ರಾಧಿಕಾ ಎಂಬ ಕೌತುಕ – ಶಿಕ್ಷಕನ ಡೈರಿಯಿಂದ 17

ಶಿಕ್ಷಕನ ಡೈರಿಯಿಂದ

ರಾಧಿಕಾ ಎಂಬ ಕೌತುಕ.

  ನನಗೆ, ನನ್ನಂತಹ ಹಲವು ಶಿಕ್ಷಕರಿಗೆ ಒಂದು ಬಗೆಯ ಅಹಂಕಾರವಿದೆ.. "ನಾನು ಮಕ್ಕಳ ಸೈಕಾಲಜಿಯನ್ನು ಚೆನ್ನಾಗಿ ಬಲ್ಲೆ, ಎಂತಹ ಮಗುವನ್ನಾದರೂ ಚೆನ್ನಾಗಿ ನಿಭಾಯಿಸಬಲ್ಲೆ, ಅಗತ್ಯವಿದ್ದಾಗ ಕೌನ್ಸೆಲಿಂಗ್ ಮಾಡಬಲ್ಲೆ, ಚೆಂದದ ಅನುಭವಗಳನ್ನು ಕೊಟ್ಟು ಮಗುವನ್ನು ಬದಲಾಯಿಸಬಲ್ಲೆ" ಇತ್ಯಾದಿ ಇತ್ಯಾದಿ.. ಅದನ್ನು ನೀವು ಆತ್ಮವಿಶ್ವಾಸ ಎಂದೂ ಕರೆಯಬಹುದು. ಎಷ್ಟೋ ಬಾರಿ ನಾವು ಅಗತ್ಯ ಬದಲಾವಣೆಗಳನ್ನು ತರುವಲ್ಲಿ ಸೋತುಬಿಡುತ್ತೇವೆ. ಸೋತಾಗ  "Humanly impossible" ಎಂಬ ಪದದ ಹಿಂದೆ ಅಡಗಿಬಿಡುತ್ತೇವೆ. ನಮಗೆ ಅಸಂಭವ ಎನಿಸಿದ ಕಾರ್ಯವನ್ನೆ ನಮ್ಮ‌ವಿದ್ಯಾರ್ಥಿಗಳೇ ಮಾಡಿ ತೋರಿಸಿದರೆ.....???

   ಒಂದನೇ ತರಗತಿಗೆ ಸೇರಿದ್ದ  ಶ್ರವಣಾಳೆನ್ನುವ ಹುಡುಗಿ ವಿಶೇಷ ಅಗತ್ಯವುಳ್ಳ ಮಗುವೆಂದು ಗುರುತಿಸಲ್ಪಟ್ಟಿದ್ದಳಾದರೂ ಅವಳ ನ್ಯೂನತೆ ತೀರಾ ದೊಡ್ಡದೇನಾಗಿರಲಿಲ್ಲ. ಸ್ನಾಯುಗಳ ಮೇಲಿನ ನಿಯಂತ್ರಣ ತುಸು ಕಡಿಮೆಯಿದ್ದುದರಿಂದ ಅವಳ ನಡಿಗೆ ಮತ್ತು ಬರವಣಿಗೆ ಉಳಿದ ಮಕ್ಕಳಿಗಿಂತ ತುಸು ನಿಧಾನವಾಗಿತ್ತು. ಉಳಿದ ಮಕ್ಕಳೊಂದಿಗೆ ಆಡುವಾಗ ಹಿಂದೆ ಬೀಳುತ್ತಿದ್ದಳು. ಸಣ್ಣ ಮಟ್ಟದ ಕಲಿಕಾ ದೋಷವೂ ಅವಳಲ್ಲಿತ್ತು. ಒಂದನೇ ತರಗತಿಗೆ ಸೇರುವಾಗ ಸಾಕಷ್ಟು ಲವಲವಿಕೆಯಿಂದಲೇ ಇದ್ದ ಹುಡುಗಿಗೆ ಒಂದು ಒಳ್ಳೆಯ ಬ್ಯಾಚೇ ಸಿಕ್ಕಿತ್ತು.

     ನಾನೊಮ್ಮೆ ಆ ಬ್ಯಾಚನ್ನು "ಪುಣ್ಯಕೋಟಿ"ಗಳ ಬ್ಯಾಚ್ ಎಂದೇ ಕರೆದಿದ್ದೆ. ಬರಿಯ  ಸಾಧು ಸ್ವಭಾವದ ಮಕ್ಕಳೇ ತುಂಬಿಕೊಂಡಿದ್ದ ಬ್ಯಾಚ್ ಅದು. ಒಂದನೇ ತರಗತಿಯಲ್ಲಿದ್ದಾಗ, ನಾನು ಪಾಠಕ್ಕಿಲ್ಲದಿದ್ದರೂ ಬಿಡುವಿನ ಸಮಯದಲ್ಲಿ ಪುಣ್ಯಕೋಟಿಯ ಕತೆಯನ್ನೊಮ್ಮೆ ಹೇಳಿದ್ದೆ.‌ಕಣ್ಣೀರು ಸುರಿಸಿಕೊಂಡು ಕತೆ ಕೇಳಿದ್ದ ಆ ಮಕ್ಕಳು, ನನಗೆ ಪುರುಸೊತ್ತಿದ್ದಾಗಲೆಲ್ಲ ಕರೆಸಿಕೊಂಡು ಮತ್ತೆ ಮತ್ತೆ ಅದೇ ಕತೆಯನ್ನು ಹೇಳಿಸಿಕೊಂಡು ಕಣ್ಣೀರು ಸುರಿಸುತ್ತಿದ್ದರು.  ಆ ಮಕ್ಕಳ ಸಾಧು ಸ್ವಭಾವದ ಕಾರಣದಿಂದಲೂ, ಆ ಕತೆಯನ್ನು ಅವರು ಇಷ್ಟಪಡುತ್ತಿದ್ದುದರಿಂದಲೂ ನಾನವರನ್ನು ಪುಣ್ಯಕೋಟಿಗಳು ಎಂದು ಕರೆದಿದ್ದೆ. ಆ ಪುಣ್ಯಕೋಟಿಗಳಲ್ಲಿ ನಮ್ಮ ಶ್ರವಣಾಳೂ ಒಬ್ಬಳಾಗಿದ್ದಳು.

     ಮನಸ್ಸಿನಲ್ಲಿ ಬರಿಯ ಪ್ರೀತಿಯನ್ನಷ್ಟೇ  ತುಂಬಿಕೊಂಡಿದ್ದ ಆ ಮಕ್ಕಳು ಶ್ರವಣಾಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.‌ ಅವಳ ಸಣ್ಣಪುಟ್ಟ ಕೆಲಸಗಳಿಗೂ‌ ನೆರವಾಗಲು ಓಡಿಬರುತ್ತಿದ್ದರು. ಅವಳ ಕಲಿಕೆಗೂ ನೆರವಾಗಲೆತ್ನಿಸುತ್ತಿದ್ದರು. ಶಿಕ್ಷಕರೆಲ್ಲರಿಗೂ ಅವಳೆಂದರೆ ಬಹಳ ಕಾಳಜಿಯಿತ್ತು. ಮಕ್ಕಳೂ ಸೇರಿದಂತೆ ನಾವೆಲ್ಲರೂ ಶ್ರವಣಾಳ ಮನಸ್ಸಿಗೆ ಶಾಲೆಯಲ್ಲಿ ತುಸುವೂ ನೋವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಆದರೆ ಶ್ರವಣಾಳಿಗೆ ಅದರಿಂದ ಏನೂ ಪ್ರಯೋಜನವಾದಂತೆ ಕಾಣಿಸಿರಲಿಲ್ಲ.

      ಒಂದನೇ ತರಗತಿಗೆ ಸೇರುವಾಗ ಲವಲವಿಕೆಯಿಂದ ಇದ್ದ ಶ್ರವಣಾ ದಿನ ಹೋದಂತೆ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದಳು. ಸಣ್ಣ ವಿಷಯಕ್ಕೂ ಭಯ, ಬೇಸರ ಮತ್ತು ಅಳು ಅವಳ ಸಾಮಾನ್ಯ ಪ್ರತಿಕ್ರಿಯೆಯಾಗಿತ್ತು. ಅವಳ ಬಗ್ಗೆ ತುಂಬಾ ಕಾಳಜಿ  ತೋರಿಸುತ್ತಿದ್ದ ಮಕ್ಕಳ ಕುರಿತಾಗಿಯೂ ವಿನಾಕಾರಣ ಬೇಸರಿಸಿಕೊಂಡು ಅಳುವುದಿತ್ತು. ಅದೆಷ್ಟೋ ಬಾರಿ  ಅವಳ ಅಕಾರಣ ಅಳು ಕಾಳಜಿ ತೋರಿಸಿದ ಮಕ್ಕಳಿಗೆ ನೋವು ತರಿಸಿತ್ತು. ಶಿಕ್ಷಕರ ವಿಷಯದಲ್ಲೂ ಇದೇ ಕತೆ. ನಾವು, ಅಂದರೆ ಮಕ್ಕಳು ಮತ್ತು ಶಿಕ್ಷಕರು ಕಾಳಜಿ ತೋರಿಸಬೇಕಾದ ವಿಧಾನದಲ್ಲಿ ಎಡವಿದ್ದೆವೇ? ಆ ಕುರಿತು ನಾನಾಗ ಯೋಚಿಸಿರಲಿಲ್ಲ. ಬದಲಿಗೆ Humanly impossible ಎಂಬ ಪದದೆಡೆಗೆ ಸರಿದುಬಿಟ್ಟಿದ್ದೆ. ವರ್ಷ ಕಳೆದಂತೆ ಶ್ರವಣಾ ದೊಡ್ಡ ನ್ಯೂನತೆಯುಳ್ಳ ಹುಡುಗಿಯಂತೆ ಗೋಚರಿಸತೊಡಗಿದಳು.

   ನಾವು ಶಿಕ್ಷಕರು ನಮ್ಮ ಅಸಹಾಯಕತೆಯನ್ನು ಮಗುವನ್ನು ದೂರುವ ಮೂಲಕ ವ್ಯಕ್ತಪಡಿಸುವುದಿದೆ. ಶ್ರವಣಾಳ ಪೋಷಕರೆದುರು ನಾನು ಹಲವು ಬಾರಿ ಅವಳ ಕುರಿತಾಗಿ ಅಸಹನೆ ವ್ಯಕ್ತಪಡಿಸಿದ್ದೆ. ನಾವು ಮಾಡಬಹುದಾದ ಪ್ರಯತ್ನಗಳನ್ನೆಲ್ಲಾ ಮಾಡುತ್ತಿದ್ದೇವೆ, ಆದರೆ ಅವಳ ಸ್ಪಂದನೆ ನಿರಾಶಾದಾಯಕ ಎಂಬರ್ಥದ ಮಾತನ್ನಾಡಿದ್ದು ಅವಳ ಪೋಷಕರ ಆತ್ಮವಿಶ್ವಾಸವನ್ನೂ ಕಸಿದಂತೆ ಎಂದು ನನಗೀಗ ಅನಿಸುತ್ತಿದೆ. ಆದರೆ ಮುಂದೆ ಶ್ರವಣಾಳ ಬಗ್ಗೆ ಪೋಷಕರೊಡನೆ  ಸಕಾರಾತ್ಮಕ ಮಾತನಾಡಲು ನನಗೆ ಅವಕಾಶ ಬಂದಿತ್ತು. ಅದಕ್ಕೆ ಕಾರಣ ರಾಧಿಕಾ.

      ಈ ಪುಣ್ಯಕೋಟಿಗಳ ಬ್ಯಾಚಿಗೆ ರಾಧಿಕಾ ಸೇರ್ಪಡೆಗೊಂಡಿದ್ದು  5ನೇ ತರಗತಿಗೆ ಬಂದಾಗ. ಸದಾ ನಗುಮೊಗದಿಂದ ಚುರುಕು ಚುರುಕಾಗಿದ್ದ ರಾಧಿಕಾ ಸ್ನೇಹಮಯಿಯೂ ಹೌದು, ಸ್ವಲ್ಪ ತುಂಟಿಯೂ ಹೌದು. ಇವರೆಲ್ಲಾ ಆರನೆಯ ತರಗತಿಯಲ್ಲಿದ್ದಾಗ ಸ್ವಾತಂತ್ರ್ಯ ದಿನಾಚರಣೆಗೆಂದು ಸಮೂಹಗೀತೆಯ ಸ್ಪರ್ಧೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕು ಸದಸ್ಯರ ತಂಡಗಳನ್ನು ತಾವೇ ಕಟ್ಟಿಕೊಂಡು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಸ್ಪರ್ಧೆಗೆ "ರಾಧಿಕಾ ಮತ್ತು ತಂಡ" ಎಂದು ಕರೆದಾಗ ತನ್ನಿಬ್ಬರು ಗೆಳತಿಯರೊಂದಿಗೆ  ಎದ್ದು ನಿಂತ ರಾಧಿಕಾ ವೇದಿಕೆಯ ಕಡೆ ನಡೆಯಲಿಲ್ಲ, ಹಿಂದಿನ ಸಾಲಿಗೆ ಹೋಗಿ ಅಲ್ಲಿ ಕುಳಿತಿದ್ದ ಶ್ರವಣಾಳ ಕೈ ಹಿಡಿದು ವೇದಿಕೆಗೆ ಕರೆದೊಯ್ದಳು. ಅವರಾರೂ ಚೆಂದದ ಹಾಡುಗಾರ್ತಿಯರಾಗಿರಲಿಲ್ಲ, ಹಾಡು ಸುಮಾರಾಗಿತ್ತು. ಅವರ ನಡೆ ಮಾತ್ರ ನಮ್ಮ ಹೃದಯ ಗೆದ್ದಿತ್ತು. ಶ್ರವಣಾಳೆಡೆಗೆ ರಾಧಿಕಾ ವಿಶೇಷ ಕಾಳಜಿವಹಿಸುತ್ತಿದ್ದಾಳೆಂದು ನಮಗೆ‌ ಮೊದಲ ಬಾರಿಗೆ ತಿಳಿದದ್ದು ಆಗಲೇ.

    ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಇಳಿಮುಖವಾಗಿ ಸಾಗುತ್ತಿದ್ದ ಶ್ರವಣಾಳ ಆತ್ಮವಿಶ್ವಾಸ ಆರನೇ ತರಗತಿಗೆ ಬಂದಾಗಿನಿಂದ ಏರುಮುಖಕ್ಕೆ ತಿರುಗಿತ್ತು. ಎಂದೂ ಶಿಕ್ಷಕರನ್ನು ಕರೆದು ಮಾತನಾಡಿಸದ ಶ್ರವಣಾ, ತರಗತಿಗೆ ಶಿಕ್ಷಕರು ಒಂದು ನಿಮಿಷ ತಡವಾಗಿ ಹೋದರೂ,ಕರೆಯಲೆಂದು ಸ್ಟಾಫ್ರೂಮಿನೆಡೆಗೆ ಬರಲಾರಂಭಿಸಿದ್ದಳು. ಅವಳನ್ನು ಹಾಗೆ ಕಳುಹಿಸುವ ರಾಧಿಕಾ ತನ್ನ ತರಗತಿಯ ಬಾಗಿಲ ಬಳಿ ತುಂಟ ನಗೆ ಚೆಲ್ಲುತ್ತಾ ನಿಂತಿರುತ್ತಿದ್ದಳು. ಸಂಜೆ ಮನೆಗೆ ಬಿಡುವಾಗಲೋ, ಅಥವಾ ಬಿಡುವಿನ ಅವಧಿಯಲ್ಲೋ ಕೆಲವೊಮ್ಮೆ ಶ್ರವಣಾ ಅಳುತ್ತಾ ಕುಳಿತಿರುವುದಿತ್ತು. ವಿಚಾರಿಸಿದರೆ ರಾಧಿಕಾ ಚಿವುಟಿದಳೆಂದೋ, ಹೊಡೆದಳೆಂದೋ ದೂರುತ್ತಿದ್ದಳು. ಬೇಕುಬೇಕೆಂದೇ ಚಿವುಟಿ ಹೋಗಿರುತ್ತಿದ್ದ ರಾಧಿಕಾ ದೂರದಲ್ಲಿ ನಿಂತು ಮತ್ತದೇ ತುಂಟ ಕಿರುನಗೆ ಚೆಲ್ಲುತ್ತಿದ್ದಳು. ಹೀಗೆ ಅಳುತ್ತಿರುವ ಸಮಯದಲ್ಲೂ ನಿನ್ನ ಬೆಸ್ಟ್ ಫ್ರೆಂಡ್ ಯಾರೆಂದು ಕೇಳಿದರೆ ಶ್ರವಣಾಳ ಉತ್ತರ ರಾಧಿಕಾ ಎಂಬುದೇ‌ ಆಗಿತ್ತು.

        ಶ್ರವಣಾಳನ್ನು ಬದಲಾಯಿಸಲು ರಾಧಿಕಾ ಇನ್ನೇನೇನು ತಂತ್ರ ಉಪಯೋಗಿಸಿದ್ದಾಳೋ ಗೊತ್ತಿಲ್ಲ, ಆದರೆ ಈ ಬದಲಾವಣೆಯಲ್ಲಿ ರಾಧಿಕಾಳ ಪಾತ್ರದ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅವಳು ಶ್ರವಣಾಳಿಗೆ ಬರಿಯ ಪ್ರೀತಿಯನ್ನಷ್ಟೇ ತೋರಿಸಿದ್ದಲ್ಲ, ಬದಲಿಗೆ ಬಗೆಬಗೆಯ ಸನ್ನಿವೇಶಗಳನ್ನು ಕಟ್ಟಿಕೊಟ್ಟಳು, ಅಗತ್ಯಕ್ಕೆ ತಕ್ಕಂತೆ ಒಂದಿಷ್ಟು ಕಿರಿಕಿರಿಯನ್ನೂ ಮಾಡಿದ್ದಳು. ತರಗತಿಯ ಇತರ ಹುಡುಗಿಯರೂ ಅವಳದೇ ಮಾರ್ಗವನ್ನು ಅನುಸರಿಸಿದ್ದರು‌.  ಈಗ ಶ್ರವಣಾಳಲ್ಲಾದ ಬದಲಾವಣೆಯನ್ನು ಬಹಳ ಖುಷಿಯಿಂದ ನಾವು ಅವಳ ಪೋಷಕರೊಡನೆ ಹಂಚಿಕೊಳ್ಳತೊಡಗಿದೆವು. ಅವರು ಮತ್ತೆ ಮಗಳ ಕುರಿತಾಗಿ  ಆಶಾವಾದಿಗಳಾಗತೊಡಗಿದ್ದರು. ಏಳನೆಯ ತರಗತಿಗೆ ಬಂದ ನಂತರ ಸ್ವಾತಂತ್ರ್ಯ ದಿನದ ಸಮೂಹಗೀತೆ ಸ್ಪರ್ಧೆಯಲ್ಲಿ ಮತ್ತೆ ಅದೇ 'ರಾಧಿಕಾ ಮತ್ತು ತಂಡ' ಭಾಗಿಯಾಗಿತ್ತು. ಈ ಬಾರಿ‌ ಆ ತಂಡಕ್ಕೆ ವಿಶೇಷ ಬಹುಮಾನವೊಂದನ್ನು ನೀಡಲಾಯಿತು. ಏಳನೆಯ ತರಗತಿ ಮುಗಿಸುವ ಹೊತ್ತಿಗೆ ಶ್ರವಣಾ ಮತ್ತೆ ಲವಲವಿಕೆಗೆ ಮರಳಿದ್ದಳು.

         ತರಗತಿಯಲ್ಲಿ ಕಲಿಕಾ ನ್ಯೂನತೆ ಮತ್ತು ಆತ್ಮವಿಶ್ವಾಸದ ಕೊರತೆಯಿರುವ ಮಕ್ಕಳನ್ನು ಕಂಡಾಗೆಲ್ಲಾ ನನಗೆ ರಾಧಿಕಾಳ ಮಾದರಿಯನ್ನು ಬಳಸಬೇಕೆನಿಸುತ್ತದೆ. ಜೊತೆಜೊತೆಗೆ ಈ ಹುಡುಗಿಗೆ ಇದನ್ನೆಲ್ಲಾ ಕಲಿಸಿದವರ್ಯಾರು ಎನ್ನುವ ಪ್ರಶ್ನೆ ಹುಟ್ಟುತ್ತದೆ.  ಮರುಕ್ಷಣವೇ ಹಕ್ಕಿಗೆ ಹಾರಲು, ಮೀನಿಗೆ ಈಜಲು ಯಾರೂ ಕಲಿಸಬೇಕಾಗಿಲ್ಲ ಎಂಬ ಉತ್ತರ ಮನಸ್ಸಲ್ಲೇ ಹೊಳೆದು ಮುಗಳ್ನಗೆ ಮೂಡುತ್ತದೆ. ಶಿಷ್ಯೆ ರಾಧಿಕಾ ಮತ್ತೆಮತ್ತೆ ಗುರುವಾಗಿ ನೆನಪಾಗುತ್ತಿರುತ್ತಾಳೆ.

      - ಸದಾಶಿವ ಕೆಂಚನೂರು.
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment