ಭರತ ಎನ್ನುವ ಎತ್ತರದ ಹುಡುಗ,ಎತ್ತರಕ್ಕೆ ಏರಿದ ಕಥೆ – ಶಿಕ್ಷಕನ ಡೈರಿಯಿಂದ 2

ಶಿಕ್ಷಕನ_ಡೈರಿಯಿಂದ

ಭರತ ಎನ್ನುವ ಎತ್ತರದ ಹುಡುಗ,ಎತ್ತರಕ್ಕೆ ಏರಿದ ಕಥೆ

IMG 20220101 WA0143 1
 ನಾಲ್ಕೈದು ವರ್ಷಗಳ ಹಿಂದೊಮ್ಮೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳನ್ನು ಮುಗಿಸಿ ಕುಳಿತಿದ್ದಾಗ ನನ್ನ ಹಳೆ ವಿದ್ಯಾರ್ಥಿ ಭರತ್ ಶಾಲೆಗೆ ಬಂದಿದ್ದ. ಅವನು ಬಂದಿದ್ದು ತಾನು ಸಾಧನೆಯ ಮೈಲಿಗಲ್ಲೊಂದನ್ನು ತಲುಪಿದ ಸಂಭ್ರಮವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ.
   ಭರತ್ ನಾನು ಶಿಕ್ಷಕ ವೃತ್ತಿಗೆ ಸೇರಿದಾಗ ಏಳನೆಯ ತರಗತಿಯಲ್ಲಿದ್ದ ವಿದ್ಯಾರ್ಥಿ. ಕಲಿಕೆಯಲ್ಲಿ ತೀರಾ ಮುಂದೇನೂ ಇರಲಿಲ್ಲವಾದರೂ, ದಡ್ಡ ಎನ್ನುವ ಹಾಗಂತೂ ಇರಲಿಲ್ಲ. ಆಟೋಟಗಳಲ್ಲಿ, ಕೆಲಸ ಕಾರ್ಯಗಳಲ್ಲಿ ತುಂಬಾ ಮುಂದೆ ಇದ್ದವ.‌ ಮಕ್ಕಳ ಗಣತಿಯ ಸಂದರ್ಭದಲ್ಲಿ ದಾರಿ ತೋರಿಸುತ್ತಾ ಒಮ್ಮೆ ನನ್ನೊಂದಿಗೆ ಬಂದಿದ್ದ ಭರತ್, ಅವನ ಪಕ್ಕದ ಮನೆಗೆ ಹೋದಾಕ್ಷಣ "ನೀವಿಲ್ಲಿ ಮುಗಿಸಿ ಬನ್ನಿ ಸರ್, ನಾನೊಮ್ಮೆ ಆಚೆ ಹೋಗುತ್ತೇನೆ" ಎಂದು ತನ್ನ ಮನೆಗೆ ಓಡಿದ್ದ. ನಾನವನ ಮನೆಗೆ ಹೋಗುವಾಗ ಇವನು ತೆಂಗಿನ ಮರವನ್ನೇರಿ ಎಳನೀರು ಕೀಳುತ್ತಿದ್ದ(ಆಗವನು ಏಳನೇ ತರಗತಿಯ ವಿದ್ಯಾರ್ಥಿಯಷ್ಟೆ). ತನ್ನ ತಂಟೆಯಿಂದಾಗಿ ಶಿಕ್ಷಕರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯೇನೂ ಆಗಿರದಿದ್ದರೂ ಸಾಮಾಜಿಕ ಕೌಶಲಗಳು ಇವನಲ್ಲಿ ಜಾಸ್ತಿಯೇ ಇದ್ದವು. ಪಠ್ಯಪುಸ್ತಕದ ಕಲಿಕೆ ಇವನಿಗೆ ಅಷ್ಟೇನೂ ಆಸಕ್ತಿಯ ವಿಷಯವಾಗಿರಲಿಲ್ಲ.

     ಹೈಸ್ಕೂಲಿಗೆ ಹೋದನಂತರ ಅಷ್ಟೇನೂ ಸಂಪರ್ಕದಲ್ಲಿರದ ಭರತ್,  ಸೈಕಲಲ್ಲಿ ಹೋಗುವಾಗ ಎದುರು ಸಿಕ್ಕರೆ ಹ್ಯಾಂಡಲ್ ಬಿಟ್ಟು ಎರಡೂ ಕೈಗಳನ್ನು ಜೋಡಿಸಿ ಸ್ಟೈಲಿಶ್ ಆಗಿ ನಮಸ್ಕರಿಸುತ್ತಿದ್ದ. ಹೈಸ್ಕೂಲ್ ಮುಗಿಸಿದ ನಂತರ ಅಪರೂಪಕ್ಕೆ ಸಿಕ್ಕಿದಾಗ ತಾನು ಹಿಟಾಚಿ ಆಪರೇಟರ್ ಆಗಿದೇನೆ ಎಂದಿದ್ದ..

   ಸ್ವಾತಂತ್ರ್ಯ ದಿನದಂದು ಅವನು ಬಂದಿದ್ದು ಸಂಭ್ರಮವನ್ನು ಹಂಚಿಕೊಳ್ಳಲಿಕ್ಕೆ. "ನಾನೂ ಅಣ್ಣ ಸೇರಿ ಒಂದು ಜೆಸಿಬಿ ಮತ್ತು ಟಿಪ್ಪರ್ ಕೊಂಡುಕೊಂಡಿದ್ದೇವೆ ಸರ್" ಎಂದು ತನ್ನ ಖುಷಿಯನ್ನು ಹಂಚಿಕೊಂಡಾಗ ನನಗೆ ಅಚ್ಚರಿ‌. ಅವನ ತರಗತಿಯ ಬುದ್ಧಿವಂತ ವಿದ್ಯಾರ್ಥಿಗಳು ಅಪ್ಪ ಅಮ್ಮನ ಹಣವನ್ನು ಖರ್ಚು ಮಾಡುತ್ತಾ ಕಾಲೇಜಿಗೆ ಹೋಗುತ್ತಿರುವಾಗ, ಇವನೊಬ್ಬ ತನ್ನದೇ ದುಡಿಮೆಯಿಂದ ಜೆಸಿಬಿ‌ ಮಾಲಕನಾದದ್ದು ಸಾಧಾರಣ ಸಾಧನೆಯೇನಲ್ಲ. ಒಂದು ಬೈಕ್ ಕೊಳ್ಳಲು ಸರಕಾರಿ ಕೆಲಸಕ್ಕೆ ಸೇರಿ ಆರು ವರ್ಷ ಕಾದಿದ್ದ ನನ್ನ ಪರಿಸ್ಥಿತಿಯ ನೆನಪಾಯ್ತು. ಇದೆಲ್ಲಾ ಹೇಗೆ ಸಾಧ್ಯವಾಯಿತು ಕೇಳಿದೆ. "ಹತ್ತನೆಯ ತರಗತಿಯಲ್ಲಿ ದೊಡ್ಡ ಸಾಧನೆಯೇನೂ ಮಾಡ್ಲಿಲ್ಲ ಸರ್, ಶಿಕ್ಷಣ ಮುಂದುವರೆಸುವ ಆಸಕ್ತಿ ಇರಲಿಲ್ಲ. ಸ್ವಲ್ಪ ಸಮಯದ ನಂತರ ನಾನು ಮತ್ತು ಅಣ್ಣ ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆವು. ಇಬ್ಬರೂ ದಿನಕ್ಕೆ ಹನ್ನೆರಡು ಗಂಟೆ ದುಡಿಯುತ್ತಿದ್ದೆವು. ಧಣಿ ಕೂಡ ಒಳ್ಳೆಯವರು. ತುಂಬಾ ಸಪೋರ್ಟ್ ಮಾಡ್ತಿದ್ರು" ಎಂದ.  ಎಸ್ಸೆಸ್ಸೆಲ್ಸಿಯಲ್ಲಿ ದೊಡ್ಡ ಸಾಧನೆ ಮಾಡಿದ್ದರೆ ಶಿಕ್ಷಣ ಮುಂದುವರೆಸಿ ಡಿಗ್ರಿಗಳ‌ ಹಿಂದಿರುತ್ತಿದ್ದನೇ ಹೊರತು ಜೀವನದಲ್ಲಿ ಇಷ್ಟೊಂದು ಎತ್ತರಕ್ಕೇರುತ್ತಿರಲಿಲ್ಲ ಎನ್ನಿಸಿತು. ಭರತ್ ನಿಗೆ ಶುಭಕೋರಿ ಕಳುಹಿಸಿದೆ. "ಸರ್ ಅವರು ನಿಮ್ಮ ಸ್ಟುಡೆಂಟಾದ್ರೂ ನಿಮಗಿಂತ ತುಂಬಾ ಎತ್ತರಕ್ಕಿದಾರಲ್ಲಾ?" ಎಂದು ಹುಡುಗಿಯೊಬ್ಬಳು ಮುಗ್ಧವಾಗಿ ಪ್ರಶ್ನಿಸಿದಳು.  ಸಾಧನೆಯಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಇನ್ನೂ ಎತ್ತರಕ್ಕಿದ್ದಾನೆ ಎಂದುಕೊಂಡೆ.

            *     *       *

    ಇದಾಗಿ ಒಂದೂವರೆ ವರ್ಷ ಕಳೆದ ನಂತರ ಸಮುದಾಯ ದತ್ತ ಶಾಲಾ ಕಾರ್ಯಕ್ರಮದಲ್ಲಿ ನಾಲ್ಕು ಮಂದಿ ಹಳೆ ವಿದ್ಯಾರ್ಥಿಗಳು ಸೇರಿ ಪ್ರತೀ ವರ್ಷ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ  ನೋಟ್ ಪುಸ್ತಕಗಳನ್ನು ವಿತರಿಸುವೆವೆಂದು ಘೋಷಿಸಿ, ಒಂದು ವರ್ಷಕ್ಕೆ ಬೇಕಾಗುವಷ್ಟು ಪುಸ್ತಕಗಳನ್ನು ವಿತರಿಸಿಯೂ ಬಿಟ್ಟರು .. ಆ ನಾಲ್ಕು ಮಂದಿಯ ತಂಡದಲ್ಲಿ ಭರತ್ ಕೂಡ ಒಬ್ಬನಾಗಿದ್ದ. 
    ಪ್ರಸ್ತುತ ಹಲವಾರು ವಾಹನಗಳ ಮಾಲಕನಾಗಿರುವ ಭರತನ ಯಶಸ್ಸು ಮತ್ತು ಸಮಾಜದಲ್ಲಿ ಅವನ ಸನ್ನಡತೆ ನಮ್ಮೊಳಗೆ "ಶಿಕ್ಷಣ ಎಂದರೇನು?" ಎನ್ನುವ ಆಲೋಚನೆಯನ್ನು ಮೂಡಿಸದೇ ಇರದು.

                                                    -ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏

Sharing Is Caring:

Leave a Comment