ಅವಳ ಜಾತಕದಲ್ಲೇ ಹಾಗೆ ಉಂಟಂತೆ – ಶಿಕ್ಷಕನ ಡೈರಿಯಿಂದ 36

ಶಿಕ್ಷಕನ ಡೈರಿಯಿಂದ

ಅವಳ ಜಾತಕದಲ್ಲೇ ಹಾಗೆ ಉಂಟಂತೆ……..!

        ಅವನು ಬಹಳ ಅಪರೂಪದ ಪ್ರತಿಭಾವಂತ ಹುಡುಗ. ಅವನ‌ ಜ್ಞಾನ, ಪ್ರತಿಭೆ ಮತ್ತು ಪ್ರೌಢಿಮೆಗಳ ಬಗ್ಗೆ ನಮಗೆಲ್ಲಾ ಬಹಳ ಹೆಮ್ಮೆ. ಅವನು ಏಳನೇ ತರಗತಿಯನ್ನು ಮುಗಿಸಿ ನಮ್ಮ ಶಾಲೆ ಬಿಡುವ ಹೊತ್ತಿಗೆ ಸರಿಯಾಗಿ ಅವನ ತಂಗಿ ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದಳು. ಅವಳ ದಾಖಲಾತಿಯ ಹೊತ್ತಿಗೆ ನಮ್ಮ ಮನಸ್ಸಿನ ಒಳಗೊಳಗೇ ಒಂದು ಬಗೆಯ ಸಂಭ್ರಮ. ನಿರೀಕ್ಷೆ ಸಹಜವೇ ಬಿಡಿ. ಆ ಹುಡುಗಿ ಅಂಗನವಾಡಿಗೆ ಹೋಗುತ್ತಿದ್ದವಳು ಕೆಲವೊಮ್ಮೆ ತಾಯಿಯೊಡನೆ ನಮ್ಮ ಶಾಲೆಗೂ ಬಂದದ್ದಿತ್ತು. ಆಗೆಲ್ಲಾ ಚಟಪಟನೆ ಮಾತನಾಡುತ್ತಿದ್ದ ಅವಳನ್ನು ಕಂಡು ನಾವು ಖುಷಿಪಟ್ಟಿದ್ದೆವು. ಸಹಜವಾಗೇ ಹುಡುಗಿ ಅಣ್ಣನಂತಾದಾಳು ಎಂಬ ಕಲ್ಪನೆ ನಮ್ಮ ಮನಸ್ಸಲ್ಲಿ ಹುಟ್ಟಿಕೊಂಡಿತ್ತು.

        ಮೊದಲ ಕೆಲವು ದಿನಗಳ ಕಾಲ ಸ್ಟಾಫ್ರೂಮಿನಲ್ಲಿ ನಲಿಕಲಿ ಬೋಧಿಸುವ ಶಿಕ್ಷಕರ ಬಾಯಲ್ಲಿ ಬರೀ ಅವಳದ್ದೇ ಸುದ್ದಿ‌. ಆದರೆ ಅದೇನೂ ಅವಳ ಗುಣಗಾನವಾಗಿರಲಿಲ್ಲ..‌ ಶಿಕ್ಷಕರಿಗಾದ ಭ್ರಮನಿರಸನದ ಅಭಿವ್ಯಕ್ತಿಯಷ್ಟೇ ಆಗಿತ್ತು. ಆ ಹುಡುಗಿ ತರಗತಿಯ ಅತ್ಯಂತ‌ ನಿಧಾನ ಕಲಿಕೆಯ ಹುಡುಗಿಯೆನಿಸಿದ್ದಳು. ಅಕ್ಷರ ಅಂಕಿಗಳ ಪರಿಚಯ ಮಾಡಲೂ ಶಿಕ್ಷಕರು ಹೆಣಗಾಡಬೇಕಿತ್ತು.

     ಆಗಾಗ ಅವಳ ಮನೆಯವರು ಶಾಲೆಗೆ ಬರುತ್ತಿದ್ದರು. ಮಗಳ ಬಗ್ಗೆ ಮಾತನಾಡುತ್ತಿದ್ದರು. ಶಿಕ್ಷಕರು ಅವಳಿಗೆ ಕಲಿಸಲಾಗದ ಅಸಹಾಯಕತೆಯನ್ನು ಅವರೆದುರು ತೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ನೀವೂ ಸ್ವಲ್ಪ ಶ್ರಮವಹಿಸಿ ಎಂಬ ಕಿವಿಮಾತನ್ನು ಹೇಳುತ್ತಿದ್ದರು. ನಾನು ಅವಳ ತರಗತಿಗೆ ಕಲಿಸುವ ಶಿಕ್ಷಕನಾಗಿಲ್ಲದ ಕಾರಣದಿಂದ ನಾನು ಈ ಸಂವಾದದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಆ ಹುಡುಗಿಯ ಕುರಿತಾಗಿ ಕುತೂಹಲ ಹೊಂದಿದ್ದವರಲ್ಲಿ ನಾನೂ ಒಬ್ಬನಾಗಿದ್ದರಿಂದ ಅವರ ಸಂವಾದವನ್ನು ಆಸಕ್ತಿಯಿಂದ ಗಮನಿಸುತ್ತಿದ್ದೆ.

    ಆರಂಭದಲ್ಲಿ ಅವಳ ಕುರಿತಾಗಿ ಅತೀವ ನಿರೀಕ್ಷೆ ಹೊತ್ತಿದ್ದ ಶಿಕ್ಷಕರಿಗೆ ಈಗ ಅವಳು ತುಸುವಾದರೂ ಕಲಿತರೆ  ಸಾಕು ಅನಿಸುತ್ತಿತ್ತು. ಅವಳ ಮನೆಯವರೊಡನೆಯ ಸಂವಾದದ ನಂತರ ಅವಳ ಮನೆಯವರು ಅಗತ್ಯಕ್ಕಿಂತ ಹೆಚ್ಚು ಮುದ್ದು ಮಾಡುತ್ತಾರೆ ಎಂಬ ತೀರ್ಮಾನಕ್ಕೆ ನಾವೆಲ್ಲರೂ ಬಂದುಬಿಟ್ಟಿದ್ದೆವು. ಒಂದು ದಿನ ಅವಳ ತಾಯಿ ಮಗಳ ಬಗ್ಗೆ ಮಾತಾಡುತ್ತಾ, "ನಾವು ಮೊನ್ನೆ ಜಾತಕ ಕೂಡಾ ಓದಿಸಿದೆವು. ನಾಲ್ಕನೇ ತರಗತಿಯ ಒಳಗೆ ಅವಳಿಗೆ ವಿದ್ಯೆ ಹತ್ತುವುದಿಲ್ಲವಂತೆ. ಆಮೇಲೆ ಸರಿಯಾಗ್ತಾಳಂತೆ" ಎಂದುಬಿಟ್ಟರು. ನಾನು ಮನಸ್ಸಲ್ಲಿ ನಕ್ಕುಬಿಟ್ಟೆ. ನನಗದು ಅವರ ಮೂರ್ಖತನ ಎನಿಸಿತ್ತು. ಆದರೆ ನನ್ನ ಸಹೋದ್ಯೋಗಿಗಳಿಗೆ ಅವರದ್ದು ಉಡಾಫೆಯ ಉತ್ತರ ಎನಿಸಿ, ಮನಸ್ಸೊಳಗೇ ಕೋಪ ಬಂದಿತ್ತು. ನಮ್ಮೆಲ್ಲರ ಅಭಿಪ್ರಾಯ ಒಂದೇ... 'ಅಲ್ಲಿಯವರೆಗೆ ತಲೆಗೆ ಹತ್ತದ ವಿದ್ಯೆ ಆಮೇಲೆ ಹೇಗೆ ಹತ್ತೀತು..? ಇವರದ್ದು ಬೇಜವಾಬ್ದಾರಿಯ ಹೇಳಿಕೆ' ಎಂದು. ಅವಳ ಮನೆಯವರು‌ ಮುಂದೆಯೂ ಆಗಾಗ ಶಾಲೆಗೆ ಬರುತ್ತಿದ್ದರು. ಅವಳ ಬಗ್ಗೆ ಮಾತನಾಡುವಾಗೆಲ್ಲ ಈ ಜಾತಕದ ವಿಚಾರವನ್ನೊಂದು ಹೇಳುವುದು ಮಾಮೂಲಾಗಿತ್ತು. ಹುಡುಗಿ ಎರಡನೇ ತರಗತಿಗೆ ಬರುವ ಹೊತ್ತಿಗೆ ಅವಳ ಕಲಿಕೆಯ ಕುರಿತಾದ ಮಾತುಕತೆಯೂ ಕಮ್ಮಿಯಾಗಿತ್ತು.

        *          *         *

      ಕೆಲವು  ಕಳೆದಿದ್ದವು. ಆ ಹುಡುಗಿಯೀಗ ಆರನೆಯ ತರಗತಿಗೆ ಬಂದಿದ್ದಳು. "ಅವಳೀಗ ತುಂಬಾ ಹುಷಾರಾಗಿದಾಳಲ್ಲ.. ಒಂದು - ಎರಡನೇ ಕ್ಲಾಸಿನಲ್ಲಿ ಏನೂ ಬರ್ತಿರಲಿಲ್ಲ" ಎಂದಿದ್ದರು ಶಿಕ್ಷಕಿಯೊಬ್ಬರು. ನನಗೂ ಹೌದು ಅನಿಸಿತ್ತು. ಅವಳೇನೂ ತುಂಬಾ ಪ್ರತಿಭಾವಂತ ಹುಡುಗಿಯೆನಿಸಿರಲಿಲ್ಲ ನಿಜ, ಆದರೆ ಅವಳಲ್ಲಿದ್ದ ಕಲಿಕಾ ನ್ಯೂನತೆಯ ಸಮಸ್ಯೆ ಈಗಿರಲಿಲ್ಲ. ಬಹಳಷ್ಟು ವಿಚಾರಗಳಲ್ಲಿ ತನ್ನ ಚುರುಕುತನವನ್ನು ತೋರಿಸಿದ್ದಳು. "ಆವತ್ತು ಅವಳ ಜಾತಕದ ಓದಿದವರು ಹೇಳಿದ್ದು ನಿಜವಾಯಿತು ನೋಡಿ.." ಇನ್ನೊಬ್ಬರು ಶಿಕ್ಷಕರು ಹೇಳಿದರು. ನನಗೂ ಹೌದಲ್ಲಾ ಅನಿಸಿತು.

        *       *       *
      ನನಗನಿಸಿತ್ತು-  ಅವಳ ಜಾತಕ ಓದಿ ಹೇಳಿದ ಆ ಜ್ಯೋತಿಷಿ,  ಜ್ಯೋತಿಷ್ಯಕ್ಕಿಂತ ಹೆಚ್ಚಾಗಿ‌ ಆಪ್ತಸಮಾಲೋಚಕನ ಕೆಲಸವನ್ನು ಮಾಡಿದ್ದರು ಎಂದು. ಪ್ರತಿಭಾವಂತ ಅಣ್ಣನ ತಂಗಿಯೆಂಬ ನಿರೀಕ್ಷೆಗಳು ನಮಗಿರುವಂತೆ, ಅವಳ ತಂದೆ ತಾಯಿಗೂ‌ ಇರಲಿಲ್ಲವೇ? ನಮಗಿಂತ ಹೆಚ್ಚು ಭ್ರಮನಿರಸನ ಅವರಿಗೂ ಆಗಿರಲಿಲ್ಲವೇ? ಅವಳ ಕಲಿಕಾ ನ್ಯೂನತೆ ನಮಗಿಂತ ಹೆಚ್ಚು ಆತಂಕವನ್ನು ಅವರಲ್ಲಿ ಮೂಡಿಸಿರಲಿಲ್ಲವೇ? ಅದೃಷ್ಟವಶಾತ್ ಅವರು ಜ್ಯೋತಿಷ್ಯದ ಮೊರೆಹೋಗಿದ್ದರು. ಜ್ಯೋತಿಷಿ ಅವರೊಳಗೆ ಆಶಾವಾದ ಹುಟ್ಟಿಸಿದ್ದರು. ಆ ಆಶಾವಾದವೇ ಮುಂದೆ ಆ ಹುಡುಗಿ ತನ್ನ ನ್ಯೂನತೆಯಿಂದ ಹೊರಬರುವಂತೆ ಮಾಡಿರಬಹುದು. 

     ನಾನೀಗ ಯೋಚಿಸುತ್ತೇನೆ...    ಮಗುವೊಂದು ಕಲಿಕೆಯಲ್ಲಿ ಹಿಂದುಳಿದಿದ್ದರೆ "ಯೋಚಿಸಬೇಡಿ, ಸ್ವಲ್ಪ ಪ್ರಯತ್ನಪಟ್ಟರೆ ಸಾಕು.. ನಿಮ್ಮ ಮಗು ಹುಷಾರಾಗ್ತಾನೆ" ಎಂಬ ಮಾತು ನಮ್ಮ ಬಾಯಿಯಿಂದ ಬಂದರೆ ಅದು ಬಹಳ ಮಹತ್ವದ್ದಲ್ಲವೇ? ಹೀಗೊಂದು ಪಾಠ ಕಲಿಸಿದ ಆ ಅಜ್ಞಾತ ಜ್ಯೋತಿಷಿಗೆ ನಾನಂತೂ ಸದಾ ಅಭಾರಿ.

        - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment