ಪರಮ ಪೋಕರಿ‌ ಸಿರಾಜುದ್ದೀನ ಮತ್ತು ಒಡೆದು ಹೋದ ಉಷ್ಣತಾಮಾಪಕ – ಶಿಕ್ಷಕನ ಡೈರಿಯಿಂದ 10

ಶಿಕ್ಷಕನ ಡೈರಿಯಿಂದ

ಪರಮ ಪೋಕರಿ‌ ಸಿರಾಜುದ್ದೀನ ಮತ್ತು ಒಡೆದು ಹೋದ ಉಷ್ಣತಾಮಾಪಕ

         ನಮಗೆ ಅಂದರೆ ಬಹುತೇಕ ಶಿಕ್ಷಕರಿಗೆ ಒಂದು ದೌರ್ಬಲ್ಯವಿರುತ್ತದೆ. ಪ್ರತಿಭಾವಂತ ಮಕ್ಕಳ ಮೇಲೆ ಅಪಾರ ಪ್ರೀತಿ- ಅಭಿಮಾನ., ಕಲಿಕೆಯಲ್ಲಿ ಹಿಂದಿರುವವರ ಕುರಿತಾಗಿ ಅಸಮಾಧಾನ, ಅಸಹನೆ. ಅದರಲ್ಲೂ ಕುಳಿತಲ್ಲಿ ಕುಳಿತಿರಲಾರದೇ ಏನಾದರೂ ಕಿತಾಪತಿ ಮಾಡುವ ತುಂಟ ಮಕ್ಕಳು, ಶಾಲೆಗೆ ಹೆಚ್ಚು ರಜೆ ಮಾಡುವ  ಮಕ್ಕಳು ಇಂಥವರ ಬಗ್ಗೆಯೆಲ್ಲಾ  ಶಿಕ್ಷಕರಿಗೆ ಸಣ್ಣ ತಿರಸ್ಕಾರ ಹೆಚ್ಚಿನವರಲ್ಲಿ ಇದ್ದೇ ಇರುತ್ತದೆ. ನಾನೂ ಈ ದೌರ್ಬಲ್ಯದಿಂದ ತುಂಬಾ ಹೊರತಾಗಿಲ್ಲವಾದರೂ ಆ ದೌರ್ಬಲ್ಯದಿಂದ ಹೊರಬರುವ ಪ್ರಯತ್ನವನ್ನಂತೂ ಮಾಡುತ್ತಲೇ‌ ಇರುತ್ತೇನೆ. ಈ ಬಗೆಯ ಮಕ್ಕಳೊಳಗಿರುವ‌ ಒಳ್ಳೆಯತನವನ್ನು ನಾವು ಗುರುತಿಸಬೇಕೆಂಬ ಪಾಠವನ್ನು ಶಿಕ್ಷಕ ತರಬೇತಿಯ ಅವಧಿಯಲ್ಲಿಯೇ ವಿದ್ಯಾರ್ಥಿಯೊಬ್ಬ ನನಗೆ  ಕಲಿಸಿಬಿಟ್ಟಿದ್ದ. 

        ಸುಮಾರು ಹದಿನಾರು ವರ್ಷಗಳ ಹಿಂದಿನ ಘಟನೆ ಇದು. ಶಿಕ್ಷಕ ತರಬೇತಿಯ ಕೊನೆಯ ಮೂರು ತಿಂಗಳು ಸರ್ಕಾರಿ ಶಾಲೆಯೊಂದರಲ್ಲಿ ಇಂಟರ್ನ್ ಶಿಪ್ ಮಾಡಬೇಕಿತ್ತು ..... ನಾನು ಇಂಟರ್ನ್ ಶಿಪ್ ಮಾಡುತ್ತಿದ್ದ ಶಾಲೆಯ 5ನೇ ತರಗತಿಯಲ್ಲಿ ಸಿರಾಜುದ್ದೀನ್ ಎಂಬ ಹುಡುಗನಿದ್ದ... ಬಹುಶಃ ಆ ಶಾಲೆಯಲ್ಲಿ ಅತೀ ದೊಡ್ಡ ತಲೆನೋವಾಗಿದ್ದ ಹುಡುಗನವ.. ದಿನಕ್ಕೆ ನಾಲ್ಕೈದು ದೂರುಗಳಾದರೂ ಅವನ  ಮೇಲೆ ಬರಲೇಬೇಕಿತ್ತು.. ಅದೇ ಪ್ರಮಾಣದ ಶಿಕ್ಷೆಯನ್ನು ಪಡೆಯುತ್ತಿದ್ದ... ಶಿಕ್ಷೆಯನ್ನೂ ಆನಂದಿಸುತ್ತಿದ್ದ ಆತ ತಾನು ತಿಂದ ಪೆಟ್ಟುಗಳ ಸಂಖ್ಯೆಯನ್ನು ಗೆಳೆಯರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನಂತೆ. ಅಕ್ಷರದಿಂದ ಮಾತ್ರ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದವ.
5ನೇ ತರಗತಿಗೆ ವಿಜ್ಞಾನ ಪಾಠ ಮಾಡುತ್ತಿದ್ದ ನಾನು ಅಂದಿನ ಪಾಠಕ್ಕೆ ಉಷ್ಣತಾಮಾಪಕ ಕೊಂಡೊಯ್ದಿದ್ದೆ.. ಅವಧಿ ಮುಗಿದು ಗಂಟೆ ಬಾರಿಸಿದ ಬಳಿಕ ತರಗತಿಯಿಂದ ಹೊರಟಿದ್ದ ನನ್ನ ಕೈಯಲ್ಲಿದ್ದ ಉಷ್ಣತಾಮಾಪಕ ನೆಲಕ್ಕೆ ಬಿದ್ದು ಒಡೆದು ಹೋಗಿತ್ತು. ಪಾದರಸ ಉಂಡೆಗಳಾಗಿ ಚೆಲ್ಲಿತ್ತು.. ಮಕ್ಕಳೆಲ್ಲಾ ಕುತೂಹಲದಿಂದ ಸುತ್ತುವರೆದರು.. ಇಬ್ಭಾಗವಾಗಿದ್ದ ಉಷ್ಣತಾಮಾಪಕದ ತುಂಡುಗಳನ್ನು ಹಿಡಿದಿದ್ದ ನಾನು ಮುಖ್ಯ ಶಿಕ್ಷಕರಲ್ಲಿ ಏನು ಹೇಳುವುದು ಎಂಬ ಚಿಂತೆಯಲ್ಲಿ ಯೋಚಿಸುತ್ತಾ ನಿಂತೆ.. ತರಬೇತಿಯ ವಿದ್ಯಾರ್ಥಿಯಾಗಿದ್ದ ನನಗೆ ಮುಖ್ಯ ಶಿಕ್ಷಕರಿಂದ ಉಗ್ರಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂಬ ಭಯ ಕಾಡಿತ್ತು..
ಆಗ ಸಿರಾಜುದ್ದೀನನಿಗೆ ಏನನ್ನಿಸಿತೋ.... ನಿಧಾನವಾಗಿ ನನ್ನ ಹತ್ತಿರ ಬಂದು "ಸರ್, ನಾನು ಒಡೆದದ್ದು ಅಂತ ಹೇಳಿ" ಎಂದ.. ಆಶ್ಚರ್ಯ ಎನಿಸಿತು.. "ನಿನಗೆ ಪೆಟ್ಟು ಬಿದ್ದರೆ?" ಎಂದೆ. "ನನಗೆ ದಿನಾಲೂ ಬೀಳುತ್ತದೆ ಸರ್, ಅದ್ಯಾವ ಲೆಕ್ಕ" ಎಂದು ನಕ್ಕ.. ಬಾಯಿಂದ ಮಾತೇ ಹೊರಡದೆ ನಿಂತಿದ್ದ ನನಗೆ ಸಿರಾಜುದ್ದೀನ್ ಬಹಳ ದೊಡ್ಡ ವ್ಯಕ್ತಿಯಾಗಿ ಕಾಣಿಸಿದ..
ಅಲ್ಲಿಂದ ನೇರವಾಗಿ ಮುಖ್ಯೋಪಾಧ್ಯಾಯರ ಬಳಿ ಹೋದ ನಾನು " sorry sir, ಕೈ ಜಾರಿ ಬಿದ್ದು ಉಷ್ಣತಾಮಾಪಕ ಒಡೆಯಿತು" ಎಂದೆ.. "ಸರಿ.. ಅಲ್ಲೇ ಇಡಿ.. ಏನ್ಮಾಡೋಕಾಗುತ್ತೆ" ಎಂದು ಬಾಯಲ್ಲೇನೋ ಗೊಣಗಿಕೊಂಡರು. ನನಗೆ ಏನೂ ಅನ್ನಿಸಲಿಲ್ಲ..
ಈ ಘಟನೆ ನಡೆದು ಇಷ್ಟು ವರ್ಷಗಳ ನಂತರವೂ ಸಿರಾಜುದೀನ್ ಆಗಾಗ ನೆನಪಾಗುತ್ತಿರುತ್ತಾನೆ. ನಾನು ಶಾಲೆಯ ಪರಮ ಪೋಕರಿಗಳೆಡೆಗೆ ತುಸು ಹೆಚ್ಚೇ ಪ್ರೀತಿ ತೋರಿಸುತ್ತೇನೆ. ಅಪರೂಪಕ್ಕೆ‌ ಇದು ಕೆಲ ಸಹೋದ್ಯೋಗಿಗಳಿಗೆ ಅಸಮಾಧಾನ ತಂದಿದ್ದಿದೆಯಾದರೂ ನಾನು ಬದಲಾಗಿಲ್ಲ. ಇದಕ್ಕೆ ಸಿರಾಜುದ್ದೀನ ಕಲಿಸಿದ ಪಾಠವೇ ಕಾರಣವಿ ಎಂದು ನನಗನಿಸುತ್ತದೆ.

- ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

1 thought on “ಪರಮ ಪೋಕರಿ‌ ಸಿರಾಜುದ್ದೀನ ಮತ್ತು ಒಡೆದು ಹೋದ ಉಷ್ಣತಾಮಾಪಕ – ಶಿಕ್ಷಕನ ಡೈರಿಯಿಂದ 10”

Leave a Comment