ಆ ತರಗತಿಯ ಮಕ್ಕಳೆಲ್ಲರೂ ಗೋಳೋ ಎಂದು ಅಳುತ್ತಿದ್ದರು – ಶಿಕ್ಷಕನ ಡೈರಿಯಿಂದ 14

ಶಿಕ್ಷಕನ ಡೈರಿಯಿಂದ

ಆ ತರಗತಿಯ ಮಕ್ಕಳೆಲ್ಲರೂ ಗೋಳೋ ಎಂದು ಅಳುತ್ತಿದ್ದರು

     "ಅಲ್ಕಾಣಿ ಸರ್, ಮೂರ್ನೇ ಕ್ಲಾಸ್ ಮಕ್ಕಳೆಲ್ಲಾ ಜೋರ್ ಮರ್ಕತಿದ್ದೊ ಕಾಣಿ" ತಾನು ಜೀವನದಲ್ಲೇ ನೋಡಿರದಿದ್ದ ಬಹುದೊಡ್ಡ ವಿಚಿತ್ರವೊಂದನ್ನು ಕಂಡೆ ಎಂಬ ಮುಖಭಾವವನ್ನು ಹೊತ್ತುಕೊಂಡು ಹೇಳಿದ್ದರು ನಮ್ಮ ಶಾಲೆಯ ಆಯಾ. ಆ ದಿನ ಶಿಕ್ಷಕಿಯೊಬ್ಬರು ರಜೆ ಮಾಡಿದ ಕಾರಣದಿಂದ ಮೂರನೇ ಕ್ಲಾಸು‌ ಖಾಲಿ ಉಳಿದಿತ್ತು. ಎಲ್.ಕೆ.ಜಿ.ಯಲ್ಲಿದ್ದ ಆಯಾ, ಯಾವುದೋ ಕಾರಣಕ್ಕೆ ಮೂರನೇ ಕ್ಲಾಸಿಗೆ ಬಂದವರು ಮಕ್ಕಳನ್ನು ನೋಡಿ ದಿಗ್ಭ್ರಮೆಗೊಂಡು ಹತ್ತಿರದ ತರಗತಿ ಕೊಠಡಿಯಿಂದ ಹೊರಬರುತ್ತಿದ್ದ ನನ್ನಲ್ಲಿ ಹೇಳಿದ್ದರು.(ಸರಕಾರಿ ಶಾಲೆಯಾದರೂ ಪೂರ್ವ ಪ್ರಾಥಮಿಕ ತರಗತಿಗಳಿದ್ದುದರಿಂದ ಶಾಲೆಯಲ್ಲಿ ಆಯಾ ಇದ್ದಾರೆ.)
    ಆಯಾ ಹೇಳಿದ ಮಾತುಗಳನ್ನು ಕೇಳಿದ ನಾನೂ ಆ ಪರಮಾಶ್ಚರ್ಯವನ್ನು ನೋಡಲು ಮೂರನೇ ತರಗತಿಗೆ ಓಡಿದೆ. ನಿಜ, ಹೆಚ್ಚಿನ ಮಕ್ಕಳು ಗೋಳೋ ಎನ್ನುತ್ತ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಕೆಲವೇ ಕೆಲವು ಮಕ್ಕಳು ಮಾತ್ರ ಅಳುತ್ತಿರಲಿಲ್ಲವಾದರೂ ಅವರ ಮುಖಗಳು ಬಾಡಿದ್ದವು. ಬಹುದೊಡ್ಡ ನೋವೊಂದು ಅವರ ಕಣ್ಣುಗಳಲ್ಲೂ ಕಾಣಿಸುತ್ತಿತ್ತು.
     ನಾನು ಆ ಶಾಲೆಗೆ ಸೇರ್ಪಡೆಗೊಂಡು ಹೆಚ್ಚು ಸಮಯವಾಗಿರಲಿಲ್ಲ. ಮೇಲಾಗಿ  ಮೂರನೇ ತರಗತಿಗೆ ಪಾಠಕ್ಕಿಲ್ಲದಿರುವುದರಿಂದ ಆ ತರಗತಿಯ ಯಾವ ಮಕ್ಕಳ ಪರಿಚಯವೂ ಇರಲಿಲ್ಲ. ತರಗತಿಗೆ‌‌ ನನ್ನ ಮೊದಲ ಪ್ರವೇಶವಾಗಿತ್ತು. ಗೋಳೋ ಎನ್ನುತ್ತಿರುವ ಮಕ್ಕಳನ್ನು ಕಂಡು ನನಗೊಂತರಾ ವಿಚಿತ್ರ ಲೋಕಕ್ಕೆ  ಬಂದ ಹಾಗಾಗಿತ್ತು. ಯಾಕೆ ಅಳುತ್ತಿರುವುದೆಂದು ಕೇಳಿದರೆ ಮುಖ ಮುಖ ನೋಡಿಕೊಳ್ಳುತ್ತಿದ್ದ ಮಕ್ಕಳಿಂದ ಸ್ಪಷ್ಟ ಉತ್ತರವಿಲ್ಲ.
     ಸುಮಾರು ಮೂವತ್ತಕ್ಕಿಂತ ಹೆಚ್ಚು ಮಕ್ಕಳಿದ್ದ ತರಗತಿಯಿದು. ಎಲ್ಲಾ ಮಕ್ಕಳೂ ಅಷ್ಟು ಜೋರಾಗಿ ಅಳಬೇಕೆಂದರೆ ಏನಾದರೂ ಕಾರಣವಿರಬೇಡವೇ? ಮೊದಲು‌   ಅತ್ತವರಾರು ಕೇಳಿದಾಗ ಕೆಲವು ಮಕ್ಕಳು ರೋಹಿತ್ ಎನ್ನುವ ಹುಡುಗನೊಬ್ಬನ ಕೈ ತೋರಿಸಿದ್ದರು. ಅವನನ್ನು ವಿಚಾರಿಸಿದೆ. " ಸರ್, ಇವತ್ ಬೆಳಿಗ್ಗೆ ಯಶಸ್ ನ ಅಜ್ಜಿ ಸತ್ಹೋಗಿದಾರೆ ಸರ್," ಎಂದ. ಯಶಸ್ ಅಷ್ಟೇನೂ ಜೋರಾಗಿ ಅಳುತ್ತಿರಲಿಲ್ಲ, ಆದರೆ ಹೌದಾ ಕೇಳಿದಾಗ ಹೌದು ಎಂದೇ ಉತ್ತರಿಸಿದ. ಆದರೂ ಇವನೇಕೆ ಶಾಲೆಗೆ ಬಂದದ್ದೆಂದು ವಿಚಾರಿಸಿದಾಗ, ತೀರಿದವರು ಯಶಸ್ನ ಸ್ವಂತ ಅಜ್ಜಿಯಲ್ಲವೆಂದೂ, ದೂರದ ಸಂಬಂಧಿಯೆಂದೂ ತಿಳಿಯಿತು. "ಅವನ ಅಜ್ಜಿ ತೀರಿದ್ದಕ್ಕೆ ನೀನ್ಯಾಕೆ ಅಳುವುದು?" ಎಂದು ರೋಹಿತ್ನಲ್ಲಿ ಪ್ರಶ್ನಿಸಿದೆ. "ಅದಕ್ಕಲ್ಲ ಸರ್, ಅವನ ಅಜ್ಜಿ ಸತ್ತದ್ರ ಬಗ್ಗೆ ಮಾತಾಡ್ತಿದ್ದೆ, ಅದ್ಕೆ ಇಂವ ಎಲ್ಲರ ಅಜ್ಜಿಯೂ ಸತ್ ಹೋಗ್ತಾರೆ, ನಿನ್ನಜ್ಜಿಯೂ ಸಾಯ್ತಾರೆ ಅಂದ" ಎನ್ನುತ್ತಾ ಪಕ್ಕದಲ್ಲಿದ್ದ ಶ್ರವಣನೆಡೆ ಬೆರಳು ತೋರಿಸಿದ್ದ. ಅವನನ್ನು ಮಾತನಾಡಿಸಿದರೆ "ನಾನು ಹಾಗೆ ಹೇಳಿದ್ದಕ್ಕೆ ಇವರೆಲ್ಲಾ ನಂಗೆ ಬೈಯುತ್ತಾರೆ ಸರ್" ಎಂದು ಬಿಕ್ಕಿದ. ಎಲ್ಲರನ್ನೂ ವಿಚಾರಿಸುತ್ತಾ ಹೋದೆ. ಕೆಲವರು‌ ಬದುಕಿರುವ ಅಜ್ಜಿ ಮುಂದೆ ಸಾಯುವರೆಂದು‌ ಅಳುತ್ತಿದ್ದರು. ಕೆಲವರು ಸತ್ತವರನ್ನು ನೆನಪಿಸಿಕೊಂಡು ಅಳುತ್ತಿದ್ದರು‌. ಒಬ್ಬಳು ಹುಡುಗಿ‌‌‌‌ "ನನ್ನ ಅಜ್ಜಿ ಸತ್ತು ಹೋಗಿ ನಾಲ್ಕು ವರ್ಷವಾಗಿದೆ" ಎಂದು ಗೋಳಾಡಿದರೆ ಇನ್ನೊಬ್ಬಳು, "ಸರ್, ನನ್ನ ಒಬ್ಬರು ಅಜ್ಜಿ ನಾನು ಹುಟ್ಟುವುದಕ್ಕೆ ಒಂದು ವರ್ಷ ಮೊದಲೇ ಸತ್ತು ಹೋಗಿದ್ರಂತೆ, ಇನ್ನೊಂದು ಅಜ್ಜಿ ನಾನು ಸಣ್ಣ ಮಗುವಾಗಿದ್ದಾಲೇ ಸತ್ತು ಹೋದರಂತೆ" ಎಂದು ಬಿಕ್ಕಿದಳು.
    ನನಗೆ ಅಳುವುದೋ ನಗುವುದೋ ತಿಳಿಯಲಿಲ್ಲ. ಮಕ್ಕಳು‌ ಅಳುವಿನ ಲೋಕದಿಂದ ತಕ್ಷಣ ಹೊರಬರುವ ಸ್ಥಿತಿಯಲ್ಲೇ‌ ಇರಲಿಲ್ಲ. ಕಾರಣವಿಲ್ಲದ ಅಳುವಿಗೂ ಸಾಂತ್ವನ ಹೇಳಬೇಕಾಗಿ ಬಂತು. ಮಕ್ಕಳನ್ನು ಸಮಾಧಾನಗೊಳಿಸಿ, ಕೊನೆಯಲ್ಲೊ‌ಂದಿಷ್ಟು ನಗಿಸುವ ಪ್ರಯತ್ನ ಮಾಡಿದೆ. ಆ ದಿನ ಮಕ್ಕಳು ಹೆಚ್ಚು ನಗದಿದ್ದರೂ, ಈಗ ಆ ಘಟನೆ ನೆನಪಿಸಿದಾಗೆಲ್ಲ  ಜೋರಾಗಿ ನಗುತ್ತಾರೆ.

     ನಗು, ಅಳು ಮುಂತಾದ ಭಾವಗಳೆಲ್ಲಾ ಸಾಂಕ್ರಾಮಿಕ ನಿಜ, ಆದರೆ ಇಷ್ಟೊಂದು ಸಾಂಕ್ರಾಮಿಕವೇ ಎಂಬ ಅಚ್ಚರಿ ಆ ದಿನ ಕಾಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜನಸಮೂಹ ಭಾವತೀವ್ರತೆಗೆ ಒಳಗಾದ ಉದಾಹರಣೆಗಳನ್ನು ಗಮನಿಸುವಾಗ ಇದು ಅತ್ಯಂತ ಸಹಜ ಎನಿಸುತ್ತಿದೆ.

         ನಿಜ, ಸಮಾಜ ಇರುವುದು ಆ ತರಗತಿಯ ಮಕ್ಕಳ ಹಾಗೆಯೇ. ಸಮೂಹ ಸನ್ನಿಯಂತೆ ಭಾವತೀವ್ರತೆಗೆ ಒಳಗಾಗುವುದು ನಮ್ಮ‌ ಸಮಾಜದ ಬಹುದೊಡ್ಡ ದೌರ್ಬಲ್ಯ. ಈ ದೌರ್ಬಲ್ಯವನ್ನು ನಮ್ಮ ಮಾಧ್ಯಮಗಳು ಮತ್ತು‌ ಚತುರ ರಾಜಕಾರಣಿಗಳು ಬಹಳ‌ ಚೆನ್ನಾಗಿ‌ಯೆ ಬಳಸಿಕೊಳ್ಳುತ್ತಾರೆ. ಕೊರೋನಾ ಕಾಲದ ಆತಂಕಗಳು , ಇತ್ತೀಚಿನ ಹಲವು ಬೆಳವಣಿಗೆಗಳು, ಜಾಲತಾಣಗಳಲ್ಲಿ ಕಾಣುವ ವಿವಿಧ ಪೋಸ್ಟುಗಳು ನನಗೆ ಆ ದಿನದ ಮಕ್ಕಳ ಅಳುವನ್ನು ಪದೇ ಪದೇ ನೆನಪಿಸಿಕೊಳ್ಳವಂತೆ‌ ಮಾಡುತ್ತವೆ.

          -   ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment