ಮನೆ ಮನೆ ಕತೆ – ಗಣತಿದಾರನ ಡೈರಿಯಿಂದ – ಶಿಕ್ಷಕನ ಡೈರಿಯಿಂದ 34

ಶಿಕ್ಷಕನ ಡೈರಿಯಿಂದ

ಮನೆ ಮನೆ ಕತೆ – ಗಣತಿದಾರನ ಡೈರಿಯಿಂದ


     ಬಹಳ ಹಳೆಯದಾದ ಆ ಪುಟ್ಟ ಮನೆಗೆ ಬರುವಾಗ ಮನೆಯ ಸದಸ್ಯರ ಆತ್ಮೀಯ ಮಾತುಕತೆ, ತಮಾಷೆ, ಸರಸದ ಮಾತುಗಳು ನನಗೆ ಕೇಳಿಸುತ್ತಿತ್ತು. ನಾನಲ್ಲಿಗೆ ಹೋದ ನಂತರವೂ ಅವರ ಲವಲವಿಕೆಯ ಮಾತುಕತೆ ಮುಂದುವರೆದಿತ್ತು. ಅವರೆಲ್ಲರ ನಡುವೆ ಬಹಳ ಪ್ರೀತಿ ಇದ್ದುದು ಕಾಣಿಸುತ್ತಿತ್ತು. ಅಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ಎಂದು ಅವರೆಲ್ಲರ ವರ್ತನೆಗಳು ಹೇಳುತ್ತಿದ್ದವು. 

     ಆ ಮನೆಯಲ್ಲಿದ್ದುದು ಐವರು ಸದಸ್ಯರು. ಅಜ್ಜಿ, ಅವರ ಮಗಳು ಮತ್ತು ಮೂವರು ಮೊಮ್ಮಕ್ಕಳು. ಮೊಮ್ಮಕ್ಕಳಲ್ಲಿ ಹಿರಿಯವಳು ಮಾಹಿತಿ ನೀಡುತ್ತಿದ್ದಳು. ಅವರೆಲ್ಲರ ಜನ್ಮದಿನಾಂಕವನ್ನು ಬರೆದುಕೊಳ್ಳುತ್ತಾ ಹೋದೆ. ಕಾಲೇಜು ಓದುತ್ತಿದ್ದ ಆ ಹುಡುಗಿಗೂ, ತನ್ನ ತಾಯಿ ಎಂದು ಆಕೆ ಪರಿಚಯಿಸಿದ ಮಹಿಳೆಗೂ ಹತ್ತೇ ವರ್ಷ ವ್ಯತ್ಯಾಸವಿತ್ತು. 'ಹುಟ್ಟಿದ ವರ್ಷ ತಪ್ಪಾಗಿ ಹೇಳಿದಿರಿ' ಎಂದೆ. 'ಇಲ್ಲ ಸರ್, ಸರಿಯಾಗಿಯೇ ಇದೆ' ನಕ್ಕಳು. 'ಅವರು ನನ್ನ ಚಿಕ್ಕಮ್ಮ'.
       
      ಅದು ಹತ್ತು ವರ್ಷಕ್ಕೊಮ್ಮೆ‌ ನಡೆಯುವ ಮಹಾಜನಗಣತಿ. ಆ ವರ್ಷ NPR ( National Population Rigister) ಎಂಬ ಹೊಸ ದಾಖಲೆಗೆ ಮಾಹಿತಿ ಸಂಗ್ರಹಿಸಬೇಕಾಗಿದ್ದುದರಿಂದ ಪ್ರತಿಯೊಬ್ಬ ವ್ಯಕ್ತಿಯ ಪೂರ್ಣ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಬೇಕಾಗಿತ್ತು.‌ ಆ ಮಾಹಿತಿ ಸಂಗ್ರಹಣೆಯ ಸಂದರ್ಭದಲ್ಲಿ ಅವರ ಮನೆಯ ಕತೆಗಳೆಲ್ಲಾ ನಮ್ಮೆದುರು ಬಂದು ಬಿಡುತ್ತಿದ್ದವು‌. ಕೆಲವು ವಿಚಾರಗಳನ್ನು ಕೇಳುವಾಗ ಅದರ ಹಿನ್ನೆಲೆಯ ಕತೆಗಳನ್ನೆಲ್ಲಾ‌, ನಮಗೆ ಆಸಕ್ತಿಯಿಲ್ಲದಿದ್ದರೂ ಮನೆಯವರೇ ಬಿಚ್ಚಿಡುತ್ತಿದ್ದರು. ನಾವು ಕಿವಿಯಾಗುತ್ತಿದ್ದೆವು.

      'ಅವರು ನನ್ನ ಚಿಕ್ಕಮ್ಮ' ಎಂದ ಹುಡುಗಿ 'ಅಮ್ಮ ತೀರಿದ ನಂತರ ಅಪ್ಪ ಅಮ್ಮನ ತಂಗಿಯನ್ನು ಮದುವೆಯಾದದ್ದು' ಎಂದಳು. ನನಗೆ ಇನ್ನೂ ಸುಮಾರು ಮಾಹಿತಿ ಬೇಕಿತ್ತು. ಎಲ್ಲವನ್ನೂ ಆಕೆ ಹೇಳಿ ಮುಗಿಸುವಷ್ಟರಲ್ಲಿ ಅಜ್ಜಿ ಚಹಾ ತೆಗೆದುಕೊಂಡು ಬಂದರು. ನಾನು ನನ್ನ ಕೆಲಸ ಮುಗಿಸಿ ಚಹಾ ಹೀರಲು ಆರಂಭಿಸಿದೆ. ಹುಡುಗಿ ತನ್ನ ತಂಗಿಯರೊಂದಿಗೆ ಎಲ್ಲಿಗೋ ಹೊರಟಳು. ನಾನು ಮಾಹಿತಿ ಸಂಗ್ರಹಿಸುವಾಗ ನಡೆದ ಸಂಭಾಷಣೆಗಳನ್ನು ಕೇಳಿದ್ದ ಅಜ್ಜಿ, ತನ್ನ ಕತೆಯನ್ನು ನನ್ನೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು.

      ಆ ಮೂವರು ಮಕ್ಕಳೂ ಅಜ್ಜಿಯ ಹಿರಿಮಗಳ ಮಕ್ಕಳಂತೆ. ತಾಯಿ ತೀರಿದ ನಂತರ ಆ ಮಕ್ಕಳನ್ನು ನೋಡಿಕೊಳ್ಳಲು ವಿದುರ ಅಳಿಯನಿಗೆ ಕಿರಿಯ‌ ಮಗಳನ್ನೇ ಮದುವೆ ಮಾಡಿಕೊಟ್ಟರಂತೆ‌. ಮದುವೆಯಾದ ಮೂರೇ ತಿಂಗಳಲ್ಲಿ ಆ ಅಳಿಯನೂ ತೀರಿಕೊಂಡರಂತೆ. ಆ ಚಿಕ್ಕಮ್ಮ ಈ ಮಕ್ಕಳನ್ನು ಇಷ್ಟು ದೊಡ್ಡವರನ್ನಾಗಿಸಿದರಂತೆ‌. ಈಗಲೂ ಆ ಮನೆಯ ಜವಾಬ್ದಾರಿ ಆ ಚಿಕ್ಕಮ್ಮನದೇ., ಅವರು ಮಾಡುವ ಕೂಲಿಯೇ ಆ ಮನೆಯ ಆಧಾರ.

     ಆಕೆ ಅಷ್ಟು ಹೇಳಿ ಮುಗಿಸುವಷ್ಟರಲ್ಲಿ ನಾನು ಬಾಕಿಯಿದ್ದ ಕೆಲವು ಕಾಲಂಗಳನ್ನು ತುಂಬಿಸಹೊರಟೆ. ಅವರ ಮತ್ತಷ್ಟು ಕಷ್ಟಗಳು ನನ್ನೆದುರು ಕಾಣಿಸತೊಡಗಿದವು. ವರ್ಷದ ಕೊನೆಯ ಮೂರು ತಿಂಗಳುಗಳು ಅವರ ಮನೆಯ ಬಾವಿಯಲ್ಲಿ ನೀರಿರುವುದಿಲ್ಲ. ಬಹಳ ದೂರದಿಂದ ನೀರು ತರುತ್ತಿದ್ದರು. ಮನೆಯೊಂದಿದೆ, ಆದರೆ ಆ ಜಾಗ ಬೇರೆಯವರಿಗೆ ಸೇರಿದ್ದು. "ಯಾವಾಗ ಇಲ್ಲಿಂದ ಹೊರಡಬೇಕೋ ಗೊತ್ತಿಲ್ಲ" ಎಂದ ಅಜ್ಜಿ ನಕ್ಕರು. ಅವರ ಮಗಳ ಮುಖದಲ್ಲಿದ್ದುದೂ ಮಂದಹಾಸವೇ.... 

    ನನ್ನ ಹೃದಯ ಭಾರವಾಗಿತ್ತು. ಹೊರ ಹೋಗಿದ್ದ ಮಕ್ಕಳು ಮತ್ತೆ ಬಂದರು. ಅವರ ವರ್ತನೆಗಳು ಆ ಮನೆಯಲ್ಲಿ ಸಂತೋಷ ತುಂಬಿ ತುಳುಕುತ್ತಿದೆ ಎಂಬುದನ್ನು ಮತ್ತೆ ಸಾರಿದವು.

     *     *     *

    ಮತ್ತೊಂದು ಮನೆ.. ಅಲ್ಲಿ ಮೂವತ್ತೈದರ ಮಹಿಳೆಯೊಬ್ಬರು ಮನೆಯ ಸದಸ್ಯರ ಮಾಹಿತಿ ನೀಡತೊಡಗಿದರು. ಆಕೆಯ ಮಾತುಗಳಲ್ಲಿ ಬದುಕಿನ ಬಗೆಗಿನ ನಿರ್ಲಿಪ್ತತೆಯ ಜೊತೆಗೆ ಗೌರವ ಹುಟ್ಟಿಸುವಂತಹ ಪ್ರೌಢಿಮೆಯೂ ಇತ್ತು. ವಿಶೇಷ ಚೇತನೆ ಅಕ್ಕನಿಗಾಗಿ ಮದುವೆಯಾಗದೇ ಉಳಿದ ತಂಗಿಯರು, ಮದುವೆಯಾದರೂ ಪತ್ನಿಯನ್ನು ಕಳೆದುಕೊಂಡಿರುವ ಅಣ್ಣ.. ಒಂದು ಕ್ಷಣ ಶಾಪಗ್ರಸ್ಥ ಕುಟುಂಬ ಎನಿಸಿದರೂ ಹಾಗಂದುಕೊಳ್ಳಬಾರದು ಎಂದುಕೊಂಡೆ. ಆ ಮನೆಯಲ್ಲಿ ಲವಲವಿಕೆ ಅಷ್ಟೇನೂ ಇಲ್ಲವಾದರೂ ಪ್ರೀತಿ, ಕಾಳಜಿಗಳಿಗೇನೂ ಕೊರತೆಯಿಲ್ಲ ಎನಿಸಿತು.

      *     *      *
     
     ಅರಮನೆಯಂತಹ ಮನೆಯೆದುರು ನಿಂತೆ. ಮನೆಯೊಳಗೆ ಸ್ವಾಗತಿಸಿದರು. ಇಂದ್ರಪ್ರಸ್ಥದ ಅರಮನೆ ಪ್ರವೇಶಿಸಿದ ದುರ್ಯೋಧನನ ಹಾಗಾಗಿತ್ತು ನನ್ನ ಪರಿಸ್ಥಿತಿ. ಭವ್ಯ, ಸುಂದರ, ಮನೋಹರ.... ದೊಡ್ಡ ಉದ್ಯಮಿಯೊಬ್ಬರ ಮನೆಯದು. ಮನೆಯಲ್ಲಿ ಮನೆಯೊಡತಿಯೊಬ್ಬರೇ. ದೊಡ್ಡದಾದ ಟೀವಿ ಪರದೆಯ ಶಬ್ದವಿರದಿದ್ದರೆ ಮನೆಯೊಳಗೆ ಅಸಹನೀಯ ಮೌನ. ಈ ಮನೆಯಲ್ಲಿ ಸುಖ- ಸೌಕರ್ಯಗಳಂತೂ ತುಂಬಿಕೊಂಡಿದ್ದವು. ಸಂತೋಷ....?  ಗೊತ್ತಿಲ್ಲ.

    *    *    * 

    ಗಾರೆಯಾಗದ, ಕೆಂಪುಕಲ್ಲಿನ ಗೋಡೆಯ, ಶೀಟು ಮಾಡಿನ ಆ ಪುಟ್ಟ ಮನೆಯಲ್ಲಿ ಒಂದೇ ವಯಸ್ಸಿನವರಂತೆ ಕಾಣುತ್ತಿದ್ದ ಇಬ್ಬರು ಮಹಿಳೆಯರು ಬಹಳ ಆತ್ಮೀಯವಾಗಿದ್ದರು. ಒಬ್ಬರನ್ನು ಹಿಂದೆಲ್ಲೋ ನೋಡಿದ ನೆನಪು. ಮನೆಯ ಸದಸ್ಯರ ಹೆಸರು ಬರೆಯಲು ಹೊರಟಾಗ ಒಬ್ಬರು ಮಹಿಳೆ ಮತ್ತು‌ ತನ್ನ ಮಗನ ಹೆಸರನ್ನು ಮಾತ್ರ ಹೇಳಿದಾಗ "ಮತ್ತೆ ಇವರು?" ಕೇಳಿದೆ. "ನಮ್ಮ ಮನೆಗೆ ನಿನ್ನೆ ಬಂದಿದೀರಲ್ಲಾ ಸಾರ್...?" ಪರಿಚಿತರಂತೆ ಕಾಣಿಸಿದ ಮಹಿಳೆ ಹೇಳಿದರು. ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಅವರ ಮನೆಗೆ ಹಿಂದಿನ ದಿನವೇ ಹೋಗಿದ್ದೆ. "ಓಹ್... ಹೌದಲ್ವಾ" ಅಂದವನು "ಸಂಬಂಧಿಕರಾ? " ಕೇಳಿದೆ. ಇಬ್ಬರೂ ಪರಸ್ಪರ ಮುಖ ನೋಡಿ ನಕ್ಕರು. ಯಾಕೆಂದು ಅರ್ಥವಾಗಲಿಲ್ಲ. ಕೇಳಿದೆ. 'ಇವರು ಮೊದಲನೇ ಹೆಂಡತಿ.. ನಾನು ಎರಡನೇ ಹೆಂಡತಿ..' ತುಸು ಮುಜುಗರವಿದ್ದರೂ ನಗುತ್ತಲೇ ಹೇಳಿದರು. ಸವತಿಯರಲ್ಲಿ‌ ಇಷ್ಟು ಆತ್ಮೀಯತೆಯಿದೆಯಲ್ಲ, ಆಗಬಹುದು ಅಂದುಕೊಂಡೆ. ಸ್ವಲ್ಪ ಮೊದಲು ಅವರ ವೈಯಕ್ತಿಕ ಮಾಹಿತಿ ತುಂಬುವಾಗ ಗಂಡನಿಗೆ ಬೇರೆ ಮದುವೆಯಾಗಿದೆ ಎಂದು ಹೇಳಿದ್ದರಾಕೆ‌. ನನ್ನ ಮುಖದಲ್ಲಿ ಮೂಡಿದ ಗೊಂದಲವನ್ನು ಅರ್ಥಮಾಡಿಕೊಂಡರೋ ಏನೋ..., "ಅವರು ಈ ಊರು ಬಿಟ್ಟು ಸುಮಾರು ವರ್ಷಗಳಾಗಿವೆ. ಮೂರನೇ ಮದುವೆಯಾಗಿ ದೂರದ ಊರಲ್ಲಿದ್ದಾರೆ." ಆಕೆಯ ದನಿಯಲ್ಲಿ ವಿಷಾದವಿತ್ತೋ, ಸಂಕೋಚವಿತ್ತೋ ಅರಿಯದಾದೆ, ಮುಖದಲ್ಲಿ ಮಾತ್ರ ನಗುವಿತ್ತು. ನಾನು ನನಗೆ ಅಗತ್ಯವಿದ್ದ ಮಾಹಿತಿಗಳನ್ನಷ್ಟೇ ಕೇಳಿ ಮುಂದುವರಿದೆ.

     *     *     *

   ಶಿಕ್ಷಕನಾದವನು ಕಲಿಸುವುದಕ್ಕಿಂತ ಕಲಿಯುವುದೇ ಹೆಚ್ಚು ಎಂದು ನನಗೆ ಆಗಾಗ ಅನಿಸುತ್ತಿರುತ್ತದೆ. ಗಣತಿಯ ಕಾಲದಲ್ಲಂತೂ ಇದು ದುಪ್ಪಟ್ಟು.

     - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment