ವಿದ್ಯಾಗಮ – ನೆನಪುಗಳು ಘಮಘಮ – ಶಿಕ್ಷಕನ ಡೈರಿಯಿಂದ 30

ಶಿಕ್ಷಕನ ಡೈರಿಯಿಂದ

ವಿದ್ಯಾಗಮ – ನೆನಪುಗಳು ಘಮಘಮ

  ಹೊಸದಾಗಿ ನಿರ್ಮಾಣಗೊಂಡಿದ್ದ ಆ ಅಂಗಡಿ ಕೊಠಡಿಯ ಒಳಗೆ ಸುಮಾರು ಇಪ್ಪತ್ತು ಮಕ್ಕಳನ್ನು ಕುಳ್ಳಿರಿಸಿಕೊಂಡು ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕರೆದು, ಅವರು ಬರೆದುದನ್ನೆಲ್ಲಾ ಪರಿಶೀಲಿಸುತ್ತಿದ್ದ ನನ್ನ ಫೋನ್ ರಿಂಗಿಣಿಸಿತು. "ಸರ್, ನಿಮ್ಮ ಏರಿಯಾದಲ್ಲೊಂದು ಕೇಸಿದೆಯಂತಲ್ಲಾ.. ಆ ಕಡೆಯ ಮಾಸ್ಟ್ರೊಬ್ಬರು ಫೋನು ಮಾಡಿದ್ರು" ಎಂದು ಸಹೋದ್ಯೋಗಿಯೊಬ್ಬರು ಹೇಳಿದಾಗ ಒಂದು ಕ್ಷಣ ನಾನು ಬೆಚ್ಚಿಬಿದ್ದಿದ್ದೆ. ಸುತ್ತಲೂ ಮಕ್ಕಳನ್ನು ನೋಡಿದೆ. ಎಲ್ಲರೂ ಮಾಸ್ಕ್ ಧರಿಸಿಕೊಂಡು ದೂರದೂರದಲ್ಲೇ ಕುಳಿತುಕೊಂಡಿದ್ದರು. ನಾನೂ ಮಾಸ್ಕ್, ಸ್ಯಾನಿಟೈಜರ್ಗಳಲ್ಲದೇ ಮಕ್ಕಳಿಂದ‌ ಅಂತರವನ್ನು ಕಾಯ್ದುಕೊಂಡಿದ್ದೆ. ನನ್ನ ಮುನ್ನೆಚ್ಚರಿಕೆಯ ಕ್ರಮಗಳ ಕುರಿತಾದ ಆತ್ಮವಿಶ್ವಾಸದಿಂದಾಗಿ ನಾನು ಆ ಕರೆಯಿಂದಾಗಿ ವಿಚಲಿತನಾಗದೇ ನನ್ನ ಕೆಲಸವನ್ನು ಮುಂದುವರೆಸಿದೆ. ಬಹುಶಃ ಅದು ಮೊದಲ ದಿನವಾಗಿರದಿದ್ದರೆ ನಾನು ಅಷ್ಟೊಂದು ಮುಂಜಾಗ್ರತೆ ವಹಿಸುತ್ತಿರಲಿಲ್ಲವೇನೋ..

  ಕೋವಿಡ್ -19 ಕಾರಣದಿಂದ ತಿಂಗಳುಗಟ್ಟಲೆ ಶಾಲೆಗಳು ಮುಚ್ಚಿ, ಮಕ್ಕಳು ಶಿಕ್ಷಣವಂಚಿತರಾಗುತ್ತಿರುವುದನ್ನು ಗಮನಿಸಿ ಸರ್ಕಾರ "ವಿದ್ಯಾಗಮ" ಎಂಬ ಹೆಸರಿನ ಅರ್ಥಪೂರ್ಣ ಕಾರ್ಯಕ್ರಮವನ್ನು ಆರಂಭಿಸಿತ್ತು. ಅದರ ಪ್ರಕಾರ ಶಿಕ್ಷಕರಾದ ನಾವುಗಳು ಮಕ್ಕಳ ಮನೆಯ ಹತ್ತಿರದ ಸ್ಥಳಗಳಿಗೆ ಹೋಗಿ ಯಾವುದಾದರೂ ಮನೆ ಅಥವಾ ಸಾರ್ವಜನಿಕ ಕಟ್ಟಡಗಳನ್ನು ವಠಾರ ಶಾಲೆಗಳನ್ನಾಗಿಸಿಕೊಂಡು ಅಲ್ಲಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಬೇಕಿತ್ತು. ಹೇಳಿ ಕೇಳಿ ನಮ್ಮದು ಬಹುದೊಡ್ಡ ಶಾಲೆ. ಶಾಲಾವಾಹನವೂ ಸೇರಿದಂತೆ ಖಾಸಗಿ ಶಾಲೆಗೆ ಸ್ಪರ್ಧೆಯೊಡ್ಡುವ ಸೌಲಭ್ಯಗಳಿಂದಾಗಿ ಬಹಳ ದೂರದಿಂದ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದರು. ಆ ದೂರದ ಪ್ರದೇಶಗಳಿಗೆ ವಿದ್ಯಾಗಮದ ಬಂಡಿ ಎಳೆಯುವ ಜವಾಬ್ದಾರಿ ನಮ್ಮದಾಯಿತು. ಶಾಲೆಯ ಹತ್ತಿರದ ಮಕ್ಕಳಾದರೋ, ಗುಂಪುಗುಂಪಾಗಿ ಸಿಗುತ್ತಾರೆ. ಹೊರಗಿನ ಊರುಗಳಿಂದ ಬರುವ ಮಕ್ಕಳು ದೂರದೂರದ ಮನೆಗಳಿಂದ ಬರುವವರಾದ್ದರಿಂದ ಅವರನ್ನು ತಲುಪುವುದೂ ಕಷ್ಟವಿತ್ತು. ಈ ಬಗೆಯ ಹೊರಗಿನ ಗ್ರಾಮಗಳ ಮಕ್ಕಳನ್ನು ತಲುಪುವ ಹೊಣೆ ನನ್ನನ್ನೂ ಸೇರಿದಂತೆ ಮೂವರು ಶಿಕ್ಷಕರ ಹೆಗಲೇರಿತು. ಪೋಷಕರ ಸಭೆ ಕರೆಯಲಾಯಿತು. ಪೋಷಕರೇ ವಠಾರ ಶಾಲೆಗೆ ಸ್ಥಳಗಳನ್ನು ನಿರ್ಧರಿಸಿದರು. ಒಂದು ಖಾಲಿಯಿರುವ ಅಂಗಡಿ ಕೊಠಡಿ, ಒಂದು ಭಜನಾ ಮಂದಿರ, ಮುಚ್ಚಿ ಹೋಗಿರುವ ಒಂದು ಹಳೇ ಶಾಲೆ, ವಿದ್ಯಾರ್ಥಿನಿಯೊಬ್ಬಳ ಮನೆ ಹೀಗೆ ನಾಲ್ಕು ವಠಾರ ಶಾಲೆಗಳಿಗೆ ಹೋಗುವ ಯೋಜನೆ ನನ್ನದಾಯಿತು.

   ಮೊದಲ ದಿನ ಮೊದಲ ವಠಾರ ಶಾಲೆಗೆ ಹೋದಾಗ, ಪೋಷಕರು ಉತ್ಸಾಹದಿಂದ ಕೊಠಡಿಯನ್ನು ಸ್ವಚ್ಛಗೊಳಿಸಿ, ರಂಗೋಲಿಯಿಟ್ಟು ಕಾತರದಿಂದ ಕಾಯುತ್ತಿದ್ದರು. ಅವರ ಕಣ್ಣುಗಳಲ್ಲಿ ಕಾತರ, ಆಶಾಭಾವ. ನಾನೂ ಉತ್ಸಾಹದಿಂದಲೇ ಹೋಗಿದ್ದೆ. ಮೂರ್ನಾಲ್ಕು ತಿಂಗಳುಗಳಿಂದ ಮಕ್ಕಳ ಮುಖವನ್ನೇ ನೋಡದೇ ಒಂದು ಬಗೆಯಲ್ಲಿ ಬರಗೆಟ್ಟು ಕುಳಿತಿದ್ದ ನನಗೆ ಆ ಕ್ಷಣದಲ್ಲಿ ನನ್ನ ನೈಜ ಬದುಕಿಗೆ ಪುನರಾಗಮನ ಮಾಡಿದ ಸಂಭ್ರಮ. ಅಂತಹ ಸಂಭ್ರಮದ‌ ನಡುವೆಯೇ ಸಹೋದ್ಯೋಗಿಯಿಂದ ಆ ಫೋನ್ ಕರೆ ಬಂದಿದ್ದು. ಆ ಪ್ರದೇಶದಲ್ಲಿ ಒಂದೆರಡು ದಿನಗಳ‌‌ ಹಿಂದೆ ಕೋವಿಡ್ -19 ಕೇಸು‌ ದಾಖಲಾಗಿದೆ ಎಂಬ ಸುದ್ದಿ ತಿಳಿದಿದ್ದು.

   ಆ ದಿನಗಳಲ್ಲಿ ಕೋವಿಡ್-19 ಕುರಿತಾದ ಭಯ ಅದರ ಔನ್ನತ್ಯದಲ್ಲಿತ್ತು‌. ಹಾಗಾಗಿ ಆ ಸುದ್ದಿಯನ್ನು ತಕ್ಷಣ ಪೋಷಕರೆಲ್ಲರ ಕಿವಿಗೆ ಹಾಕಿದರೆ ಗಾಬರಿಯಾದಾರು ಎಂದು ಸುಮ್ಮನಾದೆ. ಆ ಸ್ಥಳದಲ್ಲಿ ತರಗತಿ ನಡೆಸಲು ವ್ಯವಸ್ಥೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಪೋಷಕರೊಬ್ಬರಲ್ಲಿ ಪ್ರಶ್ನಿಸಿದೆ. "ಇಲ್ಲ ಸರ್.. ಹಾಗೇನಾದರೂ ಇದ್ದರೆ ನಮ್ಮ ಮಕ್ಕಳೆಲ್ಲಾ ಬರುತ್ತಿದ್ದರಾ?" ಕೇಳಿದರು. ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ ಮತ್ತೊಂದು ಕಡೆಯ ಫೋನ್ ಬಂದಿತ್ತು. ಮೊದಲ ಬಾರಿ ನನ್ನ ಸಹೋದ್ಯೋಗಿಗೆ ಕರೆ ಮಾಡಿ ಹೇಳಿದ್ದ ವ್ಯಕ್ತಿ ಇನ್ನೂ ಕೆಲವರಿಗೆ ಕರೆ ಮಾಡಿ ಭೀತಿ ಹುಟ್ಟಿಸಿದ್ದರು. ಸ್ಥಳೀಯರನ್ನು ಮತ್ತೂ ವಿಚಾರಿಸಿ ನೋಡಿದೆ. ಅದೇ ಪ್ರದೇಶಕ್ಕೆ ಸೇರಿದ ವ್ಯಕ್ತಿಯೊಬ್ಬರು ಸೋಂಕಿತರಾಗಿದ್ದುದು ನಿಜ.., ಆದರೆ ಅವರೀಗ ಇರುವುದು ಪಕ್ಕದ ಊರಿನಲ್ಲಿ‌‌ ಎಂಬುದು ತಿಳಿಯಿತು. ಆದರೂ ನಾನು ಜಾಗರೂಕನಾಗಲೇಬೇಕಿತ್ತು.

   ಉಳಿದ ವಠಾರ ಶಾಲೆಗಳಲ್ಲಿ ಕಡಿಮೆ ಸಂಖ್ಯೆಯ ಮಕ್ಕಳಿದ್ದರು, ಅಲ್ಲಿ ನಿರಾತಂಕವಾಗಿ ತರಗತಿ ನಡೆಸಲು ಸಾಧ್ಯವಾಯಿತು‌. ಇಲ್ಲೊಂದು ಕಡೆ ಒಂದು ಜಾಗದಲ್ಲಿ ಹೆಚ್ಚು ಮಕ್ಕಳನ್ನು ಸೇರಿಸಬೇಕಾಗಿದ್ದುದೇ ಕಷ್ಟವಾದ ಸಂದರ್ಭದಲ್ಲಿ, ಈ ಕೇಸೊಂದರ ಭೀತಿ ಮತ್ತೊಂದು ಸವಾಲನ್ನು ಸೃಷ್ಟಿಸಿತ್ತು. ಒಂದು ದಿನ ಮಕ್ಕಳು ನಾನು ಬೈಕಿನಲ್ಲಿ ಹೋಗುವ ದಾರಿಯಲ್ಲಿ ನಿಂತು ತಮ್ಮ ಹೋಮ್ವರ್ಕ್ಗಳನ್ನು ನೀಡಲು ಹೇಳಿದೆ. ಆಗ ನನಗೆ ಅರಿವಾಗಿದ್ದು ಈ ಮಕ್ಕಳು ಎಷ್ಟೆಲ್ಲಾ ದೂರದಿಂದ ಈ ವಠಾರ ಶಾಲೆಗೆ ಬರುತ್ತಾರೆ ಎನ್ನುವುದು. ಪರಿಣಾಮ ನಾಲ್ಕರಲ್ಲಿದ್ದ ನನ್ನ ವಠಾರ ಶಾಲೆಗಳ‌ ಸಂಖ್ಯೆ ಮುಂದಿನ ವಾರದೊಳಗೆ ಎಂಟನ್ನು ತಲುಪಿತ್ತು.

    ಅದೃಷ್ಟವಶಾತ್ ಎಂತಲೇ ಹೇಳಬಹುದು, ನನಗೆ ಸಿಕ್ಕಿದ 42 ಮಕ್ಕಳಲ್ಲಿ ಹೆಚ್ಚಿನವರು ನಾಲ್ಕನೇ ತರಗತಿಯ ಒಳಗಿನವರೇ‌ ಆಗಿದ್ದರು, ಮತ್ತು ಪೋಷಕರು‌ ಶಿಕ್ಷಣ ಪಡೆದವರೇ ಆಗಿದ್ದರು. ಬಹಳಷ್ಟು ಮಂದಿ ಖಾಸಗಿ ಶಾಲೆಗಳಿಂದ ನಮ್ಮ ಶಾಲೆಗೆ ಬಂದವರೂ ಇದ್ದರು. ಮಕ್ಕಳಿಗೆ ತುಸು ಮಾರ್ಗದರ್ಶನ ಮಾಡಿ ಮನೆಯಲ್ಲಿ ಮಾಡಲು ಸೂಕ್ತ ಚಟುವಟಿಕೆಗಳನ್ನು ಕೊಟ್ಟು ಬಂದರೆ ಪೋಷಕರು ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದರು. ಹಾಗಾಗಿ  ಸುಮಾರು ಐದು ಗ್ರಾಮಗಳ ಗಡಿ ಪ್ರದೇಶಗಳನ್ನು ತಲುಪಿ ಎಂಟು ವಠಾರ ಶಾಲೆಗಳನ್ನು ನಡೆಸಲು ಸಾಧ್ಯವಾಯಿತು. ಆ ಸಂದರ್ಭದ ನೆನಪುಗಳು ಇಂದಿಗೂ ನನ್ನೊಳಗೆ ಕೃತಾರ್ಥ ಭಾವವನ್ನು ಮೂಡಿಸುತ್ತವೆ.

    *     *     *
 ಮುಚ್ಚಿ ಹೋಗಿದ್ದ ಹಳೇ ಅನುದಾನಿತ ಶಾಲೆಯೊಂದರ ಸ್ಟೇಜೊಂದರಲ್ಲಿ ನಾನು ತರಗತಿಯನ್ನು ನಡೆಸುತ್ತಿದ್ದೆ. ಒಂದು ರಾತ್ರಿ ಆ ಸ್ಥಳದಲ್ಲಿ ಯುವಕರು ಪಾರ್ಟಿಯೊಂದನ್ನು ನಡೆಸಿ ಹೋಗಿದ್ದರು. ಊಟದ ಅವಶೇಷಗಳು, ಬಾಟಲಿ ಚೂರುಗಳು ತುಂಬಿದ್ದ ಆ ಸ್ಥಳವನ್ನು ನಾನು ಹೋಗುವಾಗಲೇ ಮಕ್ಕಳ ತಾಯೊಬ್ಬರು ಬಂದು ಶುಚಿಗೊಳಿಸುತ್ತಿದ್ದರು. ನಾನು ಬರುವ ಮುಂಚೆ ಆ ಪ್ರದೇಶ ಸಂಪೂರ್ಣ ಶುಚಿಯಾಗಿರಬೇಕು ಎಂಬ ತರಾತುರಿ ಅವರಲ್ಲಿ ಕಾಣಿಸುತ್ತಿತ್ತು.

     *    *    *
  ಒಂದೇ ತರಗತಿಗೆ ಸೇರಿದ್ದ ನಾಲ್ಕೇ ಮಕ್ಕಳಿದ್ದ ಒಂದು ವಠಾರ ಶಾಲೆಯಲ್ಲಿ ಮೂವರು ಮಕ್ಕಳ ತಾಯಂದಿರು ಬಂದು ಕುಳಿತಿರುತ್ತಿದ್ದರು. ಅವರ ಆಸಕ್ತಿ ಮತ್ತು ಕುತೂಹಲ ನನಗೆ ತುಂಬಾ ಪ್ರಯೋಜನಕಾರಿ ಎನಿಸಿತ್ತು. ನಾನು ಮಕ್ಕಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ನನ್ನ ಶೈಕ್ಷಣಿಕ ಯೋಚನೆಗಳನ್ನು ಪೋಷಕರಿಗೆ ತುಂಬುತ್ತಿದ್ದೆ. ಅವರಿಗೆ ಸಲಹೆ ನೀಡುವಾಗ, ನನಗೆ ನಾನು ಮಾಡುತ್ತಿರುವುದು ಒಂದು ಬಗೆಯ 'ಶಿಕ್ಷಕ ತರಬೇತಿ' ಎನಿಸುತ್ತಿತ್ತು. ಅವರು ನಿಜಕ್ಕೂ ಮನೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದರು.

   *    *    *
ಸ್ಥಾವರವಾಗಿದ್ದ ಶಾಲೆ ವಿದ್ಯಾಗಮದಿಂದ ಜಂಗಮವಾಗಿತ್ತು. ನಾನೂ ಜಂಗಮನಾಗಿದ್ದೆ. ನನ್ನ ಎಂಟು ವಠಾರ ಶಾಲೆಗಳನ್ನು ತಲುಪಲು ಒಂಭತ್ತು ಹತ್ತು ಕಿಲೋಮೀಟರ್ ಕ್ರಮಿಸಬೇಕಾಗಿ ಬಂದರೂ, ಅದಕ್ಕೆ ಮೀರಿದ ಗೌರವವನ್ನು ಪೋಷಕರು ನೀಡುತ್ತಿದ್ದರು. ಅವರಿಗೆ ಬರಿಯ ಶಿಕ್ಷಕರೊಬ್ಬರು ತಮ್ಮಲ್ಲಿಗೆ ಬಂದರೆಂಬ ಭಾವವಿರುತ್ತಿರಲಿಲ್ಲ, ಬದಲಿಗೆ ಶಿಕ್ಷಕರು ಶಾಲೆಯನ್ನು ಹೊತ್ತುಕೊಂಡೇ ತಮ್ಮಲ್ಲಿಗೆ ಬಂದರು ಎಂಬ ಭಾವವನ್ನು ತೋರುತ್ತಿದ್ದರು. ಕೆಲವೆಡೆ ಚಹಾ, ಪಾನೀಯಗಳ ನೈವೇದ್ಯವೂ ಆಗುತ್ತಿತ್ತು. ತಮ್ಮ ಮಕ್ಕಳಿಗೆ ಕಲಿಸಿ ಹೋದ ಮಾಸ್ಟ್ರು ಸರಿಯಾದ ಸಮಯಕ್ಕೆ ಊಟ ಮಾಡಿದರೇ ಎಂಬ ಕಾಳಜಿಯೂ ಪೋಷಕರಿಂದ ವ್ಯಕ್ತವಾಗುತ್ತಿತ್ತು.

     *    *    *
  ಬೇರೆ ಬೇರೆ ಕಾರಣಗಳಿಂದ ವಿದ್ಯಾಗಮ‌ ಸ್ಥಗಿತಗೊಂಡಾಗ ನನಗಂತೂ‌ ನಿರಾಸೆಯಾಗಿತ್ತು. ಒಬ್ಬ ಶಿಕ್ಷಕನಾಗಿ ಮೊದಲಬಾರಿಗೆ ನನ್ನ ಕೆಲಸದ ಬಗ್ಗೆ ನೂರಕ್ಕೆ ನೂರು ಸಮಾಧಾನ ಮತ್ತು ಸಂತೃಪ್ತಿಯನ್ನು ನನ್ನೊಳಗೆ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು.

   - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment