ಛಲದಂಕಮಲ್ಲೆ ಕಾವ್ಯಶ್ರೀ – ಶಿಕ್ಷಕನ ಡೈರಿಯಿಂದ 12

ಶಿಕ್ಷಕನ ಡೈರಿಯಿಂದ

ಛಲದಂಕಮಲ್ಲೆ ಕಾವ್ಯಶ್ರೀ

      ಕಳೆದ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶದ ಹಾಕಿ ಹುಡುಗಿಯರು ಕಣ್ಣೀರಿಟ್ಟಾಗ ನನಗೆ ನನ್ನ ವಿದ್ಯಾರ್ಥಿನಿ ಕಾವ್ಯಶ್ರೀಯ ನೆನಪಾಗಿತ್ತು.

     ವಿದ್ಯಾರ್ಥಿಯಾಗಿದ್ದಾಗ ಕ್ರೀಡೆಯಲ್ಲಿ ವಿಪರೀತ ಆಸಕ್ತಿ ಇದ್ದರೂ, ನನ್ನ ಸಣಕಲು ದೇಹದಿಂದಾಗಿ ನಾನು ಪೀಟಿ ಮಾಸ್ಟರ ಹಿಂದೆ ಸ್ಕೋರ್ ಕಾರ್ಡ್ ಹಿಡಿದು ತಿರುಗಾಡಲಿಕ್ಕಷ್ಟೇ  ಸೀಮಿತವಾಗಿದ್ದೆ. ಆ ದಿನಗಳಲ್ಲಿ ಯಾವುದೇ ಕ್ರೀಡಾಕೌಶಲಗಳನ್ನು ಗಳಿಸಲಾಗದಿದ್ದರೂ ಆಟೋಟಗಳ ಕುರಿತಾದ ಜ್ಞಾನವನ್ನಂತೂ ಸಂಪಾದಿಸಿದ್ದೆ. ಕ್ರೀಡೆಗಳಲ್ಲಿ ಭಾಗವಹಿಸಬೇಕು, ಗೆದ್ದು ಕುಣಿದಾಡಬೇಕು ಎಂಬ ನನ್ನ ಬಾಲ್ಯದ ಹುಚ್ಚು ಕನಸು ಈಡೇರಿದ್ದು ನಾನು ಶಿಕ್ಷಕನಾದೆ ಮೇಲೆಯೇ.

    ದೈಹಿಕ ಶಿಕ್ಷಕರಿಲ್ಲದ ನಮ್ಮ ಶಾಲೆಯಲ್ಲಿ ಕ್ರೀಡಾ ತರಬೇತಿ ನೀಡಲು ನನಗೊಂದು ಅವಕಾಶ ದೊರಕಿತ್ತು. ಹಿಂದೆ ಇದ್ದ ಶಿಕ್ಷಕರು ತ್ರೋಬಾಲ್ ತಂಡವನ್ನು ಕಟ್ಟಿದ್ದುದರಿಂದ, ನಾನೂ ಮಕ್ಕಳಿಗೆ ಥ್ರೋಬಾಲ್ ತರಬೇತಿ ನೀಡಲು ಪ್ರಾರಂಭಿಸಿದೆ. ಆರಂಭದ ದಿನಗಳಲ್ಲಂತೂ ತರಬೇತಿ ನೀಡುವ ಬಗ್ಗೆ ವಿಪರೀತ ಕ್ರೇಜ್ ನನಗೆ. ಪಂದ್ಯಾಟಕ್ಕೆ ಹೋಗಿ ಮಕ್ಕಳು ಒಂದೊಂದು ಪಂದ್ಯ ಗೆದ್ದಾಗಲೂ ರೋಮಾಂಚನ. ಬೆಳಿಗ್ಗೆ ಶಾಲಾರಂಭದ ಮೊದಲು, ಸಂಜೆ ಶಾಲೆ ಬಿಟ್ಟ ನಂತರ ಪ್ರಾಕ್ಟೀಸ್ ಮಾಡಿ ಪ್ರತೀ ವರ್ಷವೂ ಬಲಿಷ್ಠ ತಂಡಗಳನ್ನು ಕಟ್ಟುತ್ತಿದ್ದೆ. ಮೂರು-ನಾಲ್ಕು ಕ್ಲಸ್ಟರ್ಗಳನ್ನೊಳಗೊಂಡ ವಲಯ ಮಟ್ಟದ ಪಂದ್ಯಗಳಲ್ಲಿ ನಮ್ಮ ಹುಡುಗಿಯರ ತಂಡ ಪ್ರತಿ ವರ್ಷವೂ ಪ್ರಥಮಸ್ಥಾನಿಯಾಗಿರುತ್ತಿತ್ತು, ಹುಡುಗರ ತಂಡವೂ ಹೆಚ್ಚಿನ ವರ್ಷಗಳಲ್ಲಿ ಪ್ರಥಮ/ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಪ್ರವೇಶಿಸುತ್ತಿತ್ತು. ಆದರೆ ತಾಲೂಕು ಮಟ್ಟದ ವಿಜಯ ಮಾತ್ರ ನಮಗೆ ಗಗನಕುಸುಮವೇ. 

      ಪ್ರತೀ ವರ್ಷವೂ ನಮ್ಮ ತಂಡಗಳು ತಾಲೂಕು ಮಟ್ಟದಲ್ಲಿ ಕೂದಲೆಳೆಯ ಅಂತರದಿಂದ ಸೋಲುತ್ತಿದ್ದವು. ಆ ಕೂದಲೆಳೆಯ ಅಂತರ  ನನ್ನೊಳಗೆ ಮುಂದಿನ ವರ್ಷವಾದರೂ ಗೆಲ್ಲಲೇಬೇಕೆಂಬ ಹಠ ಹುಟ್ಟಿಸುತ್ತಿತ್ತು. ಈ ನಡುವೆ ಹುಡುಗರ ತಂಡವೊಂದು ತಾಲೂಕಿನಲ್ಲಿ ದ್ವಿತೀಯ ಸ್ಥಾನಿಯಾದರೂ, ಜಿಲ್ಲಾ ಮಟ್ಟಕ್ಕೆ ಹೋಗಬೇಕೆನ್ನುವ ಕನಸಿಗೆ ಅದು ಸಾಕಾಗಿರಲಿಲ್ಲ.

    ಅದೊಂದು ವರ್ಷದ ಹುಡುಗಿಯರ ತಂಡ  'ಈ ವರ್ಷವಂತೂ ಖಂಡಿತ ಗೆದ್ದೇ ಗೆಲ್ಲುತ್ತೇವೆ' ಎಂಬ ಭರವಸೆಯನ್ನು ನನ್ನಲ್ಲಿ ಮೂಡಿಸಿತ್ತು.  ಅದು ನಾನು ಕಟ್ಟಿದ ತಂಡಗಳಲ್ಲೆಲ್ಲಾ ಹೆಚ್ಚು ಬಲಿಷ್ಠವಾದದ್ದು ಎಂದೇ ನಾನು ಭಾವಿಸಿದ್ದೆ. ತುಂಬು ಆತ್ಮವಿಶ್ವಾಸದಿಂದ ತಾಲೂಕು ಮಟ್ಟದ ಪಂದ್ಯಕ್ಕೆ ಹೋಗಿದ್ದ ನಮ್ಮ ಹುಡುಗಿಯರಿಗೆ ಬಲಿಷ್ಟ ತಂಡವೇ ಎದುರಾಗಿತ್ತು. ಹದಿನೈದು ಅಂಕಗಳ ಸೆಟ್ನಲ್ಲಿ ನಮ್ಮ ತಂಡ 14-10 ರಲ್ಲಿದ್ದಾಗ ಸರ್ವೀಸ್ ಮಾಡುವ ಅವಕಾಶ ತಂಡದಲ್ಲಿದ್ದ  ಏಕೈಕ ಆರನೇ ತರಗತಿಯ ಸದಸ್ಯೆ(ಉಳಿದವರೆಲ್ಲ ಏಳನೆಯ ತರಗತಿಯವರು) ಕಾವ್ಯಶ್ರೀಯ ಕೈಗೆ ಬಂದಿತು. ಅದೇನಾಯಿತೋ ಏನೋ ಕಾವ್ಯಶ್ರೀಯ ಕೈಯಿಂದ ಜಾರಿದ ಚೆಂಡು ಕೋರ್ಟಿನಿಂದ ಎಷ್ಟೋ ದೂರಕ್ಕೆ ಚಿಮ್ಮಿತ್ತು. ಒಮ್ಮೆ ಅವಕಾಶ ಪಡೆದ ಎದುರಾಳಿ ತಂಡ ನಮ್ಮನ್ನು ತಲೆಯೆತ್ತಲು ಬಿಡಲಿಲ್ಲ. ಎರಡನೇ ಸೆಟ್ಟೂ ರೋಚಕತೆಯೊಂದಿಗೆ ಎದುರಾಳಿ ತಂಡಕ್ಕಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಹುಡುಗಿಯರು ಕಣ್ಣೀರು ಸುರಿಸುತ್ತಾ ಮರಳಿದರು.

      ಸೋತ ಮೇಲೆ ಮಕ್ಕಳು‌ ಅಳುವುದೂ, ನಾನು ಸಾಂತ್ವನ ಹೇಳುವುದೂ ನಮ್ಮ ಪ್ರತೀ ವರ್ಷದ ಕತೆಯೇ. ಆದರೆ ಈ ವರ್ಷದ ಕಾವ್ಯಶ್ರೀ ತನ್ನಿಂದಲೇ ಸೋತದ್ದೆಂದು ಹೆಚ್ಚು ಅಳುತ್ತಿದ್ದಳು. "ಮುಂದಿನ ವರ್ಷ ಗೆಲ್ಲೋಣ" ಎಂಬ ನನ್ನ ಸಾಂತ್ವನಕ್ಕೆ ಪ್ರತಿಯಾಗಿ ಆಕೆ ತನ್ನ ಗೆಳತಿಯಲ್ಲಿ ಹೇಳುತ್ತಿದ್ದಳು, "ಮುಂದಿನ ವರ್ಷ ಹೇಗೂ ಗೆಲ್ಲಲಾಗುವುದಿಲ್ಲ,  ಈ ವರ್ಷವೇ ಗೆಲ್ಲಬೇಕಿತ್ತು."  ಮುಂದಿನ ವರ್ಷ ಚೆನ್ನಾಗಿ ಆಡಬಲ್ಲವಳೆಂದರೆ ಇವಳೊಬ್ಬಳೇ, ಇಂತಹ ತಂಡ ಕಟ್ಟಲಾಗದು ಎಂಬ ಸತ್ಯ ನನಗೂ ತಿಳಿದಿತ್ತು.

    ಮುಂದಿನ ವರ್ಷ ನಾನು ಫೋಕಸ್ ಮಾಡಿದ್ದು ಹುಡುಗರ ತಂಡದ ಮೇಲೆ. ಆ ವರ್ಷ ಬಹಳಷ್ಟು ಒಳ್ಳೆಯ ಆಟಗಾರರು ತಂಡದಲ್ಲಿದ್ದರು. ಹುಡುಗಿಯರ ತಂಡದಲ್ಲಿ‌ ಕಾವ್ಯಶ್ರೀಯ ಜೊತೆಗೆ ಇನ್ನೊಬ್ಬಳು ಹುಡುಗಿಯಷ್ಟೇ ಸುಮಾರಾಗಿ ಆಡುತ್ತಿದ್ದಳು. ಉಳಿದ ಏಳು ಮಂದಿ ಕೋರ್ಟ್ ತುಂಬಲಷ್ಟೇ ಎಂಬಂತಿದ್ದರು. ಅವರ ಮೇಲೇನೂ ನಿರೀಕ್ಷೆಯಿರಲಿಲ್ಲ.  

       ಯಥಾಪ್ರಕಾರ ನಮ್ಮೆರಡೂ ತಂಡಗಳೂ ವಲಯಮಟ್ಟದಲ್ಲಿ ಗೆದ್ದು ತಾಲೂಕಿಗೆ ಪ್ರವೇಶಿಸಿದ್ದವು. ತಾಲೂಕು ಮಟ್ಟದ ಪಂದ್ಯಾಟಕ್ಕೆ ಮುನ್ನಾದಿನ ಸಂಜೆ ಒಂದು ಸಣ್ಣ ಅವಘಡ  ನಡೆಯಿತು. ಮಕ್ಕಳನ್ನು  ಎರಡು ತಂಡಗಳನ್ನಾಗಿಸಿ‌‌ ಅಭ್ಯಾಸ ಪಂದ್ಯವಾಡಿಸುತ್ತಿದ್ದಾಗ ಹುಡುಗನೊಬ್ಬ ವೇಗವಾಗಿ ಎಸೆದ ಸರ್ವೀಸ್ ಬಾಲ್, ಅವನ ಕೈ ಜಾರಿ ಅವನೆದುರಿಗೆ ನಿಂತಿದ್ದ ಅವನದೇ ತಂಡದಲ್ಲಿದ್ದ ಕಾವ್ಯಶ್ರೀಯ ತಲೆಯ ಹಿಂಭಾಗಕ್ಕೆ ಬಡಿದು ಕುಸಿದು ಬಿದ್ದಿದ್ದಳು. ಸ್ವಲ್ಪ ಹೊತ್ತು ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಆಕೆ ಬೇರೆಯವರ ಸಹಾಯವನ್ನು ನಿರಾಕರಿಸಿ "ಏನಾಗಿಲ್ಲ ತಲೆ ನೋಯುತ್ತಿದೆ ಅಷ್ಟೆ" ಎಂದು ಎದ್ದು ಬಂದಳು. ಸ್ವಲ್ಪ ಹೊತ್ತಿನ ವಿರಾಮದ ನಂತರ ಸಾವರಿಸಿಕೊಂಡು ಆರಾಮಾಗಿದ್ದೇನೆ ಎಂದು ಮನೆಗೆ ಹೊರಟಳು.

  ಮರುದಿನ ಪಂದ್ಯಾಟದಲ್ಲಿ ನಿರೀಕ್ಷೆಯಂತೆ ಹುಡುಗರ ತಂಡ ವಿಜಯಯಾತ್ರೆ ನಡೆಸಿತ್ತು. ಹುಡುಗಿಯರ ತಂಡವೂ ಗೆಲ್ಲುತ್ತಿರುವುದು ನನಗೆ ವಿಚಿತ್ರವಾಗಿ ಕಾಣಿಸಿತ್ತು. ತಂಡದ ಇಡೀ ಕೋರ್ಟನ್ನು ಕಾವ್ಯಶ್ರೀ ತಾನೇ ಆವರಿಸಿಕೊಂಡಿದ್ದಳು. ಹಿಂದಿನ ವರ್ಷ ತಮ್ಮನ್ನು ಸೋಲಿಸಿದ್ದ ತಂಡವೇ ಎದುರಾಳಿಯಾಗಿ ಸಿಕ್ಕಾಗ, ಆಗ ಆ ತಂಡದಲ್ಲಿದ್ದ ನಾಲ್ಕು ಹುಡುಗಿಯರೂ ಈಗಲೂ ತಂಡದಲ್ಲಿದ್ದಾರೆಂದು ತಿಳಿದಾಗ ಅವಳ ಉತ್ಸಾಹ ದ್ವಿಗುಣಗೊಂಡಿತ್ತು. ನಿರಾಯಾಸವಾಗಿ‌ ಆ ತಂಡವನ್ನೂ ಸೋಲಿಸಿ ನಮ್ಮ ಹುಡುಗಿಯರು ಫೈನಲಿಗೇರಿದಾಗ ನಾನು ಮೂಕನಾಗಿದ್ದೆ. ಒಂದೆಡೆ ಹುಡುಗರ ತಂಡ ಫೈನಲ್ಲಿನಲ್ಲಿ ಗೆದ್ದು ಕುಣಿದಾಡಿತ್ತು. ಇನ್ನೊಂದು ಕಡೆ ಫೈನಲ್ ಪಂದ್ಯವಾಡುತ್ತಿದ್ದ ಕಾವ್ಯಶ್ರೀ ತೀರ್ಪುಗಾರರು ನೀಡುತ್ತಿದ್ದ ಲಿಬರಲ್ ತೀರ್ಮಾನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ, ತನ್ನ ಅದ್ಭುತ ಆಟವನ್ನು ಮುಂದುವರೆಸಿದ್ದಳು. ನೂರಕ್ಕೆ ನೂರು ನಿಯಮಬದ್ಧವಾಗಿ ಆಡುತ್ತಿದ್ದ ಕಾವ್ಯಶ್ರೀಯ ತಂಡ ಫೈನಲ್ ಪಂದ್ಯದಲ್ಲಿ ಧೀರೋದಾತ್ತ ಸೋಲನ್ನು ಕಂಡಿತ್ತು. ಕಾವ್ಯಶ್ರೀ ತನ್ನ ತಂಡದೊಂದಿಗೆ ಮತ್ತೆ ಕಣ್ಣೀರಿಟ್ಟಿದ್ದಳು; ನನ್ನ ಹೃದಯ ತುಂಬಿಬಂದಿತ್ತು. ಅಂಪೈರ್ ತೀರ್ಮಾನಗಳ ಬಗ್ಗೆ ನನಗೂ ಅಸಮಾಧಾನವಿತ್ತು, ನಿಜ. ಆದರೆ ಕ್ರೀಡೆಯಲ್ಲಿ ಇದು ಸಹಜವೆಂಬುದನ್ನು ಮಕ್ಕಳಿಗೆ ತಿಳಿ ಹೇಳಿದೆ. ಸಾಮಾನ್ಯ ತಂಡವೊಂದು ದ್ವಿತೀಯ ಸ್ಥಾನ‌ ಪಡೆದಿರುವುದೂ ದೊಡ್ಡ ಸಾಧನೆಯೇ ಎನ್ನುವುದು ಅವರಿಗೂ ಅರ್ಥವಾಯಿತು. ಆ ದಿನ ನಮ್ಮ ಸಂಭ್ರಮಕ್ಕೆ ಮಿತಿಯಿರಲಿಲ್ಲ.

       ವಿಷಯ ಇಷ್ಟೇ ಆಗಿರಲಿಲ್ಲ. ಪಂದ್ಯಾಟ ಮುಗಿದು ಮೂರ್ನಾಲ್ಕು ದಿನಗಳ ನಂತರ ಕಾವ್ಯಶ್ರೀಯ ಅಣ್ಣ  ಸಿಕ್ಕಿದ್ದ. ಪಂದ್ಯ ಗೆದ್ದ ಕುರಿತಾಗಿ ಮಾತನಾಡುತ್ತಾ ಪಂದ್ಯದ ಮುನ್ನಾದಿನದ ತನ್ನ ತಂಗಿಯ ಕತೆ ಹೇಳಿದ್ದ. ಶಾಲೆಯಲ್ಲಿ ತಲೆಗೆ ಚೆಂಡು ಅಪ್ಪಳಿಸಿದ್ದ ನೋವನ್ನು ತೋರಿಸಿಕೊಳ್ಳದ ಕಾವ್ಯಶ್ರೀ ಮನೆಗೆ ಹೋಗಿ ತಲೆನೋಯುತ್ತದೆಂದು ಮಲಗಿದ್ದಳಂತೆ. ಸಂಜೆಯೆದ್ದು ತಡರಾತ್ರಿಯವರೆಗೆ ನಿದ್ದೆ ಮಾಡಿದ್ದಳಂತೆ. ಮತ್ತೆ ಎದ್ದು ಊಟ ಮಾಡಿ ಬೆಳಗಿನವರೆಗೆ ನಿದ್ದೆ ಮಾಡಿದ ಮೇಲೆ ತಲೆನೋವು ಕಡಿಮೆಯಾಗಿತ್ತಂತೆ. ಆ ನಂತರ ನೇರವಾಗಿ ಆಡಲು ಹೊರಟಿದ್ದಳಂತೆ. 

     ನಾನು ಮತ್ತೆ ಮೂಕನಾಗಿದ್ದೆ. ಕಾವ್ಯಶ್ರೀಯ ಗೆಲುವಿನ ಹಸಿವು, ಆ ಸಂದರ್ಭದಲ್ಲೂ ಅವಳಿಗೆ ಆಡಲು‌ ಅಡ್ಡಿಮಾಡದ ಅವಳ ಮನೆಯವರ ಮನಸ್ಥೈರ್ಯ ಎರಡೂ ವಿಶೇಷವಾಗಿ ಕಾಣಿಸಿದವು. ಹೌದು., ಪ್ರತಿಭಾವಂತ ಹುಡುಗಿಯಾದ ಕಾವ್ಯಶ್ರೀಯ ಛಲ ನಾನು ನನ್ನ ವೃತ್ತಿಜೀವನದಲ್ಲಿ ಗಮನಿಸಿದ ಅಪರೂಪದ ಸಂಗತಿಗಳಲ್ಲಿ ಒಂದು. ಈ ಛಲ ಅವಳನ್ನು ಜೀವನದಲ್ಲಿ ಎಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬುದರ ಬಗ್ಗೆ ನಾನು ಕುತೂಹಲಿಯಾಗಿದ್ದೇನೆ‌.

     - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment