ಗಣತಿದಾರ ಶಿಕ್ಷಕನೂ….. ಶ್ವಾನಾತಿಥ್ಯವೂ….. – ಶಿಕ್ಷಕನ ಡೈರಿಯಿಂದ 16

ಶಿಕ್ಷಕನ ಡೈರಿಯಿಂದ

ಗಣತಿದಾರ ಶಿಕ್ಷಕನೂ….. ಶ್ವಾನಾತಿಥ್ಯವೂ…..

     ಶಿಕ್ಷಕ ವೃತ್ತಿ ಪ್ರಪಂಚದಲ್ಲಿ ಸರ್ವಶ್ರೇಷ್ಠವಾದದ್ದು ಎಂದು ಕೆಲವರು ಮಾಡುವ ಭಾಷಣಗಳು ನನಗೆ ಎಂದಿಗೂ ಒಪ್ಪಿಗೆಯಾಗಿಲ್ಲ.. ಆದರೆ ಜೀವನದಲ್ಲಿ ಪ್ರೀತಿಯನ್ನು ಗಳಿಸಲು ಶಿಕ್ಷಕವೃತ್ತಿಗಿಂತ ಸೂಕ್ತವಾದದ್ದು ಬೇರೆ ಇಲ್ಲ ಎಂಬುದು ನನ್ನ ನಂಬಿಕೆ.. ನಮ್ಮ ವಿದ್ಯಾರ್ಥಿಗಳ, ಪೋಷಕರ ಊರವರ ಪ್ರೀತಿ ಹಾರೈಕೆಗಳು ನಮ್ಮೊಂದಿಗೆ ಸದಾ ಇರುತ್ತವೆ. ಈಗ ನಾನು ಹೇಳ ಹೊರಟಿರುವಿದು ಇದೆಲ್ಲಕ್ಕಿಂತ ಭಿನ್ನವಾದ ಪ್ರೀತಿಯ ಕುರಿತು.

 ಒಂದು ಕಾಲದಲ್ಲಿ  ಗಣತಿಕಾರ್ಯಕ್ಕಾಗಿ ಮನೆಮನೆಗೆ ಭೇಟಿ ಕೊಡುವುದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನ ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಿತ್ತು. ನಾವು ಕೆಲಸ ಮಾಡುವ ಪರಿಸರದ ಮನೆಗಳಿಗೆ ಭೇಟಿಕೊಡುವುದು, ಅವರ ಆದರ ಆತಿಥ್ಯಗಳನ್ನು ಸ್ವೀಕರಿಸುವುದು, ಮಾಹಿತಿ ಸಂಗ್ರಹಿಸುತ್ತಾ ಸುಖ-ಕಷ್ಟ ಮಾತಾಡುವುದು ಇವುಗಳೆಲ್ಲಾ ನಾವು ಗಣತಿಕಾರ್ಯದ ಹೊರೆಯನ್ನೂ ಆನಂದಿಸುವಂತೆ ಮಾಡಿವೆ. ಹೀಗೆ ಮನೆಮನೆಗೆ ಭೇಟಿ ಕೊಡುವಾಗ ನಮ್ಮನ್ನು ಹೆಚ್ಚು ಕಾಡುವುದು ನಾಯಿಗಳು....

   ನಾವು ಮನೆಯ ಆವರಣದೊಳಕ್ಕೆ ಕಾಲಿಟ್ಟೊಡನೆ ಘರ್ಜಿಸಿದಂತೆ ಬೊಗಳುವ, ಕೊಂದೇ ಬಿಡುತ್ತೇವೆ ಎಂಬ ಆವೇಶದಲ್ಲಿ ಮುನ್ನುಗ್ಗುವ, ಅಥವಾ ಗುರುಗುಟ್ಟುತ್ತಾ, ಮೂಸುತ್ತಾ ನಮ್ಮ ಹಿಂದೆಯೇ ಬರುವ ನಾಯಿಗಳು ಕಚ್ಚಿಯೇಬಿಟ್ಟವೇನೋ ಎಂಬ ಭೀತಿಯನ್ನು ನಮ್ಮೊಳಗೆ ಹುಟ್ಟಿಸುತ್ತವೆ. ಇಂಥ ಸಮಯದಲ್ಲಿ ನಮ್ಮ ಕೈಯಲ್ಲಿರುವ ಗಣತಿಯ ಚೀಲ ಅಥವಾ ರಟ್ಟೇ ನಮ್ಮ ಗುರಾಣಿಯಾಗಿ ನಾಯಿ ಯಾವ ದಿಕ್ಕಿನಲ್ಲಿರುತ್ತದೆಯೋ ಆ ದಿಕ್ಕಿಗೆ ಹಿಡಿದುಕೊಂಡು ನಾಯಿ ಕಚ್ಚಲಾರದು ಎಂದು ಧೈರ್ಯ ತಾಳುತ್ತೇವೆ. ಅಷ್ಟರಲ್ಲಿ ಮನೆಯವರು ಬಂದು ನಾಯಿಯನ್ನು ನಿಯಂತ್ರಿಸುತ್ತಾರೆ..

 ಹೀಗೇ ಗಣತಿಗೆ ಹೋದಾಗ ನನಗೊಂದು ವಿಭಿನ್ನ ಅನುಭವವಾಯಿತು. ಒಂದು ಮನೆಯ ಬೇಲಿ ದಾಟಿ ಒಳಗೆ ಪ್ರವೇಶಿಸಿದ ಕೂಡಲೇ ನಾಯಿಯೊಂದು ಸಂಭ್ರಮದಿಂದ ಕುಣಿದಾಡುತ್ತ ಬಂದು ನನ್ನನ್ನು ಸ್ವಾಗತಿಸಿತು. ಅಪರಿಚಿತ ವ್ಯಕ್ತಿಗಳು ಬಂದಾಗಲೂ ಬಾಲ ಅಲ್ಲಾಡಿಸುತ್ತಾ ಸ್ವಾಗತಿಸುವ ಸಾಧು ನಾಯಿಗಳನ್ನು ಅಪರೂಪಕ್ಕೆ ನೋಡಿದ್ದೇನಾದರೂ, ಈ ನಾಯಿಯ ವರ್ತನೆ ತೀರಾ ವಿಭಿನ್ನವಾಗಿತ್ತು. ನನ್ನ ಆಗಮನ ಆ ನಾಯಿಗೇನೋ ವಿಶೇಷ ಆನಂದವನ್ನು ತರಿಸಿದಂತಿತ್ತು. ನನ್ನನ್ನು ತಮ್ಮ ಮನೆಯಲ್ಲಿ ಕಂಡ ಒಂದನೇ ತರಗತಿಯ ವಿದ್ಯಾರ್ಥಿಯ ಮುಖದಲ್ಲಿ ಕೂಡ ಇಷ್ಟೊಂದು ಸಂಭ್ರಮವನ್ನು ನಾನು ಕಂಡಿರಲಿಲ್ಲ.. ಈ ನಾಯಿಯನ್ನು ಎಲ್ಲೋ ನೋಡಿದ್ದೇನೆ ಅನಿಸುತ್ತಿತ್ತು ಬೇರೆ.. ಆ ಮನೆಯಲ್ಲಿ ಕುಳಿತು ಮಾಹಿತಿ ಕೇಳಿ ತುಂಬಿಸುತ್ತಿರುವಾಗಲೂ ನನ್ನ ಸುತ್ತಲೂ ಸುತ್ತುತ್ತಿದ್ದ ಆ ನಾಯಿಯನ್ನು ಮತ್ತೊಮ್ಮೆ ನೋಡಿದಾಗ ಥಟ್ಟನೆ ನನಗೆ ಆ ನಾಯಿಯ ಗುರುತು ಸಿಕ್ಕಿತು............

   ಅದು ಅಕ್ಷರದಾಸೋಹದ ಅಳಿದುಳಿದದ್ದನ್ನು ತಿನ್ನಲು ಶಾಲೆಗೆ ಆಗಾಗ ಬರುತ್ತಿದ್ದ ನಾಯಿ.. ಒಮ್ಮೆ ಚಿಟಿಕೆ ಹೊಡೆದು ಮಾತನಾಡಿಸಿದೆ.. ಇನ್ನಷ್ಟು ಸಂಭ್ರಮಿಸಿದ ನಾಯಿಯ ಮುಖದಲ್ಲಿ ಶಾಲೆಗೆ ಸಂಬಂಧಿಸಿದವರೊಬ್ಬರು ತನ್ನ ಮನೆಗೆ ಬಂದರು ಎಂಬ ಕೃತಾರ್ಥತೆ ಎದ್ದು ಕಾಣಿಸುತ್ತಿತ್ತು.

   ಇಂತಹ ಅನುಭವ ನಿಮಗೂ ಆಗಿರಬಹುದು. ಇಂತಹ ಪ್ರಕರಣಗಳು ಮೇಲ್ನೋಟಕ್ಕೆ ತೀರಾ ಸಿಲ್ಲಿ ಅನ್ನಿಸಬಹುದು. ಆದರೆ ಗಂಭೀರವಾಗಿ ಯೋಚಿಸಿದರೆ ಶಿಕ್ಷಕ ವೃತ್ತಿ ನಮಗೆ ನೀಡುವ ಅನುಭೂತಿಯ ವಿಸ್ತಾರವೆಷ್ಟು ಎಂಬುದರ ಕುರಿತಾಗಿ ಚಿಂತಿಸುವಂತೆ ಮಾಡುತ್ತದೆ. ಶಾಲೆಯೆಂದರೆ ಬರಿಯ ಶಿಕ್ಷಕರು ಮತ್ತು ಮಕ್ಕಳು ಮಾತ್ರವಲ್ಲ. ಅದೊಂದು ವಿಭಿನ್ನ ಲೋಕ . ಅಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳು ನಮ್ಮೊಳಗೊಂದು ದಿವ್ಯ ಅನುಭೂತಿಯನ್ನು ನೀಡಿ ಹೋಗುತ್ತವೆ.

           - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment