ಕೋವಿಡ್ ಕಾಲದಲ್ಲೊಂದು ಪರೀಕ್ಷೆ ಡ್ಯೂಟಿ – ಶಿಕ್ಷಕನ ಡೈರಿಯಿಂದ 43

ಶಿಕ್ಷಕನ ಡೈರಿಯಿಂದ

ಕೋವಿಡ್ ಕಾಲದಲ್ಲೊಂದು ಪರೀಕ್ಷೆ ಡ್ಯೂಟಿ..

       ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆಗೂ ಮುಂಚೆಯೇ ಹತ್ತನೇ ನಂಬರಿನ ರೂಮಿನಲ್ಲಿ ಕೊಠಡಿ ಮೇಲ್ವಿಚಾರಕನಾಗಿ ಕುಳಿತಿದ್ದ ನನ್ನ ಬಳಿ ಹನ್ನೊಂದನೇ ರೂಮಿನ ಮೇಲ್ವಿಚಾರಕರು ಓಡೋಡಿ ಬಂದರು. ಹನ್ನೆರಡನೇ ರೂಮಿನಲ್ಲಿ ಏಕಾಂಗಿಯಾಗಿ ಕುಳಿತಿದ್ದ ‌ಹುಡುಗಿಯ ಕುರಿತಾಗಿ ನನ್ನ ಬಳಿ ತಿಳಿಸಿ ಆಫೀಸ್ರೂಮಿಗೆ ಧಾವಿಸಿದರು. ನಾನು ಹನ್ನೆರಡನೇ ಕೊಠಡಿಗೆ ಓಡಿದೆ. 

     ಕೋವಿಡ್ ಭೀತಿಯ ನಡುವೆಯೇ ಲಾಕ್ಡೌನ್ ಸಡಿಲವಾಗುತ್ತಿತ್ತು, ಭಾರೀ ಜಾಗರೂಕತೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ರಂಗ ಸಿದ್ದಗೊಂಡಿತ್ತು. ಪ್ರಾಥಮಿಕ ಶಾಲಾ ಶಿಕ್ಷಕನಾದ ನನಗೂ ಮೊಟ್ಟಮೊದಲ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಡ್ಯೂಟಿಯ ಸುಯೋಗ ಒದಗಿ ಬಂದಿತ್ತು. ಸಿಕ್ಕಾಪಟ್ಟೆ ಜಾಗ್ರತೆಯಿಂದ ನಡೆಯುತ್ತಿದ್ದ ಪರೀಕ್ಷೆಯಲ್ಲಿ ತುಸು ಕೆಮ್ಮು ಶೀತ ಜ್ವರ ಇತ್ಯಾದಿಗಳಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಆ ವ್ಯವಸ್ಥೆ ಮಾಡಲಾಗಿತ್ತು. ಈ 12ನೇ ನಂಬರಿನ ರೂಮಿನಲ್ಲಿದ್ದ ಹುಡುಗಿಯದ್ದು ಅದೇ ಕಥೆ.

     ಆ ಕೇಂದ್ರದಲ್ಲಿ ಒಟ್ಟು ಹನ್ನೊಂದು ಪರೀಕ್ಷಾ ಕೊಠಡಿಗಳಿದ್ದವು. ಹನ್ನೆರಡನೆಯದ್ದು ಹೆಚ್ಚುವರಿ ಕೊಠಡಿ. ಈ ಹತ್ತು, ಹನ್ನೊಂದು ಮತ್ತು ಹನ್ನೆರಡನೆಯ ಕೊಠಡಿಗಳು ಮುಖ್ಯ ಕಟ್ಟಡದ ಭಾಗವಾಗಿರಲಿಲ್ಲ.  ಕಛೇರಿಯಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದವು. 

     ಬಿಗಿ ಮುಂಜಾಗ್ರತೆಯ ಅಂಗವಾಗಿ ಪರೀಕ್ಷೆ ಪ್ರಾರಂಭಕ್ಕೆ ಬಹಳ ಮುಂಚೆಯೇ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕುಳ್ಳಿರಿಸಲಾಗಿತ್ತು. ಅದು ಪರೀಕ್ಷೆಯ ಮೊದಲ ದಿನ. ಈ ಹುಡುಗಿಗೆ ಶೀತವಿದೆಯೆಂದು ಹನ್ನೆರಡನೇ ರೂಮಿನಲ್ಲಿ ಕೂರಿಸಿದ್ದವರು ಆ ಕೊಠಡಿಗೆ ಮೇಲ್ವಿಚಾರಕರನ್ನು ಕಳಿಸುವಲ್ಲಿ  ತುಸು ವಿಳಂಬ ಮಾಡಿದ್ದರು. ಮೊದಲೇ ಕೋವಿಡ್ ಭೀತಿಯಿಂದ ಬಳಲಿ ಬೆಂಡಾಗಿದ್ದ ಪ್ರಪಂಚದ ಭಾಗವಾಗಿದ್ದ ಈ ಹುಡುಗಿ ವಿಪರೀತ ಭಯಗೊಂಡಿದ್ದಳು. ಪುಣ್ಯಕ್ಕೆ ಹನ್ನೊಂದನೇ ರೂಮಿನ ಶಿಕ್ಷಕರು ಅವಳನ್ನು ಗಮನಿಸಿ, ಸುದ್ದಿ ಮುಟ್ಟಿಸಲು ಕಛೇರಿಗೆ ಧಾವಿಸಿದ್ದರು.

     ನನ್ನನ್ನು ಕಂಡವಳೇ ಹುಡುಗಿ ''ಸರ್, ನನಗೇನೂ ಸಮಸ್ಯೆಯಿಲ್ಲ, ಚೂರು ತಲೆನೋವಿತ್ತು ಅಷ್ಟೇ, ನಾನು ಅಲ್ಲೇ ಪರೀಕ್ಷೆ ಬರೆಯುತ್ತೇನೆ ಸರ್'' ಎಂದು ಬಿಕ್ಕಿದಳು. ನಾನು ಅವಳ ಪಾಲಿಗೆ ಅಪರಿಚಿತನಾದರೂ, ನಾನವಳ ಬೇಡಿಕೆಗೆ ಸ್ಪಂದಿಸಿಯೇನು ಎಂಬ ನಂಬಿಕೆಯಿದ್ದಂತಿತ್ತು ಅವಳ ದನಿಯಲ್ಲಿ. ಎಲ್ಲಕ್ಕಿಂತ ಮಿಗಿಲಾಗಿ ಇವಳಿಗೆ ಕೋವಿಡ್ ಇದೆಯೆಂದು, ಎಲ್ಲರೂ ತನ್ನನ್ನು ದೂರವಿಡುವರೆಂಬ ಭೀತಿಯೂ ಅವಳಲ್ಲಿ ಕಾಣಿಸಿತು. ನಾನೊಂದಿಷ್ಟು ಧೈರ್ಯ ತುಂಬುವ ಪ್ರಯತ್ನ ಮಾಡಿದೆ. ಆ ಕ್ಷಣದಲ್ಲಿ ಆಕೆಯ ಮೈದಡವಿ ಸಾಂತ್ವನ ಹೇಳಲು ಶಿಕ್ಷಕಿಯರು ಯಾರಾದರೂ ಅಲ್ಲಿರಬೇಕಿತ್ತು ಎಂದು ನನಗನಿಸಿತ್ತು. ದುರಂತವೆಂದರೆ ಆ ಪರೀಕ್ಷಾ ಕೇಂದ್ರದಲ್ಲಿ ಒಬ್ಬರೇ ಒಬ್ಬರು ಮಹಿಳಾ ಮೇಲ್ವಿಚಾರಕರಿರಲಿಲ್ಲ.. ಎಷ್ಟೆಂದರೂ ನಾವು "ಮಹಿಳಾ ಶಿಕ್ಷಕಿ"ಯರ ಕುರಿತಾಗಿ  ವಿರೀತ ಕಾಳಜಿಯಿರುವ ಇಲಾಖೆಯವರಲ್ಲವೇ? ತಾಲೂಕಿನ ಮೂಲೆಯಲ್ಲಿರುವ ಕೇಂದ್ರವಾದುದರಿಂದ, ಅದೂ ಕೋವಿಡ್ ಕಾಲವಾದುದರಿಂದ ಪುರುಷಪುಂಗವರಷ್ಟೇ ಡ್ಯೂಟಿಗೆ ನಿಯೋಜಿತರಾಗಿದ್ದೆವು. ಪುಣ್ಯಕ್ಕೆ ನಮ್ಮೊಡನೆ  ಆಶಾ ಕಾರ್ಯಕರ್ತೆಯರೂ, ಅಂಗನವಾಡಿ ಕಾರ್ಯಕರ್ತೆಯರೂ ಇದ್ದರು. ಅವರುಗಳೊಂದಿಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರೂ, ಕೆಲವು ಶಿಕ್ಷಕರು ಅವಳಿಗೆ ಧೈರ್ಯ ತುಂಬುವಲ್ಲಿ ಯಶಸ್ವಿಯಾದರು‌. ಪ್ರಕರಣ ಸುಖಾಂತವಾಯಿತು. ಮರುದಿನದಿಂದ ಹುಡುಗಿಯೂ ಹುಷಾರಾದಳು, ತನ್ನ ಮೂಲ ಕೊಠಡಿಯಲ್ಲೇ ಪರೀಕ್ಷೆ ಬರೆದಳು.

       ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿತರುವ ನಮ್ಮ ಪ್ರಯತ್ನಗಳ ಫಲವಾಗಿಯೇ ನಮ್ಮಿಂದ ಘೋರ ಅಪಚಾರಗಳಾಗುವ ಉದಾಹರಣೆಯಾಗಿ ಈ ಘಟನೆ ನನ್ನ  ಮನಸ್ಸಿನಲ್ಲಿ ದಾಖಲಾಗಿಬಿಟ್ಟಿತು. 

         *        *         *
      ಕೋವಿಡ್ ಕಾಲದ ಎಲ್ಲಾ  ವೈಜ್ಞಾನಿಕ (ಮೂಢ?)ನಂಬಿಕೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಕೊಂಡು  ಪರೀಕ್ಷೆಯನ್ನು ನಡೆಸುತ್ತಿದ್ದೆವು. ಪರಮಪವಿತ್ರವಾದ ಸ್ಯಾನಿಟೈಜರನ್ನು ಅಡಿಗಡಿಗೆ ನನ್ನ ಕೈಗಳಿಗೂ, ಮಕ್ಕಳ ಕೈಗಳಿಗೂ ಪ್ರೋಕ್ಷಿಸಿಕೊಂಡು ನಾಲ್ಕು ದಿನದ ಡ್ಯೂಟಿಯನ್ನು ಮುಗಿಸುವ ಹೊತ್ತಿಗೆ ನನಗೆ ತುಸು ಕೆಮ್ಮು ಪ್ರಾರಂಭವಾಗಿತ್ತು.

       ಸಾಕಷ್ಟು ಮುಂಜಾಗ್ರತೆ ವಹಿಸಿದ್ದೆನಾದ್ದರಿಂದ ಮತ್ತು ನನ್ನ ಕೆಮ್ಮು ಕಫದಿಂದ ಕೂಡಿದ್ದರಿಂದ ಅದು ಕೋವಿಡ್ ಆಗಿರಬಹುದೆಂಬ ಭಯವೇನೂ ನನಗಿರಲಿಲ್ಲ‌. ಆದರೂ ಪರೀಕ್ಷೆ ಡ್ಯೂಟಿಗೆ ನಾನು ಹೋಗುವುದು ತರವಲ್ಲವೆಂದು ಐದನೇ ಪರೀಕ್ಷೆಯ ಬೆಳಿಗ್ಗೆ ಕೇಂದ್ರದ ಮುಖ್ಯಸ್ಥರಿಗೆ ಫೋನಾಯಿಸಿದೆ. "ಸ್ವಲ್ಪ  ಕೆಮ್ಮಿದೆ ಸರ್" ಎನ್ನುವಷ್ಟರಲ್ಲಿ "ಇಲ್ಲ.. ರಜೆ ಮಾಡುವ ಹಾಗಿಲ್ಲ, ಜನ ಕಮ್ಮಿ ಇದಾರೆ" ಎಂದು ಬಿಟ್ಟರು. ಡ್ಯೂಟಿಗೆ ಹಾಜರಾದೆ.

         ಪರೀಕ್ಷೆಯ ಕೊಠಡಿಯಲ್ಲಿರುವಾಗ ತುಸು ಕೆಮ್ಮು ಹೆಚ್ಚಾಗಿತ್ತು. ಪರೀಕ್ಷೆಯ ನಿಶ್ಶಬ್ದದ  ನಡುವೆ ಆಗಾಗ ಹೊರಹೊಮ್ಮುತ್ತಿದ್ದ ನನ್ನ ಕೆಮ್ಮಿನ ಸದ್ದು ತಮಟೆಯ ಸದ್ದಿನಂತೆ ಕೇಳಿಸುತ್ತಿತ್ತು. ಸಾಧ್ಯವಾದಷ್ಟು ಕಂಟ್ರೋಲ್ ಮಾಡಿಕೊಂಡು ಪರೀಕ್ಷೆ ಮುಗಿಸಿದೆ. ನನಗೆ ಮೊದಲ ದಿನ ಪ್ರತ್ಯೇಕ ಕೊಠಡಿಯಲ್ಲಿ ಕುಳಿತ ಹುಡುಗಿ ನೆನಪಾದಳು. ಇಲ್ಲಿ ನಿಯಮಗಳೆಲ್ಲ ನಮ್ಮ ಅನುಕೂಲಕಷ್ಟೇ ಎಂದುಕೊಂಡೆ. 

      ನನಗಿದ್ದುದು ಐದೇ ದಿನಗಳ ಡ್ಯೂಟಿ‌. ಆರನೇ ದಿನ ಕರ್ತವ್ಯ ಮುಗಿಸಿದ ನನ್ನ ಸ್ನೇಹಿತರು ಮರುದಿನ ನನ್ನ ಬಳಿ "ನಿನ್ನೆ ಇಬ್ಬರು ಶಿಕ್ಷಕರು ನಿಮ್ಮ ಬಗ್ಗೆ ಮಾತಾಡುತ್ತಿದ್ದರು..." ಎಂದರು. ನಾನು ಕುತೂಹಲಿಯಾದೆ. 
  "ಆ ಮಾಸ್ಟ್ರೊಬ್ಬರು ಕೆಮ್ತಿದ್ರು‌ ಮಾರ್ರೆ..., ಎಂತ ಕತೆಯೋ ಏನೋ ಅಂತಿದ್ರು.. ಅದಕ್ಕೆ‌ ನಾನು ಮಧ್ಯೆ ಬಾಯಿ ಹಾಕಿ 'ತಲೆಬಿಸಿ ಮಾಡ್ಬೇಡಿ, ಅವ್ರಿಗೆ ಯಾವಾಗ್ಲೂ ಹಾಗೆ ಆಗ್ತಾ ಇರತ್ತೆ, ಅದು ಮಾಮೂಲಿ ವಿಷಯ' ಎಂದು ಅವರ ಭಯ ಓಡಿಸಿದೆ" ಎಂದು ನಕ್ಕರು. ನಾನೂ ನಕ್ಕುಬಿಟ್ಟೆ. ಸ್ವಲ್ಪ ಹೊತ್ತು ಬಿಟ್ಟು  ಯೋಚನೆಯೊಂದು ತಲೆಗೆ ಹೊಕ್ಕಿತು. ಈ ಶಿಕ್ಷಕರು ಭಯಪಟ್ಟಂತೆ ಆ ಕೊಠಡಿಯಲ್ಲಿದ್ದ ಮಕ್ಕಳು ಭಯಪಟ್ಟಿದ್ದರೆ? ಅವರ ಭಯ ಓಡಿಸುವವರ್ಯಾರು? ತಪ್ಪು ನನ್ನದೋ, ಪರೀಕ್ಷಾ ಕೇಂದ್ರದ‌ ಮುಖ್ಯಸ್ಥರದ್ದೋ ತಿಳಿಯಲಿಲ್ಲ.

          - ಸದಾಶಿವ ಕೆಂಚನೂರು

IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment