂಬೆ ಹಣ್ಣು ಮತ್ತು  ಆ ಹಣ್ಣನ್ನು ತರುವುದರ ಹಿಂದಿದ್ದ ವಿಶಾಲ ಹೃದಯದ ಕುರಿತಾಗಿ  ಸ್ಟಾಫ್ ರೂಮಲ್ಲಿ ನಮ್ಮೊಳಗೆ ಒಂದಿಷ್ಟು ವಿಶ್ಲೇಷಣೆ ನಡೆಯಿತು. ಎಲ್ಲರೂ ಸಂತೋಷದಿಂದ ಹಣ್ಣನ್ನು ಸ್ವೀಕರಿಸಿದೆವು..ಸಂಜೆ ಮನೆಗೆ ಹೊರಟಿದ್ದ ನಾನು ಏಳನೇ ತರಗತಿಯಲ್ಲಿ ಕಲಿಯುತ್ತಿದ್ದ ಜಿತೇಶನ ಅಣ್ಣನಲ್ಲಿ ಹೀಗೇ ತಮಾಷೆಯಾಗಿ "ನಿಮ್ಮ ಮನೆಗೊಮ್ಮೆ ಬರಬೇಕು ಮಾರಾಯ, ನಿಮ್ಮ ದಾಳಿಂಬೆ ಮರವನ್ನೊಮ್ಮೆ ನೋಡಬೇಕು" ಎಂದೆ.. ಈ ಅಣ್ಣನಿಗೂ, ಅವನ ಗೆಳೆಯರಿಗೂ ನಗು ತಡೆಯಲಾಗಲಿಲ್ಲ .. "ಏನಾಯ್ತು??" ಕೇಳಿದೆ.. "ನಮ್ಮ ಮನೆಯಲ್ಲಿ ದಾಳಿಂಬೆ ಮರ ಇಲ್ಲ ಸರ್" ಎಂದು ನಕ್ಕ..

 "ಮತ್ತೆ ಅವನು ತಂದ ದಾಳಿಂಬೆ……?""ಮೊನ್ನೆ ಮಾವ ಬಂದಿದ್ರು ಸರ್.. ಬರುವಾಗ ತುಂಬಾ ದಾಳಿಂಬೆ ತಂದಿದ್ರು.. ಅದರಲ್ಲೇ ಕೆಲವನ್ನು ನಿಮಗೆ ತಂದದ್ದು.." ಎಂದ.. ಬೇಸ್ತು ಬಿದ್ದಿದ್ದ ನನಗೋ, ನಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ..

 ಮರುದಿನ ಜಿತೇಶನಲ್ಲಿ "ಸುಳ್ಯಾಕೆ ಹೇಳಿದ್ದು?" ಕೇಳಿದರೆ ಮುಖಮುಚ್ಚಿ ಮುಸಿನಗುತ್ತಿದ್ದ.. ಶಿಕ್ಷಕರಿಗೆ ದಾಳಿಂಬೆ ಹಣ್ಣು ತಂದು ಕೊಡುವುದರ ಮೂಲಕ ತರಗತಿಯ ಸಹಪಾಠಿಗಳಿಗೆ 'ನಿಮ್ಮೆಲ್ಲರ ಮನೆಯಲ್ಲಿಲ್ಲದ ವಿಶೇಷವೊಂದು ನಮ್ಮ ಮನೆಯಲ್ಲಿದೆ' ಎಂಬ ಸಂದೇಶವನ್ನು ಒಂದು ದಿನದ ಮಟ್ಟಿಗೆ ಯಶಸ್ವಿಯಾಗಿ ರವಾನಿಸಿದ್ದ ಜಿತೇಶ.  ಬೇಸ್ತು ಬಿದ್ದಿದ್ದ ನಾವು ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದೇ ಮನಸಾರೆ ನಕ್ಕುಬಿಟ್ಟೆವು.. ಕೊಟ್ಟೋನು ಕೋಡಂಗಿಯಲ್ಲ, ಕೆಲವೊಮ್ಮೆ ಇಸ್ಕೊಂಡೋನೂ ಕೋಡಂಗಿಯಾಗಬಹುದು ಎಂಬ ಪಾಠವನ್ನು ಆ ಕ್ಷಣದಲ್ಲಿ ಜಿತೇಶ ನಮಗೆ ಕಲಿಸಿಬಿಟ್ಟಿದ್ದ...     ಆ ಕ್ಷಣದಲ್ಲಿ ನಮಗನಿಸಿದ್ದು ಜಿತೇಶ ಶಿಕ್ಷಕರನ್ನು  ಖುಷಿಪಡಿಸಲೋ, ಅಥವಾ ಬೇಸ್ತು ಬೀಳಿಸಿ ತಾನು ಖುಷಿಪಡಲೋ, ಇಲ್ಲವೇ ಸಹಪಾಠಿಗಳೆದುರು ತಾನು ಹೀರೋ ಎನ್ನಿಸಿಕೊಳ್ಳಲೋ ಅವನು ಹಣ್ಣು ತಂದಿದ್ದ ಎಂದೇ. ಆದರೆ ಮುಂದಿನ ದಿನಗಳಲ್ಲಿ ಜಿತೇಶನೊಂದಿಗೆ ಮಾತನಾಡುವಾಗ ಆ ದಿನಗಳಲ್ಲಿ ಅವನ ಮನೆಯಲ್ಲಿ ಸಣ್ಣದೊಂದು ದಾಳಿಂಬೆ ಗಿಡವನ್ನು ನೆಟ್ಟಿದ್ದರು ಎಂಬ ವಿಚಾರ ತಿಳಿಯಿತು.  ಆ ಗಿಡ ದೊಡ್ಡದಾಗಿ ಫಲಕೊಡುವ ಬಗ್ಗೆ ಕನಸು ಕಾಣುತ್ತಾ ಈ ಹುಡುಗ ನಮಗೆಲ್ಲ ಹಣ್ಣು ತಂದಿರಬಹುದೆಂಬ ಹೊಸ ಹೊಳಹು ಆಗ ನನ್ನಲ್ಲಿ ಹುಟ್ಟಿಕೊಂಡಿತು.ಈ ಘಟನೆ ನಡೆದು  ಏಳೋ ಎಂಟೋ ವರ್ಷಗಳು ಕಳೆದಿವೆ. ಆವತ್ತು ಜಿತೇಶನ ಮನೆಯಲ್ಲಿ ನೆಟ್ಟಿರುವ  ದಾಳಿಂಬೆ ಗಿಡ ಈಗ ದೊಡ್ಡದಾಗಿ ಮರವಾಗಿರಬಹುದೇ, ಜಿತೇಶ ಆ ದಿನ ಕಲ್ಪಿಸಿಕೊಂಡಷ್ಟು ಹಣ್ಣುಗಳನ್ನು ನೀಡುತ್ತಿರಬಹುದೇ ಎಂಬ ವಿಚಿತ್ರ ಕುತೂಹಲ ಈಗ ನನ್ನೊಳಗೆ.  
================  

 - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment