Because I am black – ಶಿಕ್ಷಕನ ಡೈರಿಯಿಂದ 9

ಶಿಕ್ಷಕನ ಡೈರಿಯಿಂದ

Because I am black.

          ಸಾಮಾನ್ಯವಾಗಿ ನಾನು ಘಟನೆಯೊಂದನ್ನು ಬರಹವಾಗಿಸಲು ಬಹಳ ದಿನಗಳನ್ನು‌ತೆಗೆದುಕೊಳ್ಳುತ್ತೇನೆ. ಹೆಚ್ಚಿನ ಘಟನೆಗಳನ್ನು ಬರಹರೂಪಕ್ಕೆ ತಂದಿದ್ದು ಮೂರು ನಾಲ್ಕು ವರ್ಷಗಳ ನಂತರವೇ.. ಆದರೆ ಆ ಹುಡುಗಿಯ ಧ್ವನಿಯಲ್ಲಿದ್ದ ಆತ್ಮವಿಶ್ವಾಸ ಎಷ್ಟು ಹಿಡಿಸಿತ್ತೆಂದರೆ ಆ ಸಂಜೆಯೇ ಬರೆದುಬಿಟ್ಟಿದ್ದೆ.

        *         *          *

          ಆ ದಿನ ಆರನೇ ತರಗತಿಯಲ್ಲಿದ್ದೆ. " ಸರ್, ಇವ ನನ್ ಅಮ್ಮ ಕಪ್ಪಾ ಬಿಳಿಯಾ ಕೇಂತಿದ್ದ" ಎಂದು ಕೂತಲ್ಲಿಂದಲೇ ಕೂಗಿ ದೂರಿತ್ತ ಒಬ್ಬ ಹುಡುಗ. 
          "You should not complain about silly things" ಎಂದೆ. "ಅಂವ ಹಾಂಗ್ಹೇಳ್ರ್ ನಂಗೆ ಬೇಜಾರಾತಿಲ್ಯಾ ಸರ್.." ಗದ್ಗದಿತನಾಗಿ ಕೋಪದಲ್ಲೇ ಹೇಳಿದ ಹುಡುಗ. ವಿಷಯ ಸ್ವಲ್ಪ ಸೀರಿಯಸ್ಸಾಗೇ ತಗೊಂಡಿದಾನಲ್ಲಾ ಅಂದುಕೊಂಡು ಕಪ್ಪಾ ಬಿಳಿಯಾ ಕೇಳಿದ ಹುಡುಗನಿಗೆ ನೀನು ಹಾಗೆ ಹೇಳಬಾರದಿತ್ತು ಎಂಬರ್ಥದ ಮಾತನ್ನಾಡಿ ವಿಷಯ ಅಲ್ಲಿಗೇ ಮುಗಿಸಿದೆ. ಈ ದೂರುದಾರ ಅಮ್ಮನ ಬಣ್ಣದ ಬಗ್ಗೆ‌ ತುಂಬಾ ತಲೆಕೆಡಿಸಿಕೊಂಡಿದ್ದಾನಲ್ಲಾ ಎಂದುಕೊಂಡೆ.
           ಅದೇ ಮಧ್ಯಾಹ್ನ ಅಮ್ಮ ಶಾಲೆಗೆ ಬಂದಿದ್ದರು. ಅವರೇನು ಕಪ್ಪಗಿರಲಿಲ್ಲ.. ಈ ಹುಡುಗ ತಾನು ಕಪ್ಪಗಿದ್ದೇನೆಂದು ತಲೆ ಕೆಡಿಸಿಕೊಂಡಿದ್ದಾನೋ, ಅಮ್ಮ ಬೆಳ್ಳಗಿದ್ದಾರೆಂದು ತಲೆಕೊಂಡಿಸಿಕೊಂಡಿದ್ದಾನೋ ತಿಳಿಯಲಿಲ್ಲ. ಅದರ ಬಗ್ಗೆ ಜಾಸ್ತಿ ಯೋಚಿಸುವ ಅಗತ್ಯವೂ ಇಲ್ಲ ಬಿಡಿ.

           ಮರುದಿನ 5ನೇ ತರಗತಿಯಲ್ಲಿ ಮಕ್ಕಳ ನೆಚ್ಚಿನ ಹಕ್ಕಿಯ ಬಗ್ಗೆ ಕೇಳುತ್ತಾ, ಕಾಗೆ ಯಾರಿಗಿಷ್ಟ ಕೇಳಿದೆ. ನಾಲ್ಕೈದು ಜನ ಕೈಯನ್ನೆತ್ತಿದರು. ನನಗೆ ಕಾಗೆ ಬುದ್ಧಿವಂತ ಪಕ್ಷಿ ಮತ್ತು ನೈರ್ಮಲ್ಯಕ್ಕೆ ಅದರ ಕೊಡುಗೆ ಮಹತ್ವದ್ದು ಎಂಬ ವಿಚಾರ ಪ್ರಸ್ತಾಪಿಸಬೇಕಿತ್ತು. ಆದರೆ ಕಾಗೆ ಯಾಕಿಷ್ಟ ಕೇಳಿದಾಗ  ಬಂದ ಉತ್ತರ  "ಅದು ಶನಿದೇವರ ವಾಹನ" ಎಂದು. ಸರಿ ನಾನು ಹೇಳಬೇಕಿದ್ದ ವಿಚಾರವನ್ನು ಪ್ರಸ್ತಾಪಿಸೋಣ ಎಂದುಕೊಳ್ಳುವಷ್ಟರಲ್ಲಿ "And  black is my favourite colour" ಎಂದಳು ಕಾಗೆ ಇಷ್ಟ ಎಂದಿದ್ದ ಒಬ್ಬಳು ಹುಡುಗಿ. ಅವಳ ಹೇಳಿಕೆಯನ್ನು ಪುನರುಚ್ಛರಿಸಿ ಅವಳಿಗೊಂದು ವೆರಿಗುಡ್ ಹೇಳಿ ಮುಂದುವರೆಯಲು ಹೊರಟೆ.. ಅಷ್ಟರಲ್ಲಿ ಮತ್ತೆ ಮಾತನಾಡಿದಳು ಹುಡುಗಿ.. " Because I am black.." ಆ ಧ್ವನಿಯಲ್ಲಿ‌ ಆತ್ಮವಿಶ್ವಾಸ ತುಂಬಿತ್ತು. ಆ ಆತ್ಮವಿಶ್ವಾಸದ ಎದುರು‌, ಜಾಹೀರಾತಿನಲ್ಲಿ ಬರುವ ಹುಡುಗಿ ಸೌಂದರ್ಯವರ್ಧಕ ಬಳಸಿ ಕೊನೆಯಲ್ಲಿ ತೋರುವ ಆತ್ಮವಿಶ್ವಾಸ ತೀರಾ ಪೇಲವ ಎನಿಸಿತು. ಈ ಆತ್ಮವಿಶ್ವಾಸ ಈ ಹುಡುಗಿಯನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದುಕೊಂಡೆ.

                 ಕಪ್ಪಗಿರುವುದರ ಬಗ್ಗೆ ಕೀಳರಿಮೆ, ಬೆಳ್ಳಗಿರುವುದರ ಬಗ್ಗೆ ಮೇಲರಿಮೆ ತುಂಬಿರುವ, ಬಹಿರಂಗವಾಗಿಯಲ್ಲದಿದ್ದರೂ ಅಂತರ್ಗಾಮಿಯಾಗಿ ವರ್ಣಬೇಧ ಮನಸ್ಥಿತಿ ತುಂಬಿರುವ ಈ ಸಮಾಜಕ್ಕೆ ನನ್ನ ಪುಟ್ಟ ವಿದ್ಯಾರ್ಥಿನಿಯಲ್ಲಿರುವ ತುಂಬು ಆತ್ಮವಿಶ್ವಾಸ ಮದ್ದಾಗಬಲ್ಲುದು ಎಂದು ನಾನು ದೃಢವಾಗಿ ನಂಬುತ್ತೇನೆ.

- ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment