ನಿಮ್ಮನ್ನೇ ನಂಬಿದ್ದೇವೆ…. – ನಿರೀಕ್ಷೆಗಳೆಂಬ ಪರೀಕ್ಷೆಗಳು! – ಶಿಕ್ಷಕನ ಡೈರಿಯಿಂದ 40

ಶಿಕ್ಷಕನ ಡೈರಿಯಿಂದ

ನಿಮ್ಮನ್ನೇ ನಂಬಿದ್ದೇವೆ…. – ನಿರೀಕ್ಷೆಗಳೆಂಬ ಪರೀಕ್ಷೆಗಳು!

        "ಸರ್... ನನ್ನ ಮಗಳ ಬಗ್ಗೆ ಸ್ವಲ್ಪ ಮಾತಾಡಬೇಕಿತ್ತು.." ಹೀಗಂದಿದ್ದರು ಬೆಳ್ಳಂಬೆಳಗ್ಗೆ ಕರೆ ಮಾಡಿದ್ದ ಆ ತಾಯಿ. ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ತನ್ನ ಮಗಳ ಕಲಿಕೆಯ ಕುರಿತಾದ ಆತಂಕವನ್ನು ನನ್ನೊಡನೆ ಹಂಚಿಕೊಳ್ಳಲು ಅವರು ಕರೆ ಮಾಡಿದ್ದರು. "ಅವಳೀಗ ಕಲಿಯುವುದರಲ್ಲಿ ತುಂಬಾ ಹಿಂದೆ ಬೀಳ್ತಿದ್ದಾಳೆ ಅಂತ ನನಗನಿಸ್ತಾ ಇದೆ ಸರ್, ಅವಳು ಉದಾಸೀನವೇನೂ ಮಾಡ್ತಾ ಇಲ್ಲ.., ಆದರೆ ಅದ್ಯಾಕೋ ತುಂಬಾ ಧೈರ್ಯ ಕಳೆದುಕೊಂಡಿದಾಳೆ ಅನ್ನಿಸ್ತಾ ಇದೆ..." ಆಕೆ ಮುಂದುವರಿಸಿದ್ದಳು. ಅವಳು ಕಲಿಕೆಯಲ್ಲಿ ತುಂಬಾ ಹಿಂದೆ ಇದ್ದವಳಲ್ಲದಿದ್ದರೂ, ತಕ್ಕಮಟ್ಟಿಗೆ ಚುರುಕಾಗೇ ಇದ್ದ ಹುಡುಗಿ. ಅವಳು ಹಿಂದಿನ ತರಗತಿಯಲ್ಲಿದ್ದಾಗ ಕೋವಿಡ್ ಕಾಲದ ವಿದ್ಯಾಗಮ ತರಗತಿಗಳ ಸಂದರ್ಭದಲ್ಲಿ ನಾನವಳಿಗೆ ಕಲಿಸಿದ್ದಿತ್ತು. ಆದರೆ ಈ ಕರೆ ಬರುವಾಗ ನಾನವಳ ತರಗತಿಯ ಪಾಠಕ್ಕಿರಲಿಲ್ಲ. "ನೀವು ಅವಳ ಕ್ಲಾಸಿಗೆ ಇಲ್ಲ ಅಂತ ಗೊತ್ತು ಸರ್, ಆದರೆ ನೀವು ಅವಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ತೀರಿ ಅಂತ ನನಗನಿಸ್ತಿದೆ. ಅವಳ್ಯಾಕೆ ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಿದ್ದಾಳೋ ಗೊತ್ತಿಲ್ಲ.. ನೀವೊಂಚೂರು ಪ್ರಯತ್ನಿಸ್ತೀರಾ?" ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನಾವುದಿದೆ ಹೇಳಿ.. ಸಣ್ಣಗೆ ಒಳಗೊಳಗೇ ಬೀಗಿದೆ.

      ಆಕೆ ನನ್ನ ಮೇಲಷ್ಟು ಅಭಿಮಾನವನ್ನೂ, ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದದ್ದು ನನಗೆ ಖುಷಿಕೊಟ್ಟಿತಾದರೂ, ಆಕೆ ಸವಾಲೊಂದನ್ನು ನನ್ನ ಮುಂದಿಡದಟಿದ್ದರು. ಮಗುವಿನ ವ್ಯಕ್ತಿ ಅಧ್ಯಯನ, ಕ್ರಿಯಾ ಸಂಶೋಧನೆ ಇತ್ಯಾದಿಗಳು ನಾವು ಶಾಲೆಯೊಳಗೆ ಮಾಡಬೇಕಾದ ಕೆಲಸಗಳೇ. ಆದರೆ ನಮ್ಮ ಕೆಲಸದ ಒತ್ತಡಗಳು ಅದನ್ನು ಪರಿಪೂರ್ಣವಾಗಿ ಮಾಡಲು ಬಿಟ್ಟಾವೇ? ಅದೂ ಅಲ್ಲದೆ ಆ ಹುಡುಗಿಯ ತರಗತಿಗೆ ನಾನು ಹೋಗುತ್ತಿರಲಿಲ್ಲ.

    ನಾನೇನೂ ದೊಡ್ಡದಾಗಿ ಪ್ರಯತ್ನ ಮಾಡಲಿಲ್ಲ. ಆ ಹುಡುಗಿಯನ್ನು ಅಲ್ಲಿ ಇಲ್ಲಿ ಕಂಡಾಗೆಲ್ಲಾ ಕರೆದು ಹೆಚ್ಚು ಹೆಚ್ಚು ಮಾತನಾಡಿಸತೊಡಗಿದೆ. ಅವಳಲ್ಲಿ ತನ್ನ ಕುರಿತಾಗಿ ಒಂದು ಒಳ್ಳೆಯ ಇಮೇಜ್ ಬೆಳೆಯುವಂತೆ ನನ್ನ ಮಾತುಗಳಿರಬೇಕು ಎಂಬ ಎಚ್ಚರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಆದರೆ ಅದನ್ನೇನೂ ನಿರಂತರವಾಗಿ ಮಾಡಲಾಗಿರಲಿಲ್ಲ. ಆ ತಾಯಿಯ ಕೋರಿಕೆಯನ್ನು ನಾನು ಈಡೇರಿಸಿದ್ದೇನೆಯೇ ಕೇಳಿದರೆ ನನ್ನಲ್ಲಿ ಉತ್ತರವಿರಲಿಲ್ಲ.

        *            *            *
     ಇನ್ನೊಂದು ದಿನ ಬಾಲ್ಯದಿಂದ ನನಗೆ ಪರಿಚಿತನಾಗಿದ್ದ ಹುಡುಗನೊಬ್ಬ  ಮೊದಲಬಾರಿಗೆ ನನಗೆ ಕರೆ ಮಾಡಿದ್ದ. ಮಹಾನಗರದ ಕಂಪೆನಿಯೊಂದರಲ್ಲಿ ಕೆಲಸಕ್ಕಿರುವ ಆತ ಕರೆ ಮಾಡಿ "ಫ್ರೀ ಇದೀರಾ ಅಣ್ಣ ? ಸ್ವಲ್ಪ ಮಾತಾಡ್ಬಹುದಾ?" ಕೇಳಿದಾಗ ನನ್ನ ಮನಸ್ಸಿಗೆ ಹೊಳೆದದ್ದು ಯಾವುದೋ ಚೈನ್ ಲಿಂಕ್ ವ್ಯವಹಾರವಿರಬಹುದೆಂದು. ಆದರೆ ಆತ ಮಾತಾಡಿದ್ದು ಒಂದೆರಡು ವರ್ಷಗಳ ಹಿಂದೆ ನಮ್ಮ ಶಾಲೆಗೆ ಸೇರ್ಪಡೆಯಾಗಿದ್ದ ಅವನ ಅಕ್ಕನ ಮಗನ ಬಗ್ಗೆ.. "ನಿಮಗೆ ಗೊತ್ತಿದೆಯಲ್ಲಾ‌.. ನನ್ನ ಅಕ್ಕ ಶಿಕ್ಷಣ ಪಡೆಯಲಿಲ್ಲ, ಆದರೆ ತಮ್ಮಂದಿರಾದ ನಮಗೆಲ್ಲಾ ಒಳ್ಳೆಯ ಶಿಕ್ಷಣ ಕೊಡಿಸಿದಳು.. ನಮ್ಮನ್ನೆಲ್ಲಾ ಬದುಕಲ್ಲಿ ಸೆಟಲ್ ಮಾಡಿಸಿದಳು.. ಆದರೆ ಈಗ ಅವಳ ಮಗನ ವಿಷಯದಲ್ಲಿ ಮಾತ್ರ ಅವಳಿಗೆ ನಿರಾಸೆಯಾಗ್ತಾ ಇದೆ...." ಅವನ ದನಿಯಲ್ಲಿಯೂ ನಿರಾಸೆಯಿತ್ತು.  ನಾನು ಅವನ ಅಳಿಯನ ಕೆಲವು ಒಳ್ಳೆಯ ಅಂಶಗಳ ಬಗ್ಗೆ ಮಾತನಾಡಬೇಕೆಂದುಕೊಳ್ಳುತ್ತಿರುವಾಗಲೇ ಅವನು ಮಾತು ಮುಂದುವರೆಸಿದ.
 "ನನಗೆ ಗೊತ್ತು.. ಅವನೊಬ್ಬ ಒಳ್ಳೆಯ ಹುಡುಗ, ಯಾರಿಗೂ ತೊಂದರೆ ಕೊಡುವವನಲ್ಲ, ಹೊರಗಡೆ ಎಲ್ಲಾ ಚುರುಕಾಗೇ ಇದಾನೆ. ಆದರೆ‌ ಕಲಿಕೆಯಲ್ಲೊಂದು ಅಷ್ಟೊಂದು ಹಿಂದೆ ಇದ್ದಾನೆಂಬುವುದು ನಮಗೆಲ್ಲಾ ತೀರಾ ಚಿಂತೆಯಾಗಿಬಿಟ್ಟಿದೆ...." 
    ಒಂದೆರಡು ವಾರದ ಹಿಂದೆ ನನ್ನ ಲೇಖನವೊಂದರಲ್ಲಿ ನಿಧಾನ ಕಲಿಕೆಯ ವಿದ್ಯಾರ್ಥಿಗಳು ಬದುಕಲ್ಲಿ ಯಶಸ್ವಿಯಾದ ಕೆಲವು ದೃಷ್ಟಾಂತಗಳನ್ನು ಉಲ್ಲೇಖಿಸಿದ್ದೆ. ಅದೇ ವಿಚಾರಗಳನ್ನು ‌ಈತನೆದುರು‌ ಪ್ರಸ್ತಾಪಿಸಬೇಕೆಂದುಕೊಳ್ಳುವಷ್ಟರಲ್ಲಿ " ನಾನು ನಿಮ್ಮ ಶಿಕ್ಷಕನ ಡೈರಿಯಿಂದ ಬರಹಗಳನ್ನು ಫೇಸ್ಬುಕ್ಕಿನಲ್ಲಿ ಓದುತ್ತೇನೆ.." ಎಂದುಬಿಟ್ಟಿದ್ದ.. ಇನ್ನು ನಾನೇನು ಹೇಳಲಿಕ್ಕಿಲ್ಲ ಎಂದುಕೊಂಡೆ.
       "ಅವನು ತುಂಬಾ ಬುದ್ಧಿವಂತನಾಗಬೇಕೆಂದೇನೂ ನಾವು ಅಪೇಕ್ಷಿಸುತ್ತಿಲ್ಲ.. ಆದರೆ ಅಟ್ಲೀಸ್ಟ್ ಹತ್ತನೇ ಕ್ಲಾಸ್ ಪಾಸಾಗುವಷ್ಟಾದರೂ ಇರಬೇಕಲ್ಲ..." ಈಗ ಅವನ ಮನಸ್ಸಿನ ಭಾವನೆಗಳು‌ ನನ್ನ ಮನಸ್ಸಿಗೆ ನಾಟಿದ್ದವು. 
       "ನಾವು ಮನೆಯಲ್ಲಿ ಎಲ್ಲಾ ಪ್ರಯತ್ನ ಮಾಡಿಬಿಟ್ಟಿದ್ದೇವೆ.  ಆಲಸ್ಯದಿಂದಲೋ, ತುಂಟತನದಿಂದಲೋ ಅವನು ಹಿಂದೆ ಬಿದ್ದಿಲ್ಲ,  ಜೋರು ಮಾಡುವುದರಿಂದಲೋ ಶಿಕ್ಷೆಯಿಂದಲೋ ಅವನನ್ನು ಸುಧಾರಿಸಲಾಗದು ಎಂದು ನಮಗೂ ತಿಳಿದುಬಿಟ್ಟಿದೆ. ನಾವು ಸೋತುಬಿಟ್ಟಿದ್ದೇವೆ.. ನೀವೊಂಚೂರು ಪ್ರಯತ್ನಿಸಬಹುದೇ? ನಿಮ್ಮ ಮೇಲೆ ತುಂಬಾ ಹೋಪ್ ಇಟ್ಟುಕೊಂಡಿದ್ದೇವೆ."

        ಈ ಬಾರಿ‌ ಇದು ಪ್ರಶಸ್ತಿ ಎಂದುಕೊಂಡು ಒಳಗೊಳಗೇ ಬೀಗಲು  ನನ್ನಿಂದ ಸಾಧ್ಯವಾಗಲಿಲ್ಲ. ಪ್ರಯತ್ನಿಸುವ ಭರವಸೆಯನ್ನೇನೋ ಕೊಟ್ಟೆ.

        ಭರವಸೆಯನ್ನು ನಾನು ಈಡೇರಿಸಬಲ್ಲೆನೇ? ಅಷ್ಟು ಸುಲಭದಲ್ಲಿ ನಾನು ಆ ಕೆಲಸವನ್ನು ಮಾಡಬಲ್ಲೆನಾಗಿದ್ದರೆ ಈ ಹಿಂದೆ ಯಾವತ್ತೋ ಮಾಡಿಯಾಗಿರುತ್ತಿರಲಿಲ್ಲವೇ? 

        ನೀನೊಬ್ಬ ಕೆಟ್ಟ ಶಿಕ್ಷಕ ಎಂದು ಯಾರಾದರೂ ಆಕ್ಷೇಪಿಸಿದರೆ ಅಲ್ಲ, ನಾನು ಒಳ್ಳೆಯ ಶಿಕ್ಷಕ ಎನ್ನುವುದಕ್ಕೆ ನೂರು ಕಾರಣಗಳನ್ನೋ ಉದಾಹರಣೆಗಳನ್ನೋ ನಾನು ನೀಡಬಲ್ಲೆ. ಆದರೆ 'ನೀನೊಬ್ಬ ಒಳ್ಳೆಯ ಶಿಕ್ಷಕ' ಎಂದು ಹೀಗೊಂದು ಕೋರಿಕೆ ಮುಂದಿಟ್ಟಾಕ್ಷಣ ನಾನು ತೀರಾ ಕುಬ್ಜನಾಗಿಬಿಡುತ್ತೇನೆ.

           ಹೌದು.. ಶಿಕ್ಷಕರಾಗಿ ನಾವು ಬೆಳೆಯುವುದಕ್ಕೆ ಬಹಳಷ್ಟಿದೆ. ಈ ಹುಡುಗನಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಪ್ರಯತ್ನಿಸುವುದೂ, ನನ್ನನ್ನು ನಾನು ಉತ್ತಮಗೊಳಿಸಿಕೊಳ್ಳುವ ಒಂದು ಮಾರ್ಗವಾದೀತು ಎಂದು ಆ ದಿಕ್ಕಿನೆಡೆಗೆ ಯೋಚಿಸತೊಡಗಿದೆ.

       - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment