---Advertisement---

ನೀವು ನನ್ನನ್ನೇ ನೋಡುವುದಂತೆ ಸರ್ – ಶಿಕ್ಷಕನ ಡೈರಿಯಿಂದ 37

By kspstadk.com

Published On:

Follow Us
Shikshakana diary
---Advertisement---
WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ನೀವು ನನ್ನನ್ನೇ ನೋಡುವುದಂತೆ ಸರ್….

         " ಸsssssರ್ , ಇಲ್ಲಿ ಬೇಡದ್ದು ಹೇಳುವುದು...." ನನಗೆ ಕೇಳಲಾರದು ಎಂಬ ಧೈರ್ಯದಲ್ಲಿ ತಾನೇನೋ ದೂರು ನೀಡುತ್ತಿದ್ದೇನೆ ಎಂದು ಗೆಳತಿಯನ್ನು ಕಿಚಾಯಿಸಲೋಸುಗ ತುಂಟತನದಿಂದ ರಾಗವಾಗಿ ನುಡಿದಿದ್ದಳು ಕೊನೆಯ ಬೆಂಚಿನ ಮಧ್ಯದ ಹುಡುಗಿ. "ಯಾರು? ಏನು ಬೇಡದ್ದು ಹೇಳಿದ್ದು?" ಕೇಳಿದೆ. "ಏನಿಲ್ಲ......" ತಡವರಿಸಿದಳು. "ಹೇಳು..." ಗಂಭೀರವಾಗಿಯೇ ಕೇಳಿದೆ. ಪಾಠದ ಮಧ್ಯೆ ಸುಮ್ಮನೆ ಡಿಸ್ಟರ್ಬ್ ಮಾಡಿದಳೆಂಬ ಅಸಹನೆಯೂ ನನ್ನ ದನಿಯಲ್ಲಿತ್ತು. ಅವಳಿಗೆ ಹೇಳದೇ ವಿಧಿಯಿರಲಿಲ್ಲ.. "ನೀವು ನನ್ನನ್ನು ನೋಡುವುದಂತೆ.." ಹೆದರುತ್ತಲೇ ಹೇಳಿದಳು ಹುಡುಗಿ. ನಾನು ಬೆಚ್ಚಿಬಿದ್ದೆ.

   ಡಿ.ಎಡ್. ಕೋರ್ಸ್ ಮುಗಿಸುವಾಗ ನನಗೆ ಇಪ್ಪತ್ತು ವರ್ಷವೂ ತುಂಬಿರಲಿಲ್ಲ. ಆಗಷ್ಟೇ ಕಾಲೇಜು ಮುಗಿಸಿ ಶಿಕ್ಷಕವೃತ್ತಿಗೆ ಪ್ರವೇಶಿಸಿದ್ದೆ. ನನ್ನ ಸಣಕಲು ದೇಹ ನನ್ನನ್ನು ಹೈಸ್ಕೂಲು ಹುಡುಗನಂತೆ ತೋರಿಸುತ್ತಿತ್ತು. ಆಗ ಏಳನೆಯ ತರಗತಿಯಲ್ಲಿದ್ದ, ನನಗಿಂತ ಏಳೆಂಟು ವರ್ಷ ಸಣ್ಣವರಾದ ಮಕ್ಕಳು ನನಗಂತೂ ತುಂಬಾ ದೊಡ್ಡವರಂತೆ ಕಾಣುತ್ತಿದ್ದರು. ಗಂಡು ಮಕ್ಕಳು ನನ್ನೆದುರಿಗೆ ತುಸು ಹೆಚ್ಚು ತಂಟೆ - ತಮಾಷೆ ಮಾಡುತ್ತಿದ್ದರು. ಹೆಣ್ಣುಮಕ್ಕಳು ಹಾಗಿರಲಿಲ್ಲವಾದರೂ ಅವರ ನನ್ನ ನಡುವೆ ತುಸು ಹೆಚ್ಚಿನ ಅಂತರವೇ ಇತ್ತು‌. ಹೆಚ್ಚಿನ  ಹೆಣ್ಣು ಮಕ್ಕಳು ನೋಟ್ಸ್  ಪರಿಶೀಲನೆಯಂತಹ ಸಂದರ್ಭಗಳಲ್ಲಿ ನನ್ನಿಂದ ಎರಡಡಿ ಅಂತರದಲ್ಲೇ ನಿಂತಿರುತ್ತಿದ್ದರು. ನನಗೂ ತುಸು ಸಂಕೋಚವಿದ್ದುದರಿಂದ  ಅದು ತೀರಾ ಸಹಜವೇ ಅನಿಸಿತ್ತು. ಆಗ ತೀರಾ ಸಪೂರಕ್ಕಿದ್ದು ಓತಿಕ್ಯಾತನ ಹಾಗೆ ಕಾಣುತ್ತಿದ್ದ ನಾನು ಮಕ್ಕಳ ಪಾಲಿಗೆ ಕಾಮಿಡಿ ಪೀಸಾಗಿದ್ದೆನೇನೋ ಎಂದು ಈಗೆಲ್ಲಾ ನನಗೆ ಅನಿಸುವುದಿದೆ.

      ಹೀಗಿದ್ದ ಆ ದಿನಗಳಲ್ಲೇ ಆ ಹುಡುಗಿ "ನೀವು ನನ್ನನ್ನು ನೋಡುವುದಂತೆ.." ಎಂಬ ಬಾಂಬೆಸೆದಿದ್ದಳು. "ಅದರಲ್ಲೇನಿದೆ ಬೇಡದ್ದು...?" ಕೇಳಿದವನು, "ಹಾಗ್ಯಾಕೆ ಹೇಳಿದ್ದು?" ಎಂದು  ಹಾಗೆ ಹೇಳಿದವಳನ್ನು ಎದ್ದು ನಿಲ್ಲಿಸಿದೆ.. "ಅವಳೂ ನನಗೆ ಹಾಗೆ ಹೇಳುತ್ತಾಳೆ..." ಪ್ರತಿದೂರನ್ನು ದಾಖಲಿಸಿದಳು. "ಬೇರೆಯವರೂ ಒಬ್ಬರಿಗೊಬ್ಬರು ಹಾಗೆಲ್ಲಾ ತಮಾಷೆ ಮಾಡ್ತಿರ್ತಾರೆ.." ಮೊದಲಿನವಳು ಹೆದರುತ್ತಲೇ ನುಡಿದಳು..  ಈಗ ಅವಳ ಸುತ್ತಲಿನ ಹುಡುಗಿಯರ ಕಣ್ಣಲ್ಲಿ ಆತಂಕ ಕಾಣಿಸಿತು. ಅವರಿಗಿಂತ ಹೆಚ್ಚು ಆತಂಕ ನನ್ನೊಳಗೆ ತುಂಬಿಬಿಟ್ಟಿತ್ತು. ಅವರೇನು ಹೇಳುತ್ತಿದ್ದಾರೆಂಬುದು ನನಗೆ ಸ್ಪಷ್ಟವಾಗಿ‌ ಅರ್ಥವಾಗಿತ್ತು. ಒಂದು‌ ಕ್ಷಣ ಮೌನವಾಗಿ ಕುಳಿತುಬಿಟ್ಟೆ.

        ಹುಡುಗರೆಲ್ಲಾ ಒಂದು ಬದಿಯಲ್ಲಿ, ಹುಡುಗಿಯರೆಲ್ಲಾ ಇನ್ನೊಂದು ಬದಿಯಲ್ಲಿ ಕುಳಿತಿದ್ದ ತರಗತಿಯದು. ಒಂದು ಕ್ಷಣ ಶಿಕ್ಷಕರ ಗಮನ ಬೇರೆಡೆಗೆ ಹೋದರೆ ತಮ್ಮದೇ ಆದ ಕೆಲಸಗಳಲ್ಲಿ ಕಳೆದು ಹೋಗುವ ಹುಡುಗರಿದ್ದ ಕ್ಲಾಸದು. ಈ ಹುಡುಗಿಯರು ಮತ್ತು ನನ್ನ ಸಂಭಾಷಣೆ ಗಂಡುಮಕ್ಕಳಿಗೇನೂ ಕುತೂಹಲ ಹುಟ್ಟಿಸಿರಲಿಲ್ಲ.. ಅವರು ಅವರದೇ ಲೋಕದಲ್ಲಿ ಕಳೆದು ಹೋಗಿದ್ದರು. ಹುಡುಗಿಯರು ಹೇಳಿದ ಮಾತುಗಳಿಂದ ತಲೆಬಿಸಿಯಲ್ಲಿ ಸ್ತಬ್ಧನಾಗಿ ನಿಂತ ನಾನು, ಸ್ವಲ್ಪ ಹೊತ್ತು ಮಕ್ಕಳಿಗೇನೋ ಕೆಲಸ ಕೊಟ್ಟೆ. ಅಷ್ಟರಲ್ಲಿ ಬೆಲ್ಲಾಯಿತು. ಹುಡುಗರು ಬಾಗಿಲಿದ್ದ ಬದಿಯಲ್ಲೇ ಕುಳಿತಿದ್ದರಿಂದ, ಮೊದಲು ಹೊರಗೋಡಿದ್ದರು. ಹುಡುಗಿಯರಲ್ಲಿ "ಸ್ವಲ್ಪ ನಿಲ್ಲಿ" ಎಂದೆ. ಅವರೆಲ್ಲಾ ಭಯಗೊಂಡಂತೆ ಕಾಣಿಸಿತು. ನನಗೆ ಏನು ಹೇಳುವುದೆಂದು ತೋಚಲಿಲ್ಲ.. "ಹಾಗೆಲ್ಲ ಯಾಕೆ ಯೋಚನೆ ಮಾಡ್ತೀರಿ? ನಾನು ನಿಮಗೆ ಶಿಕ್ಷಕನಾಗಿ ಬಂದವನು.. ನೀವು ಹಾಗೆಲ್ಲಾ ಮಾತಾಡಬಾರದು.." ತಡವರಿಸುತ್ತಲೇ ನುಡಿದೆ. "ನನಗೆ ನಿಮ್ಮ ಹಾಗಿನ ತಂಗಿಯರಿದ್ದಾರೆ..." ಎಂಬ ಡೈಲಾಗನ್ನೂ ಸೇರಿಸಿದೆ. ಮಕ್ಕಳೆಲ್ಲಾ ಗಂಭೀರವಾಗಿ ಕೇಳಿದ್ದು ತುಸು ಸಮಾಧಾನ ಕೊಟ್ಟಿತು‌. ಆಫೀಸ್ರೂಮಿಗೆ ಬಂದವನೂ ಗೊಂದಲದಲ್ಲೇ ಕುಳಿತೆ. ಶಾಲೆ ಬಿಡುವ ಮೊದಲು ಮುಖ್ಯೋಪಾಧ್ಯಾಯಿನಿಯವರಲ್ಲಿ ಹೀಗ್ಹೀಗೆ ಆಯಿತು, ಹೀಗ್ಹೀಗೆ ಹೇಳಿ ಬಂದೆ ಎನ್ನುವುದನ್ನು ತಿಳಿಸಿದೆ. ಬಹುಶಃ ಮರುದಿನ ಅವರೂ ಆ ಮಕ್ಕಳಿಗೆ ಬುದ್ಧಿ ಹೇಳಬಹುದು ಎಂದುಕೊಂಡೆ.

     *          *           *
    ತಲೆಗೊಂದು ದೊಡ್ಡ ಹುಳ ಬಿಟ್ಟ ಹಾಗೆ ಆಗಿತ್ತು.. ಅಯ್ಯೋ.. ಈ ಮಕ್ಕಳು ಹೀಗೆಲ್ಲಾ ಯೋಚಿಸುವುದೇ...? ಅದೂ ನನ್ನ ಬಗ್ಗೆ....? ಯಾವುದಾದರೂ ಮಕ್ಕಳ ಕಡೆ ನನ್ನ ಗಮನವೋ ಕಣ್ಣೋಟವೋ ಹೆಚ್ಚಾಗಿ ಹೋಗಿದೆಯೇ ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ಇಲ್ಲ ಎನ್ನುವುದೇ ನನ್ನ ಅಂತರಂಗದ ಪ್ರಾಮಾಣಿಕ ಉತ್ತರವಾಗಿತ್ತು. 

   ನನಗಾಗ  ಡಿ.ಎಡ್. ತರಬೇತಿ ಅವಧಿಯ ನನ್ನ ನೆಚ್ಚಿನ ಶಿಕ್ಷಕರ ನೆನಪಾಯಿತು. ಅವರಿಗೆ ಫೋನಾಯಿಸಿದೆ. ತರಗತಿಯಲ್ಲಿ ನಡೆದ ಘಟನೆಯನ್ನು ಹಂಚಿಕೊಂಡೆ.

     ನನ್ನ ಕತೆ ಕೇಳಿದಾಗ ಅವರು ಸಣ್ಣಗೆ ನಕ್ಕುಬಿಟ್ಟರು. ನನಗೆ ಕಸಿವಿಸಿ...
     "ಮಕ್ಕಳು ಹೀಗೆಲ್ಲಾ ಯೋಚಿಸ್ತಾರಲ್ಲಾ ಸರ್..." ಎಂದೆ..
      ಅವರ ಪ್ರತಿಕ್ರಿಯೆ ಮಕ್ಕಳ ಈ ವರ್ತನೆ ತೀರಾ ಸಹಜ ಎಂಬಂತಿತ್ತು. ನಾನು ಒಪ್ಪಲು ಸಿದ್ಧನಿರಲಿಲ್ಲ. 

      "ಒಮ್ಮೆ ನಿನ್ನ ವಿದ್ಯಾರ್ಥಿ ಜೀವನವನ್ನು ಸಂಪೂರ್ಣವಾಗಿ ನೆನಪಿಸಿಕೋ..." 
       "ಹೀಗೆಲ್ಲಾ ಯೋಚನೆ ಮಾಡ್ತಿರಲಿಲ್ಲ ಸರ್, ಅದೂ ಇಷ್ಟು ಚಿಕ್ಕ ವಯಸ್ಸಲ್ಲಿ...."

        " ಶಿಕ್ಷಕರ ಕುರಿತಾಗಿ ಬೇರೆ ಬಗೆಯ ತಮಾಷೆ...  ಸಹಪಾಠಿಗಳ ಕುರಿತಾಗಿ ಬೇರೆ ಬೇರೆ ರೀತಿಯ ತಮಾಷೆಗಳು.... ಏನೂ ಮಾಡಿಲ್ವಾ?"

       "ಮಾಡಿರಬಹುದು... ಆದರೂ ಹೆಣ್ಣುಮಕ್ಕಳು ಹೀಗೆಲ್ಲಾ....?"

          "ಯಾಕೆ...? ಗಂಡು ಮಕ್ಕಳಿಗೆ ಮಾತ್ರ ಇದಕ್ಕೆಲ್ಲಾ ಹಕ್ಕಿರುವುದಾ?"

          " ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ ಇದು ತಪ್ಪೇ ಅಲ್ವಾ ಸರ್?"

         "ತಪ್ಪು ಅಲ್ಲ ಅಂತ ನಾನೆಲ್ಲಿ ಹೇಳಿದೆ? ಈ ಬಗೆಯ ತಪ್ಪುಗಳು ಸಹಜ ಎಂದೆ ಅಷ್ಟೆ. ಹೇಗೆ ನಿನಗೆ ನಿನ್ನ ಸಮವಯಸ್ಕರೊಡನೆ ಪ್ರೈವೇಟ್ ಆದ ಮಾತುಕತೆಗಳು,  ಯೋಚನೆಗಳು, ಪೋಲಿತನಗಳು ಇರುತ್ತವೆಯೋ, ಹಾಗೇ ಆ ಮಕ್ಕಳಲ್ಲೂ ಇರುತ್ತವೆ...‌ಇವತ್ತು ಅವರು ನಿನ್ನೆದುರು ಹೇಳಿದಂತಹ ಘಟನೆಗಳು ಅವರ ಈ ಬಗೆಯ ಯೋಚನೆಗಳು ಲಿಮಿಟ್ ದಾಟದಂತೆ  ನೋಡಿಕೊಳ್ಳುತ್ತವೆ.."

     ನನಗೆ ಹೌದೆನಿಸಿತು. ಸರ್ ಮುಂದುವರೆಸಿದರು.. "ಮಕ್ಕಳ ಮಾತಿಗೆ ನಿನ್ನ ಪ್ರತಿಕ್ರಿಯೆ ಸರಿಯಾಗಿಯೇ ಇದೆ... ಘಟನೆ ನಿನ್ನ ಬಗೆಗಿನ ಮಕ್ಕಳ ಇಮೇಜನ್ನು ಎತ್ತರಕ್ಕೇರಿಸಿರುತ್ತದೆ.., ಕಾದು ನೋಡು.."

     ನನಗೆ ಸಮಾಧಾನವಾಯಿತು‌. ಮತ್ತೆ ಆ ಘಟನೆಯ ಬಗ್ಗೆ ಯೋಚಿಸಲಿಲ್ಲ.

      *            *           *

        ಕೆಲವು ದಿನಗಳು ಕಳೆಯುವಷ್ಟರಲ್ಲಿ ಮಕ್ಕಳ ವರ್ತನೆಯಲ್ಲಿನ ಬದಲಾವಣೆ ನನಗೂ ಅರಿವಿಗೆ ಬಂದಿತ್ತು. ತರಗತಿಯ ಹೆಣ್ಣು ಮಕ್ಕಳು ನನ್ನೊಡನೆ ಮೊದಲಿಗಿಂತ ಆಪ್ತವಾಗಿ ಸಂಭಾಷಿಸಲಾರಂಭಿಸಿದ್ದರು.‌ ಎಲ್ಲಕ್ಕಿಂತ ಮಿಗಿಲಾಗಿ ನೋಟ್ಸ್ ಪರಿಶೀಲನೆಯಂತಹ ಸಂದರ್ಭಗಳಲ್ಲಿ ಅವರು ಕಾದುಕೊಂಡಿದ್ದ ಎರಡು ಅಡಿ ಅಂತರ ಮಾಯವಾಗಿತ್ತು. "ಬೇಡದ್ದು ಹೇಳುವುದು" ಎಂದು ರಾಗವೆಳೆದ ಆ ಹುಡುಗಿಯ ರಾಗ ಬಹಳ‌ ಒಳ್ಳೆಯದನ್ನೇ ಮಾಡಿತು ಅಂದುಕೊಂಡೆ. 

      ಹದಿನೈದು ವರ್ಷಗಳ ನಂತರ ಈ ಘಟನೆಯನ್ನು ನೆನಪಿಸಿಕೊಂಡರೆ ಮುಖದ ಮೇಲೆ ನಸುನಗು ಮೂಡುತ್ತದೆ. ಹೊಸತಾಗಿ ಶಿಕ್ಷಕವೃತ್ತಿ ಪ್ರವೇಶಿಸುವ ಹುಡುಗರಲ್ಲೊಮ್ಮೆ ಈ ಅನುಭವ ಹಂಚಿಕೊಂಡರೆ ಚೆನ್ನ ಅನಿಸುತ್ತದೆ.

        - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment