ಅಕ್ಷಯ ಕಲಾವಿದ – ಶಿಕ್ಷಕನ ಡೈರಿಯಿಂದ 42

ಶಿಕ್ಷಕನ ಡೈರಿಯಿಂದ

ಅಕ್ಷಯ ಕಲಾವಿದ…

       ಅನುಷಾ ಕರೆಮಾಡಿದ್ದಳು. ಅದೂ ಇದೂ ಮಾತನಾಡುತ್ತಾ ಅವಳ ತಮ್ಮನ ಬಗ್ಗೆ ವಿಚಾರಿಸಿದ್ದೆ. ಖುಷಿಯಿಂದ ಹೇಳತೊಡಗಿದಳು. ತಮ್ಮನ ಬಗ್ಗೆ ಹೇಳುವುದೆಂದರೆ ಅವಳಿಗೊಂದು ದೊಡ್ಡ ಸಂಭ್ರಮ.
  ‌
 ‌‌  ಶಾಲೆಗೆ ಬರುವಾಗ ತಮ್ಮ ನೋವು ನಲಿವುಗಳನ್ನೆಲ್ಲಾ ಹಂಚಿಕೊಳ್ಳುತ್ತಾ ಶಿಕ್ಷಕರನ್ನು ತಮ್ಮ ಕುಟುಂಬದ ಸದಸ್ಯರಿಗಿಂತ ಆತ್ಮೀಯರೆಂದು ಪರಿಗಣಿಸುವ ಮಕ್ಕಳ ಮತ್ತು ನಮ್ಮ ಬಾಂಧವ್ಯ, ಅವರು‌ ಶಾಲೆಯಿಂದ ಹೊರಹೋಗಿ ತಿಂಗಳುಗಳೊಳಗೆ ಕೇವಲ 'ನಮಸ್ತೆ'ಗಷ್ಟೇ ಸೀಮಿತವಾಗುವುದು ತೀರಾ ಸಹಜ ವಿಚಾರವೇ ಆಗಿದ್ದರೂ, ಅದರ ಬಗ್ಗೆ ಸಣ್ಣ ಬೇಸರ ನನಗೆ. ತೀರಾ ಅಪರೂಪಕ್ಕೆ ಕೆಲವು ವಿದ್ಯಾರ್ಥಿಗಳು ಆ ಆತ್ಮೀಯತೆಯನ್ನು ಮುಂದೆಯೂ ಉಳಿಸಿಕೊಂಡಿರುತ್ತಾರೆ. ಅಂಥವರಲ್ಲೊಬ್ಬಳು ಈ ಅನುಷ.

     ಅನುಷ ಕಲಿಕೆಯಲ್ಲಿ ಮತ್ತು ಕ್ರೀಡೆಯಲ್ಲಿ ತುಸು ಮುಂದೆ ಇದ್ದ ಹುಡುಗಿ. ಅವಳಿಗಿಂತ ಮೂರ್ನಾಲ್ಕು ವರ್ಷ ಸಣ್ಣವನಾಗಿದ್ದ ಅವಳ ತಮ್ಮ ಅಕ್ಷಯ್ ಎರಡೂ ವಿಷಯಗಳಲ್ಲಿ ಅವಳಿಗೆ ಹೋಲಿಸಿದರೆ ತುಂಬಾ ಹಿಂದೆ ಇದ್ದವ. ಅವನಿಗೊಂದು ವಿಚಿತ್ರ ಅಭ್ಯಾಸವಿತ್ತು. ತನಗೇನಾದರೂ ಇಷ್ಟವಾದರೆ ಆ ವಿಷಯದ ಬಗ್ಗೆ ವಿಪರೀತ ಕ್ರೇಜ್ ಬೆಳೆಸಿಕೊಳ್ಳುತ್ತಿದ್ದ. ತುಂಬಾ ಸಣ್ಣವನಿದ್ದಾಗ ಬಸ್ಸುಗಳ ಬಗ್ಗೆ ವಿಪರೀತ ಆಸಕ್ತಿ ಇದ್ದ ಈತ, ಪೇಟೆಗೆ ಹೋದರೆ ಚೀಟಿಯೊಂದರಲ್ಲಿ ಬಸ್ಗಳ ನಂಬರ್ ಬರೆದುಕೊಳ್ಳುತ್ತಿದ್ದನೆಂದು ಅನುಷಾ ಹೇಳುತ್ತಿದ್ದುದು ನನಗಿನ್ನೂ ನೆನಪಿದೆ.

   ಅವನ ತಾದಾತ್ಮ್ಯತೆಯ ಸರಿಯಾದ ಪರಿಚಯವಾಗಿದ್ದು ಅವನು ನಾಲ್ಕನೇ ತರಗತಿಯಲ್ಲಿದ್ದಾಗ. ಪ್ರತಿಭಾ ಕಾರಂಜಿಯ ಚಿತ್ರಕಲೆ ಸ್ಪರ್ಧೆಗೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ನಮಗೆ ಉತ್ತಮ ಎನಿಸುವ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಇರಲಿಲ್ಲವೆಂದು, ಇದ್ದುದರಲ್ಲಿ ಪುರುಸೊತ್ತಿದ್ದಾಗ ಏನೋ ಒಂದು ಗೀಚಿಕೊಂಡಿರುತ್ತಾನಲ್ಲ ಎಂದು ಅಕ್ಷಯನನ್ನು ಆರಿಸಿದ್ದೆವು. ಕ್ಲೇ ಮಾಡೆಲಿಂಗಿಗೂ ಬೇರೆ ಯಾರೂ ಇಲ್ಲದೇ ಇದ್ದಾಗ ಅದಕ್ಕೂ ನಾನೇ ಸೇರುತ್ತೇನೆ ಎಂದುಬಿಟ್ಟಿದ್ದ. ಶಿಕ್ಷಕರೊಬ್ಬರು ತರಬೇತಿ ನೀಡಿದ್ದರು. ಅವನ ಚಿತ್ರ ಮತ್ತು ಮಣ್ಣಿನ ಮಾದರಿಗಳೆರಡೂ ತೀರಾ ಕಳಪೆ ಎಂದೇ ನನಗನಿಸಿತ್ತು. ಆದರೆ ಅವೆರಡೂ ಕೆಲಸಗಳನ್ನು ಮಾಡುವಾಗ ಅವನು ಅದರಲ್ಲೇ ಮುಳುಗಿ ಹೋಗುತ್ತಿದ್ದುದು ನನ್ನ ಗಮನಕ್ಕೆ ಬಂದಿತ್ತು. ಒಂದು ಶನಿವಾರ ಮಧ್ಯಾಹ್ನ ಎಲ್ಲರೂ ಮನೆಗೆ ಹೋದರೂ ಶಾಲೆ ಜಗಲಿಯ ಮೇಲೆ ತಪಸ್ಸಿನಂತೆ ಕ್ಲೇ ಮಾಡೆಲಿಂಗ್ ಮಾಡುತ್ತಾ ಕುಳಿತಿರುವ ದೃಶ್ಯ ಈಗಲೂ ನನ್ನ ಕಣ್ಣೆದುರು ಬರುವ ಹಾಗಿದೆ. ತುಸು ಅಚ್ಚರಿಯೆನಿಸಿದರೂ ಅವನ ವಿಲಕ್ಷಣ ಕ್ರೇಜ್ಗಳಿಗೆ ಇದೂ ಒಂದು ಸೇರ್ಪಡೆ ಎಂದಷ್ಟೇ ನಾನು ಭಾವಿಸಿದ್ದೆ. ಅವನ ಚಿತ್ರ, ಮಾದರಿಗಳು ಕ್ಲಸ್ಟರ್ ಹಂತದಲ್ಲಿಯೂ ಗುರುತಿಸಿಕೊಳ್ಳಲು ವಿಫಲವಾದವು. 

   ಅವನ ಆಸಕ್ತಿಯ ಫಲದಿಂದ ಆರು ಏಳನೆಯ ತರಗತಿಗೆ ಬರುವಾಗ ಚೆನ್ನಾಗಿ ಚಿತ್ರ ಬಿಡಿಸುತ್ತಿದ್ದ. ಪ್ರತಿಭಾ ಕಾರಂಜಿಯ ಕ್ಲಸ್ಟರ್ ಹಂತದ ಸ್ಪರ್ಧೆಯಲ್ಲಿ ಬಹುಮಾನ ಗಳಿಸುವ ಹಂತಕ್ಕೆ ಬಂದಿದ್ದ. ಅದೇನೂ ಅಂತಹ ದೊಡ್ಡ ಸಾಧನೆಯೆಂದು ನನಗನಿಸಿರಲಿಲ್ಲ‌‌. ಅವನಷ್ಟು ಚೆನ್ನಾಗಿ ಚಿತ್ರ ಬರೆಯಬಲ್ಲ ಮಕ್ಕಳು ಒಂದೆರಡು ವರ್ಷಕ್ಕೊಮ್ಮೆಯಾದರೂ ನನಗೆ ಸಿಗುತ್ತಿದ್ದರು.

    ಅಕ್ಷಯ್ ಹೈಸ್ಕೂಲಿಗೆ ಹೋದ ನಂತರ ಒಂದೆರಡು ಬಾರಿ ಅವನ ಚಿತ್ರಗಳನ್ನು, ಪ್ರತಿಭಾ ಕಾರಂಜಿಯ ಕ್ಲೇ ಮಾಡೆಲ್ಗಳನ್ನೂ ನೋಡಿ ನಾನು ಬಹಳ ಖುಷಿಪಟ್ಟಿದ್ದೆ. ಚಿತ್ರ ಬಿಡಿಸುವಾಗಿನ ಅವನ ತಪಸ್ಸಿನಂತಹ ಶ್ರದ್ಧೆಯನ್ನು ಚಿತ್ರಕಲಾ ಶಿಕ್ಷಕ ಸದಾನಂದ ಬಿರಾದಾರ್ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದರು. ಮುಂದೆ ಅವರ ಪ್ರೇರಣೆಯಿಂದಲೇ ಅಕ್ಷಯ್ ಹತ್ತನೇ ತರಗತಿಯ ನಂತರ ಚಿತ್ರಕಲೆಯ ಕೋರ್ಸಿಗೆ ಸೇರಿ ಪದವಿಯನ್ನೂ ಪೂರ್ಣಗೊಳಿಸಿದ್ದ. ಈಗ ಅವನು ಬಿಡಿಸಿದ ಚಿತ್ರಗಳನ್ನು ಫೇಸ್ಬುಕ್ಕಿನಲ್ಲಿ ಕಂಡು ನನಗೆ ಒಂದಿಷ್ಟು ಅಚ್ಚರಿ, ಒಂದಿಷ್ಟು ರೋಮಾಂಚನ.

   "ಚಿಕ್ಕವನಿರುವಾಗ ಕೆಲವೊಮ್ಮೆ ಅವನು ಮುಂದೆ ಏನಾಗ್ತಾನೋ ಅಂತ ಆತಂಕ ಇತ್ತು ಸರ್.., ಈಗ ಅವನ ಬಗ್ಗೆ ತುಂಬಾ ಖುಷಿ ಆಗ್ತದೆ,"   ಎನ್ನುವ ಅನುಷಾಳ ಸಂಭ್ರಮ ನನಗೂ ಸಂಭ್ರಮ ತರುತ್ತದೆ. "ಈಗವನಿಗೆ ತುಂಬಾ ಆರ್ಡರ್ಗಳು ಬರುತ್ತವೆ. ಮನೆಯಲ್ಲಿ ಮೊದಲಿಂದ ಕಷ್ಟ ಇತ್ತು. ಈಗ ಮನೆಯ ಜವಾಬ್ದಾರಿಯನ್ನೆಲ್ಲಾ ಅವನೇ ಹೊತ್ತಿದಾನೆ." ಎನ್ನುತ್ತಾ ಹೆಮ್ಮೆಪಡುತ್ತಾಳೆ. ನಿಜ, ಅಕ್ಷಯ್ ಪದವಿ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಡಬೇಕಾಗಿರಲಿಲ್ಲ. ಅವನ ಕಲೆ ಅವನಿಗೆ ಮಾತ್ರವಲ್ಲ, ಮನೆಯವರಿಗೂ ಬದುಕು ಕಟ್ಟಿಕೊಟ್ಟಿತ್ತು. 

    "ಅವನಿಗೆ ಇನ್ನೊಂದು ಹುಚ್ಚಿದೆ, ಯಕ್ಷಗಾನದ್ದು..." ಅವನ ಬಾಲ್ಯದ ವಿಲಕ್ಷಣ ಕ್ರೇಜ್ ಗಳನ್ನು ನೆನಪಿಸುವ ಅನುಷಾ, ಅವನೇನೂ ಬದಲಾಗಿಲ್ಲ, ಆಗಿನ ಮುಗ್ಧತೆ ಈಗಲೂ ಹಾಗೇ ಇದೆ ಎನ್ನುತ್ತಾಳೆ. "ಯಕ್ಷಗಾನಕ್ಕೆ ಹೋಗುವ ಕ್ರೇಜ್ ಕೂಡ ಅವನ ಕಾಂಟ್ಯಾಕ್ಟ್ ಗಳನ್ನು ಬೆಳೆಸಿದೆ, ಅವನಿಗೆ ಹೆಚ್ಚು ಆರ್ಡರ್ಗಳು ಸಿಗುವಂತಾಗಿದೆ" ಎನ್ನುವುದು ಅವಳ ಅಂಬೋಣ. 

   ಅಕ್ಷಯ್ ಇನ್ನೂ ಸಾಧಿಸುವಂತಹದ್ದು ಬಹಳಷ್ಟಿರಬಹುದು. ಯಾವ ಕೆಲಸವಾಗಲೀ, ಅದರಲ್ಲಿ ತಪಸ್ಸಿನಂತೆ ತೊಡಗಿಸಿಕೊಂಡರೆ ನಾವು ಬಹಳ ಎತ್ತರಕ್ಕೇರಬಲ್ಲೆವು ಎನ್ನುವುದಕ್ಕೆ ಅಕ್ಷಯ್ ಉದಾಹರಣೆಯಾಗಿ ಕಾಣುತ್ತಾನೆ. 
  "ಸಿಂಬಾ.." ಎಂದು ತಮ್ಮನನ್ನು ಪ್ರೀತಿಯಿಂದ ಸಂಬೋಧಿಸಿಕೊಂಡು ಫೋಟೋ ಹಂಚಿಕೊಳ್ಳುವ ಅನುಷಾಳ ವಾಟ್ಸಾಪ್ ಸ್ಟೇಟಸ್ಸುಗಳನ್ನು ಕಂಡಾಗ ಅಕ್ಷಯನೆಂಬ ಕಲಾವಿದನಿಗೆ ಸೆಲ್ಯೂಟ್ ಮಾಡಬೇಕೆನಿಸುತ್ತದೆ. ಇಂಥವನೊಬ್ಬ ನನ್ನ ವಿದ್ಯಾರ್ಥಿಯಾಗಿದ್ದ ಎಂದು ಮನಸ್ಸು ಮುದಗೊಳ್ಳುತ್ತದೆ‌.

    - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment