ಡಿಂಪಲ್ ಕಣ್ಣಲ್ಲಿ ಕಂಡ ಮಿಂಚು – ಶಿಕ್ಷಕನ ಡೈರಿಯಿಂದ 3

ಶಿಕ್ಷಕನ_ಡೈರಿಯಿಂದ

ಡಿಂಪಲ್ ಕಣ್ಣಲ್ಲಿ ಕಂಡ ಮಿಂಚು

    ಶಿಕ್ಷಕನಾದವನಿಗೆ ವಿದ್ಯಾರ್ಥಿಯ ಪ್ರತಿಭೆಯನ್ನು ಪೋಷಿಸುವ ಮತ್ತು ಅದನ್ನು ಬೆಳಕಿಗೆ ತರುವ ಜವಾಬ್ದಾರಿಯಿರುತ್ತದೆ. ಆದರೆ ಕೆಲವೊಮ್ಮೆ ಅದಕ್ಕೆ ಸಮುದಾಯದ ಕೆಲವು ನಂಬಿಕೆ, ಆಚರಣೆ ಗಳು ಅಡ್ಡಿಯಾಗುತ್ತವೆ. ಮಗುವಿನ ಭಾಗವಹಿಸುವಿಕೆಯ ಹಕ್ಕನ್ನು ನಾಜೂಕಾಗಿ ಕಸಿದುಕೊಳ್ಳುವ ಇಂತ ಸಮುದಾಯದ ವಿರೋಧ ಕಟ್ಟಿಕೊಳ್ಳದೇ ಮಗುವಿನ ಪ್ರತಿಭೆಗೆ ನೀರೆರೆಯುವುದರೊಂದಿಗೆ ನಿಧಾನವಾಗಿ ಸಾಮಾಜಿಕ ಪರಿವರ್ತನೆ ತರುವುದು ಶಿಕ್ಷಕನ ಪ್ರಮುಖ ಕರ್ತವ್ಯಗಳಲ್ಲೊಂದು..

   ಆ ಹುಡುಗಿಯ ಹೆಸರಿಲ್ಲಿ ಅಪ್ರಸ್ತುತ. ನಗುವಾಗ ಅವಳ ಗಲ್ಲದ ಮೇಲೆ ಕಾಣಿಸಿಕೊಳ್ಳುವ ಗುಳಿಯ ಆಧಾರದ ಮೇಲೆ ನಾನಿಲ್ಲಿ "ಡಿಂಪಲ್" ಎಂದೇ ಕರೆಯುತ್ತೇನೆ..

   ಡಿಂಪಲ್ ನಮ್ಮ ಶಾಲೆಗೆ ಸೇರಿದ್ದು ನಾಲ್ಕನೇ ತರಗತಿಗೆ. ಕಲಿಕೆಯಲ್ಲಿ ತುಂಬಾ ಎನ್ನಲಾಗದಿದ್ದರೂ ಒಂದು ಮಟ್ಟಕ್ಕೆ ಮುಂದಿದ್ದವಳೆಂದೇ ಹೇಳಬಹುದಾಗಿದ್ದ ಹುಡುಗಿ. ಎಲ್ಲಕ್ಕಿಂತ ಹೆಚ್ಚಾಗಿ ಮುಗ್ಧನಗು, ಸ್ನೇಹಪರ ಮಾತುಗಳಿಂದ ಎಲ್ಲರಿಗೂ ಆತ್ಮೀಯಳಾಗಿದ್ದವಳು.

    ಶಾಲೆಯಲ್ಲಿ ವಾರಕ್ಕೊಮ್ಮೆ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ವೇದಿಕೆಯನ್ನು ಒದಗಿಸಿದ್ದವು.. ಹಾಡು, ನೃತ್ಯ, ಕತೆ, ನಾಟಕ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಮಕ್ಕಳ ಸ್ವಯಂ ಅಭಿವ್ಯಕ್ತಿಗೆ ಉತ್ತಮ ಅವಕಾಶ ಕೊಡುತ್ತಿದ್ದ ಈ ಕಾರ್ಯಕ್ರಮಗಳು ನಮಗೆ ಶಾಲೆಯೊಳಗಿನ ಪ್ರತಿಭೆಗಳನ್ನು ಗುರುತಿಸಲು ಅವಕಾಶ ನೀಡುತ್ತಿದ್ದವು.. 

    ನಾಲ್ಕನೆಯ ತರಗತಿಗೆ ನಮ್ಮ ಶಾಲೆಗೆ ಸೇರಿದ್ದ ಡಿಂಪಲ್ ಆರನೆಯ ತರಗತಿ ಮುಗಿಸಿದರೂ ಒಮ್ಮೆಯೂ ವೇದಿಕೆಯೇರಿರಲಿಲ್ಲ. ಅವಳಂತೆ ವೇದಿಕೆಯೇರದವರು ಹಲವರಿದ್ದರು.. ಹಾಗಾಗಿ ಅದೇನೂ ದೊಡ್ಡ ವಿಷಯವೇನಾಗಿರಲಿಲ್ಲ.. ಆದರೆ ಅಲ್ಲಿ ಇಲ್ಲಿ ತಿರುಗಾಡುವಾಗ, ತರಗತಿಯಲ್ಲಿ ಕುಳಿತಿರುವಾಗ ಅವಳಷ್ಟಕ್ಕೆ ಮೆಲ್ಲನೆ ಹಾಡಿಕೊಳ್ಳುವುದನ್ನೂ ಕಂಡಿದ್ದೆ.. ಅವಳ ಧ್ವನಿ ನನಗೆ ಕೇಳಿಸುತ್ತಿರಲಿಲ್ಲವಾದರೂ ಹಾಡು ಗುನುಗುವಾಗ ಅವಳ ಕಣ್ಣುಗಳಲ್ಲಿ ಕಾಣಿಸುತ್ತಿದ್ದ ಹೊಳಪು ಹಾಡುವುದನ್ನವಳು ಎಷ್ಟು ಆನಂದಿಸುತ್ತಿದ್ದಳೆಂದು ಹೇಳುತ್ತಿತ್ತು. ನಮ್ಮೆದುರು ಹಾಡಲು ಹೇಳಿದರೆ ಮಾತ್ರ ಅವಳದ್ದು ಮೌನರಾಗ , ಜೊತೆಗೊಂದು ನಿರಾಕರಣೆಯ ನಗು.. 

      ಕೊನೆಗೂ ಈ ಗುಳಿಕೆನ್ನೆಯ ಹುಡುಗಿಯನ್ನು ಹಾಡಿಸುವ ಅವಕಾಶ ಬಂದೇಬಿಟ್ಟಿತು. ಡಿಂಪಲ್ ಏಳನೆಯ ತರಗತಿಯಲ್ಲಿದ್ದಾಗ ಪ್ರತಿಭಾ ಕಾರಂಜಿಯ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಕ್ಕೆ ಇವಳನ್ನೂ ಸೇರಿಸಿದೆ. "ರಾಷ್ಟ್ರೋತ್ಥಾನದ ಗೀತೆ ಮೊಳಗುತಿದೆ......" ಎಂದು ಹಾಡುತ್ತಾ ಭರ್ಜರಿ ತಯಾರಿಯೂ ನಡೆಯಿತು. ಸಾಲದ್ದಕ್ಕೆ ಆ ವರ್ಷದ ಪ್ರತಿಭಾ ಕಾರಂಜಿ ಸ್ಪರ್ಧೆ ನಮ್ಮ ಶಾಲೆಯಲ್ಲೇ ನಡೆಯಲಿತ್ತು.. ಎಗ್ಝೈಟ್ಮೆಂಟ್ ತುಸು ಹೆಚ್ಚೇ ಇತ್ತು.

 ‌ ‌    ಪ್ರತಿಭಾ ಕಾರಂಜಿಯ ದಿನ ಬಂದೇಬಿಟ್ಟಿತು.. ಸ್ಪರ್ಧೆಗಳ ನಿರ್ವಹಣೆಯ ಬಹುಪಾಲು ಜವಾಬ್ದಾರಿ ಹೊತ್ತಿದ್ದ ನಾನು ಆತುರಾತುರವಾಗಿ ಸ್ಪರ್ಧೆಗಳ ಆರಂಭಕ್ಕೆ ವ್ಯವಸ್ಥೆಗೊಳಿಸುತ್ತಲಿದ್ದೆ.. ಆ ಗಡಿಬಿಡಿಯ ನಡುವಲ್ಲೇ ನಮ್ಮ ದೇಶಭಕ್ತಿಗೀತೆ ತಂಡದ ಹುಡುಗಿಯರು ಅಹವಾಲೊಂದನ್ನು ಹೊತ್ತು ತಂದಿದ್ದರು. ಏನೆಂದು ಕೇಳಿದರೆ "ಸರ್, ಡಿಂಪಲ್ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವಂತೆ" ಎಂಬ ಉತ್ತರ. ಹುಡುಗಿಯನ್ನು ಕರೆದು ಕೇಳಿದರೆ ಮುಖ ಸಣ್ಣದು ಮಾಡಿಕೊಂಡು ನನ್ನಿಂದಾಗುವುದಿಲ್ಲ ಎಂದು ತಲೆಯಾಡಿಸಿದಳು. ಕಣ್ಣಲ್ಲಿ ತುಸು ನೀರು. ಮೊದಲೇ ಕಾರ್ಯಕ್ರಮ ಸಂಯೋಜನೆಯ ಒತ್ತಡದಲ್ಲಿ ಮೈ ಮೇಲೆ ಭೂತ ಬಂದವನಂತೆ ವರ್ತಿಸುತ್ತಿದ್ದ ನನಗೆ ಇವಳ ವರ್ತನೆ ಇನ್ನಷ್ಟು ಕೋಪ ತಂದಿತು.. ಹೆಚ್ಚು ಮಾತಾಡದೇ ಕಣ್ಣಲ್ಲೇ ನನ್ನ ಕೋಪ ಅಸಮಾಧಾನ ವ್ಯಕ್ತಪಡಿಸಿ ಪರ್ಯಾಯ ವ್ಯವಸ್ಥೆ ಮಾಡಿ ನನ್ನ ಕೆಲಸದಲ್ಲಿ ನಿರತನಾದೆ.. ಮತ್ತೆರಡು ದಿನಗಳ ನಂತರ ನಾನು ಮತ್ತು ಅವಳ ಸ್ನೇಹಿತೆಯರು ಎಷ್ಟೇ ಪ್ರಶ್ನಿಸಿದರೂ ಅವಳದ್ದು ಮೌನವೇ ಉತ್ತರ. ಅವಳೇಕೆ ಹೀಗೆ ಮಾಡಿದಳೆಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು.

     ಐದಾರು ದಿನಗಳ ನಂತರ ಅವಳ ತಮ್ಮನಿಂದ ಸತ್ಯ ಬಯಲಾಯಿತು.. ಪ್ರತಿಭಾಕಾರಂಜಿಯ ದಿನ ಬೆಳಿಗ್ಗೆ ಅವಳ ಸಮುದಾಯದ ಮುಖಂಡರೊಬ್ಬರು ಅವಳು ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಪ್ಪು ಎಂದು ಜೋರುಮಾಡಿದ್ದರೆಂದೂ, ಆ ಸತ್ಯವನ್ನು ನಮ್ಮೆದುರು ಹೇಳಲೂ ಅವಳು ಅಂಜುತ್ತಿದ್ದಾಳೆಂದೂ ನಮಗೆ ತಿಳಿಯಿತು.. ಹೌದು... ಕಲೆ ಸಂಗೀತದಲ್ಲಿ ಅವಳ ಸಮುದಾಯದ ಮಕ್ಕಳ ಪಾಲ್ಗೊಳ್ಳುವಿಕೆ ಬಹಳ‌ ಕಡಿಮೆಯೇ ಆಗಿತ್ತು.

    ಘಟನೆಯಿಂದ ಮೊದಲೇ ಬೇಸರಗೊಂಡಿದ್ದ‌ ನಾನು ಸತ್ಯ ವಿಚಾರ ತಿಳಿದಾಗ ದೂರ್ವಾಸ ಮುನಿಯೇ ಆಗಿದ್ದೆ. ಆದರೆ ಕೋಪ ವ್ಯಕ್ತಪಡಿಸುವುದಾದರೂ ಯಾರ ಮೇಲೆ..? ಯೋಚನೆ ಮಾಡಿದೆ.. ಹೇಗಾದರೂ ಮಾಡಿ ಒಮ್ಮೆಯಾದರೂ ಈ ಹುಡುಗಿಯನ್ನು ದೊಡ್ಡ ವೇದಿಕೆಯನ್ನು ಏರಿಸಿಯೇ ತೀರುತ್ತೇನೆಂದು ನಿರ್ಧಾರ ಮಾಡಿದೆ..

    ಕೆಲವು ದಿನಗಳ ನಂತರ ಪೋಷಕರ ಸಭೆಗೆ ಅವಳ ತಂದೆ ಬಂದಿದ್ದರು. ಅವರ ಮಕ್ಕಳ ಬಗೆಗೆ ಒಂದಿಷ್ಟು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ನಿಧಾನವಾಗಿ ಆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದೆ. ಪಾಪ, ಅವರಿಗೆ ಇದ್ಯಾವ ವಿಚಾರವೂ ಗೊತ್ತಿರಲಿಲ್ಲ, ಆ ಸಂದರ್ಭದಲ್ಲಿ ಅವರು ಊರಲ್ಲಿರಲೂ ಇಲ್ಲ. ಸ್ವತಃ ಒಬ್ಬ ಸಾಂಪ್ರದಾಯಿಕ ವ್ಯಕ್ತಿಯಾಗಿದ್ದ ಅವರು "ಸರ್ ಹಾಡುವುದಕ್ಕೆ, ದೇಶಭಕ್ತಿಗೀತೆಗೆ ಏನೂ ಆಬ್ಜೆಕ್ಷನ್ ಇಲ್ಲ ಸರ್ ನಮ್ಮಲ್ಲಿ,, ಡ್ಯಾನ್ಸ್ ಮಾಡುವುದಕ್ಕೆ ಮತ್ತು ಮುಖಕ್ಕೆ ಬಣ್ಣ ಹಚ್ಚುವುದಕ್ಕೆ ಸ್ವಲ್ಪ ತಕರಾರಿದೆ ಅಷ್ಟೆ" ಎಂದರು. "ಸರಿ, ನಿಮ್ಮ ಮಕ್ಕಳಿಗೆ ನಾನು ಬಣ್ಣ ಹಚ್ಚುವುದಿಲ್ಲ, ವೇಷಭೂಷಣ ಹಾಕುವುದಿಲ್ಲ., ವಾರ್ಷಿಕೋತ್ಸವದ ದಿನ ಅವರು ಪ್ರತಿನಿತ್ಯ ಶಾಲೆಗೆ ಧರಿಸುವ ಉಡುಗೆಯಲ್ಲಿ ವೇದಿಕೆ ಹತ್ತಿಸುವುದಕ್ಕೆ ನಿಮ್ಮ ವಿರೋಧವಿದೆಯೇ?" ಕೇಳಿದೆ. "ಇಲ್ಲ ಸರ್, ನನ್ನ ಪ್ರೋತ್ಸಾಹ ಯಾವತ್ತೂ ಇರುತ್ತದೆ" ಎಂದರು.

     ವಾರ್ಷಿಕೋತ್ಸವದ ದಿನಾಂಕ ನಿಗದಿಯಾಯಿತು. ಡಿಂಪಲ್ ಮತ್ತವಳ ತಮ್ಮನಿಗೋಸ್ಕರವೇ ಉಪ್ಪಿನಂಗಡಿಯ ಶಿಕ್ಷಕ ಸದಾಶಿವ ಭಟ್ಟರಿಂದ "ಬದುಕು ಕೊನೆಯಾಗಬಾರದು" ಎಂಬ ವೈಜ್ಞಾನಿಕ ನಾಟಕವನ್ನು ಪಡೆದುಕೊಂಡು ರಿಹರ್ಸಲ್ ಆರಂಭಿಸಿದೆ. ಆಗಲೇ ಗೊತ್ತಾಗಿದ್ದು ಈ ಹುಡುಗಿ ಚೆನ್ನಾಗಿ ಅಭಿನಯವನ್ನೂ ಮಾಡುತ್ತಾಳೆ ಎಂಬುದು. ನಾಟಕದ ಹಿನ್ನೆಲೆ ಗಾಯನಕ್ಕೂ ಧ್ವನಿ ಸೇರಿಸಲು ಹೊರಟಳು ಹುಡುಗಿ. ನಾಟಕಕ್ಕೆಸೂಕ್ತವಾಗುವಂತೆ ಭಾವ ತುಂಬಿ ಹಾಡುವಲ್ಲಿ ಅವಳು ಉಳಿದವರಿಗಿಂತ ಮುಂದಿದ್ದಳು.

     ಆ ವರ್ಷದ ವಾರ್ಷಿಕೋತ್ಸವ ಬಹುಶಃ ಡಿಂಪಲ್ ಳ ಪಾಲಿಗೆ ಮರೆಯಲಾಗದ್ದು.. ಕಾರ್ಯಕ್ರಮದ ದಿನದಂದು ಅವಳ ಕಣ್ಣಲ್ಲಿ ಕಾಣಿಸುತ್ತಿದ್ದ ಸಂಭ್ರಮದ ಮಿಂಚನ್ನು ಬೇರಾವ ದಿನವೂ ನಾನು ನೋಡಿರಲಿಲ್ಲ.., ಬೇರಾವ ಮಗುವಿನ ಮುಖದಲ್ಲಿಯೂ ಆ ಬಗೆಯ ಸಂಭ್ರಮವನ್ನು ನಾನು ಕಂಡದ್ದಿಲ್ಲ.. ನನ್ನೊಳಗೆ ಅತೀವವಾದ ಸಾರ್ಥಕಭಾವವನ್ನ ಮೂಡಿಸಿದ ಮುಖಭಾವ ಅದಾಗಿತ್ತು..

      ಏಳನೆಯ ತರಗತಿಯಲ್ಲಿದ್ದಾಗ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸುವುದಕ್ಕೇ ಅವಕಾಶ ವಂಚಿತಳಾದ ಹುಡುಗಿ ಹೈಸ್ಕೂಲಿಗೆ ಹೋದನಂತರ ಪ್ರತಿವರ್ಷ ಪ್ರತಿಭಾಕಾರಂಜಿಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದಳು. ಸ್ನೇಹಿತ ಮನೋಹರರು ಕಲಿಸುತ್ತಿದ್ದ ನಾಟಕಗಳಿಗೆ ಪ್ರತಿವರ್ಷ ಪ್ರಧಾನ ಹಿನ್ನೆಲೆ ಗಾಯಕಿಯಾಗಿ ನಾಟಕಕ್ಕೆ ಜೀವತುಂಬಿದಳು, ಪ್ರತಿವರ್ಷವೂ ಆ ನಾಟಕಗಳು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದಳು.. 

      ಆ ಹುಡುಗಿ ಏಳನೆಯ ತರಗತಿ ಬಿಟ್ಟು ಹಲವು ವರ್ಷಗಳಾಗಿವೆ. ನಾನೂ ಆ ಶಾಲೆಯನ್ನು ಬಿಟ್ಟು ಬಹಳ ದೂರ ಬಂದಿದ್ದೇನೆ.. ಆದರೂ ನನ್ನೊಳಗೆ ಅತೀವ ಸಂತೃಪ್ತಿಯನ್ನು ಮೂಡಿಸಿದ ವಾರ್ಷಿಕೋತ್ಸವದ ದಿನದ ಅವಳ ಕಣ್ಣ ಮಿಂಚು ಇಂದಿಗೂ ನೆನಪಾಗುತ್ತಿರುತ್ತದೆ.. ನನ್ನ ವೃತ್ತಿ ಜೀವನದುದ್ದಕ್ಕೂ ಮನದಾಳದಲ್ಲಿ ಹುದುಗಿದ್ದು ಸ್ಫೂರ್ತಿ ನೀಡುತ್ತಿರುತ್ತದೆ.

         -- ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏

Sharing Is Caring:

Leave a Comment