ಹೀಗೊಂದು ಮುತ್ತಿನ ಕಥೆ – ಶಿಕ್ಷಕನ ಡೈರಿಯಿಂದ 26

ಶಿಕ್ಷಕನ ಡೈರಿಯಿಂದ

ಹೀಗೊಂದು ಮುತ್ತಿನ ಕಥೆ.

         "ದೊಡ್ಡವರಾದ ಮೇಲೆ ನೀವೇನಾಗುತ್ತೀರಿ?" ಎಂದು ಕೇಳಿದೆ ನಾನು ಎರಡನೆಯ ತರಗತಿಯ ಮಕ್ಕಳಲ್ಲಿ. ಯಥಾ ಪ್ರಕಾರ ಡಾಕ್ಟರ್, ಇಂಜಿನಿಯರ್ ಎಂಬಿತ್ಯಾದಿ ಉತ್ತರಗಳು ಬಂದವು. ಒಂದಿಬ್ಬರು ಮಕ್ಕಳು ಟೀಚರ್ ಆಗುತ್ತೇನೆ ಎಂದರು. ಮಕ್ಕಳ್ಯಾರಾದರೂ ಟೀಚರ್ ಆಗುತ್ತೇನೆ ಎಂದಾಗ ನನಗೆ ಆ ಮಕ್ಕಳ ಕಡೆಗೆ ಒಂಚೂರು ಜಾಸ್ತಿ ಪ್ರೀತಿ ಹುಟ್ಟುವುದುಂಟು. ಒಬ್ಬ ಹುಡುಗ ನಾನು ಅಪ್ಪನಂತೆ ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದ. ಕಲಿಕೆಯಲ್ಲಿ ತುಂಬಾ ಬುದ್ಧಿವಂತನಾಗಿದ್ದ ಆ ಹುಡುಗ ತನ್ನ ತಂದೆಯ ವೃತ್ತಿಯ ಕುರಿತಾಗಿ ಇಟ್ಟುಕೊಂಡಿರುವ ಗೌರವವನ್ನು ಮೆಚ್ಚಿದೆ. ಅಭಿಲಾಷ್ ಎನ್ನುವ ಹುಡುಗ ತಾನು "ಪಿಚ್ಚರ್ ಹೀರೋ ಆಗುತ್ತೇನೆ" ಎಂದ. 'ಹಾಗಾದರೆ ನಾವೆಲ್ಲ ನಿನ್ನನ್ನು ಟಿವಿಯಲ್ಲಿ ನೋಡಬಹುದು' ಎಂದೆ. 

           ಇದಾದ ಒಂದೆರಡು ದಿನಗಳಲ್ಲಿ  ಮಕ್ಕಳಿಂದ ಒಂದು ದೂರು. ಅದೇ ತರಗತಿಯ ಸೌಮ್ಯ  ಅಭಿಲಾಷನಿಗೆ ತನ್ನ ಸ್ಕೇಲಿ(ರೂಲರ್)ನಿಂದ ಮೂರ್ನಾಲ್ಕು ಪೆಟ್ಟು ಕೊಟ್ಟಿದ್ದಳು. ಯಾಕೆ ಎಂದು ಕೇಳಿದಾಗ "ಅವನು ನನಗೆ ಮುತ್ತ ಕೊಡುವುದು" ಎಂದು  ಸಿಟ್ಟಿನಿಂದ, ಆದರೆ ಅಷ್ಟೇ ಮುಗ್ಧವಾಗಿ ಉತ್ತರಿಸಿದ್ದಳು. ತರಗತಿಯ ಉಳಿದ ಮಕ್ಕಳೂ "ಅವನು ಎಲ್ಲರಿಗೂ ಹಾಗೆ ಮಾಡುತ್ತಾನೆ ಸರ್" ಎಂದು ಅವಳೊಂದಿಗೆ ಧ್ವನಿ ಸೇರಿಸಿದ್ದರು. ಇಲ್ಲಿ ಎಲ್ಲರಿಗೂ ಅಂದರೆ ಎಲ್ಲಾ ಹೆಣ್ಣು ಮಕ್ಕಳಿಗೆ ಮಾತ್ರವಂತೆ. 

     ಸುಮಾರು ಹದಿನಾಲ್ಕು ಹದಿನೈದು ವರ್ಷಗಳ  ಹಿಂದೆ ನಡೆದ ಘಟನೆ ಇದು. ಆ ವರ್ಷವಷ್ಟೇ ಶಿಕ್ಷಕ ವೃತ್ತಿಗೆ ಸೇರಿದ್ದೆನಷ್ಟೆ.  ಈಗಿನಷ್ಟು ಪ್ರಬುದ್ಧತೆ ಇಲ್ಲದ ದಿನಗಳವು. ಆದರೆ  ಶಿಕ್ಷಕನಾಗಿ  ಏನನ್ನಾದರೂ ಕಡಿದು ಗುಡ್ಡೆ ಹಾಕುವೆನೆಂಬ ಉತ್ಸಾಹವಂತೂ ಧಾರಾಳವಾಗಿತ್ತು.

         ಆ ದಿನಗಳಲ್ಲಿ ನನಗೆ ಅಭಿಲಾಷ ಮಾಡಿದ್ದು ಘನಘೋರ ಅಪರಾಧ ಅನಿಸಿತ್ತಾದರೂ (ಈಗಲಾದರೆ ಹಾಗನಿಸುವುದಿಲ್ಲ) ಶಿಕ್ಷೆ ಕೊಡುವ, ತುಂಬಾ ಜೋರು ಮಾಡುವ ಮನಸ್ಸೇನಾಗಲಿಲ್ಲ. ತುಸು ಜೋರು ಮಾಡಿ, ಇನ್ನು ಹಾಗೆಲ್ಲಾ ಮಾಡಬಾರದೆಂದು ಹೇಳಿಬಿಟ್ಟೆ.

        ಅಭಿಲಾಷ ತರಗತಿಯಲ್ಲಿನ ಸಾಧು ಸ್ವಭಾವದ ಹುಡುಗರಲ್ಲಿ ಒಬ್ಬನಾಗಿದ್ದ. ತುಂಬಾ ಮುದ್ದುಮುದ್ದಾಗಿ ಮಾತನಾಡುವ, ಮನೆಯಲ್ಲಿ ನಡೆದ ಘಟನೆಗಳನ್ನು ಕ್ಯೂಟಾಗಿ ನಮ್ಮೆದುರು ಬಿಚ್ಚಿಡುವ, ಚೆಂದದ ಭಜನೆಗಳನ್ನು ಹೇಳುವ ಅಭಿಲಾಷನಿಗೆ ಹೆಚ್ಚು ಜೋರು ಮಾಡಲು ನನಗಂತಲ್ಲ, ಯಾರಿಗೂ ಮನಸಾಗಲಿಕ್ಕಿಲ್ಲ.

          ಇದಾಗಿ ಮೂರ್ನಾಲ್ಕು ದಿನಗಳಲ್ಲಿ ಶಾಲಾ ಭೇಟಿಗಾಗಿ ಶಿಕ್ಷಣ ಸಂಯೋಜಕಿಯವರು ಶಾಲೆಗೆ ಬಂದಿದ್ದರು. ಸ್ಟಾಫ್ರೂಮಿನಲ್ಲಿ ಎಲ್ಲಾ ಶಿಕ್ಷಕರೊಡನೆ ಸಮಾಲೋಚನೆ ನಡೆಸುತ್ತಿರುವಾಗ ಎರಡನೇ ತರಗತಿಯ ಹೆಣ್ಣು ಮಕ್ಕಳು ಓಡಿ ಬಂದು ಕಿಟಕಿಗೆ ಬಾಯಿಯಿಟ್ಟು "ಸ..ರ್.. ಅಭಿಲಾಷ್ ಮುತ್ತ ಕೊಡುವುದು...." ಎಂದು ಕೂಗಿದರು.  ನಾನು ಹಿಂದೆ ಮುಂದೆ ನೋಡುವಷ್ಟರಲ್ಲಿ ಮೇಡಂ ನಗುತ್ತಾ ಅವನನ್ನು ಬರಹೇಳಿದರು. ಅಭಿಲಾಷ್ ಸ್ಟಾಫ್ರೂಮಿಗೆ ಬಂದ.

                      ಮುಖ್ಯೋಪಾಧ್ಯಾಯರ ಕುರ್ಚಿಯಲ್ಲಿ ಕುಳಿತಿದ್ದ ಹೊಸಾ ಟೀಚರನ್ನು ಕಂಡು ತಳಮಳಗೊಂಡ ಅಭಿಲಾಷನನ್ನು, ಮೇಡಂ ಬಹಳ ಪ್ರೀತಿಯಿಂದ ಮಾತನಾಡಿಸಿದರು.  ಮನೆಯಲ್ಲಿ ಅಮ್ಮ- ಅಪ್ಪನಿಗೆ, ಅಜ್ಜ ಅಜ್ಜಿಗೆಲ್ಲಾ ಮುತ್ತು ಕೊಟ್ಟರೆ ಸಾಕು, ಕ್ಲಾಸಿನ ಮಕ್ಕಳಿಗೆಲ್ಲಾ ಕೊಡಬಾರದು ಎಂಬುದನ್ನೆಲ್ಲಾ ಬಹಳ ಮುದ್ದಿನಿಂದ ಹೇಳಿದ ಅವರು "ಎಲ್ಲಿ, ನನಗೊಂದು ಮುತ್ತು ಕೊಡು ನೋಡುವಾ" ಎಂದಾಗ ಅವರ ಕೆನ್ನೆಗೊಂದು ಮುತ್ತನ್ನಿಟ್ಟ ಅಭಿಲಾಷ್. ಇನ್ನು ತರಗತಿಯಲ್ಲಿ ಹಾಗೆಲ್ಲಾ ಮಾಡಲಾರೆನೆಂದು ಮತ್ತೊಮ್ಮೆ ಹೇಳಿಸಿ, ತರಗತಿಗೆ ಕಳಿಸಿದರು ಮೇಡಂ.

     ನನಗೊಂದು ಕುತೂಹಲ, ಈ ಹುಡುಗನಿಗೆ ಈ ತರದ ಯೋಚನೆ ಹೇಗೆ ಬಂತು? ತರಗತಿಗೆ ಹೋದವನು ಅಭಿಲಾಷನನ್ನು ಬಳಿ ಕರೆದು ಕೇಳಿದೆ.. "ನಮ್ಮ ಪಕ್ಕದ ಮನೆಯ ಯತೀಶಣ್ಣ ನನಗೆ ಹೇಳಿದ್ದು ಸರ್.." ಎಂದ.  ಅವನೆಷ್ಟು ದೊಡ್ಡವನು ಕೇಳಿದರೆ ಒಂಭತ್ತನೇ ತರಗತಿಯೆಂಬ ಉತ್ತರ ಬಂತು. ಒಂಭತ್ತನೇ ತರಗತಿಯ ಹುಡುಗನೊಬ್ಬ ತನ್ನೊಳಗೆ ಹುಟ್ಟುತ್ತಿದ್ದ ತುಂಟ ಯೋಚನೆಗಳನ್ನು ಈ ಹುಡುಗನ ಮೂಲಕ ಕಾರ್ಯಗತಗೊಳಿಸುತ್ತಿದ್ದ. "ಇನ್ನೊಮ್ಮೆ ಅವನು ಹೇಳಿದ ಹಾಗೆ ಮಾಡ್ಲಿಕ್ಕುಂಟಾ?" ಕೇಳಿದರೆ "ಇಲ್ಲ" ಎಂದು ನಾಚುತ್ತಾ ಉತ್ತರಿಸಿ ಸ್ಥಳಕ್ಕೆ ಓಡಿದ ಅಭಿಲಾಷ.

     ಒಂದೆರಡು ನಿಮಿಷ ಕಳೆಯುವಷ್ಟರಲ್ಲಿ ನನಗೆ ಮತ್ತೇನೋ ಹೊಳೆಯಿತು... ಹೀಗೇ ಅಭಿಲಾಷನಲ್ಲಿ ಮಾತನಾಡುತ್ತಾ "ದೊಡ್ಡವನಾದ ಮೇಲೆ ಸಿನೆಮಾ ಹೀರೋ ಆಗೋದು ಅಂದಿದ್ದಿ ಅಲ್ವ?" ಕೇಳಿದೆ.. "ಹೌದು.." ಎಂದ. "ಸಿನೆಮಾ ಹೀರೋ ಆಗಬೇಕಂತ ಯಾಕನ್ನಿಸಿತು?" ಕೇಳಿದೆ. "ಯತೀಶಣ್ಣನೇ ಹೇಳಿದ್ದು.." ಮುಂದೇನೂ ನಾನು ಕೇಳಲಿಲ್ಲ. ಯತೀಶನೆಂಬ ಹುಡುಗನ ತಲೆಯಲ್ಲಿ ಯಾವ ಯೋಚನೆಯಿತ್ತು ಎಂಬುದು ನನಗೆ ಅರ್ಥವಾಗಿತ್ತು.

     *            *             *

  ಈ ಘಟನೆಯ ಬಗ್ಗೆ ಅಂದು ನನಗನಿಸಿದ್ದು ಹದಿಹರೆಯದ ಪೋಲಿ ಹುಡುಗನೊಬ್ಬ ಮುಗ್ಧ ಮಗುವಿನ ಮೇಲೆ ತನ್ನ ಪೋಲಿ ಯೋಚನೆಗಳನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾನೆ ಎಂದಷ್ಟೆ. ಆದರೆ ಈಗ ಗಂಭೀರವಾಗಿ ಯೋಚಿಸಿದರೆ ಇದು ಹದಿ ಹರೆಯದ ಬಾಲಕರ ಮೇಲೆ ಸಿನೆಮಾವೂ ಸೇರಿದಂತೆ ನಮ್ಮ ಮಾಧ್ಯಮಗಳು ಬೀರುತ್ತಿರುವ ಪ್ರಭಾವದ ಕುರಿತು ಚಿಂತಿಸಬೇಕಾದ ವಿಷಯವೂ ಹೌದು ಅನಿಸುತ್ತದೆ.  ಸಿನೆಮಾವೂ ಸೇರಿದಂತೆ ದೃಶ್ಯ ಮಾಧ್ಯಮಲೋಕ ಇಂತಹ ಚಿಂತನೆಗೆ ಒಳಪಡುವುದು ಕನಸಿನ ಮಾತಾಗಿರುವ ಈ ದಿನಗಳಲ್ಲಿ ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿ ಬಹಳ ದೊಡ್ಡದು ಎನಿಸುತ್ತದೆ. ಅಲ್ಲವೇ?

        - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment