ಹೋ ಎಂದು ತೋಳೆತ್ತಿ‌ ಪರಿವಾರ ಅತ್ತಿತು! – ಶಿಕ್ಷಕನ ಡೈರಿಯಿಂದ 29

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ಹೋ ಎಂದು ತೋಳೆತ್ತಿ‌ ಪರಿವಾರ ಅತ್ತಿತು!ಹೋ ಎಂದು ತೋಳೆತ್ತಿ ಪರಿವಾರ ಅತ್ತಿತು......
ಮಿಡುಕುವ ಮಿಡತೆಯಂತತ್ತ ಪ್ಲೇಟೋ...
ಅಳಲಿನಲಿ ಅದ್ದಿ ಹೋದನು ಅಪೊಲೊಡೋರಸ...
ಮರುಕಗಳ ಮಡುವಾಗಿ ನಿಂತ ಕ್ರಿಟೋ....

    ಪಿಯುಸಿಯಲ್ಲಿದ್ದಾಗ ಕಲಿತಿದ್ದ ಸಾಕ್ರೆಟಿಸನ ಕುರಿತಾದ ಪದ್ಯದ ಉಳಿದ ಭಾಗದ ಒಂದು ಪದವೂ ನೆನಪಿಲ್ಲದ ನನಗೆ ಇದೊಂದು ಚರಣ ಮಾತ್ರ ನೆನಪಿನಲ್ಲಿರುವುದು, ಆಗಾಗ ನಾಲಿಗೆಯಲ್ಲಿ ನಲಿಯುವುದು ಯಾಕೆಂದು ನಾನು ಬಹಳ ಕಾಲದವರೆಗೆ ಯೋಚಿಸಿರಲಿಲ್ಲ. ಸಾಕ್ರೆಟಿಸನ ಅಗಲುವಿಕೆಯ ಸಂದರ್ಭದಲ್ಲಿ ಅವನ ಶಿಷ್ಯವರ್ಗದ ದುಃಖವನ್ನು ಬಣ್ಣಿಸುವ ಆ ಚರಣ ಸಾಕ್ರೆಟಿಸನ ಬದುಕಿನ ಸಾರ್ಥಕತೆಯ ಸಾರವನ್ನು ತುಂಬಿಕೊಂಡಿತ್ತು. ಬಹುಶಃ ಅಂಥದೊಂದು ಸಾರ್ಥಕ ಸನ್ನಿವೇಶ ನನ್ನ ಬದುಕಲ್ಲೂ ಬರಬೇಕು ಎಂಬ ಅವ್ಯಕ್ತ ಆಶೆಯೊಂದು ನನ್ನ ಅಂತರಂಗದಲ್ಲಿ ಅಡಗಿದ್ದಿರಬೇಕು, ಆ ಕಾರಣದಿಂದಲೇ ನಾನು ಆ ಚರಣವನ್ನು ಗುನುಗಿಕೊಳ್ಳುತ್ತಿದ್ದೆ ಎಂಬ ಹೊಳಹು ನನ್ನ ಮನಸ್ಸಿನಲ್ಲಿ ಹುಟ್ಟಿಕೊಂಡಿದ್ದು ಅಂತಹದೊಂದು ದಿನ ನನ್ನ ಬದುಕಿನಲ್ಲಿ ಬಂದಾಗಲೇ. 
  
     ಆ ಶಾಲೆ ನನ್ನ ಜೀವವಾಗಿತ್ತು, ನನ್ನ ಜೀವನವಾಗಿತ್ತು. ಹನ್ನೊಂದೂವರೆ ವರ್ಷಗಳ ಕಾಲ ನನ್ನನ್ನು ಪ್ರೀತಿಸಿದ ಸಾಕಿ ಸಲಹಿದ, ಬೆಳೆಸಿದ ಆ ಶಾಲೆಗೆ ವಿದಾಯ ಹೇಳುವ ದಿನ ಬಂದೇ ಬಿಟ್ಟಿತ್ತು. ಶಾಲೆಯಲ್ಲಿ ನನ್ನ ಕೊನೆಯ ದಿನವಾಗಿದ್ದ ಆ ದಿನ ಸಂಜೆ ಶಾಲೆ ಬಿಡುವ ಮೊದಲು ಮಕ್ಕಳನ್ನೆಲ್ಲಾ hallನಲ್ಲಿ ಸೇರಿಸಿದ ನನ್ನ ಸಹೋದ್ಯೋಗಿಗಳು ಒಂದು ಭಾವುಕ ಸನ್ನಿವೇಶವನ್ನು ನಿರ್ಮಿಸಿಬಿಟ್ಟಿದ್ದರು.

     ಶಾಲೆ ತೊರೆಯುವುದು ನಿಶ್ಚಿತವಾದ ದಿನದಿಂದಲೇ ಕುಂತಲ್ಲಿ ನಿಂತಲ್ಲಿ ಕಣ್ಣೊರೆಸಿಕೊಳ್ಳಲು ಪ್ರಾರಂಭಿಸಿದ್ದ ನನಗೆ ಈ ದಿನದ ಭಾವತೀವ್ರತೆಯನ್ನು ಎದುರಿಸುವುದು ಕಷ್ಟದ ವಿಚಾರವಾಗಿತ್ತು. ಮಕ್ಕಳೆಲ್ಲ ಗಂಭೀರ ಮೌನದೊಂದಿಗೆ ಕುಳಿತಿದ್ದರು. ಈಗ ಮಕ್ಕಳನ್ನುದ್ದೇಶಿಸಿ ನಾನು ಕೊನೆಯ ಮಾತುಗಳನ್ನಾಡಬೇಕಿತ್ತು. ಒಂದೆರಡು ಮಾತುಗಳನ್ನಾಡುವಷ್ಟರಲ್ಲಿ ನನ್ನ ಗಂಟಲು ಕಟ್ಟಿತ್ತು. ಬಿಕ್ಕಿದೆ, ಮಾತನಾಡಲಾಗದೆ ನನ್ನ ಕುರ್ಚಿಯನ್ನು ಸೇರಿಕೊಂಡೆ. ಅಷ್ಟರಲ್ಲಿ ಮಕ್ಕಳು ಒಬ್ಬೊಬ್ಬರಾಗಿ ಕಣ್ಣೀರು ಸುರಿಸಲು ಪ್ರಾರಂಭಿಸಿದ್ದರು. ಈ ಅಳುವೆಂಬುದು ಸಾಂಕ್ರಾಮಿಕ ನೋಡಿ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನನ್ನೆದುರಿನ ಮಕ್ಕಳೆಲ್ಲಾ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದರು. ನಿಮಗನ್ನಿಸಬಹುದು, ಈ ಕ್ಷಣದಲ್ಲಿ ನನ್ನ ದುಃಖ ತೀವ್ರಗೊಂಡಿರಬಹುದು ಎಂದು. ಹಾಗಾಗಿರಲಿಲ್ಲ, ಮಕ್ಕಳ ಜೋರಾದ ಅಳು ನನಗೊಂದು ಬಗೆಯ ಸಾಂತ್ವನ ಹೇಳಿದ ಅನುಭವ ಕೊಟ್ಟಿತ್ತು. ನಾನು ಎದ್ದುನಿಂತು ಮತ್ತೆ ಮಾತನಾಡತೊಡಗಿದೆ, ಈಗ ಧ್ವನಿ ಭಾರವಾಗಿತ್ತೇ ಹೊರತು ಗಂಟಲು ಕಟ್ಟಿ ಬಂದಿರಲಿಲ್ಲ.
   
      ಮಕ್ಕಳ ಅಳುವೇಕೆ ಆ ಕ್ಷಣಕ್ಕೆ ನನ್ನ ದುಃಖವನ್ನು ತೀವ್ರಗೊಳಿಸಲಿಲ್ಲ? ನನ್ನ ಮನಸ್ಸೇಕೆ ಆಗ ಶಾಂತವಾಯಿತು? ಆಗಲೇ ನನಗನ್ನಿಸಿದ್ದು, ಆರಂಭದಲ್ಲಿ ನಾನು ಹೇಳಿದ ಸಾರ್ಥಕತೆಯ ಸನ್ನಿವೇಶವನ್ನು ಅನುಭವಿಸುವ ಬಯಕೆ ನನ್ನ ಅಂತರಂಗದಲ್ಲಿ ಅಡಗಿತ್ತು ಎನ್ನುವುದು.
 
      ಆ ಹೊತ್ತಿನಲ್ಲಿ ಶಾಂತವಾಗಿದ್ದ ನನ್ನ ಮನಸ್ಸಿನೊಳಗೆ ಹಿಪೊಕ್ರೆಟಿಕ್ ಯೋಚನೆಯೊಂದು ಹಾದುಹೋಗಿತ್ತು, ಈ ಸನ್ನಿವೇಶವನ್ನು ಯಾರಾದರೂ ವೀಡಿಯೋ ಮಾಡಿದರೆ ಚೆನ್ನಾಗಿತ್ತು ಎಂದು. ಮರುಕ್ಷಣವೇ ನಾನು ಬೆಚ್ಚಿಬಿದ್ದಿದ್ದೆ. ನನ್ನ ಯೋಚನೆಯ ಬಗ್ಗೆ ನನಗೇ ಅಸಹ್ಯವೆನಿಸಿತ್ತು. ಅದೆಷ್ಟು ಬೂಟಾಟಿಕೆ ತುಂಬಿದೆ ನನ್ನ ಮನದಲ್ಲಿ ಅನಿಸಿತ್ತು. ಈಗಲೂ ನಾಚಿಕೆಯೊಂದಿಗೇ ಅದನ್ನು ಬರೆಯುತ್ತಿರುವೆ. 

    ‌‌‌  ನನ್ನೆದುರಿಗೆ ಕುಳಿತಿರುವ ಪ್ರತಿಯೊಂದು ಮಗುವೂ ಕಣ್ಣೀರು ಸುರಿಸುತ್ತಿರುವುದು ಕಾಣಿಸುತ್ತಿತ್ತು. ನನ್ನ ಮನಸ್ಸು ಒಂದಿಷ್ಟು ಭಾರವಾಗುತ್ತಾ, ಇನ್ನೊಂದಿಷ್ಟು ಹಗುರವಾಗುತ್ತಾ ಸಾಗಿತ್ತು. ಕೆಲವು ಮಕ್ಕಳಿಗೆ ನಾನು ಪಾಠವನ್ನೂ ಮಾಡಿರಲಿಲ್ಲ, ಅವರೊಂದಿಗೆ ಆತ್ಮೀಯ ಮಾತುಕತೆಯೂ ಇರಲಿಲ್ಲ‌. ಅಂಥವರ ದುಃಖ ನನಗೆ ಯಕ್ಷಪ್ರಶ್ನೆಯಾಗಿ ಕಾಡಿತ್ತು. ಕೆಲವು ಮಕ್ಕಳ ಕಣ್ಣೀರು ಅವರೊಂದಿಗೆ ನಾನು ಒರಟಾಗಿ ನಡೆದುಕೊಂಡ ಸಂದರ್ಭಗಳನ್ನು ನೆನಪಿಸಿ ನನ್ನನ್ನು ಚುಚ್ಚತೊಡಗಿತು.  

      ಸಮಯ ಮುಗಿದಿತ್ತು. ಎಲ್ಲಾ ಮಕ್ಕಳೂ ಎದ್ದು ಹೊರಹೋದರು. ಮೂಲೆಯಲ್ಲೊಬ್ಬ ಹುಡುಗ ಕಲ್ಲಿನಂತೆ ಕುಳಿತಿದ್ದ. ಅವನ ಕಣ್ಣಲ್ಲಿ ನೀರಿರಲಿಲ್ಲ. ಇಂಥ ಪ್ರತಿಕ್ರಿಯೆಗಳು ನಮ್ಮ ಹೃದಯವನ್ನು ಹೆಚ್ಚು ಭಾರಗೊಳಿಸುತ್ತವೆ. ಅವನ ಕೈಹಿಡಿದು ಹೊರಗೆ ಕರೆತಂದೆ. ಹೊರಗೆ ಬಂದು ಮಕ್ಕಳಿಗೆಲ್ಲಾ ಸಾಂತ್ವನ ಹೇಳಿದೆ. ಮಕ್ಕಳು ಅಳುತ್ತಾ ಮನೆಗೆ ಹೋದರು. ನಾನೂ........

       ಆ ಸಂಜೆ ಹಲವು ಮಕ್ಕಳ ಪೋಷಕರಿಂದ ಫೋನ್ ಕರೆ.... ಮರುದಿನ ಭಾನುವಾರ ಬೆಳಗಾಗುತ್ತಿದ್ದಂತೆ ಕೆಲವು ಮಕ್ಕಳು ನನ್ನ ಬಾಡಿಗೆ ಮನೆಯೆಡೆಗೆ ಬಂದಿದ್ದರು. ಎಸ್.ಡಿ‌. ಎಂ.ಸಿ ಅಧ್ಯಕ್ಷರು ತಾವೇ ತಯಾರಿಸಿದ ಸಿಹಿತಿಂಡಿ ಹಿಡಿದು ಬಂದಿದ್ದರು. ಒಂದಿಬ್ಬರು ಹಳೆ ವಿದ್ಯಾರ್ಥಿಗಳೂ ಬಂದು ಹೋದರು. ಹೃದಯ ಮತ್ತೆ ಭಾರ... ಭಾರ... ಆ ಸಮಯದ ನನ್ನ ತಲ್ಲಣವನ್ನು ಹೇಗೆ ಬರೆಯಲಿ?

     ನನಗೆ ತಿಳಿದಿದೆ. ಇದು ನನ್ನೊಬ್ಬನ ಅನುಭವವೇನಲ್ಲ. ಬಹುತೇಕ ಎಲ್ಲಾ ಶಿಕ್ಷಕರಿಗೂ ಇಂಥದೊಂದು ಅನುಭವ ಆಗಿಯೇ ಆಗಿರುತ್ತದೆ. ಇಷ್ಟರವರೆಗೆ ಇಂತಹ ಅನುಭವವಾಗದವರು ಮುಂದಾದರೂ ಈ ಬಗೆಯ ಗೌರವ ಪಡೆದೇ ಪಡೆಯುತ್ತಾರೆ. ಶಿಕ್ಷಕ ವೃತ್ತಿಯ ಶ್ರೇಷ್ಠತೆಯೇ ಅದು. 

     ಆ ದಿನ ನನಗೆ ಲಭಿಸಿದ ವಿದಾಯದ ನೆನಪುಗಳು ನನಗೆ ಅಮೂಲ್ಯ ನಿಜ. ಆದರೆ ಆ‌ ವಿದಾಯ ನನ್ನೊಳಗೆ ಹುಟ್ಟಿಸಿದ ಪ್ರಶ್ನೆಗಳು ನನ್ನ ಪಾಲಿಗೆ ಇನ್ನೂ ಮುಖ್ಯವಾದವುಗಳು.

     ಶಾಲೆಯಲ್ಲಿ ನಾನೇನೋ ಕಡಿದು ಗುಡ್ಡೆ ಹಾಕುತ್ತಿದ್ದೇನೆ, ಆದರೆ ನನಗೆ ಸಿಗಬೇಕಾದಷ್ಟು ಪ್ರಚಾರವೋ ಗೌರವವೋ ಸಿಕ್ಕುತ್ತಿಲ್ಲ ಎಂಬ ಯೋಚನೆ ಅಪರೂಪಕ್ಕೊಮ್ಮೆಯಾದರೂ ನನಗೆ ಬರುವುದಿತ್ತು. ಆ ಕ್ಷಣದಲ್ಲಿ ನನ್ನ ಕೆಲಸಕ್ಕೆ ಸಮರ್ಪಕವಾದ ಸಂಬಳ ಪಡೆಯುತ್ತಿದ್ದೇನೆ ಎಂಬ ವಿಚಾರ ನೆನಪಾಗುತ್ತಿರಲಿಲ್ಲ ನೋಡಿ.. ಈ ದಿನ ಸಿಕ್ಕಿದ ವಿದಾಯ ನನ್ನಲ್ಲಿ ಅಂತಹ ಕೀಳು ಯೋಚನೆಗಳನ್ನು ತೊಳೆದುಹಾಕಿತ್ತು. ನಾನು ಯೋಚನೆ ಮಾಡತೊಡಗಿದೆ.. ಈ ಶಾಲೆಯಲ್ಲಿ ನಾನೆಷ್ಟು ಕೆಲಸಮಾಡಿದ್ದೆ, ಶಾಲೆಯೊಳಗೆ ಎಷ್ಟು ಸಮಯವನ್ನು ನಾನು ವೇಸ್ಟ್ ಮಾಡುತ್ತಿದ್ದೆ? ನಾನು ಈ ಶಾಲೆಗೆ ಏನೇನೆಲ್ಲಾ ಮಾಡಬಹುದಿತ್ತು? ಮಾಡಿದ್ದೆಷ್ಟು? ನನ್ನಲ್ಲಿಯ ಪ್ರೌಢಿಮೆಯ ಕೊರತೆ, ಆಲಸ್ಯ, ಸಿಟ್ಟು-ಸೆಡವುಗಳು ನಾನು ಮಾಡಬಹುದಾದ ಕೆಲಸಕ್ಕೆ ಎಷ್ಟು ಅಡ್ಡಿಯಾದವು? ಒಬ್ಬ ಇಂಗ್ಲೀಷ್ ಶಿಕ್ಷಕನಾದ ನಾನು ಊರಿನ ಜನ ಇಂಗ್ಲೀಷ್ ಶಾಲೆಯೆಡೆಗೆ ಆಕರ್ಷಿತರಾಗದೇ ನಮ್ಮ ಶಾಲೆಯೆಡೆ ಬರುವಂತೆ ನಾನೇನು ಮಾಡಿದ್ದೆ? ಪ್ರಶ್ನೆಗಳು ಸಾಲಾಗಿ ಬಂದು ನನ್ನೆದುರು ನಿಲ್ಲಲಾರಂಭಿಸಿದವು. ನನ್ನ ಆತ್ಮಸಾಕ್ಷಿ ಚುಚ್ಚತೊಡಗಿತು. ಆ ಪ್ರೀತಿಗೆ, ಅಭಿಮಾನಕ್ಕೆ ನಾನು ಅರ್ಹನಲ್ಲ ಎಂಬ ಭಾವ ಕಾಡತೊಡಗಿತು. ಪ್ರಾರ್ಥನೆಯೊಂದನ್ನು ಬಿಟ್ಟರೆ ಆ ಪ್ರೀತಿಗೆ ಧನ್ಯವಾದ ಹೇಳಲು ಬೇರೆ ಮಾರ್ಗ ನನಗೆ ತೋಚಲಿಲ್ಲ. ಮುಂದಿನ ಶಾಲೆಯಲ್ಲಿ ನನ್ನ ದೈರ್ಬಲ್ಯ, ವೈಫಲ್ಯಗಳನ್ನು ಮೀರಿ ಬೆಳೆಯುವುದಷ್ಟೇ ನನ್ನ ಕೈಯಲ್ಲಿರುವುದು ಎಂದುಕೊಂಡೆ. 
    
     ಈಗಲೂ ಪದ್ಮುಂಜ ಶಾಲೆ ಭಗ್ನಪ್ರೇಮದ ಹಾಗೆ ನನ್ನನ್ನು ಕಾಡುವುದುಂಟು‌. ನಾನು ಶಿಕ್ಷಕನಲ್ಲದೇ ಹೋಗಿದ್ದರೆ ನಾನು ಇಷ್ಟೊಂದು ಪ್ರೀತಿ ಗಳಿಸಲು ಸಾಧ್ಯವಿತ್ತೇ ಎಂಬ ಯೋಚನೆಯೂ ಬರುವುದುಂಟು. ನಿಜ, ಇನ್ಯಾವುದೇ ವೃತ್ತಿಯಲ್ಲಿ ಇದರ ಹತ್ತುಪಟ್ಟು ಶ್ರಮ ಹಾಕಿದರೂ ಇಲ್ಲಿ ಸಿಕ್ಕಷ್ಟು ಪ್ರೀತಿ ಸಿಗಲಾರದು.

      *      *      *

   ಇತ್ತೀಚೆಗೆ ಆರನೇ ತರಗತಿಯ ಮಕ್ಕಳಲ್ಲಿ ಅವರ ಕನಸಿನ ವೃತ್ತಿಯ ಬಗ್ಗೆ ಮಾತನಾಡುವ ಸಂದರ್ಭ ಬಂದಿತ್ತು. ಬೇರೆ ಬೇರೆ ವೃತ್ತಿಗಳ ಹೆಸರು ಬಂತಾದರೂ "ನಾನು ಶಿಕ್ಷಕನಾಗುತ್ತೇನೆ" ಎಂಬ ಕನಸು ಹೊತ್ತವರಾರೂ ಕಾಣಲಿಲ್ಲ. "ನನ್ನ ಪ್ರಕಾರ ಅತ್ಯಂತ ಹೆಚ್ಚು ಖುಷಿ ಕೊಡುವ ಕೆಲಸ ಶಿಕ್ಷಕ ವೃತ್ತಿ. ನೀವ್ಯಾಕೆ ಅದರ ಬಗ್ಗೆ ಯೋಚಿಸುತ್ತಿಲ್ಲ" ಕೇಳಿದೆ. "ಸರ್, ಟೀಚರ್ಸಿಗೆ ಮಕ್ಕಳು ಕೆಲವೊಮ್ಮೆ ಬೈಕೊಳ್ತಾರೆ, ಅದಕ್ಕೆ ಯಾರಿಗೂ ಟೀಚರಾಗ್ಲಿಕ್ಕೆ ಇಷ್ಟ ಇಲ್ಲ" ಎಂದಳೊಬ್ಬಳು ಹುಡುಗಿ ಪ್ರಾಮಾಣಿಕಳಾಗಿ.  
    "ಅಂದರೇ..." ನಗುತ್ತಾ ಮುಂದುವರೆಸಿದೆ, "ನೀವೆಲ್ಲರೂ ನನಗೆ ಬೈಕೊಳ್ತಾ ಇರ್ತೀರಿ..."
    "ಇಲ್ಲಾ...." ಒಕ್ಕೊರಲಿನಿಂದ ಕೂಗಿತ್ತು ಇಡೀ ತರಗತಿ.
    "ಹಾಗಲ್ಲ ಸರ್, ಟೀಚರ್ಸಿಗೆ ಮಕ್ಕಳು ತುಂಬಾ ತಮಾಷೆ ಮಾಡ್ಕೊಂಡಿರ್ತಾರೆ... ಅದಕ್ಕೇ........ " ಮತ್ತೆ ಹೇಳಿದ್ದಳು ಹುಡುಗಿ.
   " ಅಂದರೆ..... ನೀವೆಲ್ರೂ ನನಗೆ ತಮಾಷೆ ಮಾಡ್ತಾ ಇರ್ತೀರಿ..." ಮತ್ತೆ ನಗುತ್ತಲೇ ಹೇಳಿದ್ದೆ.
    "ಇಲ್ಲಾ..... " ಮತ್ತೆ ಮಕ್ಕಳ ಒಕ್ಕೊರಲ ದನಿ. 
    "ಹಾಗಾದರೆ... ಯಾಕೆ ಶಿಕ್ಷಕರಾಗಬಾರದು?"ಕೇಳಿದೆ. ಮಕ್ಕಳಲ್ಲಿ ಉತ್ತರವಿರಲಿಲ್ಲ. ನನಗೆ ಶಿಕ್ಷಕ ವೃತ್ತಿಯ ಪ್ರಯೋಜನಗಳ ಬಗ್ಗೆ ಮಾತನಾಡಬೇಕನಿಸಿತು. ನನ್ನ ವಿದಾಯದ ಸಮಯದ ನೆನಪಾಯಿತು. ಈ ಶಾಲೆಯಲ್ಲಿ ಶಿಕ್ಷಕರೊಬ್ಬರಿಗೆ ಅದೇ ಬಗೆಯ ವಿದಾಯ ಹೇಳಿದ ನೆನಪೂ ಆಯಿತು. ಈಗದನ್ನು ಹೇಳಲೇ ಎಂದುಕೊಂಡೆ. ಏಳನೇ ತರಗತಿಯ ಪಠ್ಯದಲ್ಲಿ "Why god made teachers" ಎಂಬ ಕವಿತೆಯಿರುವುದು ನೆನಪಾಗಿ ಈ ವಿಚಾರ ಅಲ್ಲಿಗೇ ಸೂಕ್ತ ಎಂದು ಸುಮ್ಮನಾದೆ.

      - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment