ಶಿಕ್ಷಕನ ಡೈರಿಯಿಂದ
ಅಕುಲು ಗೋಲಿಬಜೆ ತಿಂತಿಜ್ಜೆರಾ?

ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಂದ ಅಪಾರವಾದ ಗೌರವ ಮತ್ತು ಪ್ರೀತಿಯನ್ನು ಗಳಿಸುತ್ತಾನೆ ಎನ್ನುವುದು ಎಷ್ಟು ಸತ್ಯವೋ, ಅದೇ ವಿದ್ಯಾರ್ಥಿಗಳ ಸಿಟ್ಟು-ಸೆಡವು- ಪ್ರತಿಭಟನೆಗಳಿಗೆ, ವ್ಯಂಗ್ಯ- ವಿಡಂಬನೆಗಳಿಗೆ, ಹಾಸ್ಯ- ಅಪಹಾಸ್ಯಗಳಿಗೂ ಪಾತ್ರನಾಗುತ್ತಾನೆ ಎನ್ನುವುದು ಅಷ್ಟೇ ಸತ್ಯ. ಅವುಗಳನ್ನೆಲ್ಲಾ ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಆಧಾರದ ಮೇಲೆ ಶಿಕ್ಷಕನ ಯಶಸ್ಸು ನಿರ್ಧರಿತವಾಗುತ್ತದೆ.
ಈ ಘಟನೆ ನಡೆದದ್ದು ಎಂಟೋ ಹತ್ತೋ ವರ್ಷಗಳ ಹಿಂದೆ. ಏಳನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದೆ. ಸುಮಾರು 35-40 ವಿದ್ಯಾರ್ಥಿಗಳಿದ್ದ ತರಗತಿ ಅದು. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಅಜಿತ್(ಹೆಸರು ಬದಲಿಸಿದೆ) ಡೆಸ್ಕಿನೊಳಗಿಂದ ಏನನ್ನೋ ತೆಗೆದು ತಿನ್ನುತ್ತಿರುವುದು ಕಾಣಿಸಿತು. "ಅಜಿತ್, ಏನ್ ತಿನ್ತಾ ಇದ್ದಿ?" ಕಳ್ಳನನ್ನು ಹಿಡಿದೇಬಿಟ್ಟೆ ನೋಡು ಎಂಬ ಭಾವದಲ್ಲಿ ಕೇಳಿದೆ. "ಏನದು? ಕಡ್ಲೆಯಾ, ಬಟಾಣಿಯಾ?" ಧ್ವನಿಯಲ್ಲಿ ಅತಿಕೋಪವೇನೂ ಇರಲಿಲ್ಲ.. ಆದರೆ ಒಂದಿಷ್ಟು ಗಂಭೀರತೆಯಿತ್ತು, ತುಸು ಅಸಹನೆಯಿತ್ತು.
ಅಜಿತ್ ಪಠ್ಯದ ಕಲಿಕೆಯಲ್ಲಿ ನಿಧಾನಗತಿಯವನಾಗಿದ್ದರೂ ಉಳಿದೆಲ್ಲಾ ಚಟುವಟಿಕೆಯಲ್ಲಿ ಚುರುಕಾಗಿದ್ದವ. ಸ್ವಭಾವದಲ್ಲಿ ಉಳಿದವರಿಗಿಂತ ಕೊಂಚ ಭಿನ್ನ. ಖುಷಿಯ ಮೂಡಿನಲ್ಲಿದ್ದಾಗ ಅತೀ ವಿನೋದ ಮಾಡಿಕೊಂಡಿರುವ ಈತನಿಗೆ ಸಿಟ್ಟು ಮಾತ್ರ ಮೂಗಿನ ತುದಿಯಲ್ಲಿರುತ್ತಿಂತೆ. ಸಹಪಾಠಿಗಳ ಮೇಲೆ, ವಿಶೇಷವಾಗಿ ಹುಡುಗಿಯರ ಮೇಲೆ ಸಣ್ಣ ವಿಚಾರಕ್ಕೂ ಸಿಟ್ಟು ಉತ್ತುಂಗಕ್ಕೇರುತ್ತಿತ್ತಂತೆ. ಅವನಿಗೆ ಸಿಟ್ಟು ಬಂದಾಗ ಉಳಿದ ಮಕ್ಕಳು ತೆಪ್ಪಗಿರುತ್ತಿದ್ದರೆಂದೂ, ಒಂದೆರಡು ನಿಮಿಷಗಳಲ್ಲಿ ಅವನ ಸಿಟ್ಟು ತಣ್ಣಗಾಗುತ್ತಿತ್ತೆಂದೂ ಹಿಂದಲ್ಲೋ ಮಕ್ಕಳೊಂದಿಗೆ ಮಾತಾಡುವಾಗ ನಾನು ತಿಳಿದಿದ್ದೆ.
ಇಲ್ಲಿಯವರೆಗೆ ಸಹಪಾಠಿಗಳ ಮೇಲಷ್ಟೇ ಸಿಟ್ಟಾಗುತ್ತಿದ್ದ ಅಜಿತನಿಗೆ ಈಗ ನನ್ನ ಮೇಲೂ ಸಿಟ್ಟು ಬಂದಿತ್ತು. ಅವನು ತಿನ್ನುವುದು ನನ್ನ ಕಣ್ಣಿಗೆ ಬೀಳಲಾರದು ಎಂದು ನಿರೀಕ್ಷಿಸಿದ್ದ ಅವನಿಗೆ ನನ್ನ ಪ್ರಶ್ನೆ ಮತ್ತು ಅವನೆಡೆಗಿನ ಉಳಿದ ವಿದ್ಯಾರ್ಥಿಗಳ ನೋಟ ಬಹುದೊಡ್ಡ ಅವಮಾನ ಎನಿಸಿತ್ತು. ನನ್ನ ಪ್ರಶ್ನೆಗಳಿಗೆ ಉತ್ತರಿಸದೆ, ಸಿಟ್ಟಿನಿಂದ ಕುದಿಯುತ್ತಾ ತಲೆ ತಗ್ಗಿಸಿ ಕುಳಿತುಬಿಟ್ಟ. ನಾನು ಮತ್ತೆ ಅವನ ಹೆಸರನ್ನು ಕರೆದು ಪ್ರಶ್ನಿಸಿದೆ. ಅವನ ಪಕ್ಕದಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಅವನಿಗೆ ಎದ್ದು ನಿಲ್ಲಲು ಹೇಳುತ್ತಿದ್ದರು.. "ಅಕುಲು ಆಫೀಸ್ ರೂಮ್ಡ್ ಗೋಳಿಬಜೆ ತಿನ್ಪುಜ್ಜೆರಾ? ( ಅವರು ಆಫೀಸ್ರೂಮಿನಲ್ಲಿ ಗೋಳಿಬಜೆ ತಿನ್ನುವುದಿಲ್ಲವಾ)" ಅಜಿತ್ ತನ್ನ ಕೋಪವನ್ನು ಮಾತೃಭಾಷೆ ತುಳುವಿನಲ್ಲಿ ಸ್ಫೋಟಿಸಿದ್ದ..
ತರಗತಿ ಒಮ್ಮೆಲೇ ಸ್ತಬ್ಧವಾಗಿತ್ತು. ಮಕ್ಕಳ ದೃಷ್ಟಿಯಲ್ಲಿ ಅವನು ಆಡಬಾರದ್ದೇನೋ ಆಡಿಬಿಟ್ಟಿದ್ದ. ಅವನು ಹೇಳಿದ ವಿಷಯ ಸತ್ಯವೇ ಆಗಿತ್ತು. ಮೂರ್ನಾಲ್ಕು ದಿನದ ಹಿಂದೆ ಶಿಕ್ಷಕರ ನಡುವೆ ಟೀ ಪಾರ್ಟಿಯೊಂದು ನಡೆದಿತ್ತು. ಈಗ ಪ್ರತಿಕ್ರಿಯೆ ಕೊಡಬೇಕಾದ ಸರದಿ ನನ್ನದು. ವಿದ್ಯಾರ್ಥಿಯೊಬ್ಬ 'ನನ್ನನ್ನು ಪ್ರಶ್ನಿಸುವ ನೈತಿಕ ಅರ್ಹತೆ ನಿಮಗಿಲ್ಲ' ಎಂಬರ್ಥದಲ್ಲಿ ಮಾತನಾಡುವಾಗ ಶಿಕ್ಷಕನೊಬ್ಬ ಹೇಗೆ ಪ್ರತಿಕ್ರಿಯಿಸಬಹುದು?
ನಾನು ಸುಮ್ಮನೆ ನಕ್ಕುಬಿಟ್ಟೆ. ನಗುವುದನ್ನು ಬಿಟ್ಟು ಇನ್ನೇನೇ ಮಾಡಿದ್ದರೂ ಉಳಿದ ಮಕ್ಕಳೆದುರು ನಾನು ತೀರಾ ಸಣ್ಣವನಾಗುತ್ತಿದ್ದೆನೆಂದು ನನಗನಿಸುತ್ತದೆ. ನನ್ನ ನಗು ಮಕ್ಕಳಲ್ಲೂ ಸಣ್ಣ ನಗೆ ಮೂಡಿಸಿತ್ತು. ನಗುತ್ತಾ " ಅಲ್ಲಾ ಮಾರಾಯ, ಆಫೀಸ್ರೂಮಲ್ಲಿ ತುಂಬಾ ಜನರಿರುವಾಗ ಯಾರೋ ಒಬ್ಬರು ಮೂಲೆಯಲ್ಲಿ ಕುಳಿತು ಗೋಲಿಬಜೆ ತಿನ್ತಾ ಇದ್ರಾ? ಇಲ್ಲಿ ಇಷ್ಟು ಜನರಿರುವಾಗ ನೀನೊಬ್ನೇ ತಿನ್ನುವುದಾ?" ಕೇಳಿದೆ. ಅಜಿತ್ ಮೌನವಾಗಿದ್ದ. " ಈಗ ಒಂದು ಕೆಲಸ ಮಾಡುವ... ನಿನ್ನತ್ರ ಇರುವ ಬಟಾಣಿಯನ್ನು ತರಗತಿಯ ಎಲ್ಲರೊಡನೆ ಹಂಚಿ ತಿಂದರೆ ಚೆನ್ನಾಗಿರೋದಿಲ್ವಾ?" ಕೇಳಿದೆ. ಹುಡುಗ ಮಾತನಾಡಲಿಲ್ಲ. ಅವನ ಕೋಪ ಹಾಗೆಯೇ ಮುಂದುವರೆದಿತ್ತು. ಆದರೆ ಬಟಾಣಿ ಪ್ಯಾಕೆಟ್ ಪಕ್ಕದಲ್ಲಿರುವ ಸ್ನೇಹಿತನ ಕೈಯಲ್ಲಿಟ್ಟ.. ಸ್ನೇಹಿತ ಪ್ಯಾಕೆಟ್ನೊಂದಿಗೆ ಎಲ್ಲರ ಸ್ಥಳಗಳಿಗೆ ಹಂಚಲುಹೊರಟ.. ಅವನ ಕೋಪಕ್ಕಂಜಿದ ಹೆಚ್ಚಿನವರು ನಿರಾಕರಿಸಿದರು. ಇಬ್ಬರೋ ಮೂವರೋ ಒಂದೆರಡು ಕಾಳುಗಳನ್ನು ಬಾಯಿಗಿಟ್ಟರು. ಉಳಿದದ್ದು ಪುನಃ ಅಜಿತನ ಬ್ಯಾಗಿಗಿಳಿಯಿತು.
ಪಾಠ ಮುಂದುವರಿಯಿತು.. ಆ ಅವಧಿ ಮುಗಿಯುವುದರೊಳಗೆ ಅಜಿತನ ಸಿಟ್ಟು ಮಾಯವಾಗಿ ನಸುನಾಚಿಕೆ ಕಾಣಿಸಿಕೊಂಡಿತ್ತು. ಮುಂದೆ ಆ ಘಟನೆಯನ್ನು ಯಾರು ನೆನಪಿಸದರೂ ಅವನಲ್ಲಿ ಕಾಣಿಸುತ್ತಿದ್ದುದು ನಾಚಿಕೆಯ ನಗುವೊಂದೇ.. ಆದರೆ ಅವನು ಎತ್ತಿದ ಪ್ರಶ್ನೆ ನನಗಂತೂ ಸದಾ ನೆನಪಿರುತ್ತದೆ. ಬಹುಶಃ ಪ್ರತಿಯೊಬ್ಬ ಶಿಕ್ಷಕನನ್ನೂ ಚಿಂತನೆಗೆ ಹಚ್ಚಿಸಬಹುದಾದ ಪ್ರಶ್ನೆ ಇದು...
- ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏