ದೇವರು ದೊಡ್ಡವನು….! – ಶಿಕ್ಷಕನ ಡೈರಿಯಿಂದ 24

ಶಿಕ್ಷಕನ ಡೈರಿಯಿಂದ

ದೇವರು ದೊಡ್ಡವನು….!

     ನಾವು ದೇವರನ್ನು ಪ್ರತೀದಿನ ಭಕ್ತಿ ಭಾವದಿಂದ ಪೂಜೆ ಮಾಡದೇ ಇರಬಹುದು; ದೇವರ ಅಸ್ತಿತ್ವದ ಕುರಿತಾಗಿಯೇ ನಮಗೆ ಗೊಂದಲಗಳಿರಬಹುದು; ಆದರೆ ಕೆಲವೊಮ್ಮೆಯಾದರೂ ನಮ್ಮ ಬಾಯಿಂದ "ದೇವರು ದೊಡ್ಡವನು..!" ಎಂಬ ಉದ್ಗಾರವಂತೂ ಬಂದೇ ಬರುತ್ತದೆ. ನಮಗರಿವಿಲ್ಲದೇ ನಾವು ದೇವರಿಗೆ ಈ ಉದ್ಗಾರದೊಂದಿಗೆ ಕೃತಜ್ಞತೆಯನ್ನು ಹೇಳಿಬಿಡುತ್ತೇವೆ.

    ಆ ದಿನ 5ನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದ ನನಗೆ ಪಾಠದ ಮಧ್ಯದಲ್ಲಿಯೇ ಬಾಯಾರಿಕೆಯಾಗಿದ್ದು ಯಾಕೋ ಗೊತ್ತಿಲ್ಲ..,  ನೀರು ಕುಡಿಯಲು ಪಕ್ಕದಲ್ಲೇ ಇದ್ದ ಆಫೀಸ್ರೂಮಿಗೆ ಹೋಗಿ ಮರಳಿ ಬರುವಷ್ಟರಲ್ಲಿ ಮಕ್ಕಳು "ಹಾವು.." ಎಂದು ಕಿರುಚಿ ಸ್ಥಳ ಬಿಟ್ಟು ಬಂದಿದ್ದರು. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ವಿಜೇತ್ ಪೆನ್ನು ಹೆಕ್ಕಲು ಬಗ್ಗಿದಾಗ ಕಾಲಬುಡದಲ್ಲಿ ಹಾವು ಕಂಡು ಬೆಚ್ಚಿದ್ದ.‌ ಕ್ರಿಕೆಟ್ ಆಡಲೆಂದು ಮನೆಯಿಂದ ಬ್ಯಾಟು ವಿಕೆಟ್‌ಗಳನ್ನು ತಂದು ತನ್ನ ಬೆಂಚಿನಡಿಯಲ್ಲಿ ಇಟ್ಟುಕೊಂಡಿದ್ದ ವಿಜೇತ್, ಅದರಡಿಯಲ್ಲೇ ಹಾವು ಬೆಚ್ಚಗೆ ಮಲಗಿದ್ದುದನ್ನು ದಿಗ್ಭ್ರಾಂತನಾಗಿದ್ದ.‌ ಅಲ್ಲೇ ಮೂಲೆಯಲ್ಲೆಲ್ಲೋ ಇದ್ದ ಮುರಿದ ಮೇಜಿನ ಕಾಲೊಂದು ನನ್ನ ಕೈಗೆ ಸಿಕ್ಕಿತು. ಅದರಿಂದ ಆ ಬ್ಯಾಟು, ವಿಕೆಟ್‌ಗಳನ್ನು ಬದಿಗೆ ಸರಿಸಿದೆ. ಅಷ್ಟರಲ್ಲಿ ನನ್ನ ಸಹೋದ್ಯೋಗಿ ಶಿಕ್ಷಕರುಗಳೂ ಜೊತೆಯಾಗಿದ್ದರು. ಬೆಂಚು-ಡೆಸ್ಕುಗಳ ನೆರಳಿನ ನಸುಗತ್ತಲಿದ್ದರೂ ಹಾವು ಸ್ಪಷ್ಟವಾಗಿ ಕಾಣಿಸಿತು. ಕೇರೆಹಾವಿನ ಸೈಜಿಗಿಂತ ಸುಮಾರು ಸಣ್ಣಗಿದ್ದ ಹಾವು, ಕಪ್ಪಗಿತ್ತು.  ಮಕ್ಕಳು ಹಾವೆಂದು ಕಿರುಚಿದಾಗ ಕೇರೆಹಾವಿನ ನಿರೀಕ್ಷೆಯಲ್ಲಿದ್ದ ನಮಗೆ ಅದು ಕೇರೆಹಾವಲ್ಲವೆಂದೂ, ಯಾವುದೋ ವಿಷಸರ್ಪವೆಂದೂ ಅಂದಾಜಾಗಿತ್ತು. ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಕೇರೆಹಾವನ್ನು ಕಂಡರೆ ಓಡಿಸುವ, ಬೇರೆ ವಿಷದ ಹಾವಾದರೆ ಕೊಂದುಬಿಡುವ ಮತ್ತು ನಾಗರಹಾವಾದರೆ 'ಯೋಗ್ಯ ಮರ್ಯಾದೆಯೊಡನೆ ಕಳುಹಿಸುವ' ವಾಡಿಕೆ. ನಮ್ಮೊಳಗೂ ಮೇಳೈಸಿದ್ದು ಅದೇ ಸಂಸ್ಕೃತಿ. ಕೈಯಲ್ಲಿ ದೊಣ್ಣೆಯಂತೆ ಮೇಜಿನ ಕಾಲು ಹಿಡಿದಿದ್ದ ನನ್ನಲ್ಲಿ "ವಿಷದ ಹಾವು ಸರ್, ಕೊಂದುಬಿಡಿ ಅದನ್ನು" ಎಂದಿದ್ದರು ನನ್ನೊಬ್ಬರು ಸಹೋದ್ಯೋಗಿ. ನಾನೂ ನನ್ನ ಪ್ರತಾಪ ತೋರಲು  ಸಜ್ಜಾಗಿದ್ದೆ. ಆದರೇನು ಮಾಡುವುದು.. ನಾನು ಅಲ್ಲಿಯವರೆಗೆ ಒಂದು ಹಾವನ್ನೂ ಕೊಲ್ಲದ ಅನನುಭವಿಯಾದ್ದರಿಂದ ಪೊಸಿಷನ್ನಿಗೆ ಬರಲು ಅರೆಘಳಿಗೆ ಬೇಕಾಯಿತು. ಪೊಸಿಷನ್ನಿಗೆ ಬರುವಷ್ಟರಲ್ಲಿ ಇನ್ನೊಬ್ಬರು ಶಿಕ್ಷಕರು "ಕೊಲ್ಲುವುದು ಬೇಡ, ಸ್ವಲ್ಪ ತಡೆಯಿರಿ" ಎಂದರು. ಕೊಠಡಿಯ ನೀರು ಹೊರಹೋಗಲಿಕ್ಕಿದ್ದ ರಂಧ್ರದ ಮೂಲಕ ಒಳಬಂದಿದ್ದ ಹಾವದು. ಅದೇ ರಂಧ್ರದಲ್ಲಿ ಹಿಂದಕ್ಕೆ‌ ಕಳುಹಿಸಲು ಪ್ರಯತ್ನಿಸಿದೆವು. ಅಷ್ಟರಲ್ಲಿ ಹಾವು ತನ್ನ ಹೆಡೆ ಬಿಚ್ಚಿತ್ತು. ನಮಗೆ ಅಚ್ಚರಿ.

     ಅಲ್ಲಿಯವರೆಗೆ ಅದು ನಾಗರಹಾವಿರಬಹುದೆಂಬ ಸಣ್ಣ ಶಂಕೆಯೂ ನಮ್ಮಲ್ಲಿರಲಿಲ್ಲ. ಸಾಮಾನ್ಯ ನಾಗರ ಹಾವಿನಂತೆ ತುಂಬಾ ಹಳದಿ ಬಣ್ಣವಿರಲಿಲ್ಲ,  ಕೊಠಡಿಯಿಂದ ಹೊರಹೋದ ನಂತರವಷ್ಟೇ ಅದರ ಚರ್ಮದಲ್ಲಿ ತುಸು ಹಳದಿ ಕಾಣಿಸಿತ್ತು. ಆ ಹಾವನ್ನು ಕೊಲ್ಲಬೇಕು ಅಂದುಕೊಂಡಿದ್ದ ನನ್ನ ತೀರ್ಮಾನದ ಬಗ್ಗೆ ಯೋಚಿಸಿದೆ. ನಾನದನ್ನು ಕೊಂದಿದ್ದರೆ....?   ನಾಗರ ಹಾವನ್ನು ಕೊಂದರೆ ಬರುವ ದೋಷಗಳು ಸತ್ಯವೇ, ಸುಳ್ಳೇ ಎಂಬ ವಿಷಯದ ಚರ್ಚೆಯಿಲ್ಲಿ ಅಪ್ರಸ್ತುತ. ಇದನ್ನೆಲ್ಲಾ ತೀರಾ ದೊಡ್ಡದಾಗಿ ನಂಬದ, ಆದರೆ ತುಸು ನಂಬಿಕೆ ಮತ್ತು ಭಯವನ್ನು ಹೊಂದಿರುವ ನಾನು ಅದನ್ನು ಕೊಂದಿದ್ದರೆ ಬಹಳಷ್ಟು ದಿನಗಳ ಕಾಲ ಮನೋಕ್ಲೇಶದಿಂದ ಬಳಲುತ್ತಿದ್ದೆನೆಂಬುದಂತೂ ಸತ್ಯ. ಮುಂದಿನ ದಿನಗಳಲ್ಲಿ ಪರಿಹಾರಕ್ಕಾಗಿ ನನ್ನ ಕಿಸೆ ಸ್ವಲ್ಪ ಖಾಲಿಯಾಗಿರುತ್ತಿತ್ತು; ಊರಿನ ಜನರೆಲ್ಲಾ ನನ್ನ ಮೂರ್ಖತನದ ಬಗ್ಗೆ ಆಡಿಕೊಳ್ಳುತ್ತಿದ್ದರು; ಎಲ್ಲಕ್ಕಿಂತ ಮಿಗಿಲಾಗಿ ಮುಂದಿನ ಹಲವು ವರ್ಷಗಳ ಕಾಲ ಶಾಲೆಯಲ್ಲಿ ಸಣ್ಣ ಅವಘಡವಾದರೂ, ಮಕ್ಕಳ ಆರೋಗ್ಯದಲ್ಲಿ ತುಸು ವ್ಯತ್ಯಯವಾದರೂ ಅದು ನನ್ನ ಕೃತ್ಯಕ್ಕೆ ತಳುಕು ಹಾಕಿಕೊಂಡಿರುತ್ತಿತ್ತು. ಇದನ್ನೆಲ್ಲಾ ಯೋಚಿಸಿದಾಗಲೇ ನನ್ನ ಮನದೊಳಗೆ "ದೇವರು ದೊಡ್ಡವನು" ಎಂಬ ಉದ್ಗಾರ ಹುಟ್ಟಿದ್ದು.

       *         *         *

 ಹಲವು ವರ್ಷಗಳು ಕಳೆದ ನಂತರ ಮತ್ತೊಮ್ಮೆ ನನ್ನ ತರಗತಿಯೊಳಗೆ ವಿಷದ ಹಾವು ಬಂದಿತ್ತು. ಆಗ ಮಕ್ಕಳ ಕಾಲಡಿಯಿಂದ ಬಂದಿದ್ದರೆ, ಈ ಬಾರಿ ಮೇಲಿನಿಂದ. ಏಳನೆಯ ತರಗತಿಯಲ್ಲಿ ಪಾಠ ಮಾಡುತ್ತಿದ್ದೆ‌. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಸಾನಿಕಾಳ ಹಿಂದೆ ಕೊಠಡಿಯ ಛಾವಣಿಯಿಂದ ಸಣ್ಣ ಗಾತ್ರದ ಹಾವೊಂದು ಬಿದ್ದುಬಿಟ್ಟಿತ್ತು. ಉಡುಪಿ- ಕುಂದಾಪುರ ಕಡೆಗಳಲ್ಲಿ 'ಮರಹಾವು' ಎಂದು ಕರೆಯಲ್ಪಡುವ ಸಣ್ಣ ವಿಷದ ಹಾವದು. ಸಾಮಾನ್ಯವಾಗಿ ಕೊನೆಯ ಬೆಂಚು ಗೋಡೆಗೆ ತಾಕಿಕೊಂಡಿರುತ್ತಿತ್ತು, ಹಾಗಿದ್ದಿದ್ದರೆ ಮೇಲಿನಿಂದ ಬಿದ್ದ ಹಾವು ಆ ಹುಡುಗಿಯ ದೇಹದ ಮೇಲೆ ಬಿದ್ದಿರುತ್ತಿತ್ತು. ಮೈ ಮೇಲೆ ಬಿದ್ದಾಗ ಭಯದಿಂದ ಅದು ಕಚ್ಚುವ ಸಾಧ್ಯತೆಯೂ ಇತ್ತು. ಅದೃಷ್ಟವಶಾತ್ ಕೊನೆಯ ಬೆಂಚಿನ ಹಿಂದೆ ಹೆಚ್ಚುವರಿಯಾಗಿ ಒಂದು ಬೆಂಚನ್ನು ಯಾರೋ ಇಟ್ಟಿದ್ದರು.  ಆ ಬೆಂಚೇ ಹುಡುಗಿಯನ್ನು ಕಾಪಾಡಿತ್ತು.

        ಆ ಬೆಂಚನ್ನು ಅಲ್ಲಿಟ್ಟವರಾದರೂ ಯಾರು? ಅವರಿಗೇಕೆ ಆ ಯೋಚನೆ ಬಂದಿರಬಹುದು? ನಿಜ, ನಾವು ಮಾಡುವ ಕೆಲವೊಂದು ಕೆಲಸಗಳಿಗೆ ಕಾರಣಗಳಿರುವುದಿಲ್ಲ. ಆದರೆ ಅದರಿಂದ ನಾವು ನಿರೀಕ್ಷಿಸದೇ ಇರುವ ಒಳ್ಳೆಯದೇನೋ ಆಗುತ್ತದೆ. ನಾನು ಮತ್ತೆ ನನಗೇ ಹೇಳಿಕೊಂಡಿದ್ದೆ.. "ದೇವರು ದೊಡ್ಡವನು!"

         - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment