ಸೋನಾ, ಮೋನು ಮತ್ತು ಜಾನುವಿನ ಕತೆ- ಮಕ್ಕಳಾಟದ ಮಾತು ಗೇಟು ದಾಟದಿರಲಿ – ಶಿಕ್ಷಕನ ಡೈರಿಯಿಂದ 7

ಶಿಕ್ಷಕನ ಡೈರಿಯಿಂದ

ಸೋನಾ, ಮೋನು ಮತ್ತು ಜಾನುವಿನ ಕತೆ- ಮಕ್ಕಳಾಟದ ಮಾತು ಗೇಟು ದಾಟದಿರಲಿ..

        ಶಾಲೆಯಲ್ಲಿ ಮಕ್ಕಳ ನಡುವೆ ನಡೆಯುವ ಜಗಳ -ಕಿತ್ತಾಟಗಳು, ಹದಿಹರೆಯದ ಆಕರ್ಷಣೆ - ತಲ್ಲಣಗಳು, ಮಕ್ಕಳ ರಾಗದ್ವೇಷಗಳು ಶಾಲೆಯೊಳಗೆ ಇತ್ಯರ್ಥವಾದರೇನೇ ಚೆಂದ. ಶಾಲೆಯಿಂದ ಹೊರಹೋದರೆ ಅವು ಬೇರೆಯದೇ ಬಣ್ಣ ಪಡೆದುಕೊಳ್ಳುತ್ತವೆ. ಬೇರೆ ಬಣ್ಣ ನೀಡಲೆಂದೇ ಕೆಲವು ಶಕ್ತಿಗಳು ಕಾದುಕೊಂಡಿರುತ್ತವೆ. 

       ಆ ದಿನ ಮಧ್ಯಾಹ್ನದ ಊಟ ಮುಗಿಸಿದ ಸ್ವಲ್ಪ ಹೊತ್ತಿನಲ್ಲಿ ಏಳನೆಯ ತರಗತಿಯ ಹುಡುಗಿಯರ ದಂಡೊಂದು ನನ್ನೆಡೆಗೆ ಬರುತ್ತಿರುವುದು ಕಾಣಿಸಿತು. ವಿಚಿತ್ರವೆಂದರೆ ಯಾವಾಗಲೂ ಗುಂಪಿನ ಮುಂಚೂಣಿಯಲ್ಲಿರುತ್ತಿದ್ದ ಬೋಲ್ಡ್ ಹುಡುಗಿ ಸೋನಾ‌ ತನ್ನ ಮೇಲೇನೋ ಘೋರ ಅಪಚಾರವಾಗಿದೆ ಎನ್ನುವ ರೀತಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಸದಾ ಶಾಂತಮೂರುತಿಯಾಗಿರುತ್ತಿದ್ದ ಅವಳ ಸ್ನೇಹಿತೆ ಸೌಮ್ಯ ಸಿಟ್ಟಿನಿಂದ ಕುದಿಯುತ್ತಾ ಒನಕೆ ಓಬವ್ವನ ಗೆಟಪ್ಪಿಗೆ ತಿರುಗಿದ್ದಳು‌. ಸಿಟ್ಟಿನಿಂದ ಕುದಿಯುತ್ತಿದ್ದರೂ ತನ್ನ ಉಳಿದ ಗೆಳತಿಯರೊಂದಿಗೆ ಸೋನಾಳಿಗೆ ಸಾಂತ್ವನ‌ ಹೇಳುತ್ತಿದ್ದ ಅವಳ ಭಾವ ಭಂಗಿಗಳು ಸ್ನೇಹಿತೆಯ ಅಳುವಿಗೆ ಕಾರಣರಾದವರಿಗೆ ಒಂದು ಗತಿ ಕಾಣಿಸಿಯೇ ಸಿದ್ಧ ಎನ್ನುವಂತಿತ್ತು. 

        ಸೋನಾಳೆಂದರೆ ರಾಣಿಜೇನಿನಂತಹ ಹುಡುಗಿ. ಅವಳ ಚುರುಕುತನ, ಸ್ನೇಹಪರತೆ, ಧೈರ್ಯ ಮುಂತಾದವುಗಳೆಲ್ಲದರ ಕಾರಣದಿಂದ ತರಗತಿಯ ಹುಡುಗಿಯರೆಲ್ಲಾ ಅವಳ ಹಿಂಬಾಲಕಿಯರಾಗಿದ್ದರು. ಅವಳನ್ನು ಸದಾ ಗೋಳುಹೊಯ್ದುಕೊಳ್ಳುವ ತರಗತಿಯ ಗಂಡು ಮಕ್ಕಳಿಗೂ ಅವಳೆಂದರೆ ಅಚ್ಚುಮೆಚ್ಚು. ಶಿಕ್ಷಕರೆಡೆಗೆ ವಿದ್ಯಾರ್ಥಿಗಳ ಅಹವಾಲೇನಾದರೂ ತರುವುದಿದ್ದರೆ ಅವಳೇ ಮುಂಚೂಣಿಯಲ್ಲಿ. ಶಿಕ್ಷಕರಾದ ನಾವುಗಳೂ ಅವಳ ಅಭಿಮಾನಿ ಬಳಗದ ಸದಸ್ಯರೇ. ಇಂತಿಪ್ಪ ಸೋನಾಳಿಗೆ ಈ ನಮೂನೆಯಲ್ಲಿ ಅಳು ಬರುವ ಸನ್ನಿವೇಶ ಸೃಷ್ಟಿಯಾಗಿರುವುದೇ ನನಗೊಂದು ಕೌತುಕ. ಅವಳ ಬಲಗೈ ಎನ್ನಬಹುದಾದಷ್ಟು ಆಪ್ತಳೂ, ಎಂದೂ ಯಾರ ಮೇಲೆಯೂ ಕೋಪಗೊಳ್ಳದ ಸೌಮ್ಯ ಈ ಬಗೆಯಲ್ಲಿ ಕುದಿಯುತ್ತಿರುವುದು ಇನ್ನೊಂದು ಕೌತುಕ. 

   ‌‌‌‌‌‌‌    ದೂರನ್ನು ಹೊತ್ತ ದಂಡು ನನ್ನ ಬಳಿ ಬಂದಿತು. "ಏನಾಯಿತು?" ಮಕ್ಕಳು ಬಾಯಿಬಿಡುವ ಮುನ್ನ ತಡೆಯಲಾರದ ಕುತೂಹಲದಿಂದ ಕೇಳಿದೆ. ಮಕ್ಕಳು ಒಂದೇ ಉಸಿರಿನಲ್ಲಿ ನಡೆದದ್ದನ್ನು ತಿಳಿಸಿದರು. ಅವರು ಹೇಳುವಾಗ ಸೋನಾಳ ರೋದನ ಉತ್ತುಂಗಕ್ಕೇರಿತ್ತು. ವಿಷಯ ಇಷ್ಟೇ. ಅದೇ ತರಗತಿಯ ಮೋನು ಎನ್ನುವ ಹುಡುಗ ಒಂದು ಚಿಕ್ಕ ಚೀಟಿಯಲ್ಲಿ "ನಾನು ಸೋನಾಳನ್ನು ಪ್ರೀತಿಸುತ್ತೇನೆ" ಎಂದು ಬರೆದು ತನ್ನ ಸ್ನೇಹಿತನಿಗೆ ತೋರಿಸಿದ್ದ. ಅದು ಇನ್ನೊಬ್ಬನ ಕಣ್ಣಿಗೆ ಬಿದ್ದು ಇಷ್ಟೆಲ್ಲಾ ರಾದ್ಧಾಂತವಾಗಿಬಿಟ್ಟಿತ್ತು.

       ಪ್ರೈಮೆರಿ ಶಾಲೆಯ ಹಂತದಲ್ಲಿ ಈ ತರದ ಪ್ರಕರಣಗಳು ತೀರಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ. ಆ ವರ್ಷವಷ್ಟೇ ನಮ್ಮ ಶಾಲೆಗೆ ಸೇರಿದ್ದ ಮೋನು ಏಳನೆಯ ತರಗತಿಯಲ್ಲಿದ್ದರೂ ತುಸು ಹೆಚ್ಚೇ ಪ್ರೌಢಿಮೆಯನ್ನು ಹೊಂದಿದ್ದ. ತನ್ನ ಅಣ್ಣನ ಬೈಕನ್ನು ತಾನು ಓಡಿಸುವ ವಿಚಾರವೂ ಸೇರಿದಂತೆ ಅವನ ದೈನಂದಿನ ಹಲವು ಚಟುವಟಿಕೆಗಳು ತರಗತಿಯ ಉಳಿದ ವಿದ್ಯಾರ್ಥಿಗಳಿಗಿಂತ ತುಸು ಮುಂದಿರುವ ವಿಚಾರ ಆಗಾಗ ಅವನ ಬಾಯಲ್ಲಿ ಬರುವುದಿತ್ತು. ಸೋನಾ ಮತ್ತು ಬಳಗದವರ ದೂರಿನ ವಿಚಾರಣೆಗಾಗಿ ಮೋನುವಿಗೆ ಕರೆ ಹೋಯಿತು. ಮರುಕ್ಷಣದಲ್ಲಿ ನನ್ನೆದುರು‌ ಹಾಜರಾದ ಮೋನುವಿನಲ್ಲಿ "ಏನಪ್ಪಾ.. ಎಂತ ಸಮಾಚಾರ ನಿನ್ನದು?" ನಗುತ್ತಾ ಕೇಳಿದೆ. ತುಂಬು ಆತ್ಮವಿಶ್ವಾಸದಿಂದಲೇ ಬಂದಿದ್ದ ಮೋನು ನನಗೇನೂ ಮಾತಾಡುವ ಕೆಲಸ ಕೊಡದೇ "Sorry ಸರ್, ಇನ್ನು ಹಾಗೆಲ್ಲಾ ಮಾಡುವುದಿಲ್ಲ" ಎಂದ. "ಇದನ್ನು ಹೇಳಬೇಕಾದದ್ದು ನನ್ನಲ್ಲಾ ಅಥವಾ...?" ನಗುತ್ತಲೇ ಕೇಳಿದೆ.‌ "ಅವಳಲ್ಲಿ.." ಎಂದ ಮೋನುವಿನ ದನಿಯಲ್ಲಿ ತಾನೇನೋ‌ ಅಪರಾಧ ಮಾಡಿದೆನೆಂಬ ಭಾವವಿರಲಿಲ್ಲ, ಬದಲಿಗೆ ತನ್ನಿಂದ ಹುಟ್ಟಿದ್ದ ಸಮಸ್ಯೆಯೊಂದನ್ನು ಪರಿಹರಿಸಿದೆನೆಂಬ ಭಾವವಿತ್ತು. "ಸರಿ ಹಾಗಾದ್ರೆ..." ಎಂದೆ. ನನ್ನ ಮಟ್ಟಿಗೆ ಸಣ್ಣ ತಮಾಷೆಯ ಸನ್ನಿವೇಶವೊಂದು‌ ಮುಗಿದು ಹೋಗಿತ್ತು. ಮೋನು ಹೊರಗೆ ನಿಂತಿದ್ದ ಹುಡುಗಿಯರ ಬಳಿ ಹೋದ. ಅವನ ಒಂದು ಸ್ವಾರಿಗೆ ಹುಡುಗಿಯರ ಕೋಪ, ಅಳುಗಳೆಲ್ಲ ನಿಧಾನಕ್ಕೆ ಇಳಿದುಹೋಗಿತ್ತು. 

        ಪ್ರಕರಣವನ್ನು ನಮಗಿಂತ ಮೊದಲೇ ಮಕ್ಕಳು ಮರೆತುಬಿಟ್ಟಿದ್ದರೆಂಬುದನ್ನು ಒಂದೆರಡು ದಿನಗಳಲ್ಲೇ ಅವರೆಲ್ಲಾ ಜೊತೆಯಾಗಿ ಖುಷಿಯಿಂದ ಸಂವಹನ ನಡೆಸುವಾಗ ನನಗೆ ಅರಿವಾಗಿತ್ತು. ಪ್ರಕರಣ ಸುಖಾಂತವಾಗಿತ್ತು.

  ‌‌‌‌‌‌‌‌‌‌      ಈ ಘಟನೆಯಲ್ಲಿ ಬರುವ ಸೋನಾ ಮತ್ತು ಮೋನು ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದ ಮಕ್ಕಳು ಎಂಬುದರ ಕುರಿತಾಗಿ ನಾನು ಯೋಚನೆ ಮಾಡಿರಲಿಲ್ಲ. ಹಾಗೆ ಯೋಚನೆ ಮಾಡುವುದು ಸರಿಯೂ ಅಲ್ಲ ಬಿಡಿ. ಆದರೆ ಮೂರು ವರ್ಷಗಳ ನಂತರ ನಡೆದ ಇನ್ನೊಂದು ಘಟನೆ ಈ ಘಟನೆಯನ್ನು, ಮಕ್ಕಳ ಧರ್ಮಗಳನ್ನೂ ನೆನಪಿಸುವಂತೆ ಮಾಡಿತ್ತು.

‌ ‌‌‌‌     ‌   ಮೂರು ವರ್ಷದ ನಂತರದ ಈ ಪ್ರಕರಣದ ಹುಡುಗಿಯ ಹೆಸರೂ ಸೋನಾ ಎಂಬುದಾಗಿರುವುದು ಕಾಕತಾಳೀಯವಷ್ಟೆ. ಒಂದು ದಿನ ಎಸ್ಡಿಎಂಸಿ ಸದಸ್ಯರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರಲ್ಲಿ ಗಂಭೀರ ವಿಚಾರವೊಂದನ್ನು ಹೇಳಿದರು. ಅವರು ಹೇಳಿದ್ದರ ಸಾರಾಂಶ ಇಷ್ಟು -ಎರಡು ಮೂರು ದಿನಗಳ ಹಿಂದೆ ಶಾಲೆಯಿಂದ ಮನೆಗೆ ಹೋಗುತ್ತಿರುವಾಗ ಏಳನೇ ತರಗತಿಯ ಸೋನಾಳಿಗೆ ಅವಳ ತರಗತಿಯವನೇ ಆದ ಜಾನು ತೀರಾ ಕೆಟ್ಟದಾಗಿ ಮಾತನಾಡಿದ್ದಾನೆ. ಆಕೆ ಮನೆಗೆ ಹೋಗಿ ಜೋರಾಗಿ ಅತ್ತಿದ್ದಾಳೆ. ಕೋಪಗೊಂಡ ತಂದೆ ತನ್ನ ಪರಿಚಯದ ಯುವಕರಲ್ಲಿಯೂ ಹಂಚಿಕೊಂಡಿದ್ದಾರೆ. ಬೇರೆ ಧರ್ಮದ ಹುಡುಗ ನಮ್ಮ ಹುಡುಗಿಗೇ ಏನೋ ಹೇಳಿದ್ದಾನೆಂದರೆ ಸುಮ್ಮನೆ ಬಿಡಬಾರದು ಅವನಿಗೊಮ್ಮೆ ಬುದ್ಧಿ ಕಲಿಸಬೇಕು ಎಂದು ಈ ಯುವಕರು ತೀರ್ಮಾನಿಸಿದ್ದಾರೆ. ಅದೇ ಗುಂಪಿನ ಭಾಗವಾಗಿದ್ದ ಈ ಎಸ್ಡಿಎಂಸಿ ಸದಸ್ಯರು ಅವರನ್ನೆಲ್ಲಾ ತಡೆದು , ಒಮ್ಮೆ ಶಾಲೆಯಲ್ಲಿ ಮಾತಾಡುತ್ತೇನೆಂದು ಬಂದಿದ್ದಾರೆ.

         ನಮಗೆ ಅವರು ಹೇಳಿದ ವಿಚಾರದ ಸತ್ಯಾಸತ್ಯತೆಯ ಬಗ್ಗೆಯೇ ಅನುಮಾನ ಹುಟ್ಟಿತ್ತು. ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಸಾಧುಸ್ವಭಾವದ ಹುಡುಗ ಜಾನು. ತೀರಾ ಮುಗ್ಧನಾದ ಅವನು ಇಲ್ಲಿಯವರೆಗೆ ಯಾರೊಂದಿಗೂ ಜಗಳವಾಡಿದ್ದನ್ನಾಗಲೀ, ಯಾರನ್ನು ನೋಯಿಸಿದ್ದನ್ನಾಗಲೀ ನಾವು ನೋಡಿದ್ದವರಲ್ಲ. ಹೀಗಿರುವ ಹುಡುಗ ತನ್ನ ಸಹಪಾಠಿಗೆ ಕೆಟ್ಟದ್ದೇನೋ ಮಾತನಾಡಿದ್ದನೆಂದರೆ ನಂಬಲು ಸಾಧ್ಯವೇ?

         ಏನಾಗಿದೆಯೆಂದು ತಿಳಿಯಲು ಮಕ್ಕಳನ್ನು ಕರೆದೆವು. ಜಾನು ಆ ದಿನ ಶಾಲೆಗೆ ಬಂದಿರಲಿಲ್ಲ. ಸೋನಾಳನ್ನು ಮಾತನಾಡಿಸಿ ನೋಡಿದರೆ ಅವಳಿಗೂ ಈ ಘಟನೆಗಳೆಲ್ಲಾ ವಿಚಿತ್ರವಾಗಿ ಕಾಣಿಸಿದ್ದವು. ಸತ್ಯ ಏನೆಂದರೆ ಜಾನು ಮನೆಗೆ ಹೋಗುವಾಗ ಸೋನಾಳ ಮನೆಯ ಬಳಿಯಿಂದಲೇ ಹೋಗಬೇಕಿತ್ತು. ಹಾಗೆ ಹೋಗುತ್ತಿರುವಾಗ ಜಾನು ಸೋನಾಳ ಮನೆಯ ಬಗ್ಗೆ ಸಹಜವಾಗಿ ಏನೋ ಕೇಳಿದ್ದಾನೆ. ತನ್ನ ಮನೆಯೊಳಗಿನ ಕೌಟುಂಬಿಕ ಸಮಸ್ಯೆಗಳಿಂದ ಸಾಕಷ್ಟು ನೊಂದಿದ್ದ ಸೋನಾಳಿಗೆ ಅವನ ಪ್ರಶ್ನೆ ಸಮಸ್ಯೆಗಳನ್ನು ಮತ್ತಷ್ಟು ನೆನಪಿಸಿದೆ. ಮನೆಗೆ ಹೋಗಿ ಅಳುತ್ತಾ ಕುಳಿತಿದ್ದ ಅವಳನ್ನು ಪ್ರಶ್ನಿಸಿದ ನೆರೆಮನೆಯಾಕೆಗೆ ಜಾನು ಕೇಳಿದ ಪ್ರಶ್ನೆಯನ್ನು ಹೇಳಿದ್ದಾಳೆ. ನೆರೆಮನೆಯಾಕೆ ಆ ಪ್ರಶ್ನೆಯನ್ನೇ ಅಪಾರ್ಥ ಮಾಡಿಕೊಂಡು ಸೋನಾಳ ತಂದೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಆ ಪುಣ್ಯಾತ್ಮ ಮಗಳನ್ನೂ ವಿಚಾರಿಸದೇ ಏನೇನೋ ಯೋಚಿಸಿ ತಲೆ ಕೆಡಿಸಿಕೊಂಡು ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದಾರೆ.

         ಕೊನೆಗೆ ಹುಡುಗನ ಮುಗ್ಧತೆಯನ್ನೂ, ಘಟನೆಯ ವಿವರವನ್ನೂ ದೂರು ತಂದ ಸದಸ್ಯರಿಗೆ ವಿವರಿಸಿದೆವು. 'ಆ ಜಾತಿಯ ಹುಡುಗ ಬರೀ ಪಾಪ ಅಂದರೆ ನಂಬುವುದು ಕಷ್ಟ' ಎಂಬ ಡೈಲಾಗೊಂದನ್ನು ಉದುರಿಸಿದರಾದರೂ ಪ್ರಕರಣವನ್ನು ಅರ್ಥಮಾಡಿಕೊಂಡರು. ಎಲ್ಲರನ್ನೂ ತಣ್ಣಗಾಗಿಸುವುದಾಗಿ ಮಾತುಕೊಟ್ಟರು.

        ವಿಚಿತ್ರವೆಂದರೆ ವಿಷಯ ನಮಗೆ ತಲುಪುವ ಮೊದಲೇ ಹುಡುಗ ಜಾನುವಿನ ಮನೆ ತಲುಪಿತ್ತು. ಅವನ ಮನೆಯವರೂ ಅವನಿಗೊಂದಿಷ್ಟು ಜೋರು ಮಾಡಿದ್ದರು. ಜಾನು ಭಯದಿಂದಲೇ ಶಾಲೆಗೆ ರಜೆ ಮಾಡಿದ್ದ. ಜಾನುವಿನ ತಂದೆಗೆ ಕರೆ ಮಾಡಿ ತಂದೆಯೊಡನೆ ಶಾಲೆಗೆ ಕರೆಸಲಾಗಿತ್ತು. ಭಯದಿಂದ ಗಡಗಡನೆ ನಡುಗುತ್ತಿದ್ದ ಜಾನು ತಾನು ಮಾಡಿದ ತಪ್ಪೇನು ಎನ್ನುವುದೂ ಅರಿವಾಗದೇ ತಳಮಳಗೊಂಡಿದ್ದ. ಜಾನುವಿಗೆ ಧೈರ್ಯ ತುಂಬಿದೆವು. ಚಿಕ್ಕ ಅಪಾರ್ಥದಿಂದಾದ ಸಮಸ್ಯೆ ಎನ್ನುವುದು ಜಾನುವಿನ ತಂದೆಗೂ ಅರ್ಥವಾಯಿತು. ಅಲ್ಲಿಗೆ ಈ ಪ್ರಕರಣವೂ ಸುಖಾಂತವಾಯಿತು.

        ಏನೂ ತಪ್ಪು ಮಾಡದೇ ಜಾನು ಈ ಲೆವೆಲ್ಲಿಗೆ ನಡುಗಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂದ ಮೇಲೆ ಹಿಂದಿನ ಪ್ರಕರಣದ ಮೋನು ಬರೆದ ಸಣ್ಣ ಚೀಟಿಯ ವಿಷಯ ನಮಗೆ ತಿಳಿಯದೇ ಶಾಲೆಯಿಂದ ಹೊರಗೆ ಹೋಗಿದ್ದರೆ ಏನಾಗುತ್ತಿತ್ತು‌ಎಂದು ಊಹಿಸಿಕೊಂಡೇ ನನಗೆ ಮೈ ನಡುಗಿತ್ತು. ಮಕ್ಕಳ ವೈಮನಸ್ಸು, ವ್ಯಾಜ್ಯಗಳು ಶಾಲೆಯೊಳಗಡೆ ಬಗೆಹರಿದರೆ ಅದೆಷ್ಟು ಸರಳ ಎನ್ನುವುದನ್ನು ಮೊದಲ ಪ್ರಕರಣ ತಿಳಿಸಿದ್ದರೆ, ಅವು ಶಾಲೆಯಿಂದ ಹೊರ ಹೋದರೆ ಎಂತಹ ಅನಾಹುತವಾಗುತ್ತದೆ ಎನ್ನುವುದನ್ನು ಎರಡನೇ ಪ್ರಕರಣ ಬಹಳ ಚೆನ್ನಾಗಿ ಅರ್ಥ ಮಾಡಿಸಿತ್ತು.

                       - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment