ದೀಪದಿಂದ ದೀಪ ಹಚ್ಚಬೇಕು – ಶಿಕ್ಷಕನ ಡೈರಿಯಿಂದ 31

ಶಿಕ್ಷಕನ‌ ಡೈರಿಯಿಂದ‌

ದೀಪದಿಂದ ದೀಪ ಹಚ್ಚಬೇಕು..


          "ನೀವು ನೀತಿಕತೆಗಳನ್ನು ಹೇಳುವುದಷ್ಟೇ ಮೌಲ್ಯಶಿಕ್ಷಣ ಎನ್ನುತ್ತಿದ್ದೀರಿ, ಆದರೆ ಮೌಲ್ಯಶಿಕ್ಷಣವೆಂದರೆ ಅಷ್ಟೇ ಅಲ್ಲ" ತರಬೇತುದಾರ ಆ್ಯಂಟನಿಯವರೊಂದಿಗೆ ನಾನು ವಾದಿಸುತ್ತಿದ್ದೆ. "ಸರಿಯಪ್ಪಾ... ಅಷ್ಟೇ ಅಲ್ಲ.. ಒಪ್ಪೋಣ..ನಿಮ್ಮ ಪ್ರಕಾರ ಮೌಲ್ಯಶಿಕ್ಷಣವೆಂದರೆ ಮತ್ತೇನು ಹೇಳಿ" ಚೆಸ್ ಆಟದಲ್ಲಿ ಚೆಕ್ ಕೊಡುವ ಶೈಲಿಯಲ್ಲಿ ಹೇಳಿದ್ದರು ಆ್ಯಂಟನಿಯವರು‌. ನನಗೆ ಏನು ಹೇಳುವುದೆಂದು ತೋಚಲಿಲ್ಲ. ಪೆಕರು ಪೆಕರಾಗಿ ನಕ್ಕೆ. 

          ವೃತ್ತಿಜೀವನದ ಆರಂಭದ ದಿನಗಳಲ್ಲಿ ನಡೆದ ತರಬೇತಿಯೊಂದರಲ್ಲಿ ನಡೆದ ಸಂಭಾಷಣೆಯಿದು.  ಆಗ ಹೊಸತನದ ಉತ್ಸಾಹ‌ ತುಂಬಿ ತುಳುಕುತ್ತಿತ್ತಾದರೂ, ಯೋಚನೆಗಳಲ್ಲಿ ಸ್ಪಷ್ಟತೆಯಿರಲಿಲ್ಲ. ಮೌಲ್ಯಶಿಕ್ಷಣದ ಬಗ್ಗೆ ನನ್ನೊಳಗೇನೋ ಯೋಚನೆಗಳಿದ್ದವು, ಆದರೆ ಅದೇನೆಂದು ವಿವರಿಸಲಾರೆನಾಗಿದ್ದೆ.

          *        *         *

       ನಿಮಗೆ ನೆನಪಿರಬಹುದು, ಈ ಸರಣಿಯ ಆರಂಭದಲ್ಲಿ ನಾನು "ಒಳ್ಳೆಯತನದ ಸ್ಪರ್ಧೆ" ಎಂಬ ಬರಹವನ್ನು ಬರೆದಿದ್ದೆ. ತರಗತಿಯ ಹುಡುಗಿಯೊಬ್ಬಳು ಬಳ್ಳನೆ ವಾಂತಿ ಮಾಡಿದಾಗ ಎಲ್ಲರೂ ಮುಖಸಿಂಡರಿಸಿಕೊಂಡರೂ, ಸೌಜನ್ಯ ಎಂಬ ಹುಡುಗಿಯೊಬ್ಬಳು ತರಗತಿ ಸ್ವಚ್ಛಗೊಳಿಸಲು ಮುಂದಾಗಿದ್ದುದನ್ನೂ, ಈ ಘಟನೆಯ ನಂತರ ನಾನು  "ಈಗ ಸ್ವಲ್ಪಸಮಯದ ಹಿಂದೊಂದು ಒಳ್ಳೆಯತನದ ಸ್ಪರ್ಧೆ ನಡೆದಿತ್ತು" ಎಂದಾಗ ಮಕ್ಕಳೆಲ್ಲಾ ಸೌಜನ್ಯಳತ್ತ ಅಭಿಮಾನದ ನೋಟ ಬೀರಿದ್ದನ್ನೂ ಆ ಬರಹದಲ್ಲಿ ಹಂಚಿಕೊಂಡಿದ್ದೆ. ಈ ಘಟನೆ ನಡೆದ ಏಳೋ ಎಂಟೋ ವರ್ಷಗಳ ನಂತರ ಇದನ್ನು ಯಾವುದೋ ಸನ್ನಿವೇಶದಲ್ಲಿ ನಾಲ್ಕನೇ ತರಗತಿಯ ಮಕ್ಕಳೊಡನೆ ಹಂಚಿಕೊಂಡಿದ್ದೆ. ಅದಾಗಿ ಹತ್ತೋ ಹದಿನೈದೋ ದಿನಗಳ ಬಳಿಕ ಹುಡುಗನೊಬ್ಬ ತರಗತಿಯಲ್ಲಿ ತುಸು ವಾಂತಿ ಮಾಡಿಕೊಂಡಿದ್ದ. ನಾನು ಕೇಳುವ ಮೊದಲೇ ಬಹಳಷ್ಟು ಮಕ್ಕಳು ಅದನ್ನು ಸ್ವಚ್ಛಗೊಳಿಸಲು ನಾ ಮುಂದೆ ತಾ ಮುಂದೆ ಎಂಬಂತೆ  ಸಜ್ಜಾಗಿದ್ದರು. ಅವರನ್ನು ನಾನೇ ತಡೆಯಬೇಕಾಯಿತು. ಅಷ್ಟರಮಟ್ಟಿಗೆ ಸೌಜನ್ಯಾಳ ಕತೆ ಅವರ ಮೇಲೆ ಪರಿಣಾಮ ಬೀರಿತ್ತು‌. ನನ್ನ ಅನುಭವ ಕಥನಗಳು ಮಕ್ಕಳನ್ನು ಪ್ರಭಾವಿಸಬಹುದು ಎಂಬ ಯೋಚನೆ ಹೊಳೆದದ್ದು ಆಗಲೇ.

         *         *         *

           "ನಿಮಗೊಂದು ಕತೆ ಹೇಳುತ್ತೇನೆ ನಾನು..  ನಿಮ್ಮದೇ ವಯಸ್ಸಿನ ಹುಡುಗಿಯ ಕತೆ. ನನ್ನ ಸ್ನೇಹಿತರೊಬ್ಬರು ಅವಳ ಶಾಲೆಯ ಶಿಕ್ಷಕರು.."  ಏಳನೇ ತರಗತಿಯ ಮಕ್ಕಳನ್ನುದ್ದೇಶಿಸಿ ಹೇಳಿದ್ದೆ ನಾನು. ನಾನು ಹೇಳಹೊರಟಿದ್ದು ನನ್ನ ಗೆಳೆಯನೊಬ್ಬ ನನ್ನಲ್ಲಿ ಹಂಚಿಕೊಂಡಿದ್ದ ಅವನ ಶಾಲೆಯ ಹುಡುಗಿಯ ಕತೆಯನ್ನು. 
         
          "ಅವಳ ಹೆಸರು ದೀಪಿಕಾ... ಏಳನೆಯ ತರಗತಿಯ ಹುಡುಗಿ.. ಅವಳಿಗಿಬ್ಬರು  ತಮ್ಮಂದಿರು.. ಎರಡು ಮತ್ತು ನಾಲ್ಕನೇ ತರಗತಿಯವರು.‌. ಬಡ ಕುಟುಂಬ.. ಅಪ್ಪ ಕೂಲಿ ಕೆಲಸ ಮಾಡ್ತಾರೆ.." ಮಕ್ಕಳು ಗಂಭೀರವಾಗಿ ಕೇಳುತ್ತಿದ್ದರು.
        "ದೀಪಿಕಾ ಆರನೇ ತರಗತಿಯಲ್ಲಿದ್ದಾಗ ಅವಳ ಅಮ್ಮ ಹೃದಯಾಘಾತದಿಂದ ತೀರಿಕೊಂಡರು. ಇಡೀ ಕುಟುಂಬ ಆಘಾತಕ್ಕೆ ಒಳಗಾಗಿತ್ತು. ತಮ್ಮಂದಿರನ್ನು ನೋಡಿಕೊಳ್ಳುವ ಜವಾಬ್ದಾರಿ ದೀಪಿಕಾಳದ್ದಾಯಿತು.." ನಾನು ಹೇಳುತ್ತಿದ್ದುದು ಸತ್ಯ ಕತೆಯನ್ನೇ.
       " ಅವಳ ತಂದೆ ಕೆಲಸ ಮಾಡಿ ಮನೆಗೆ ಸಾಮಾನು ತಂದು ಹಾಕುವ ಕೆಲಸವನ್ನಷ್ಟೇ ಮಾಡುತ್ತಾರಂತೆ. ಪ್ರತೀ ದಿನ ಸಂಜೆ ಮನೆಗೆ ಹೋಗಿ ಅನ್ನ ಸಾಂಬಾರು ಮಾಡುವ, ಬೆಳಿಗ್ಗೆ ತಿಂಡಿ ಮಾಡುವ ಕೆಲಸ ದೀಪಿಕಾಳದ್ದು. ಮನೆಯ ಉಳಿದ ಕೆಲಸಗಳ ಜವಾಬ್ದಾರಿಯೂ ಅವಳದ್ದೇ. ನೆನಪಿರಲಿ.. ಅವಳು ನಿಮ್ಮಷ್ಟೇ ದೊಡ್ಡ ಹುಡುಗಿ‌.. ತನ್ನ ತಂದೆ ಮತ್ತು ತಮ್ಮಂದಿರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾಳೆ.. ಯೋಚಿಸಿ... ನೀವೆಷ್ಟು ಕೆಲಸ ಮಾಡುತ್ತೀರಿ ನಿಮ್ಮ ಮನೆಯಲ್ಲಿ??" ನನ್ನ ಧ್ವನಿ ಆರ್ದ್ರಗೊಂಡಿತ್ತು. ಎದುರಿಗಿದ್ದ ಮಕ್ಕಳಲ್ಲಿ ಹೆಚ್ಚಿನವರ ಕಣ್ಣುಗಳು ತೇವಗೊಂಡಿದ್ದವು. 

           ಗೆಳೆಯ  ಈ ಹುಡುಗಿಯ ಕತೆ ಹೇಳಿದಾಗ ನನ್ನ ಕಣ್ಣುಗಳೂ ತೇವಗೊಂಡಿದ್ದವು‌. ತಾನು ಮತ್ತು ತನ್ನ ಸಹೋದ್ಯೋಗಿಗಳು ಅವಳ ಕುರಿತಾಗಿ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಅವನು ವಿವರಿಸಿದ್ದ. ಅವರ್ಯಾರೂ ಅವಳ ಕುರಿತಾದ ಸಿಂಪತಿಯನ್ನು ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಲೂ ಅವಳ ದಿನಚರಿಯ ಬಗ್ಗೆ ಅವಳಿಂದ ಮಾತನಾಡಿಸುತ್ತಿದ್ದರು. "ಏನು ತಿಂಡಿ? ಎಂತ ಸಾಂಬಾರು ಮಾಡಿದ್ದಿ?" ಇತ್ಯಾದಿಗಳನ್ನು ಕೇಳಿದಾಗ ಅವಳು ಹೆಮ್ಮೆಯಿಂದ ತನ್ನ ಕೆಲಸಗಳನ್ನು ಹೇಳುತ್ತಿದ್ದಳು. ಉಳಿದ ವಿದ್ಯಾರ್ಥಿಗಳು ಬೆರಗುಗಣ್ಣಿನಿಂದ ಅವಳನ್ನು ನೋಡುತ್ತಿದ್ದರು. ಶಿಕ್ಷಕರೂ ಅವಳನ್ನು ಮೆಚ್ಚುತ್ತಿದ್ದರು. ದೀಪಿಕಾಳ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಉಳಿದ ಮಕ್ಕಳೂ ಅವಳಿಂದ ಸ್ಪೂರ್ತಿ ಪಡೆಯುತ್ತಿದ್ದರು. ತೀರಾ ಅಗತ್ಯವೆನಿಸಿದ ಸಂದರ್ಭದಲ್ಲಿ ಅವಳಿಗೆ ಹಣಕಾಸಿನ ನೆರವು ನೀಡಲು ಆ ಶಿಕ್ಷಕವೃಂದ ಸಿದ್ಧವಿತ್ತು.

        ಇದೆಲ್ಲವನ್ನು ಹೇಳಿದ ನಂತರ ಮಕ್ಕಳಲ್ಲಿ "ದೀಪಿಕಾಳ ಕತೆ ಕೇಳಿದ ನಂತರ ನಿಮಗೇನನ್ನಿಸುತ್ತಿದೆ?" ಕೇಳಿದೆ. "ನಾವು ಮನೆಯಲ್ಲಿ ಅಪ್ಪ ಅಮ್ಮನಿಗೆ ತುಂಬಾ ಹೆಲ್ಪ್ ಮಾಡಬೇಕು ಅನ್ನಿಸ್ತಿದೆ"..
"ಅವಳು ಗ್ರೇಟ್ ಅನಿಸ್ತಿದೆ".. "ನಾವೆಲ್ಲಾ  ತುಂಬಾ ಲಕ್ಕೀ ಅನ್ನಿಸ್ತಿದೆ.." ಬೇರೆ ಬೇರೆ ಉತ್ತರಗಳು ಬಂದವು..

      "ಈಗ ದೀಪಿಕಾ ನಿಮ್ಮದೇ ತರಗತಿಗೆ ಬಂದರೆ.....?" ಸಾಧ್ಯತೆಯೊಂದನ್ನು ಮುಂದಿಟ್ಟೆ. 
      "ಅವಳಿಗೆ ಹೆಲ್ಪ್ ಮಾಡುತ್ತೇವೆ..."
       "ಹೆಲ್ಪ್ ಅಂದ್ರೆ....??"
   ಮಕ್ಕಳು ಯೋಚಿಸತೊಡಗಿದರು. 
      "ನಿಂಗೆ ತುಂಬಾ ಕಷ್ಟ ಅಲ್ವಾ... ಎನ್ನುತ್ತಾ ಪದೇ ಪದೇ ಸಿಂಪತಿ ತೋರಿಸ್ತೀರಾ?" ಕೇಳಿದೆ.
      "ಇಲ್ಲ ಸರ್.. ಹಾಗೆ ಹೇಳಿದ್ರೆ ಅವಳಿಗೆ ಅಳು ಬರ್ಬಹುದು"
         "ಮತ್ತೇನು ಮಾಡ್ತೀರಿ?"
         " ಅವಳಿಗೆ ನೀನು ಗ್ರೇಟ್ ಅಂತೇವೆ.."
          "ವೆರಿ ಗುಡ್.. ನಾವು ಯಾವುದೋ ಸ್ಪರ್ಧೆಯಲ್ಲಿ ಗೆದ್ದವರನ್ನು ಸಾಧಕಿ ಅಂತೇವೆ. ದೀಪಿಕಾ ಅವರಿಗಿಂತಲೂ ಸಾಧಕಿ ಅಲ್ವೇ.."
          ಮಕ್ಕಳೆಲ್ಲಾ ತಲೆದೂಗಿದರು. 
          "ಸರ್, ಅವಳಿಗೆ ಮನೆಯಲ್ಲಿ ತುಂಬಾ ಕೆಲಸ ಇರ್ತದಲ್ಲಾ..., ಶಾಲೆಯಲ್ಲಿ ಅವಳ ಕೆಲಸ ನಾವು ಮಾಡ್ತೇವೆ.." ಖುಷಿಯಾಯಿತು ನನಗೆ. ದೀಪಿಕಾಳ ಶಾಲೆಯಲ್ಲೂ ಮಕ್ಕಳು ಈ ಕೆಲಸ ಮಾಡುತ್ತಿದ್ದರೆಂದು ಗೆಳೆಯ ಹೇಳಿದ್ದು ನೆನಪಾಯಿತು. 

        " ನಿನ್ನಿಂದ ನಾವೆಲ್ಲಾ ಕಲಿಯುವುದು ತುಂಬಾ ಇದೆ ಅಂತೇವೆ ಸರ್...."
 
         ದೀಪಿಕಾಳ ಕತೆ ಮಕ್ಕಳ ಹೃದಯವನ್ನು ತಟ್ಟಿದ್ದು ಅವರ ಕಣ್ಣುಗಳಲ್ಲಿ ವ್ಯಕ್ತವಾಗಿತ್ತು. ನನ್ನ ಕೆಲಸ ಪೂರ್ಣಗೊಂಡಿತ್ತು.

            *         *         *

     ಆ್ಯಂಟನಿ ಸರ್ ಅಂದು ಕೇಳಿದ ಪ್ರಶ್ನೆಯನ್ನು ಈಗ ಯಾರಾದರೂ ಕೇಳಿದರೆ ನಾನು ಹೀಗೆ ಹೇಳುತ್ತೇನೆ.....
       "ಮಕ್ಕಳೆಂದರೆ ಎಣ್ಣೆ  ಮತ್ತು ಬತ್ತಿ ತುಂಬಿಟ್ಟ ಹಣತೆಗಳ ಹಾಗೆ ...  ನಮ್ಮ ಸುತ್ತಮುತ್ತ ಹಲವು ಹಣತೆಗಳು ಜ್ಯೋತಿಯನ್ನು ಬೆಳಗುತ್ತಿರುತ್ತವೆ.... ನಾವು ದೀಪದಿಂದ ದೀಪ ಹಚ್ಚಬೇಕು........ ಅದುವೇ ನಿಜವಾದ ಮೌಲ್ಯಶಿಕ್ಷಣ."

              - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment