ಮೆಚ್ಚೋಣ…. ಪ್ರೀತಿಯ ಹಣತೆಯ ಹಚ್ಚೋಣ… – ಶಿಕ್ಷಕನ ಡೈರಿಯಿಂದ 32

ಶಿಕ್ಷಕನ ಡೈರಿಯಿಂದ

ಮೆಚ್ಚೋಣ…. ಪ್ರೀತಿಯ ಹಣತೆಯ ಹಚ್ಚೋಣ…


     ಹೊರಗೇನೋ ಗಡಿಬಿಡಿಯ ಕೆಲಸ ಮುಗಿಸಿ ಒಳ ಬಂದ ನನಗೆ ಮಹಿಳೆಯೊಬ್ಬರ ಜೊತೆ ಶಿಕ್ಷಕಿಯೊಬ್ಬರು ಮಾತನಾಡುತ್ತಿರುವುದು ಕಾಣಿಸಿತು. ಅವರು ಚರ್ಚಿಸುತ್ತಿದ್ದುದು ಮಗುವಿನ ಕಲಿಕೆಯ ಬಗ್ಗೆ. ಶಿಕ್ಷಕಿ ಅವರ ಮಗ ಕಲಿಕೆಯಲ್ಲಿ ಎಷ್ಟು ಹಿಂದೆ ಇದ್ದಾನೆ, ಎಷ್ಟು ಉದಾಸೀನ ಮಾಡುತ್ತಾನೆ ಎಂಬುದೆಲ್ಲವನ್ನು ಎಳೆ ಎಳೆಯಾಗಿ ವಿವರಿಸುತ್ತಿದ್ದರು. ಮಹಿಳೆ ಹೂಂಗುಟ್ಟುತ್ತಾ  ನಿಂತಿದ್ದರು.

      ನನಗೆ ಯಾರಾದರೂ ಮಾತಾಡುತ್ತಿರುವಾಗ ಮಧ್ಯೆ ಬಾಯಿ ಹಾಕುವ ಕೆಟ್ಟ ಅಭ್ಯಾಸವೊಂದಿದೆ. ಕೆಲವೊಮ್ಮೆ ಅದರಿಂದ ಒಳ್ಳೆಯದಾಗುವುದೂ ಇದೆ. ಆ ಮಹಿಳೆಯನ್ನ ಕಂಡ ನನಗೆ ಅವರ ಮುಖದಲ್ಲಿ ನಾಲ್ಕನೇ ತರಗತಿಯ ಹುಡುಗನೊಬ್ಬನ ಹೋಲಿಕೆ ಕಾಣಿಸಿತು.
      "ನೀವು ಪ್ರೀತೇಶನ ತಾಯಿಯಾ?" ಕೇಳಿದೆ. 
     "ಹೌದು" ಎಂದರು. "ಪ್ರೀತೇಶನ ಚಿತ್ರಗಳನ್ನು ನೋಡಲು ಬಹಳ ಖುಷಿಯಾಗ್ತದೆ. ತುಂಬಾ ಚೆನ್ನಾಗಿ ಚಿತ್ರ ಬಿಡಿಸುತ್ತಾನೆ.‌" ನನಗೆ ಅವರನ್ನು ಖುಷಿ ಪಡಿಸುವ ಉದ್ದೇಶವೇನಿರಲಿಲ್ಲ.  ಆ ಹುಡುಗನಿಗೆ ಚಿತ್ರಕಲೆಯಲ್ಲಿದ್ದ ಅತೀವ ಆಸಕ್ತಿ ಮತ್ತು ಪ್ರೌಢಿಮೆಯನ್ನು ಗಮನಿಸಿದ್ದ ನನಗೆ ಸಹಜವಾಗಿ ಅದನ್ನು ಅವರೆದುರು ಹೇಳಬೇಕೆನಿಸಿತು. ಚಿತ್ರಕಲೆಯ ಬಗ್ಗೆ ಅವನಿಗೆ ಆಸಕ್ತಿ ಹುಟ್ಟಿದ ಬಗ್ಗೆ ಮತ್ತು ಮನೆಯಲ್ಲಿ ಅವನಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಒಂದೆರಡು ಮಾತು ಕೇಳಿದ ನಾನು ಮತ್ತೆ ಸ್ಟಾಪ್ ರೂಮಿನಿಂದ ಹೊರನಡೆದೆ.
        
             ಇಷ್ಟೆಲ್ಲ ನಡೆಯುವಾಗ ಅವರ ಮುಖಭಾವದ ಬದಲಾವಣೆಗಳನ್ನು ನಾನು ಗಮನಿಸಿರಲಿಲ್ಲ. ಆದರೆ ಪಕ್ಕದಲ್ಲಿ ಕುಳಿತಿದ್ದ ಸಹೋದ್ಯೋಗಿ ಶಿಕ್ಷಕರೊಬ್ಬರು ನಮ್ಮೆಲ್ಲರನ್ನ ಅವಲೋಕಿಸುತ್ತಿದ್ದರು. ಆ ದಿನ ಮಧ್ಯಾಹ್ನ ಅವರು ತಮ್ಮ ಅವಲೋಕನವನ್ನು, ವಿಶ್ಲೇಷಣೆಯನ್ನು ನಮ್ಮ ಮುಂದಿಟ್ಟಿದ್ದರು.

       " ಅವರ ಮಗನ ದೌರ್ಬಲ್ಯದ ಬಗ್ಗೆ ಹೇಳುತ್ತಿರುವಾಗ ಅವರಿಗೆ ತುಂಬಾ ಕಿರಿಕಿರಿಯಾಗುತ್ತಿತ್ತು. ವಿಚಾರಣೆಗೆ ನಿಂತ ಆರೋಪಿಯ ಮುಖಭಾವ ಅವರಲ್ಲಿ ಕಾಣಿಸುತ್ತಿತ್ತು. ಒಮ್ಮೆ ಅವರ ಮಗನ ಪ್ರತಿಭೆಯ ಬಗ್ಗೆ ಹೇಳಿದಾಗ ಒಮ್ಮೆಲೇ ಅವರ ಮುಖದಲ್ಲಿ ಸಂತೋಷ ಉಕ್ಕಿದುದನ್ನು ನಾನು ಗಮನಿಸಿದೆ. ಆನಂತರದ ಮಾತುಕತೆಯಲ್ಲಿ ಅವರಲ್ಲಿ ಆತ್ಮವಿಶ್ವಾಸ ಕಾಣಿಸುತ್ತಿತ್ತು. ಶಿಕ್ಷಕರಾದ ನಾವು ಪೋಷಕರೆದುರು ಮಕ್ಕಳ ಕುರಿತಾಗಿ ಒಳ್ಳೆಯ ಮಾತುಗಳನ್ನು ಆಡುವುದರ ಮಹತ್ವ ಆ ತಾಯಿಯ ಮುಖದಲ್ಲಾದ ಬದಲಾವಣೆಗಳನ್ನು ಕಂಡು ನನಗರ್ಥವಾಯಿತು." ಈ ದಿಕ್ಕಿನಲ್ಲಿ ನಾನೂ ಆಲೋಚಿಸಿರಲಿಲ್ಲ. ನನಗರಿವಿಲ್ಲದೆಯೇ ನಾನೊಂದು ಭಾರಿ ಒಳ್ಳೆ ಕೆಲಸ ಮಾಡಿಬಿಟ್ಟೆನಲ್ಲ ಎಂದು ಮನಸ್ಸೊಳಗೆ ಬೀಗಿದೆ.

        *            *            *

      ಇದಾದ ಬಹಳ ಕಾಲದ ನಂತರ ಇನ್ನೊಮ್ಮೆ ಮಕ್ಕಳ ಕುರಿತಾಗಿ ಒಳ್ಳೆಯ ಮಾತನಾಡುವುದರ ಮಹತ್ವದ ಬಗ್ಗೆಯೇ ನಮ್ಮೆಲ್ಲರ ಚರ್ಚೆ ನಡೆಯುತ್ತಿತ್ತು. "ಮಕ್ಕಳನ್ನು ಪೋಷಕರೆದುರು ಸ್ವಲ್ಪವಾದರೂ ಹೊಗಳಬೇಕು .ಆಗ ಅವರಿಗೂ ಖುಷಿ ಮತ್ತು ಸಮಾಧಾನವಿರುತ್ತದೆ" ಎಂದು ನಾನು ಅಭಿಪ್ರಾಯ ಮಂಡಿಸಿದ್ದೆ.

          " ಹೊಗಳುವುದೆಂದರೆ ಹೇಗೆ? ಅವರ ಹಾಗೆಯಾ?" ಎಂದು ಶಿಕ್ಷಕಿಯೊಬ್ಬರು ಪ್ರಶ್ನಿಸಿದ್ದರು. ಅವರು ಉಲ್ಲೇಖಿಸಿದ್ದು ನಮಗೆ ತಿಳಿದಿದ್ದ ಅತ್ಯಂತ ಅಪ್ರಾಮಾಣಿಕ ವ್ಯಕ್ತಿಯೊಬ್ಬರ ಬಗ್ಗೆ. ಎದುರಿಗಿರುವ ವ್ಯಕ್ತಿಯನ್ನು ಸುಳ್ಳು ಸುಳ್ಳೇ ಹೊಗಳಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಆ ವ್ಯಕ್ತಿಯ ಬಗ್ಗೆ ಎಲ್ಲರಿಗೂ ಒಂದು ಬಗೆಯ ಹೇವರಿಕೆ ಇತ್ತು.       "ಆ ತರದ ಹಸೀ ಹರ್ಮೈಕ ನೋಡಿದಾಗ ನನಗೆ ಮ್ಯಾಳೀಗೇ ಬಾಯಿ ಹಾಕ್ವ ಅನ್ನುವಷ್ಟು ಸಿಟ್ಟು ಬರ್ತದೆ.." ಅಪ್ಪಟ ಕುಂದಾಪುರ ಶೈಲಿಯಲ್ಲಿ ಆಕೆ ಆಕ್ರೋಶ ತೋರಿಸಿದ್ದರು‌.  ನನಗೆ ನನ್ನ ಮಿತ್ರನೊಬ್ಬ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಸಿಟ್ಟು ವ್ಯಕ್ತಪಡಿಸಿದ್ದು ನೆನಪಾಯಿತು.

          ನಾವು ಕೆಲಸಕ್ಕೆ ಸೇರಿದ ಹೊಸತರಲ್ಲಿ ಆಫೀಸಿನ ಕ್ಲರ್ಕ್ ಒಬ್ಬರು ಅಷ್ಟೇನೂ ಚಂದವಿರದಿದ್ದ ನನ್ನ ಕೈಬರಹವನ್ನು ಬಾಯಿ ತುಂಬಾ ಹೊಗಳಿದ್ದನ್ನು ಅವನೆದುರು ಹೇಳಿದ್ದೆ. ಆ ಕ್ಲಾರ್ಕ್ ಅವನಿಗೂ ಹಾಗೆ ಹೊಗಳಿದ್ದರಂತೆ. ಆಗ ಅವನಿಗೂ ಖುಷಿಯಾಗಿತ್ತಂತೆ. ಮುಂದೆ ಅವರು ಎಲ್ಲರಿಗೂ ಇದೇ ಹೊಗಳಿಕೆಯನ್ನು ಸುಮ್ಮಸುಮ್ಮನೆ ನೀಡಿದ್ದು ತಿಳಿದು, ತನ್ನನ್ನೂ ಸುಮ್ಮನೆ ಹೊಗಳಿದ್ದು ಎಂದು ಅರ್ಥವಾಗಿ ಇವನಿಗೆ ಕೋಪ ಬಂದಿತ್ತಂತೆ‌. "ಆ ವ್ಯಕ್ತಿ ನಮ್ಮನ್ನು ಮರಳು ಮಾಡಲು ಸುಮ್ಮಸುಮ್ಮನೆ ಹೊಗಳುತ್ತಾರೆ ಅಷ್ಟೇ."  'ಆ ವ್ಯಕ್ತಿ' ಎಂಬ ಜಾಗದಲ್ಲಿ ಅವನು ಗಂಗಾವತಿ ಪ್ರಾಣೇಶ್ ಹೇಳುವ ಉತ್ತರ  ಕರ್ನಾಟಕದ ಅಡ್ಜೆಕ್ಟಿವನ್ನು ಬಳಸಿದ್ದ.

          ಹೊಗಳಿಕೆಗೂ ಮೆಚ್ಚುಗೆಗೂ ವ್ಯತ್ಯಾಸವಿದೆ. ಹೊಗಳಿಕೆ ನಮ್ಮನ್ನು ಒಂದು ಬಾರಿಗೆ ಬಲೂನಿನಂತೆ ಉಬ್ಬಿಸಿಬಿಡಬಹುದು. ಆದರೆ ಅದರ ಆಯಸ್ಸು ಕಡಿಮೆ. ಸುಳ್ಳು ಸುಳ್ಳೇ ಹೊಗಳುವಾತನ ಬಗ್ಗೆಯಂತೂ ಕೆಲವು ಕಾಲದ ನಂತರವಾದರೂ ಅಸಹ್ಯ ಹುಟ್ಟಿಯೇ ಹುಟ್ಟುತ್ತದೆ. ಹೊಗಳಿಕೆ ಸತ್ಯವಾಗಿದ್ದರೂ ಅದು ಅಗತ್ಯಕ್ಕಿಂತ ಜಾಸ್ತಿಯಾದರೆ ಹೊಗಳುವಾತನ ಪ್ರಾಮಾಣಿಕತೆಯ ಬಗ್ಗೆ ಸಂಶಯ ಹುಟ್ಟುತ್ತದೆ. ಆದರೆ ಮೆಚ್ಚುಗೆ ಹಾಗಲ್ಲ, ನಮ್ಮ ಹೃದಯವನ್ನು ಸೇರಿಬಿಡುತ್ತದೆ. ನಮ್ಮ ಆತ್ಮವಿಶ್ವಾಸವನ್ನು, ಮನೋಬಲವನ್ನು ಹೆಚ್ಚಿಸುತ್ತದೆ. ಶಿಕ್ಷಕನಾದವನ ಮೆಚ್ಚುಗೆ ಮಕ್ಕಳ ಮತ್ತು ತಂದೆ ತಾಯಿಯರ ಪಾಲಿಗೆ ಅಮೂಲ್ಯವಾದುದು‌.

          *          *           *

       ಪ್ರೀತೇಶನ ಕುರಿತಾದ ಮೆಚ್ಚುಗೆಯ ಕುರಿತಾದ ಸಹೋದ್ಯೋಗಿಯ ವಿಶ್ಲೇಷಣೆ ಕೇಳಿ ಒಂದು ಕ್ಷಣ ಬೀಗಿದ್ದ ನನಗೆ ಮರುಕ್ಷಣದಲ್ಲಿ ಶ್ರವಣಾಳ ನೆನಪಾಗಿತ್ತು. ಶ್ರವಣಾಳೆನ್ನುವ ವಿಶೇಷ ಮಗು ಒಂದನೇ ತರಗತಿಯಲ್ಲಿ ಚುರುಕಾಗಿದ್ದರೂ, ಬರಬರುತ್ತಾ ಅವಳು ತೀರಾ ಡಲ್ಲಾಗುತ್ತಿದ್ದುದನ್ನೂ, ಆ ಕುರಿತಾದ ನನ್ನ ಅಸಹನೆಯನ್ನು ಅವಳ ಪೋಷಕರೆದುರು ಅವಳನ್ನು ದೂರುವ ಮೂಲಕ ನಾನು ಕಮ್ಮಿ ಮಾಡಿಕೊಂಡಿದ್ದ ಕತೆಯನ್ನು ನಾನು ಹಿಂದೊಂದು ಲೇಖನದಲ್ಲಿ ಹಂಚಿಕೊಂಡಿದ್ದೆ. ಹಾಗೆ ನನ್ನೊಳಗಿನ ಅಸಹನೆ ಕಾರಿಕೊಳ್ಳುವ ಮೂಲಕ ನಾನು ಆ ಪೋಷಕರ ಆತ್ಮವಿಶ್ವಾಸವನ್ನು ಅದೆಷ್ಟು ಕುಂಠಿತಗೊಳಿಸಿರಬಹುದು? ಮಕ್ಕಳನ್ನು ನನಗಿಂತ ಎಷ್ಟೋ ಪಟ್ಟು ಹೆಚ್ಚು  ಟೀಕಿಸುತ್ತಿದ್ದ ಶಿಕ್ಷಕರನ್ನೂ ನಾನು ಕಂಡಿದ್ದೆ. ದುರಂತವೆಂದರೆ ಹೀಗೆ ಟೀಕಿಸುವ ಹೆಚ್ಚಿನ ಶಿಕ್ಷಕರು ಪ್ರಾಮಾಣಿಕರೂ, ಮಕ್ಕಳಿಗೆ ಹೇಗಾದರೂ ಮಾಡಿ ಕಲಿಸಲೇಬೇಕೆಂಬ ಬದ್ಧತೆಯುಳ್ಳವರೂ ಆಗಿರುವುದು.

           ಒಬ್ಬ ತಂದೆಯಾಗಿ ನಾನೂ ಯೋಚಿಸುತ್ತೇನೆ. ಯಾರಾದರೂ ನನ್ನ ಮಗನ ಕುರಿತಾಗಿ ಮೆಚ್ಚುಗೆಯ ಮಾತನಾಡಿದರೆ ಮನಸ್ಸು ಪುಳಕಗೊಳುತ್ತದೆ. ಅದೇ ನನ್ನ ಮಗನ ಬಗ್ಗೆ ಯಾರಾದರೂ ಟೀಕೆಯ ಸುರಿಮಳೆಗೈದರೆ.....? ಖಂಡಿತಾ ನನಗೆ ಹುಚ್ಚು ಹಿಡಿದಂತಾಗಬಹುದು, ನನ್ನ ಮಗುವಿನ ಮೇಲಿನ ಪ್ರೀತಿ ಕುಂದುತ್ತಾ ಹೋಗಬಹುದು. ಜಗತ್ತಿನ ತಂದೆ ತಾಯಿಗಳೆಲ್ಲಾ ಹೀಗೇ ಅಲ್ಲವೇ? ನಮ್ಮ ಮಕ್ಕಳ ಕುರಿತಾದ ಒಳ್ಳೆಯ ಅಭಿಪ್ರಾಯಗಳನ್ನು ಕೇಳುವುದರಲ್ಲಿ ನಾವು ನಮ್ಮ ಬದುಕಿನ ಸಾರ್ಥಕತೆಯನ್ನು ಕಾಣುವ ಪ್ರಯತ್ನ ಮಾಡುತ್ತಿರುತ್ತೇವೆ.

  ‌‌‌    ಶಿಕ್ಷಕರಾಗಿ ನಮ್ಮೆಲ್ಲಾ ವಿದ್ಯಾರ್ಥಿಗಳಲ್ಲಿ ಒಳ್ಳೆಯದನ್ನು  ಕಾಣುವ, ಅದನ್ನು ಮೆಚ್ಚುವ, ಆ ಮೂಲಕ ಪ್ರೀತಿಯ  ಹಣತೆ ಹಚ್ಚುವ ಪ್ರಯತ್ನ ನಮ್ಮೆಲ್ಲರಲ್ಲೂ ಸದಾ ಜಾರಿಯಲ್ಲಿರಲಿ.  ಅದರ ಜೊತೆಗೆ ರಚನಾತ್ಮಕ ಸಲಹೆಗಳನ್ನು ನೀಡುವುದನ್ನು ಮರೆಯಬಾರದು ಎನ್ನುವ ಎಚ್ಚರವೂ ಇರಲಿ.

          - ಸದಾಶಿವ ಕೆಂಚನೂರು.
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment