ನಮ್ಮ ಶಾಲೆಗೊಬ್ರು ಪರ್ಮನೆಂಟ್ ಮಾಸ್ಟ್ರು ಬೇಕು – ಶಿಕ್ಷಕನ ಡೈರಿಯಿಂದ 18

ಶಿಕ್ಷಕನ ಡೈರಿಯಿಂದ

ನಮ್ಮ ಶಾಲೆಗೊಬ್ರು ಪರ್ಮನೆಂಟ್ ಮಾಸ್ಟ್ರು ಬೇಕು

    " ಆ ಶಾಲೆಯಲ್ಲಿ ಎಸ್ಡೀಎಂಸಿ ತರಬೇತಿಯನ್ನು ನೀವು ನಡೆಸ್ಲಿಕ್ಕಾಗ್ತದಾ?" ಎಂದು ನಮ್ಮ ಸಿ.ಆರ್.ಪಿ.ಯವರು ಕೇಳಿದಾಗ ನಾನು ಒಪ್ಪಿಕೊಡಿದ್ದು ಬರಿಯ ಮುಲಾಜಿನಿಂದಷ್ಟೆ. ಆ ಶಾಲೆಗೆ ಹೋಗಿ ಬಂದ ಮೇಲೆ ಹೋಗದಿದ್ದರೆ ನಾನೇನೋ ಕಳೆದುಕೊಳ್ಳುತ್ತಿದ್ದೆ ಎನ್ನಿಸಿತ್ತು.

    ಎಸ್ಡೀಎಂಸಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಆಯಾ ಶಾಲೆಗಳಲ್ಲೇ ಸರಕಾರ ಆಯೋಜಿಸಿತ್ತು. ಅದಕ್ಕೆ ತರಬೇತಿ ನೀಡಲಿರುವ ಶಿಕ್ಷಕರಿಗೆ  ತರಬೇತಿ ನೀಡುವಾಗ ಸಂಪನ್ಮೂಲ ವ್ಯಕ್ತಿಯಾಗಿ ನಾನು ಪಾಲ್ಗೊಂಡಿದ್ದೆ. ಶಾಲೆಯ ಚಾರ್ಜಿನಲ್ಲಿದ್ದ ಶಿಕ್ಷಕರು ಆ ಶಾಲೆಗೆ ನನ್ನನ್ನೇ ಕರೆದಿದ್ದರು. ಶಾಲೆಗೆ ಹೋಗಿದ್ದೆ.

  ಮಲೆನಾಡು ಭಾಗದ ಸಣ್ಣ ಹಳ್ಳಿಯಲ್ಲಿ ಪ್ರಕೃತಿಯ ನಡುವೆ ನೆಲೆನಿಂತ ಸುಂದರ ಶಾಲೆ ಅದು. ಕೆಲವೇ ಮಕ್ಕಳನ್ನು ಹೊಂದಿದ್ದ ಸಣ್ಣ ಕಿರಿಯ ಪ್ರಾಥಮಿಕ ಶಾಲೆಯಾದರೂ, ಪಟ್ಟಣಗಳಿಂದ ದೂರದಲ್ಲಿರುವ ದುರ್ಗಮ ಪ್ರದೇಶದಲ್ಲಿರುವುದರಿಂದ ಆ ಊರಿನ ಮಟ್ಟಿಗೆ ತುಂಬಾ ಮಹತ್ವದ್ದಾಗಿತ್ತು. ಶಾಲೆಯಲ್ಲಿ ಮೊದಲಿದ್ದ ಶಿಕ್ಷಕರು ವರ್ಗಾವಣೆಗೊಂಡಿದ್ದರು. ಪಕ್ಕದೂರಿನಲ್ಲಿದ್ದ ಇಂತಹುದೇ ಇನ್ನೊಂದು ಶಾಲೆಯ ಶಿಕ್ಷಕರನ್ನು ಆ ಶಾಲೆಯ ಆಡಳಿತ ನಿರ್ವಹಣೆಗೆ ನಿಯೋಜಿಸಿ, ಶಾಲೆಗೆ ಅತಿಥಿ ಶಿಕ್ಷಕರ ವ್ಯವಸ್ಥೆಯನ್ನು ಇಲಾಖೆ ಮಾಡಿತ್ತು.

   ಆ ಶಾಲೆಯ ಮಕ್ಕಳ ಸಂಖ್ಯೆ ಎಷ್ಟಿತ್ತೆಂದರೆ ಶಾಲೆಯ ಎಲ್ಲ ಮಕ್ಕಳ ಪೋಷಕರೂ ಎಸ್ಡೀಎಂಸಿ ಸದಸ್ಯರೆನಿಸಿಕೊಂಡಿದ್ದರು‌. ಹಾಗಾಗಿ ನಾನು ಬರಿಯ ಸದಸ್ಯರಿಗೆ ತರಬೇತಿ ನೀಡಲು ಬಂದ ಹಾಗಾಗಿರಲಿಲ್ಲ, ಶಾಲೆಯ ಪೋಷಕರೆಲ್ಲರೊಡನೆ ಸಂವಾದ ಮಾಡಲು ಬಂದ ಹಾಗಾಗಿತ್ತು. ಜೊತೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತರಬೇತಿಯಲ್ಲಿ ಭಾಗಿಯಾಗಿದ್ದರು‌. ನನಗೆ ಅವರೆಲ್ಲರನ್ನೂ ಕಂಡಾಗಲೇ ಬಹಳ ಖುಷಿಯೆನಿಸಿತ್ತು. ಅವರ ಕಣ್ಣುಗಳಲ್ಲಿ ಶಾಲೆ ಕುರಿತಾಗಿ ಕನಸುಗಳೇ ತುಂಬಿದ್ದವು. ಅವರು ಮಾಡಬಹುದಾದ ಸಾಧನೆಗಳು, ಅವರ ಜವಾಬ್ದಾರಿಗಳು, ರಾಷ್ಟ್ರೀಯ ಶಿಕ್ಷಣ ನೀತಿ ತರಬಹುದಾದ ಬದಲಾವಣೆಗಳು ಇವೆಲ್ಲವನ್ನೂ ತಿಳಿಸುವಾಗ ಅವರೆಲ್ಲರ ಕಣ್ಣುಗಳು ಮಿಂಚುತ್ತಿದ್ದವು. ಅವರೆಲ್ಲರೂ ಬಹಳಷ್ಟು ಶೈಕ್ಷಣಿಕ ಕಾಳಜಿಯುಳ್ಳವರಾಗಿದ್ದರು. ಅವರ ಮತ್ತು ಅತಿಥಿ ಶಿಕ್ಷಕರ ಶ್ರಮದಿಂದ ಆ ಶಾಲೆಯ ಶೈಕ್ಷಣಿಕ ಗುಣಮಟ್ಟವೂ ಉತ್ತಮವಿತ್ತು.. ಇದ್ದ ಕೊರತೆಯೊಂದೇ, ಅವರ ಶಾಲೆಗೊಬ್ಬರು ಪರ್ಮನೆಂಟ್ ಮಾಸ್ಟರಿರಲಿಲ್ಲ.

   ಅಲ್ಲಿನ ಪ್ರಕೃತಿ ಸೌಂದರ್ಯ, ಪ್ರಶಾಂತತೆ, ಜನರ ಸೌಜನ್ಯ, ಶೈಕ್ಷಣಿಕ ಕಾಳಜಿ ನೋಡಿದಾಗ ಮಾಡಿದರೆ ಇಂತಹ ಶಾಲೆಯಲ್ಲಿ‌ ಕೆಲಸ ಮಾಡಬೇಕು ಎಂದು ನನಗನಿಸಿದ್ದು ವಿಶೇಷವೇನಲ್ಲ, ನನ್ನ ಜಾಗದಲ್ಲಿ ಯಾರೇ ಇದ್ದಿದ್ದರೂ ಹಾಗೇ ಅನ್ನಿಸುತ್ತಿತ್ತು.

   ಈ ತರಬೇತಿ ಮುಗಿದು ಒಂದೂವರೆ ವರ್ಷ ಕಳೆದಿತ್ತು. ಬೇರೆ ಬೇರೆ ಶಾಲೆಗಳ ಎಸ್ಡೀಎಂಸಿ ಅಧ್ಯಕ್ಷರು ಮತ್ತು‌ ಉಪಾಧ್ಯಕ್ಷರಿಗೆ ತರಬೇತಿ ಕಾರ್ಯಕ್ರಮವೊಂದು ಕೇಂದ್ರ ಶಾಲೆಯಾದ ನಮ್ಮ ಶಾಲೆಯಲ್ಲಿ ನಡೆಯುತ್ತಿತ್ತು. ಟೀ ವಿರಾಮದ ವೇಳೆಗೆ ವ್ಯಕ್ತಿಯೊಬ್ಬರು "ಸರ್, ನೀವು ಆವತ್ತು ನಮ್ಮ ಶಾಲೆಗೆ ಬಂದಿದ್ರಲ್ಲಾ.. " ಎನ್ನುತ್ತಾ ಬಂದರು. ನನಗೆ ಪಕ್ಕನೆ ಗುರುತು ಸಿಗಲಿಲ್ಲ. "ನಾನು ........... ಶಾಲೆಯ ಅಧ್ಯಕ್ಷ," ಎನ್ನುತ್ತಾ ಅವರೇ ಪರಿಚಯಿಸಿಕೊಂಡರು. ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆಂದು‌ ನನಗೂ ಖುಷಿಯಾಯಿತು. ಅವರ ಶಾಲೆಯ ಕುರಿತಾಗಿ ಒಂದಿಷ್ಟು ಮೆಚ್ಚುಗೆಯ ಮಾತನಾಡಿದೆ. "......ಆದ್ರೆ ನಮಗೊಂದು ಪರ್ಮನೆಂಟ್ ಮಾಸ್ಟ್ರಿಲ್ವಲ್ಲಾ ಸರ್" ಅವರು ಬೇಸರ ವ್ಯಕ್ತಪಡಿಸಿದರು. "ಸರ್, ನಿಮ್ಮ ಪರಿಚಯದವರ್ಯಾರಾದರೂ ದೂರದೂರಿಂದ ಬರುವವರಿದ್ದರೆ ಅವರಿಗೆ ನಮ್ಮ ಶಾಲೆಯ ಬಗ್ಗೆ ಹೇಳ್ತೀರಾ?" ಅವರ ದನಿಯಲ್ಲಿ ವಿನಮ್ರತೆಯಿತ್ತು, ಅದಕ್ಕಿಂತ ಮಿಗಿಲಾಗಿ ತನ್ನ ಶಾಲೆಯ ಕುರಿತಾಗಿ ಕನಸು ತುಂಬಿಕೊಂಡಿತ್ತು.‌ "ಖಂಡಿತಾ ಹೇಳುತ್ತೇನೆ.." ಎಂಬ ಆಶ್ವಾಸನೆಯಿತ್ತೆ. ಸ್ವಲ್ಪ ಹೊತ್ತು ಬೇರೆಬೇರೆ ವಿಚಾರಗಳನ್ನು ನಾವು ಮಾತಾಡಿದೆವಾದರೂ ನಡುನಡುವೆ ಮೂರ್ನಾಲ್ಕೂ ಬಾರಿಯಾದರೂ ಅವರು ಇದೇ ವಿನಂತಿ ಮಾಡಿದ್ದರು. " ನಿಮ್ಮ ಫ್ರೆಂಡ್ಸಿಗೆಲ್ಲ ನಮ್ಮ ಶಾಲೆಯ ಬಗ್ಗೆ ಹೇಳಿ ಸರ್...." ಎಂದು.

  ಇವರೊಡನೆ ಮಾತಾಡಿ ಸ್ವಲ್ಪ ಆಚೆ ಹೋಗುವಷ್ಟರಲ್ಲಿ ಮಹಿಳೆಯೊಬ್ಬರು ನನ್ನ ಗುರುತು ಹಿಡಿದು ಮಾತನಾಡಿಸಿದ್ದರು. ಅವರು ಆ ಶಾಲೆಯ‌ ಎಸ್ಡೀಎಂಸಿ ಉಪಾಧ್ಯಕ್ಷೆ. ಅವರೆದುರು ಅವರ‌ ಶಾಲೆಯ ಕುರಿತು ಒಂದೆರಡು ಒಳ್ಳೆಯ ಮಾತಾಡುವಷ್ಟರಲ್ಲೇ‌ ಅವರೊಂದು ಮನವಿ ಮುಂದಿಟ್ಟಿದ್ದರು. "ಸರ್, ನಮ್ಮ ಶಾಲೆ ಇಲ್ಲಿಂದ ತುಂಬ ದೂರವೇನಲ್ಲವಲ್ಲ(ದೂರವೇನಲ್ಲ ಅನಿಸಿದ್ದು ಅವರಿಗಷ್ಟೆ), ನಮ್ಮ ಶಾಲೆಗೆ ಬರ್ತೀರಾ?" ಅವರ ಧ್ವನಿಯಲ್ಲಿದ್ದುದು ಬರಿಯ ಮುಗ್ಧತೆಯಲ್ಲ, ಮತ್ತದೇ ತಮ್ಮ ಶಾಲೆಯ ಕುರಿತಾದ ಕನಸು. ನಾನು ನಗುತ್ತಾ ಅವರ ಮಾತುಗಳಿಗೆ ಉತ್ತರಿಸಿದ್ದೆನಾದರೂ ಅಂತರಂಗದಲ್ಲಿ ಮೂಕನಾಗಿದ್ದೆ.

   ನನಗೆ ಅನುಭವಕ್ಕೆ ಬಂದದ್ದು ಇದೊಂದು ಶಾಲೆಯ ವಿಚಾರ. ಕುಗ್ರಾಮ ಎನಿಸಿಕೊಂಡಿರುವ ಊರುಗಳಲ್ಲಿ ಇಂತಹ ಎಷ್ಟು ಶಾಲೆಗಳಿವೆಯೋ.. ತಮ್ಮ ಶಾಲೆಗೆ ಬರಲಿರುವ ಶಿಕ್ಷಕನನ್ನು ತಮ್ಮೂರ ಭಾಗ್ಯವಿಧಾತ ಎಂದು ಪರಿಗಣಿಸಿ ಕಾಯುತ್ತಿರುವ ಇಂತಹ ಎಷ್ಟೋ ಜನರಿರಬಹುದು ಎಂದು ನನಗನಿಸಿತು. ಎಲ್ಲಾ ರೀತಿಯ ಅನುಕೂಲತೆಗಳಿರುವ ನಗರ- ಪಟ್ಟಣಗಳ ಶಾಲೆಯನ್ನು ಬಯಸುತ್ತಾ 'ಶಿಕ್ಷಕರಿಗೆ ರೆಸ್ಪೆಕ್ಟೇ ಇಲ್ಲ' ಎಂದು ಗೊಣಗುವ ನಾವುಗಳು ಇಂತಹ ಶಾಲೆಗಳ ಕುರಿತಾಗಿಯೂ ಒಂದು ಚೂರು ಯೋಚಿಸಿದರೆ ಒಳಿತಲ್ಲವೇ? 

   - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment