ಬೆತ್ತ ಹಿಡಿದ ನನ್ನೊಳಗೆ ಸ್ಯಾಡಿಸಂ ತುಂಬಿತ್ತೇ? – ಶಿಕ್ಷಕನ ಡೈರಿಯಿಂದ 19

ಶಿಕ್ಷಕನ ಡೈರಿಯಿಂದ

ಬೆತ್ತ ಹಿಡಿದ ನನ್ನೊಳಗೆ ಸ್ಯಾಡಿಸಂ ತುಂಬಿತ್ತೇ?

   ಪೋಲಿಸ್ ದೌರ್ಜನ್ಯ, ಪೊಲೀಸರ ಕ್ರೌರ್ಯದ ಬಗ್ಗೆ ನೀವು ಆಗಾಗ ಕೇಳಿರಬಹುದು. ಆದರೆ ಶಿಕ್ಷಕರ ಕ್ರೌರ್ಯದ ಬಗ್ಗೆ ಕೇಳಿದ್ದೀರಾ...? 

    "ಶಾಲೆಯಲ್ಲಿ ಪೆಟ್ಟು ತಿನ್ನದೇ ಬೆಳೆದವನು, ಮುಂದೆ ಪೋಲೀಸ್ ಸ್ಟೇಷನ್ನಿನಲ್ಲಿ ಪೆಟ್ಟು ತಿನ್ನುತ್ತಾನೆ" ಎಂಬರ್ಥದ ಹೇಳಿಕೆಗಳು ಅಲ್ಲಿ ಇಲ್ಲಿ ಓಡಾಡುವುದನ್ನು ಕಂಡಿದ್ದೇನೆ. ನಾನದನ್ನು ಸರ್ವಥಾ ಒಪ್ಪುವುದಿಲ್ಲ. ನಾವು ಶಿಕ್ಷಕರು ಕೆಲವೊಮ್ಮೆ ಮಕ್ಕಳಲ್ಲಿ ಶಿಸ್ತು ತರಲು, ಉದಾಸೀನತೆ ಓಡಿಸಲು ಶಿಕ್ಷೆ ಕೊಡಲೇಬೇಕಾಗುತ್ತದೆ. ಅದೆಷ್ಟೋ ಬಾರಿ ನಿರೀಕ್ಷಿತ ಬದಲಾವಣೆ ತರಲಾಗದ ನಮ್ಮ ಅಸಹಾಯಕತೆ ಮತ್ತು ಅಸಹನೆಯಿಂದಲೂ ಶಿಕ್ಷೆ ಕೊಡುವುದುಂಟು. ಆದರೆ ಶಿಕ್ಷಕನೊಬ್ಬ ತನ್ನ ಮನೋವಿಕಾರಗಳನ್ನು ಹೊರಹಾಕಲು ಮಕ್ಕಳನ್ನು ಶಿಕ್ಷಿಸುವುದಿದೆಯೇ? ಹೌದು ಎನ್ನುತ್ತೇನೆ ನಾನು, ನನ್ನದೇ ಅನುಭವದ ಆಧಾರದ ಮೇಲೆ.

    ಸುಮಾರು ಹದಿನೈದು ವರ್ಷದ ಹಿಂದೆ ಶಿಕ್ಷೆ ಎನ್ನುವುದು ಶಿಕ್ಷಣದ ಸಹಜವಾದ ಭಾಗ ಎಂಬ ಮನೋಭಾವ ತುಂಬಿಕೊಂಡಿರುವ ದಿನಗಳಲ್ಲಿ ನಾನು ಸ್ವಲ್ಪವೂ ಶಿಕ್ಷೆ ನೀಡದ ಶಿಕ್ಷಕನಾಗಿರುತ್ತೇನೆ ಎಂಬ ಮಹತ್ವಾಕಾಂಕ್ಷೆಯೊಂದಿಗೆ ವೃತ್ತಿಗೆ ಸೇರ್ಪಡೆಯಾಗಿದ್ದೆ.  ಚೂರು ಪಾರು ಶಿಕ್ಷೆ ನೀಡುತ್ತಿದ್ದರೂ ನಾನು ಬರೀ ಪಾಪದ ಮಾಸ್ಟ್ರು ಎಂಬ ಇಮೇಜು ಮಕ್ಕಳಲ್ಲಿ ಮೂಡಿಬಿಟ್ಟಿತ್ತು. ನನ್ನ ತಲೆಯಲ್ಲಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕ ನಾನಾಗುತ್ತಿದ್ದೇನೆ ಎಂಬ ಸಣ್ಣ ಭ್ರಮೆ ಮತ್ತು ಜಂಭ. ಆದರೆ ಕೆಲವೊಮ್ಮೆ ಮಕ್ಕಳು ನನಗೆ ಕ್ಯಾರೇ ಅನ್ನುತ್ತಿಲ್ಲ, ರೆಸ್ಪೆಕ್ಟೇ ಕೊಡುತ್ತಿಲ್ಲ ಎಂಬ ಅಸಹನೆಯೂ ಕಾಣಿಸಿಕೊಳ್ಳುತ್ತಿತ್ತು.

  ನನ್ನ ವೃತ್ತಿಜೀವನದ ಎರಡನೇ ವರ್ಷದಲ್ಲಿ ಈ ಅಸಹನೆ ಸ್ಫೋಟಗೊಳ್ಳುವ ಘಟನೆಯೊಂದು ನಡೆಯಿತು. ನನ್ನ ಪ್ರಕಾರ ನಾನು ಮಕ್ಕಳನ್ನು ತೀರಾ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದೆ, ಆದರೆ ಮಕ್ಕಳು ವಿಶೇಷವಾಗಿ ಏಳನೆಯ ತರಗತಿಯ ಮಕ್ಕಳು ನನ್ನೊಂದಿಗೆ ತೀರಾ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ ಎಂದು ನನಗನಿಸತೊಡಗಿತ್ತು. ಬೇರೆ ಶಿಕ್ಷಕರು ಕರೆದಾಗ ಓಡೋಡಿ ಬರುವ ಮಕ್ಕಳು, ನಾನು ಕರೆದಾಗ ಉದಾಸೀನತೆಯಿಂದ ಬರುವುದನ್ನು ಗಮನಿಸಿದ್ದೆ. ಬೇರೆ ವಿಷಯಗಳ ಮನೆಗೆಲಸವನ್ನು ಕಟ್ಟು ನಿಟ್ಟಾಗಿ ಮಾಡುವ ಮಕ್ಕಳು ನಾನು ಹೇಳಿದ್ದನ್ನು ಮಾಡುತ್ತಲೇ ಇರಲಿಲ್ಲ‌. ಒಂದು ದಿನ ಮಕ್ಕಳು ಬಾಗಿಲ ಬಳಿ ದೂರೊಂದನ್ನು ಹೊತ್ತು ತಂದರು. ಅದನ್ನು ನಾನು ಅಟೆಂಡ್ ಮಾಡಲು ಹೊರಟಾಗ "ಸರ್, ನಿಮ್ಮಲ್ಲಲ್ಲ ಹೇಳಿದ್ದು, ನೀವು ಬರುವುದು ಬೇಡ.." ಎಂದು ಬೇರೆ ಶಿಕ್ಷಕರ ಕಡೆ ನೋಡಿದಳು ಹುಡುಗಿ. ನನಗೆ ದೊಡ್ಡ ಅವಮಾನ ಎನ್ನಿಸಿತು. ಸುಮಾರು ದಿನಗಳಿಂದ ಇದನ್ನೇ ಹೋಲುವ ಘಟನೆಗಳು ನಡೆಯುತ್ತಿದ್ದುದರಿಂದ ಅವಳ ಮಾತು ಸಿಕ್ಕಾಪಟ್ಟೆ ಪರಿಣಾಮ ಬೀರಿತ್ತು. ಇದಕ್ಕೊಂದು ಶಾಸ್ತಿ ಮಾಡಲೇಬೇಕು ಎಂದು ನಿರ್ಧರಿಸಿದೆ‌. ನನ್ನೊಳಗಿನ ರಾಕ್ಷಸ ಎದ್ದು ಕುಳಿತಿದ್ದ.

   'ಇತರ ಶಿಕ್ಷಕರು ಆಗಾಗ ತರಗತಿಯಲ್ಲಿ ಬೆತ್ತ ಹುಡಿ ಮಾಡುತ್ತಾರೆ, ಅದಕ್ಕೇ ಅವರೆಂದರೆ ಭಯ ಗೌರವ; ನಾನು ಏನೂ ಮಾಡುವುದಿಲ್ಲ,  ಅದಕ್ಕೇ ನಾನೆಂದರೆ ಅಸಡ್ಡೆ' ಎನ್ನುವುದು ನನ್ನ ತರ್ಕವಾಗಿತ್ತು. ನಾನೂ ಒಮ್ಮೆ ಬೆತ್ತ ಹುಡಿಮಾಡಬೇಕು ಎಂದು ನಿರ್ಧರಿಸಿದೆ. ನನ್ನ ನಿರ್ಧಾರದ ಹಿಂದಿದ್ದ ನನ್ನ ಆಗಿನ ಮನಸ್ಥಿತಿಯನ್ನು ನೆನಪಿಸಿಕೊಂಡರೆ ಈಗಲೂ ನನಗದೊಂದು ಬಗೆಯೆ ಸ್ಯಾಡಿಸಂ ಎಂದೇ ಅನಿಸುತ್ತದೆ.

      ಆ ದಿನ‌‌ ಮಕ್ಕಳಿಗೆ ಪದ್ಯವೊಂದನ್ನು ಕಲಿತುಬರಲು ಹೇಳಿದ್ದೆ. ಮರುದಿನ ಉದ್ದನೆಯ ಬೆತ್ತದೊಂದಿಗೆ ತರಗತಿ ಪ್ರವೇಶಿಸಿದೆ. ಒಬ್ಬೊಬ್ಬರನ್ನೇ ಕರೆಯತೊಡಗಿದೆ. ನನ್ನ ನಿರೀಕ್ಷೆಯಂತೆಯೇ ಯಾರೂ ಕಲಿತು ಬಂದಿರಲಿಲ್ಲ. ಕಲಿಯದ ಪ್ರತಿಯೊಬ್ಬರಿಗೂ ಬೆತ್ತದಿಂದ ಹೊಡೆದೆ. ಹೊಡೆವಾಗ ನನ್ನ ಕಣ್ಣುಗಳು ಕಿಡಿ ಕಾರುತ್ತಿದ್ದವು. ಮಕ್ಕಳು ನನ್ನ ಹೊಸರೂಪವನ್ನು ಕಂಡು ದಿಙ್ಮೂಢರಾಗಿದ್ದರು.

    ಪುಣ್ಯಕ್ಕೆ ನಾನು ಇಡೀ ತರಗತಿಯನ್ನು ಟಾರ್ಗೆಟ್ ಮಾಡಿದ್ದೆ. ಹಾಗಾಗಿ ಪ್ರತಿಯೊಬ್ಬರಿಗೂ ಬಿದ್ದದ್ದು ಎರಡೋ ಮೂರೋ ಪೆಟ್ಟುಗಳು. ಒಬ್ಬರೋ ಇಬ್ಬರೋ ಟಾರ್ಗೆಟ್ ಆಗಿದ್ದರೆ ನನ್ನ ಸಿಟ್ಟು ಏನಾದರೂ ಅನಾಹುತ ಮಾಡುತ್ತಿತ್ತು ಎಂದು ಈಗನಿಸುತ್ತದೆ. ಆದರೂ ನನ್ನ ಬೆತ್ತದೇಟು ಒಂದೆರಡು ಮಕ್ಕಳಿಗೆ ತೀರಾ ಅವಮಾನವಾಗುವ ಹಾಗೆಯೂ ಮಾಡಿತ್ತು. ಅಷ್ಟು ಹೊತ್ತಿನೊಳಗೆ ನನ್ನೊಳಗಿನ ಕ್ರೌರ್ಯ ಮಾಯವಾಗಿತ್ತು. ನನ್ನ ವರ್ತನೆ ಅತಿಯಾಯಿತು ಅನಿಸುತ್ತಿರುವಾಗಲೂ ನಾನು ಉಳಿದ ಮಕ್ಕಳಿಗೆ ಶಿಕ್ಷೆ ಮುಂದುವರೆಸಿದ್ದೆ, ಸಮಾನತೆಯ ಹೆಸರಲ್ಲಿ. 

       ತರಗತಿ ಮುಗಿಸಿ  ಹೊರಬರುವ ಹೊತ್ತಿಗೆ ನನ್ನ ಮನಸ್ಸು ಅಕ್ಷರಶಃ ತಲೆ ತಗ್ಗಿಸಿ ನಿಂತಿತ್ತು‌. ನನ್ನ ಪೆಟ್ಟಿನಿಂದ ತೀರಾ ಅವಮಾನಿತರಾದ ಮಕ್ಕಳೆದುರು "Sorry" ಎನ್ನಬೇಕೆನಿಸಿತ್ತು. ಆ ಮಕ್ಕಳ ಜಾಗದಲ್ಲಿ ನಾನಿದ್ದರೆ ಹೇಗಿರುತ್ತಿತ್ತು ಎಂದು ನಾನು ಯೋಚಿಸುತ್ತಿದ್ದೆ. ಆ ರಾತ್ರಿ ನನಗೆ ನಿದ್ದೆ ಬಂದಿರಲಿಲ್ಲ.

  ಮಕ್ಕಳು ಗೌರವಿಸುವುದು, ಅಸಡ್ಡೆ ಮಾಡುವುದು ಎಲ್ಲವೂ ನಮ್ಮ ಒಟ್ಟು ವರ್ತನೆ ಮತ್ತು ವ್ಯಕ್ತಿತ್ವದ ಆಧಾರದ ಮೇಲಿರುತ್ತದೆ ಎಂದು ನನಗೆ ಅರ್ಥವಾಗಿದ್ದು ನಿಧಾನವಾಗಿ.

    ನನಗಾಗ ಇಪ್ಪತ್ತೊಂದು ವರ್ಷ ದಾಟಿತ್ತಷ್ಟೆ, ನನಗಾಗ ಪ್ರಬುದ್ಧತೆಯಿರಲಿಲ್ಲ ಎಂಬ ಕಾರಣವನ್ನು ನಾನು ಕೊಟ್ಟರೆ, ಶಿಕ್ಷಕನಾಗಿ ಪಡೆವ ಸಂಬಳಕ್ಕೂ ನಾನು ಅರ್ಹನಾಗಿರಲಿಲ್ಲ ಎಂದೇ ಹೇಳಿದಂತಾಗುತ್ತದೆ. ಹಾಗಾಗಿ ಅದು ಕ್ಷಮೆಯಿಲ್ಲದ ತಪ್ಪು ಅಷ್ಟೆ. ಬಹಳ ವರ್ಷದ ನಂತರವೂ ಆ ತರಗತಿಯ ಮಕ್ಕಳು ನನ್ನೊಡನೆ ಮಾತಾಡುವಾಗ ಆ ಘಟನೆಯನ್ನು ನೆನಪಿಸುವುದುಂಟು. ಅವರಿಗದು ಒಂದು ತಮಾಷೆಯ ನೆನಪಷ್ಟೇ, ಆದರೆ ನನಗದು ಕೆಟ್ಟ ಕನಸಿನಂತೆ ಭಾಸವಾಗುತ್ತದೆ. ಅದನ್ನು ನೆನಪಿಸಬೇಡಿ ಎಂದೇ ಹೇಳುತ್ತೇನೆ. 

    ನಿಮಗೆ ನಾನಿಲ್ಲಿ ಬಳಸಿದ "ಕ್ರೌರ್ಯ, ಮನೋವಿಕಾರತೆ, ಸ್ಯಾಡಿಸಂ" ಎಂಬಿತ್ಯಾದಿ ಪದಗಳು ಅತಿರೇಕ ಎನ್ನಿಸಬಹುದು. ಆದರೆ ಹೋಮ್ವರ್ಕ್, ರಿವಿಜನ್, ಎಕ್ಸಾಮ್ ಇತ್ಯಾದಿಗಳ ಹೆಸರಲ್ಲಿ ಮಕ್ಕಳ ತಪ್ಪನ್ನು ಹುಡುಕೀ ಹುಡುಕಿ ವಿಪರೀತವಾಗಿ ಹೊಡೆಯುವುದು, ಹೊಡೆಯುತ್ತಾ ಹೊಡೆಯುತ್ತಾ ನಾನೇನೋ ಸಾಧನೆ ಮಾಡುತ್ತಿದ್ದೇನೆ ಎಂಬ ಭಾವನೆ ಮೂಡಿಸಿಕೊಳ್ಳುವುದು, ತಾನು ಮಕ್ಕಳನ್ನು ಶಿಕ್ಷಿಸಿದ್ದನ್ನು ಹೆಮ್ಮೆಯಿಂದ ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದು ಇಂತಹ ವರ್ತನೆಗಳಿಗೆಲ್ಲಾ ಆ ಪದಗಳು ಯೋಗ್ಯವೇ ಆಗಿವೆ ಎಂದು ನಾನು ಭಾವಿಸುತ್ತೇನೆ.

    ಹಾಗೆಂದ ಮಾತ್ರಕ್ಕೆ ನಾನು ಶಿಕ್ಷೆಯನ್ನೇ ಕೊಡದ ಶಿಕ್ಷಕ ಎಂದೇನೂ ಹೇಳಿಕೊಳ್ಳುವುದಿಲ್ಲ. ಆದರೆ ಕೊಡುವ ಶಿಕ್ಷೆ ಕ್ರೌರ್ಯ ಎನಿಸದಿರುವ ಮಟ್ಟಿನ ಪ್ರಯತ್ನವನ್ನಂತೂ ಮಾಡುತ್ತೇನೆ(ಕೆಲವೊಮ್ಮೆ ವಿಫಲನಾಗಿದ್ದೇನೇನೋ ಎಂಬ ಭಯವಂತೂ ಇದೆ). ಅಷ್ಟು ಎಚ್ಚರ ನನ್ನೊಳಗೆ ಮೂಡಿದ್ದೊಂದು ಆ ದಿನದ ಘಟನೆಯಿಂದಾದ ಪ್ರಯೋಜನ.

     ಇಷ್ಟನ್ನು ಓದಿದ ನಿಮಗೆ, ಶಿಕ್ಷಕರಾಗಿ, ತಂದೆ-ತಾಯಿಯಾಗಿ ನೀವು ಎಂದಾದರೂ ಮಕ್ಕಳೊಂದಿಗೆ ಆ ಬಗೆಯಲ್ಲಿ ವರ್ತಿಸಿದ್ದನ್ನು ನೆನಪಿಸಿ, ನಿಮ್ಮೊಳಗೂ ಅಂತಹುದೇ ಎಚ್ಚರ ಮೂಡಿಸಿದರೆ ನಾನಿಷ್ಟು ಬರೆದಿದ್ದು ಸಾರ್ಥಕ‌ ಎಂದುಕೊಳ್ಳುವೆ.

    - ಸದಾಶಿವ ಕೆಂಚನೂರು.
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment