ನನ್ನ ಗೆಳತಿಯೇ ನನ್ನ ಹಣ ಕದ್ದಿದ್ದಾಳೆ ಸರ್. . ! – ಶಿಕ್ಷಕನ ಡೈರಿಯಿಂದ 5

ಶಿಕ್ಷಕನ ಡೈರಿಯಿಂದ

ನನ್ನ ಗೆಳತಿಯೇ ನನ್ನ ಹಣ ಕದ್ದಿದ್ದಾಳೆ ಸರ್. . !


    ತರಗತಿಯೊಳಗಿನ ಕೆಲವೊಂದು ಸನ್ನಿವೇಶಗಳಲ್ಲಿ ಶಿಕ್ಷಕ ಪೋಲೀಸನಾಗಲೂಬೇಕಾಗುತ್ತದೆ; ಇನ್ನೂ ಕೆಲವೊಮ್ಮೆ ನ್ಯಾಯಾಧೀಶನಾಗಲೂಬೇಕಾಗುತ್ತದೆ.   "ಕಾನೂನಿನ ಕೈಯಿಂದ ನೂರು ಮಂದಿ ಅಪರಾಧಿಗಳು ಬಚಾವಾದರೂ ಒಬ್ಬನೇ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು"  ಎಂಬ ಭಾರತದ ದಂಡಸಂಹಿತೆಯ ಆಶಯ ನನಗೆ ಸರಿಯಾಗಿ ಅರ್ಥವಾಗಿದ್ದು ಅಂತಹದ್ದೇ ಒಂದು ಸನ್ನಿವೇಶದಲ್ಲಿ...

         ಆ ದಿನ ಬೆಳಬೆಳಗ್ಗೆ ಏಳನೆಯ ತರಗತಿಯ ಹುಡುಗಿ ಲತಾ ದೂರೊಂದನ್ನು ಹೊತ್ತು ನನ್ನೆಡೆಗೆ ಬಂದಿದ್ದಳು. ದೂರು ಅವಳ ಆಪ್ತಮಿತ್ರೆ ಸ್ಮಿತಾಳ ಮೇಲೆ...ಅದೂ ಕಳ್ಳತನದ  ಆರೋಪ..
     
         ಲತಾ ಮತ್ತು ಸ್ಮಿತಾಳ ಸ್ನೇಹದ ಎಷ್ಟು ಗಾಢವಾದಾದದ್ದು ಎನ್ನುವುದನ್ನು ‌ ಬಹಳ ಹತ್ತಿರದಿಂದ ಪ್ರತೀದಿನ ಕಾಣುತ್ತಿದ್ದವನು ನಾನು.. ಹಾಗಿರುವಾಗ ತನ್ನಲ್ಲಿದ್ದ ಎಪ್ಪತ್ತು ರೂಪಾಯಿಯನ್ನು ಗೆಳತಿ ಸ್ಮಿತಾಳೇ ಕದ್ದಿದ್ದಾಳೆ ಎಂಬ ಲತಾಳ ಖಡಾಖಂಡಿತ ಹೇಳಿಕೆ ನನಗೆ ಆಶ್ಚರ್ಯವನ್ನುಂಟುಮಾಡಿತ್ತು.. ಬಿಕ್ಕಿಬಿಕ್ಕಿ ಅಳುತ್ತಾ ದೂರು ಹೇಳಿದ್ದ ಲತಾಳ ದುಃಖದಲ್ಲಿ ಎಪ್ಪತ್ತು ರೂಪಾಯಿ‌ ಕಳೆದುಕೊಂಡಿದ್ದ ಬೇಸರಕ್ಕಿಂತಲೂ ಹೆಚ್ಚು ತನ್ನ ಮನೆಯವರಿಗೆ ತಾನು ಏನೆಂದು ಉತ್ತರಿಸಲಿ ಎಂಬ ಅಪರಾಧಿಭಾವದ ಪಾಲೇ ಹೆಚ್ಚಿತ್ತು ಎಂದು ನನಗನಿಸಿತ್ತು.

       ಲತಾ ತೀರಾ ಬಡತನದ ಹಿನ್ನೆಲೆಯ ಹುಡುಗಿ.. ದೂರದ ಊರಿನಿಂದ ಬಂದವಳು.. ನಮ್ಮ ಶಾಲೆಯ ಸಮೀಪದಲ್ಲಿದ್ದ ಬಿಸಿಎಂ ಹಾಸ್ಟೆಲ್ನಲ್ಲಿ ಇದ್ದು ನಮ್ಮ ಶಾಲೆಯಲ್ಲಿ ಕಲಿಯುತ್ತಿದ್ದವಳು. ಹಿಂದಿನ ದಿನ ಮನೆಯವರು ಕೊಟ್ಟು ಹೋಗಿದ್ದ ನೂರು ರೂಪಾಯಿಗಳಲ್ಲಿ ಕೆಲವು ವಸ್ತುಗಳನ್ನು ಖರೀದಿಸಿ, ಉಳಿದ ಎಪ್ಪತ್ತು ರೂಪಾಯಿಗಳನ್ನು ತರಗತಿಗೆ ತಂದಿದ್ದಳಂತೆ.. ಅದನ್ನು ತನ್ನ ಗೆಳತಿಯೇ ಕದ್ದಿದ್ದಳೆಂಬುದು ಅವಳ ದೂರು..
 
        "ಅವಳೇ ಕದ್ದಿದ್ದಾಳೆಂದು ಹೇಗೆ ಹೇಳುತ್ತಿ?" ಎಂದು ಕೇಳಿದೆ.. "ನನ್ನಲ್ಲಿ ಹಣವಿದ್ದದ್ದು ಗೊತ್ತಿದ್ದದ್ದು ಅವಳಿಗೆ ಮಾತ್ರ ಸರ್, ಯಾರಾದರೂ ಕದ್ದಾರು ಎಂದು ಇಂಗ್ಲೀಷ್ ಪಾಠ ಪುಸ್ತಕದ ಬೈಂಡ್ ಒಳಗೆ ಇಟ್ಟುಕೊಳ್ಳಲು ಹೇಳಿದ್ದೂ ಅವಳೇ... ನಿನ್ನೆ ಸಂಜೆ ಹಾಸ್ಟೆಲಿಗೆ ಹೋಗಿ ನೋಡಿದರೆ ಬ್ಯಾಗಲ್ಲಿ ಇಂಗ್ಲೀಷ್ ಪುಸ್ತಕ ಇರಲಿಲ್ಲ.. ನಿನ್ನೆ ಲಾಸ್ಟ್ ಪೀರಿಯಡಲ್ಲಿ ಏನೋ ಬರೀಲಿಕ್ಕೆ ನನ್ನ ಪುಸ್ತಕ ತೆಗೆದುಕೊಂಡಿದ್ದಳು, ಪುಸ್ತಕ ಅವಳ ಡೆಸ್ಕಲ್ಲೇ ಉಳಿದಿತ್ತು. ಇವತ್ತು ಬೆಳಿಗ್ಗೆ ಬಂದು ಅವಳ ಡೆಸ್ಕಲ್ಲಿದ್ದ ಪುಸ್ತಕ ನೋಡಿದರೆ, ಬೈಂಡ್ ಹರಿದು ಹಣ ಕದ್ದಿದಾರೆ.. ಅದರೊಳಗೆ ಹಣ ಇತ್ತೆಂದು ಗೊತ್ತಿದ್ದದ್ದು ಅವಳಿಗೊಬ್ಬಳಿಗೇ.." ಬಿಕ್ಕಿದಳು‌ ಲತಾ. ಸ್ಮಿತಾಳಿಗೆ ಕರೆ ಹೋಯಿತು. ಅವಳೂ ಗೋಳೋ ಎನ್ನುತ್ತಲೇ ಬಂದಳು.. ಮಾಡುವ ವಿಚಾರಣೆಯಲ್ಲ ಮಾಡಿಯಾಯಿತು.. "ನಾನು ತೆಗೆದಿಲ್ಲ ಸರ್" ಎನ್ನುವುದಕ್ಕಿಂತ ಹೆಚ್ಚಿನದೇನನ್ನೂ‌ ಅವಳು ಹೇಳಲಿಲ್ಲ..
   
     ತರಗತಿಯ‌ ಅತ್ಯಂತ ಶಾಂತ ಸ್ವಭಾವದ ಹುಡುಗಿ ಸ್ಮಿತಾ. ಸದಾಕಾಲ ನಗುನಗುತ್ತಾ ಮಾತನಾಡುತ್ತಿರುವ, ತನ್ನ ಮುಗ್ಧತೆಯಿಂದಲೇ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದ ಅವಳಿಗೆ ಲತಾಳೆಂದರೆ ಜೀವ.. ಅಂಥವಳು ಕದ್ದಿದ್ದಾಳೆಂದರೆ ನಂಬುವುದಾದರೂ ಹೇಗೆ?  'ಇವಳು ತೆಗೆದಿರಲಿಕ್ಕಿಲ್ಲ, ಆಮೇಲೆ ಉಳಿದವರನ್ನು ವಿಚಾರಿಸೋಣ, ಹಣ ಸಿಗುತ್ತದೆ ಹೆದರಬೇಡ' ಎಂದು ಲತಾಳನ್ನು ಸಮಾಧಾನಿಸಿ ಕಳುಹಿಸಿದೆ..
        
      ಮಧ್ಯಾಹ್ನದ ಹೊತ್ತಿಗೆ ಲತಾ ಸ್ಮಿತಾಳ ವಿರುದ್ಧ ಇನ್ನಷ್ಟು ಸಾಕ್ಷಿಗಳನ್ನು ಹೊತ್ತು ತಂದಿದ್ದಳು. "ಸರ್,  ಆರನೇ ತರಗತಿಯ ಸ್ನೇಹಾ ಸ್ಮಿತಾಳೊಟ್ಟಿಗೇ ಶಾಲೆಗೆ ಬರುವುದು. ಅವಳಲ್ಲಿ ಕೇಳಿದೆ, ಇವತ್ತು ಬೆಳಿಗ್ಗೆ ಸ್ಮಿತಾ ಸ್ವಲ್ಪ ಹಣ ಖರ್ಚು ಮಾಡಿದ್ದಾಳಂತೆ, ಅವಳಲ್ಲಿ ಇನ್ನೂ ಒಂದು ಐವತ್ತು ರೂಪಾಯಿಯ ನೋಟಿತ್ತಂತೆ."

    ಸ್ನೇಹಾಳನ್ನು ವಿಚಾರಿಸಿಯಾಯಿತು, ಲತಾ ಹೇಳಿದ್ದೆಲ್ಲವೂ ಸತ್ಯ ಎಂಬುದೂ ತಿಳಿಯಿತು. ಈಗ ಸ್ಮಿತಾಳನ್ನು ಮತ್ತೆ ವಿಚಾರಣೆ ಮಾಡಬೇಕಲ್ಲ.. ಯೋಚಿಸಿದೆ.. ನಾನು ಓದಿದ ಬೀರಬಲ್ಲನ ಕತೆಗಳನ್ನೆಲ್ಲಾ ನೆನಪಿಸಿಕೊಂಡೆ.. ಸ್ಮಿತಾಳಿಗೆ ಮತ್ತೆ ಕರೆ ಹೋಯಿತು.
       
         ಈಗ ಲತಾ ಸ್ಮಿತಾ ಇಬ್ಬರೂ ಅಳುತ್ತಿರಲಿಲ್ಲ., ಬದಲಿಗೆ ಇಬ್ಬರ ಕಣ್ಣುಗಳೂ ಕೋಪದ ಕಿಡಿಕಾರುತ್ತಿದ್ದವು. ಸ್ಮಿತಾಳೊಬ್ಬಳನ್ನೇ ನನ್ನೊಡನೆ ಕುಳ್ಳಿರಿಸಿಕೊಂಡೆ. ಅವಳಲ್ಲಿದ್ದ ಐವತ್ತು ರೂಪಾಯಿ ನೋಟು ನನ್ನ ಕೈಗೆ ಬಂತು.. "ಅದು ಅಮ್ಮ ನನ್ನಲ್ಲಿ ಟೈಲರಿಗೆ ಕೊಡಲೆಂದು ಕೊಟ್ಟಿದ್ದು" ದೃಢವಾಗಿ ನುಡಿದಿದ್ದಳು ಸ್ಮಿತಾ.. ನಾನು ಹಾಗೇ ನೋಟನ್ನು ಪರಿಶೀಲಿಸುತ್ತಾ "ಇದು ನಿನ್ನ ಹಣವಲ್ಲ.. ಅವಳದ್ದೇ.." ಗಂಭೀರವಾಗಿ ಹೇಳಿದೆ.. ಕೊಂಚ ಗೊಂದಲಗೊಂಡಳು ಹುಡುಗಿ.. "ನಿನ್ನೆ ಅವಳಲ್ಲಿದ್ದ ನೋಟಲ್ಲಿ ಎ ಎಂದು ಪೆನ್ಸಿಲಲ್ಲಿ ಬರೆದಿದ್ದಳಂತೆ, ಈಗ ನಿನ್ನಲ್ಲಿರುವ ನೋಟಲ್ಲಿ ಅದು ಕಾಣಿಸುತ್ತಿದೆ." ತಣ್ಣಗೆ ನುಡಿದೆ. "ಬೆಳಿಗ್ಗೆ ಅಮ್ಮ ಕೊಡುವಾಗಲೇ ಅದರಲ್ಲಿ ಹಾಗೆ ಬರೆದಿತ್ತು" ಖಡಾಖಂಡಿತವಾಗಿ ಉತ್ತರಿಸಿದಳು.. ಈಗ ನನ್ನ ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಗೆದ್ದೆ ಎಂಬ ಭಾವದೊಂದಿಗೆ ಅವಳ ಕೈಯಲ್ಲಿ ನೋಟನ್ನಿಟ್ಟು " ಹೇಳು.. ಎಲ್ಲಿದೆ ಹಾಗೆ ಬರೆದಿರುವುದು.."ಎಂದೆ. ವಾಸ್ತವವಾಗಿ ಅದರಲ್ಲೇನೂ ಬರೆದೇ ಇರಲಿಲ್ಲ.. ಅವಳನ್ನು ಪರೀಕ್ಷಿಸಲೆಂದು ನಾನೇ ಸುಳ್ಳು ಹೇಳಿದ್ದೆ.‌.

     ಸ್ಮಿತಾಳ ದುಃಖದ ಕಟ್ಟೆಯೊಡೆಯಿತು.. "ನೀವು ನನ್ನ ಮೇಲೆ ಅನುಮಾನ ಪಡಬಾರದು ಎಂದು ಸುಳ್ಳು ಹೇಳಿದೆ ಸರ್, ನಾನು ಕದ್ದಿಲ್ಲ...." ಜೋರಾಗಿ ಅಳತೊಡಗಿದಳು. 

         ಅವಳ ಕಣ್ಣೀರು ಮತ್ತೆ ನನ್ನನ್ನು ಗೊಂದಲಕ್ಕೆ ತಳ್ಳಿತು.. ಅವಳು ನಿರಪರಾಧಿಯೆಂದು ನನ್ನ ಹೃದಯ ಸಂಪೂರ್ಣವಾಗಿ ಒಪ್ಪಿರಲಿಲ್ಲ ನಿಜ... ಆದರೆ ಒಂದು ವೇಳೆ ಅವಳು ನಿಜವಾಗಿಯೂ ನಿರಪರಾಧಿಯೇ ಆಗಿದ್ದರೆ..? ಅದೆಷ್ಟು ಹಿಂಸಿಸುತ್ತಿರುವೆ ನಾನು ಈ ಪುಟ್ಟ ಹುಡುಗಿಯನ್ನು ಎನಿಸಿತು... ಕೊನೆಯ ಪ್ರಯತ್ನ ಎಂಬಂತೆ "ಹಾಗಿದ್ದರೆ ಅಮ್ಮನಿಗೊಮ್ಮೆ ಕಾಲ್ ಮಾಡಿ ಕೇಳಲೇ?" ಪ್ರಶ್ನಿಸಿದೆ
 ಆಯಿತು ಎಂದಳು ಅಳುತ್ತಲೇ.. ನನಗೆ ಕಾಲ್ ಮಾಡಬೇಕೆನಿಸಲಿಲ್ಲ.. "ನಾನು ನಿನ್ನನ್ನು ನಂಬುತ್ತೇನೆ.." ಎಂದಷ್ಟೇ ಹೇಳಿ ಸುಮ್ಮನೆ ಲತಾಳನ್ನು ಕರೆದು "ಇವಳು ನಿನ್ನ ಹಣ ತೆಗೆದಿಲ್ಲ... ಅದು ಅವಳ ಅಮ್ಮನೇ ಕೊಟ್ಟಿದ್ದು..  ಈಗ ಸದ್ಯಕ್ಕೆ ಈ ಹಣ ನಿನ್ನಲ್ಲಿರಲಿ" ಎಂದು ನನ್ನ ಪರ್ಸಿನಿಂದ ಎಪ್ಪತ್ತು ರೂಪಾಯಿ‌ ತೆಗೆದು ಲತಾಳ ಕೈಯಲ್ಲಿಟ್ಟು, ಇಬ್ಬರನ್ನೂ ಸಮಾಧಾನಿಸಿ ತರಗತಿಗೆ ಕಳುಹಿಸಿದೆ..

          ನಿಮಗನಿಸಬಹುದು, ಈ ಕೇಸನ್ನು ಬಗೆಹರಿಸುವಲ್ಲಿ ನಾನು ಸೋತಿದ್ದೇನೆಂದು. ಅಥವಾ ನಾನು ಕೊನೆಯಲ್ಲಿ ಸ್ಮಿತಾಳ ಅಮ್ಮನಿಗೆ ಫೋನಾಯಿಸಬೇಕಿತ್ತೆಂದು. ಆರಂಭದಲ್ಲಿ ನನಗೂ ಹಾಗೇ ಅನಿಸಿತ್ತು. ಆದರೆ ಈಗ ಆ ಪ್ರಕರಣವನ್ನು ಅಲ್ಲಿಗೇ ನಿಲ್ಲಿಸಿದ್ದೇ ನನ್ನ ನಿಜವಾದ ಗೆಲುವು ಎಂದು ಭಾವಿಸುತ್ತೇನೆ.   ನನ್ನ ಕರ್ತವ್ಯ ಕಳ್ಳರನ್ನು ಪತ್ತೆಹಚ್ಚುವುದಾಗಿರಲಿಲ್ಲ‌. ಸ್ನೇಹ ಮತ್ತು ಬಾಂಧವ್ಯಗಳ ಕುರಿತಾದ ಮಕ್ಕಳ ನಂಬಿಕೆಯನ್ನು ಬಲಪಡಿಸುವುದಾಗಿತ್ತು, ಜೊತೆಗೆ ಮಕ್ಕಳ ಆತ್ಮ ಸಾಕ್ಷಿಯನ್ನು ಬಲಪಡಿಸುತ್ತಾ, ಅವರ ಆತ್ಮಗೌರವವನ್ನು ಕಾಪಾಡುವುದೂ ಆಗಿತ್ತು.  ಈ ಘಟನೆಯ ನಂತರ ಲತಾ ಮತ್ತು ಸ್ಮಿತಾಳ ಸ್ನೇಹ ಇನ್ನಷ್ಟು ಗಾಢವಾಗಿತ್ತು.
                                                 - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏

Sharing Is Caring:

Leave a Comment