ಶಿಕ್ಷಕನ ಡೈರಿಯಿಂದ
ನಮಗಾಗಿ ನೀವೇನಾದರೂ ಮಾಡಿದ್ದೀರಾ ಸರ್?
ಪ್ರತೀವರ್ಷವೂ ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಯಾವುದೇ ಉತ್ಸಾಹ- ಆಸಕ್ತಿಗಳನ್ನು ತೋರದ, ತೀರಾ ಆಸಕ್ತಿ ತೋರುವವರನ್ನು ತಮಾಷೆ ಮಾಡುವ ನಾನು ಈ ಬಾರಿ ಮಾತ್ರ ಫಲಿತಾಂಶದ ಬಗ್ಗೆ ತೀರಾ ಕುತೂಹಲಿಯಾಗಿದ್ದೆ. ಅದೂ ಆ ಒಬ್ಬ ಹುಡುಗನ ಫಲಿತಾಂಶದ ಬಗ್ಗೆ ಮಾತ್ರ.. ಅವನು ಪಾಸಾದರೆ ಸಾಕು ಎಂದು ಹಾರೈಸುತ್ತಾ ಫಲಿತಾಂಶಕ್ಕಾಗಿ ನಾನೂ ತವಕದಿಂದ ಕಾಯುತ್ತಿದ್ದೆ.
ರಿಸಲ್ಟ್ ಘೋಷಣೆಯಾಗಿ ಬಹಳ ಸಮಯ ಕಳೆದರೂ ಹುಡುಗನ ಫೋನಿಲ್ಲದೇ ಹೋದಾಗ ನನ್ನೊಳಗೇನೋ ತಲ್ಲಣ. ನಾನೇ ಕರೆ ಮಾಡಿದೆ. ಪಾಸು ಎಂದ. ಅವನ ದನಿಯಲ್ಲಿ ಸಂಭ್ರಮಕಡಿಮೆಯಿದೆ ಎನ್ನಿಸಿತು. ಮತ್ತೆ ಸರಿಯಾಗಿ ವಿಚಾರಿಸಿದೆ. ಪಾಸಾದನೆಂದು ಕನ್ಫರ್ಮ್ ಮಾಡಿಕೊಂಡೆ. ನನ್ನೊಳಗೇನೋ ಸಮಾಧಾನ. ಪ್ರತೀ ವರ್ಷವೂ ಹತ್ತನೇ ತರಗತಿಯಲ್ಲಿ ಫೇಲಾಗಬಹುದಾದ ಹುಡುಗರಿರುತ್ತಿದ್ದರೂ, ಅವರ ಬಗ್ಗೆ ಏನೂ ಅನ್ನಿಸದ ನನಗೆ ಈ ಹುಡುಗನ ರಿಸಲ್ಟಿನ ಬಗ್ಗೆ ಬಹಳ ಕಾಳಜಿಯಿತ್ತು. ಅದಕ್ಕೆ ಕಾರಣ ಆ ಹುಡುಗ ಕೀರ್ತನ್ ಮತ್ತವನ ತಂಗಿ ಕವಿತಾ ಮಾಡುತ್ತಿದ್ದ ಫೋನ್ ಕರೆಗಳು.
ನನ್ನ ಮೊದಲ ಶಾಲೆ ಬಿಟ್ಟು ಹೊಸ ಶಾಲೆಗೆ ಬರುವಾಗ ಅಲ್ಲಿ ಸಿಕ್ಕಿದ ವಿದಾಯ ಒಂದು ಬಗೆಯ ಕೃತಾರ್ಥ ಭಾವ ಮೂಡಿಸಿದ್ದರೂ, ನಾನು ಇಲ್ಲಿ ಕೆಲಸ ಮಾಡಿದ್ದು ಕಡಿಮೆಯಾಯಿತೇನೋ, ಇಷ್ಟೊಂದು ಗೌರವಕ್ಕೆ ನಾನು ಅರ್ಹನಲ್ಲವೇನೋ ಎಂಬ ಭಾವವನ್ನು ಮೂಡಿಸಿದ್ದೇನೋ ಸತ್ಯ. ಆದರೆ ನಾನು ಮಾಡಿದ್ದ ಒಳ್ಳೆಯ ಕೆಲಸಗಳನ್ನು ನೆನಪಿಸಿಕೊಂಡು ಅಂತರಂಗದಲ್ಲಿ ಬೀಗಿದ್ದೆ. ನನಗಂತಲ್ಲ, ಯಾವುದೇ ಶಿಕ್ಷಕನಾಗಿರಲಿ, ಆತನಿಗೆ ತನ್ನ ಹಳೆಯ ಶಾಲೆಯ ಮಕ್ಕಳಿಂದ ಕರೆ ಬಂದಾಗ ಒಂದು ಬಗೆಯ ಪುಳಕದ ಜೊತೆಗೆ ತನ್ನ ಬಗ್ಗೆಯೂ ಒಂಥರಾ ಹೆಮ್ಮೆ ಮೂಡುವುದು ತೀರಾ ಸಹಜ. ನನಗೂ ಅದೇ ಬಗೆಯ ಭಾವ ಹುಟ್ಟಿತ್ತು. ಹಳೇ ಶಾಲೆಯ ಮಕ್ಕಳ ಕರೆ ಬಂದಾಗ ತೀರಾ ಪುಳಕಿತನಾಗುತ್ತಿದ್ದೆ.. ನಿಧಾನವಾಗಿ ಮಕ್ಕಳ ಕರೆ ಬರುವುದು ಕಡಿಮೆ ಆಗಿತ್ತು. ಅದು ಸಹಜವೇ ಬಿಡಿ... ಆದರೆ ಈ ಹುಡುಗ ಕೀರ್ತನ್ ಮತ್ತವನ ತಂಗಿ ಕವಿತಾ ನಿರಂತರವಾಗಿ ಕರೆ ಮಾಡುತ್ತಿದ್ದರು. ಆದರೆ ಅವರ ಕರೆ ಮಾತ್ರ ನನಗಷ್ಟು ಹೆಮ್ಮೆ ತರುವ ವಿಚಾರವೇನಾಗಿರಲಿಲ್ಲ.
ನಾನಾಗಲೇ ಹೇಳಿದಂತೆ ನನ್ನ ಒಳ್ಳೆಯ ಕೆಲಸಗಳನ್ನು ನಾನು ನೆನಪಿಸಿಕೊಂಡು ಅಂತರಂಗದಲ್ಲಿ ಬೀಗಿದ್ದಿದೆ. ಸಹಪಠ್ಯ ಚಟುವಟಿಕೆಗಳಲ್ಲಿ ಅತೀವ ಆಸಕ್ತಿಯಿದ್ದ ನಾನು ನಾಟಕಗಳನ್ನು ಕಲಿಸುತ್ತಿದ್ದೆ, ಹಾಡುಗಳನ್ನು ಹಾಡಿಸುತ್ತಿದ್ದೆ, ರಸಪ್ರಶ್ನೆಯೋ ಇನ್ನೊಂದೋ - ಜ್ಞಾನಾತ್ಮಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದೆ. ಕ್ರೀಡಾಸಕ್ತ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುತ್ತಿದ್ದೆ. ಕಲಿಕೆಯಲ್ಲಿ ಮುಂದಿರುವ ಮಕ್ಕಳಲ್ಲಿ ಇಂಗ್ಲಿಷ್ ಮಾತುಗಾರಿಕೆಯನ್ನು ಉತ್ತೇಜಿಸಿದ್ದೆ, ತೀರಾ ವರ್ತನಾತ್ಮಕ ಸಮಸ್ಯೆಗಳಿದ್ದ ಮಕ್ಕಳನ್ನು ತಿದ್ದುವ ಪ್ರಯತ್ನ ಮಾಡಿದ್ದೆ, ತಮ್ಮ ತುಂಟತನದಿಂದಾಗಿ ಅವಗಣನೆಗೆ ಒಳಗಾಗಿದ್ದ ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡಿದ್ದೆ. ಇದನ್ನೆಲ್ಲಾ ಹೆಚ್ಚಿನ ಶಿಕ್ಷಕರು ಮಾಡುತ್ತಾರಾದರೂ, ನಾನೂ ಇದನ್ನು ಸಮರ್ಪಕವಾಗಿ ಮಾಡಿದ್ದೇನೆನ್ನುವ ಹೆಮ್ಮೆಯಂತೂ ಇತ್ತು. ನನ್ನ ಈ ಯಾವುದಾದರೂ ನಡೆಯಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳೇನಾದರೂ ನಿರಂತರವಾಗಿ ಕರೆ ಮಾಡಿಕೊಂಡಿದ್ದರೆ ಬಹುಶಃ ನಾನು ಆಕಾಶದಲ್ಲಿ ತೇಲುತ್ತಿದ್ದೆನೇನೋ.. ನೋಡಿ, ನಾನು ಹಾಗೆ ಮಾಡಿದ್ದೇನೆ, ಆ ವಿದ್ಯಾರ್ಥಿಯ ಮೇಲೆ ಅಷ್ಟು ಪ್ರಭಾವ ಬೀರಿದ್ದೇನೆ.. ಎಂದೆಲ್ಲಾ ನನ್ನವರೊಂದಿಗೆ ಬಡಾಯಿ ಕೊಚ್ಚುತ್ತಿದ್ದೆನೇನೋ... ಆದರೆ ಈ ಅಣ್ಣ ತಂಗಿ ಹಾಗಲ್ಲ...
ಕಲಿಕೆಯಲ್ಲಿ ತುಸು ಹಿಂದೇ ಇದ್ದ ಈ ಮಕ್ಕಳು ಅತ್ಯಂತ ಸಾಧು ಮತ್ತು ಮುಗ್ಧ ಸ್ವಭಾವದವರಾಗಿದ್ದರು. ತೀರಾ ನಿರುಪದ್ರವಿಗಳು.. ಇವರಬಗ್ಗೆ ಹೊಗಳುವಂತಹ ವಿಚಾರಗಳಾಗಲೀ, ದೂರುಗಳಾಗಲೀ ನಮ್ಮ ಗಮನಕ್ಕೆ ಬಾರದೇ ಇರುವುದರಿಂದ ಇವರೊಂದಿಗೆ ಸಂವಹನವೂ ಕಡಿಮೆ. ನಾನು ಆಸಕ್ತಿ ವಹಿಸುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಇವರ ಆಸಕ್ತಿಯೂ ಇಲ್ಲ.. ಸತ್ಯ ಹೇಳಬೇಕೆಂದರೆ ಐದಾರು ವರ್ಷ ಕಲಿಸಿದ ನಾನು ಆ ಹುಡುಗನೊಡನೆ ತೀರಾ ಆತ್ಮೀಯವಾಗಿ ಮಾತಾಡಿದ ಒಂದೇ ಒಂದು ಘಟನೆಯೂ ನನಗೆ ನೆನಪಿಲ್ಲ... ತಂಗಿಯಾದರೋ ಅಪರೂಪಕ್ಕೆ ಮಾತಾಡಿದ್ದಿತ್ತು.
ಅಂತಹ ಹುಡುಗ ಮತ್ತವನ ತಂಗಿ ನನಗೆ ಆಗಾಗ- ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆಯಂತೆ ಕರೆ ಮಾಡುತ್ತಾರೆ. ಅದೂ ನಿರಂತರವಾಗಿ ಮೂರೂವರೆ ವರ್ಷಗಳಿಂದ. ಅವರು ಮಾತಾಡುತ್ತಿದ್ದುದೂ ಇಷ್ಟೇ.... 'ಹೇಗಿದ್ದೀರಿ ಸರ್, ಮಗು ಹೇಗಿದಾನೆ, ಆಂಟಿ ಹೇಗಿದಾರೆ, ಮೊನ್ನೆ ಶಾಲೆಯಲ್ಲಿ ಈ ಕಾರ್ಯಕ್ರಮ ಇತ್ತು.., ನಾಡಿದ್ದು ನಮ್ಮ ಮನೆಯಲ್ಲಿ ಈ ಕಾರ್ಯಕ್ರಮ ಇದೆ...' ಇಷ್ಟೇ..
ಆ ಮಕ್ಕಳಿಗಾಗಿ ನಾನೇನು ಮಾಡಿದ್ದೆ ಕೇಳಿಕೊಂಡರೆ ಏನೂ ಇಲ್ಲ ಎಂಬ ಉತ್ತರವೇ ನನ್ನೊಳಗೆ ಹುಟ್ಟುತ್ತಿತ್ತು. ಬಹಳ ಪ್ರೀತಿಯಿಂದ ಅವರು ಮಾಡುವ ಪ್ರತೀ ಕರೆ "ನಮಗಾಗಿ ನೀವೇನು ಮಾಡಿದ್ದೀರಿ ಸರ್?" ಎಂಬ ಪ್ರಶ್ನೆಯನ್ನು ಮುಂದಿಟ್ಟ ಹಾಗೆ ಎಂದು ನಾನು ಪರಿಗಣಿಸಲು ಪ್ರಾರಂಭಿಸಿದ್ದೆ. ನನಗರಿವಿಲ್ಲದೇ ಈ ಮಕ್ಕಳ ಬಗೆಗೆ ಅವ್ಯಕ್ತ ಕಾಳಜಿ ಬೆಳೆಯುತ್ತಾ ಹೋಗಿತ್ತು. ಹಾಗಾಗಿಯೇ ಅವನ ಹತ್ತನೇ ತರಗತಿಯ ಫಲಿತಾಂಶದ ಕುರಿತು ನಾನು ಚಿಂತಿತನಾಗಿದ್ದೆ. ಅವನು ಕರೆ ಮಾಡಿ ಪರೀಕ್ಷೆಯ ಬಗ್ಗೆ ಮಾತಾಡಿದಾಗೆಲ್ಲ ಹುಟ್ಟಿಕೊಳ್ಳುತ್ತಿದ್ದ 'ಅವನೆಲ್ಲಾದರೂ ಫೇಲಾದರೆ ಅದರಲ್ಲಿ ನನ್ನ ಪಾತ್ರವೂ ಇರುತ್ತದೆ' ಎಂಬ ಸಣ್ಣ ಅಪರಾಧಿ ಪ್ರಜ್ಞೆಯೂ ಆ ಚಿಂತೆಯೊಂದಿಗೆ ಬೆರೆತುಕೊಂಡಿತ್ತು. ಕೊನೆಗೂ ಅವನ ಫಲಿತಾಂಶ ನನಗೆ ಸಮಾಧಾನ ಕೊಟ್ಟಿತ್ತು.
ಕೀರ್ತನ್- ಕವಿತಾ ಈಗಲೂ ಕರೆ ಮಾಡುತ್ತಿರುತ್ತಾರೆ. ಮತ್ತದೇ 'ಹೇಗಿದೀರಿ..? ಮಗು ಹೇಗಿದಾನೆ..?' ನನಗೆ ಮತ್ತೆ ಅವರು ತರಗತಿಯೊಳಗಿನ ತೀರಾ ಅವಗಣಿತ ವಿದ್ಯಾರ್ಥಿಗಳ ಪ್ರತಿನಿಧಿಗಳಂತೆ ಗೋಚರಿಸುತ್ತಾರೆ.. ''ನೀವು ನಮಗೋಸ್ಕರ ಏನಾದರೂ ಮಾಡಿದೀರಾ ಸರ್?" ಎಂದು ಮತ್ತೆ ಮತ್ತೆ ಕೇಳಿದಂತೆ ಭಾಸವಾಗಿತ್ತದೆ. ನಾನು ಯೋಚಿಸಲು ತೊಡಗುತ್ತೇನೆ.
- ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799