ಇದನ್ನು ತಿನ್ನಿ ಸರ್.. ಸರಿಯಾಗ್ತದೆ! – ಶಿಕ್ಷಕನ ಡೈರಿಯಿಂದ 41

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ಇದನ್ನು ತಿನ್ನಿ ಸರ್.. ಸರಿಯಾಗ್ತದೆ!

          "ನೀವಿದನ್ನು ನಿಮ್ಮ ಡೈರಿಯಲ್ಲಿ ಬರೆಯಲೇಬೇಕು." ಹೀಗಂದಿದ್ದರು ನನ್ನ ಸಹೋದ್ಯೋಗಿ ರವಿಚಂದ್ರ ಸರ್.. ಕೆಲವು ದಿನಗಳಿಂದ ಗಂಟಲು ಕಟ್ಟಿ, ಕೀರಲಾಗಿದ್ದ ಅವರ ಧ್ವನಿ ಹೀಗನ್ನುವಾಗ ತುಸು ಭಾವುಕವಾದಂತೆ ಕಾಣಿಸಿತು. ಅದೇನಿರಬಹುದೆಂಬ ಕುತೂಹಲದಿಂದ ಅವರೆಡೆಗೆ ನೋಡಿದೆ. ಭಾವುಕತೆ ಅವರ ಕಣ್ಣುಗಳಲ್ಲೂ ಗೋಚರಿಸಿತು.

    ಕಳೆದ ಮೂರ್ನಾಲ್ಕು ದಿನಗಳಿಂದ ಅವರ ಧ್ವನಿ ಸರಿಯಿಲ್ಲದೇ ಇದ್ದುದು ನಾವೆಲ್ಲಾ ಬಲ್ಲ ವಿಷಯವೇ ಆಗಿತ್ತು. ತುಸು ಕೆಮ್ಮು ಇದ್ದುದರಿಂದ ಧ್ವನಿ ಕಟ್ಟುತ್ತಿತ್ತು. ತರಗತಿಯಲ್ಲಿ ಮಾತನಾಡುವಾಗ ಅವರೇನು ತೀರಾ ಕಷ್ಟಪಡುತ್ತಿರಲಿಲ್ಲವಾದರೂ, ಧ್ವನಿ‌ ಕೇಳಿದ ನಮಗೆ ತುಂಬಾ ಕಷ್ಟಪಡುತ್ತಿದ್ದರೇನೋ ಅನ್ನಿಸುತ್ತಿತ್ತು. ಡೈರಿಯಲ್ಲಿ ದಾಖಲಿಸಬೇಕು ಎಂದ ಅವರು ಮಾತನಾಡತೊಡಗಿದ್ದು ಈ ವಿಚಾರದ ಬಗ್ಗೆಯೇ.

       "ನಾನಿವತ್ತು‌ ಆರನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದೆ. ನಡುನಡುವಲ್ಲಿ ಕೆಮ್ಮು ತೊಂದರೆ ಕೊಡುತ್ತಿತ್ತು.." ರವಿಚಂದ್ರ ಸರ್ ಹೇಳತೊಡಗಿದರು‌.
     "ಮುಂದಿನ ಬೆಂಚಿನ ವಿದ್ಯಾರ್ಥಿಯೊಬ್ಬ ತನ್ನ ನೋಟ್ಸ್ ತೋರಿಸಿ ಏನೋ ಕೇಳಿದಾಗ, ಅವನ ಡೌಟಿನ ಪರಿಹಾರ ಮಾಡುತ್ತಿದ್ದೆ. ಅಷ್ಟರಲ್ಲಿ ಲಾಸ್ಟ್ ಬೆಂಚಿನಲ್ಲಿ ಕುಳಿತಿದ್ದ ದೀಕ್ಷಾ ತನ್ನದೇನೋ ಪ್ರಶ್ನೆಯನ್ನು ಹೊತ್ತುಕೊಂಡು ನನ್ನೆಡೆಗೆ ಬಂದಳು."
       ಆ ಪ್ರಶ್ನೆಯಲ್ಲೇನೋ ವಿಶೇಷತೆಯಿರಬಹುದೆಂಬ ಕುತೂಹಲದಿಂದ ನಾವು ಕೇಳುತ್ತಿದ್ದೆವು. "ಸತ್ಯ ಹೇಳಬೇಕೆಂದರೆ ಅವಳಲ್ಲಿ ಯಾವ ಪ್ರಶ್ನೆಯೂ‌ ಇರಲಿಲ್ಲ, ಏನೋ ಒಂದು ಪ್ರಶ್ನೆ ಕೇಳಿದ ಹಾಗೆ ಮಾಡಿದ್ದಳಷ್ಟೆ. ಆಮೇಲೆ ಮೆಲ್ಲನೆ ತನ್ನ ಕಿಸೆಯಿಂದ ವಿಕ್ಸ್ ಚಾಕಲೇಟೊಂದನ್ನು ನನ್ನ ಕೈಯಲ್ಲಿಟ್ಟು ಮೆಲುದನಿಯಲ್ಲಿ 'ಸರ್, ಇದನ್ನು ತಿನ್ನಿ.. ಸರಿಯಾಗ್ತದೆ..' ಎಂದು ಹೇಳಿ ತನ್ನ ಜಾಗಕ್ಕೆ ಮರಳಿದಳು."

        ಈಗ ಕೇಳುತ್ತಿರುವ ನಮ್ಮೆಲ್ಲರ ಮೈಯೂ ಜುಮ್ಮೆಂದ‌ ಹಾಗಾಯಿತು. 

      "ಅವಳು ಕುಳಿತಲ್ಲಿಂದಲೇ‌ ಎದ್ದು ನಿಂತು ವಿಕ್ಸ್ ಚಾಕಲೇಟ್ ಕೊಟ್ಟು, ತಿನ್ನಿ ಸರಿಯಾಗ್ತದೆ ಎಂದಿದ್ದರೆ  ಅವಳು ತಮಾಷೆ ಮಾಡುತ್ತಿದ್ದಾಳೆ ಅಂದುಕೊಳ್ಳುತ್ತಿದ್ದೆನೇನೋ.., ಆದರೆ ಅವಳು ಮೆಲ್ಲನೆ ಬಂದು ತೋರಿಸಿದ ಕಾಳಜಿ, ನನ್ನ ಘನತೆಯನ್ನು ತಗ್ಗಿಸಬಾರದು ಎಂಬಂತೆ ಉಳಿದವರಿಗೆ ತಿಳಿಯದಂತೆ ನನಗೆ ಕೊಟ್ಟ ರೀತಿ ಇವುಗಳಿಗೆಲ್ಲಾ ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯಲಿಲ್ಲ" ಅವರು ಹೀಗೆನ್ನುವಾಗ ನಮ್ಮೆಲ್ಲರ ಹೃದಯವೂ ತುಂಬಿಬಂದಿತ್ತು. ದೀಕ್ಷಾಳ ಪ್ರೀತಿ, ಮುಗ್ಧತೆ ಮತ್ತು ಸಮಯಪ್ರಜ್ಞೆಗಳು ನಮ್ಮ ಕಣ್ಣುಗಳನ್ನೂ ಆರ್ದ್ರಗೊಳಿಸಿದ್ದವು.

      ನಿಜ. ಕೆಲವು ಘಟನೆಗಳನ್ನು ಅನುಭವಗಳು ಎನ್ನಲಾಗದು. ಅನುಭೂತಿ ಎಂದರೇ ಸರಿ. ಮನಸ್ಸಿನ ಆಳಕ್ಕಿಳಿದು ಹೃದಯವನ್ನು ಸೇರಿ ಅಲ್ಲಿ ಶಾಶ್ವತವಾಗಿ ನೆಲೆಯೂರಿಬಿಡುತ್ತವೆ. ರವಿಚಂದ್ರರು ಪಡೆದ ಅನುಭೂತಿಯಲ್ಲಿ ನಾವೂ ಪಾಲುದಾರರಾದೆವು.

        ನಾನು ಆಗಾಗ ಯೋಚಿಸುತ್ತಿರುತ್ತೇನೆ. ನಾವು ಶಿಕ್ಷಕ ವೃತ್ತಿಯಲ್ಲದೇ ಬೇರಾವ ವೃತ್ತಿಯಲ್ಲಿದ್ದರೂ ಇಂತಹ ಪ್ರೀತಿಯ ಅನುಭೂತಿಯನ್ನು ಪದೇ ಪದೇ ಪಡೆಯುವುದು  ಸಾಧ್ಯವಿತ್ತೇ??

      - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment