ಶಿಕ್ಷಕನ ಡೈರಿಯಿಂದ
All things bright and beautiful
ಇಡೀ ಶಾಲೆಯ ಯಾವುದೇ ತರಗತಿಗೆ ಇಲ್ಲದ ಸಮಸ್ಯೆಯೊಂದು ಆ ಶಾಲೆಯ ಆರನೇ ತರಗತಿಯ ಮಕ್ಕಳಿಗೆ ಕಾಡುತ್ತಿತ್ತು. ಬಹಳ ವರ್ಷಗಳಿಂದಲೂ ಪಾರಿವಾಳದ ಗೂಡೊಂದು ಆ ತರಗತಿ ಕೊಠಡಿಯ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಅದೆಷ್ಟು ಓಡಿಸಿದರೂ ಪಾರಿವಾಳಗಳು ಆ ತರಗತಿಯನ್ನು ತೊರೆಯಲು ಸಿದ್ಧವಿರಲಿಲ್ಲ. ಡಸ್ಟರನ್ನು ಎಸೆಯುವುದು, ಮುಳ್ಳುಗಳನ್ನಿಡುವುದು ಇತ್ಯಾದಿ ತಂತ್ರಗಳು ಮಕ್ಕಳಿಗೆ ಒಂದು ಬಗೆಯ ಆಟದ ರೀತಿ ಮನರಂಜನೆ ನೀಡಿದ್ದವೇ ಹೊರತು ಪಾರಿವಾಳಗಳ ಸಮಸ್ಯೆಯಿಂದ ಮುಕ್ತಗೊಳಿಸಿರಲಿಲ್ಲ. ಪಾರಿವಾಳಗಳು ಬಾರದ ಹಾಗೆ ತಂತಿ ಜಾಲರಿ ಹಾಕಿಸುವ ಐಡಿಯಾ ಆ ದಿನಗಳಲ್ಲಿ ನಮಗಾರಿಗೂ ಹೊಳೆದಿರಲಿಲ್ಲ.
ಪಾರಿವಾಳಗಳು ತರಗತಿ ಕೊಠಡಿಯಲ್ಲಿ ವಾಸ್ತವ್ಯವಷ್ಟನ್ನೇ ಹೂಡಿದ್ದರೆ ಮಕ್ಕಳಿಗದು ಖುಷಿಯ ವಿಷಯವೇ ಆಗಿರುತ್ತಿತ್ತೇನೋ.. ಆದರೆ ಆ ಪಾರಿವಾಳಗಳ ಪಾಯಿಖಾನೆಯೂ ಅದೇ ಕೊಠಡಿಯಾಗಿದ್ದುದು ಮಕ್ಕಳ ತಲೆಬಿಸಿಯ ಮೂಲ. ಸಂಜೆಯಾದರೆ ಮಾಡಿನ ಜಂತಿಯ ಮೇಲೆ ಕುಳಿತು ವಿಶ್ರಮಿಸುವ ಪಾರಿವಾಳಗಳು ಹಾಕುವ ಹಿಕ್ಕೆಯ ರಾಶಿ ಪ್ರತೀದಿನ ಬೆಳಿಗ್ಗೆ ಮಕ್ಕಳನ್ನು ಸ್ವಾಗತಿಸುತ್ತಿತ್ತು. ಎರಡು ಮೂರು ದಿನ ರಜೆ ಮುಗಿಸಿ ಬಂದರಂತೂ ಕೇಳುವುದೋ ಬೇಡ. ಯಾರೋ ಒಬ್ಬ ವಿದ್ಯಾರ್ಥಿ ಇಂಗ್ಲೀಷ್ ಮತ್ತು ತುಳು ಭಾಷೆಯ ಪದಗಳನ್ನು ಜೋಡಿಸಿ 'ಪಿಜನ್ ಪೀ' ಎಂದು ನಾಮಕರಣ ಬೇರೆ ಮಾಡಿದ್ದ. ಅದನ್ನು ಸ್ವಚ್ಛಗೊಳಿಸುವುದೊಂದು ಮಕ್ಕಳಿಗೆ ಹೆಚ್ಚುವರಿ ಕೆಲಸ. ಕೆಲವು ಮಕ್ಕಳಂತೂ ಹಿಂದಿನ ದಿನವೇ ನಿರ್ದಿಷ್ಟ ಜಾಗದಲ್ಲಿ ಪೇಪರ್ ಹಾಸಿಟ್ಟು ಜಾಣ್ಮೆ ಮೆರೆಯುತ್ತಿದ್ದರು.
ತರಗತಿ ನಡೆಯುವಾಗಲೂ ಪಾರಿವಾಳಗಳು ಆಗಾಗ ಮೂಲೆಯಲ್ಲಿ ಕುಳಿತು ಬಗೆಬಗೆಯ ಹೂಂಕಾರ ಹಾಕುವುದಿತ್ತು. ಆಗ ಮಕ್ಕಳೂ ಮೈಮರೆತು ಹೂಂಕಾರದ ಪ್ರತ್ಯುತ್ತರ ಕೊಟ್ಟು ನಮ್ಮ ಕೆಂಗಣ್ಣಿಗೆ ಗುರಿಯಾಗುವುದಿತ್ತು. ಕೆಲವೊಮ್ಮೆ ಹೂಂಕಾರ ಪಾರಿವಾಳಗಳದ್ದೋ ಮಕ್ಕಳದ್ದೋ ತಿಳಿಯದೇ ನಾನೂ ತಬ್ಬಿಬ್ಬಾಗುವುದಿತ್ತು.
ಅಪರೂಪಕ್ಕೆ ತರಗತಿ ನಡೆಯುವಾಗಲೂ ಪಾರಿವಾಳಗಳು ಹಾರಾಡುವುದಿತ್ತು. ಅಷ್ಟೊತ್ತಿಗೆ ಮಕ್ಕಳೆಲ್ಲಾ ಮೇಲೆ ನೋಡಲು ಪ್ರಾರಂಭಿಸುತ್ತಿದ್ದರು. ನಾನಾಗ "ಮೇಲೆ ನೋಡಿ, ಪರವಾಗಿಲ್ಲ. ಆದರೆ ದಯವಿಟ್ಟು ನಿಮ್ಮ ಬಾಯಿಗಳನ್ನು ಮುಚ್ಚಿಕೊಂಡೇ ಮೇಲೆ ನೋಡಿ" ಎಂದರೆ ಮಕ್ಕಳೆಲ್ಲಾ 'ಹೋ..' ಎನ್ನುತ್ತಾ ಮುಖ ಕಿವುಚಿಕೊಳ್ಳುತ್ತಿದ್ದರು.
ಆ ವರ್ಷವಷ್ಟೆ ಬದಲಾಗಿದ್ದ ಆರನೆಯ ತರಗತಿಯ ಪಠ್ಯಪುಸ್ತಕದ ಇಂಗ್ಲೀಷ್ ಪದ್ಯವೊಂದನ್ನು ಮೊದಲ ಬಾರಿಗೆ ಬೋಧನೆ ಮಾಡಲು ಸಿದ್ಧನಾಗಿದ್ದೆ. ಆ ತರಗತಿಯಲ್ಲಿ ಎರಡು ಬೋರ್ಡ್ ಗಳಿದ್ದವು. ಸಾಮಾನ್ಯವಾಗಿ ನಾನು ಬಲಭಾಗದ ಬೋರ್ಡ್ನಲ್ಲೇ ಬರೆಯುವವನು. ಅದೇಕೋ ಆ ದಿನ ಎಡ ಭಾಗದ ಬೋರ್ಡಿನ ಬಳಿ ನಿಂತಿದ್ದೆ. ಬೋರ್ಡಿನ ಮೇಲೆ "All things bright and beautiful" ಎಂಬ ಪದ್ಯದ ಶೀರ್ಷಿಕೆಯ ಕೊನೆಯ ಪದವನ್ನು ಬರೆಯುತ್ತಿರುವಾಗಲೇ, ಇನ್ನೊಂದು ಬೋರ್ಡಿನೆದುರಿಗೆ ಪಚಾಲೆಂದು ಏನೋ ಬಿದ್ದಿತ್ತು. ಮಕ್ಕಳೆಲ್ಲಾ "ಹೋ.." ಎಂದು ನಗುತ್ತಾ ಕಿರುಚಿದ್ದರು. ಬೋರ್ಡಿನ ನೇರಕ್ಕೆ ಗೋಡೆಯ ಮೇಲೆ ಕುಳಿತಿದ್ದ ಪಾರಿವಾಳದ ಕೆಲಸ ಅದು. ನೀವು ಮನೆಯಲ್ಲಿ ಕೋಳಿ ಸಾಕಿದ್ದೀರಾದರೆ ನಿಮಗೆ ಅರಿವಿರುತ್ತದೆ, ಹಕ್ಕಿಗಳು ಕಾವು ಕೊಡುವ ದಿನಗಳಲ್ಲಿ ಅವುಗಳ ವಿಸರ್ಜನೆ ಹೆಚ್ಚು ಪ್ರಮಾಣದಲ್ಲಿರುತ್ತದೆ, ಮತ್ತು ಹೆಚ್ಚು ಗಲೀಜಾಗಿರುತ್ತದೆ. ಬಹುಶಃ ಆ ಪಾರಿವಾಳವೂ ಕಾವು ಕೊಡುವ ಕಾಲದಲ್ಲಿತ್ತು. ಮಕ್ಕಳು ಮುಖ ಕಿವುಚಿಕೊಂಡು ಹೋ ಎನ್ನುತ್ತಿದ್ದರೆ, ನಾನು "ಆಚೆ ಬೋರ್ಡಿನಲ್ಲಿ ಬರೆಯುತ್ತಿದ್ದರೆ ನನ್ನ ಪರಿಸ್ಥಿತಿ ಹೇಗಿರುತ್ತಿತ್ತು?" ಎಂದು ಊಹೆ ಮಾಡಿಕೊಂಡಿದ್ದೆ. ತಣ್ಣಗೆ ಆ ಕಡೆಗೆ ನೋಡುತ್ತಾ "all things bright and beautiful" ಎನ್ನುತ್ತಾ ಸಣ್ಣದಾಗಿ ನಕ್ಕೆ. ಮಕ್ಕಳು ಮತ್ತೊಮ್ಮೆ "ಹೋ.." ಎಂದು ನಕ್ಕರು.
ಪಾರಿವಾಳದ ವಿಸರ್ಜನೆಗೂ ಪದ್ಯದ ಶೀರ್ಷಿಕೆಗೂ ಇರುವ ವೈರುಧ್ಯದ ಬಗ್ಗೆ ಚರ್ಚೆ ನಡೆಯಿತು. ಕೆಲವೇ ಮಕ್ಕಳು ಪಾರಿವಾಳದ ಶೀರ್ಷಿಕೆಯೂ bright and brautiful ಎಂದು ವಾದಿಸಿದರೆ ಹೆಚ್ಚಿನವರು ಒಪ್ಪಲು ತಯಾರಿರಲಿಲ್ಲ. "ಒಮ್ಮೆ ಕಲ್ಪಿಸಿಕೊಳ್ಳಿ, ನಾವು ಹೊರಗಡೆ ಎರಡು ಕುಂಡಗಳಲ್ಲಿ ಎರಡು ಗುಲಾಬಿಗಿಡಗಳನ್ನು ನೆಡುತ್ತೇವೆ, ಪ್ರತೀದಿನ ತರಗತಿಯಲ್ಲಿ ಬಿದ್ದಿರುವ ಹಿಕ್ಕೆಯನ್ನು ಒಂದು ಗಿಡದ ಬುಡಕ್ಕೆ ಮಾತ್ರ ಹಾಕುತ್ತೇವೆ ಎಂದುಕೊಳ್ಳಿ. ಯಾವ ಗಿಡ ಚೆನ್ನಾಗಿ ಬೆಳೆಯುತ್ತದೆ? ಯಾವ ಗಿಡ ಹೆಚ್ಚು ಹೂ ಬಿಡುತ್ತದೆ? ಯೋಚಿಸಿ" ಎಂದೆ. ಎಲ್ಲರೂ ಗುಲಾಬಿ ಗಿಡಗಳನ್ನು ಕಣ್ಣೆದುರು ಕಲ್ಪಿಸಿಕೊಂಡಿದ್ದರು. ಯಾವ ವಸ್ತುವೂ ನಿರುಪಯುಕ್ತವಲ್ಲ ಎಂಬ ಸತ್ಯ ಅವರಿಗೂ ಅರ್ಥವಾಗಿತ್ತು.
ಕಳೆದ ಎಂಟು ವರ್ಷಗಳಿಂದ ಪ್ರತೀ ವರ್ಷವೂ ಆ ಪದ್ಯವನ್ನು ಬೋಧಿಸುವಾಗ ಈ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ಮಕ್ಕಳೊಂದಿಗೆ ಈ ಘಟನೆಯ ಕುರಿತಾದ ಚರ್ಚೆ ಮಾಡಿದ ಮೇಲಷ್ಟೆ ಆ ಪದ್ಯದ ಕಲಿಕೆ ಪೂರ್ಣಗೊಂಡ ಭಾವ ನನ್ನಲ್ಲಿ ಮೂಡುತ್ತದೆ.
- ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799