ಪ್ರವೀಣಕುಮಾರ ಪ್ರವೀಹಕುಮಾರನಾಗಿದ್ದು – ಶಿಕ್ಷಕನ ಡೈರಿಯಿಂದ 8

ಶಿಕ್ಷಕನ ಡೈರಿಯಿಂದ

ಪ್ರವೀಣಕುಮಾರ ಪ್ರವೀಹಕುಮಾರನಾಗಿದ್ದು

     ತಾರೆ ಜಮೀನ್ ಪರ್ ಎಂಬ ಸಿನೆಮಾವನ್ನು ನೀವು ನೋಡಿರಬಹುದು. ಡಿಸ್ಲೆಕ್ಸಿಯಾ ಕಾಯಿಲೆಯಿಂದ ಬಳಲುತ್ತಿದ್ದ ಇಶಾನ್ ಎನ್ನುವ ಬಾಲಕನ ಕತೆಯದು. ಶಾಲೆಯಲ್ಲಿ ಕಲಿಯುವ ಅಕ್ಷರಗಳೆಲ್ಲ ಕಲಸುಮೇಲೋಗರವಾಗಿ ಕಾಣಿಸಿ ಒದ್ದಾಡುವ ಇಶಾನ್, ಅವನನ್ನು ಹೇಗಾದರೂ ಮಾಡಿ ಮುಂದೆ ತರಬೇಕೆಂದು ಪ್ರಯತ್ನಿಸುವ ಪೋಷಕರು, ಇಶಾನ್ ನ ಅಸಹಾಯಕತೆ, ಹೊಸತಾಗಿ ಶಾಲೆಗೆ ಬರುವ ಶಿಕ್ಷಕ (ಅಮೀರ್ ಖಾನ್) ಇಶಾನ್ ನಿಗೆ ನೆರವಾಗುವುದು, ಕೊನೆಯಲ್ಲಿ ಆ ಶಿಕ್ಷಕನ ನೆರವಿನಿಂದ ಇಶಾನ್ನೊಳಗಿದ್ದ  ಅದ್ಭುತ ಚಿತ್ರ ಕಲಾವಿದ ಹೊರಬರುವುದು... ಇವೆಲ್ಲವೂ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿಸುತ್ತವೆ.
     
       ಸಿನಿಮಾ ನೋಡುವ ಪ್ರೇಕ್ಷಕರಿಗೆ ಇದು ಸಾವಿರಕ್ಕೊಂದು ಇರುವ ಅಪರೂಪದ ಪ್ರಕರಣದಂತೆ ಕಾಣಿಸುತ್ತದೆ. ಆದರೆ ನನಗೆ, ನನ್ನಂತಹ ಶಿಕ್ಷಕರಿಗೆ ಇದೊಂದು ತೀರಾ ಸಹಜ ಪ್ರಕರಣ. ಡಿಸ್ಲೆಕ್ಸಿಯಾ, ಡಿಸ್ಗ್ರಾಫಿಯಾ ಮುಂತಾದ ಕಲಿಕಾ ನ್ಯೂನತೆಯ ಸಮಸ್ಯೆಯುಳ್ಳ ಮಕ್ಕಳು ನಮಗೆ ಹತ್ತಕ್ಕೋ ಇಪ್ಪತ್ತಕ್ಕೋ ಒಬ್ಬರಂತೆ ಸಿಗುತ್ತಾರೆ. ಏಳನೆಯ ತರಗತಿಗೆ ಬಂದ ಮೇಲೂ ಕೆಲವು ವಿದ್ಯಾರ್ಥಿಗಳು ಕನ್ನಡವನ್ನು ಸರಿಯಾಗಿ ಓದಲು ಅಸಮರ್ಥರಾಗಿರುವುದು, b ಮತ್ತು‌ d ಅಕ್ಷರಗಳ ನಡುವಿನ ವ್ಯತ್ಯಾಸ ಗುರುತಿಸಲಾರದೇ ಇರುವ ಸ್ಥಿತಿಗಾಗಿ ನೀವು ಶಿಕ್ಷಕ ವೃಂದವನ್ನು ದೂಷಿಸಬಹುದು, ನಾವು ಮಾತ್ರ ಅಸಹಾಯಕರಾಗಿ ಬಿಡುತ್ತೇವೆ. ಈ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ನೀರೆರೆಯಲು ಪ್ರಯತ್ನಿಸುತ್ತೇವೆ‌. ಆದರೆ ಆ ಸಿನಿಮಾದಲ್ಲಿರುವ ಹಾಗೆ ಈ ಮಕ್ಕಳಿಗೆ ಚಿತ್ರಕಲೆ ಯಂತಹ ಪ್ರತಿಭೆಗಳು ಇರುವುದು ಕಡಿಮೆ. ಬದಲಿಗೆ ಕೃಷಿ, ಮರ ಹತ್ತುವುದು ಮತ್ತಿತರ ಶ್ರಮದ ಕೆಲಸಗಳಲ್ಲಿ ಈ ಮಕ್ಕಳು ಮುಂದಿರುತ್ತಾರೆ. ಮಕ್ಕಳಿಗೆ ಈ ವಿಭಾಗದಲ್ಲಿ ಪ್ರೋತ್ಸಾಹವೇನೋ ಸಿಗುತ್ತದೆ, ಆದರೆ ಈ ಕೌಶಲಗಳು ನಮ್ಮ ಅಕಾಡೆಮಿಕ್ ಶಿಕ್ಷಣದ ಭಾಗವಾಗಿಲ್ಲವಲ್ಲ..

        ಕೆಲವು ಶಿಕ್ಷಕರಲ್ಲಿ ಈ ಮಕ್ಕಳನ್ನು ಕಲಿಕೆಯಲ್ಲಿ ಮುಂದೆ ತರಲಾಗದ ಅಸಹಾಯಕತೆಯಿಂದಾಗಿ , ಇವರ ಕುರಿತಾಗಿ ಒಂದಿಷ್ಟು ಅಸಹನೆ ಬೆಳೆದಿರುತ್ತದೆ. ಬಹುಶಃ ಪಬ್ಲಿಕ್ ಪರೀಕ್ಷೆಯ ರಿಸಲ್ಟ್ ತೋರಿಸಬೇಕಾದ ಒತ್ತಡವಿದ್ದರೆ ನಾನೂ ಈ ಬಗೆಯ ಅಸಹನೆಯನ್ನು ಹೊಂದಿರುತ್ತದ್ದೆನೇನೋ. ರಿಸಲ್ಟ್ ನ ಒತ್ತಡವಿಲ್ಲದೆ ಇದ್ದುದರಿಂದ ನಾನು ಮತ್ತು ನನ್ನಂತಹ ಹಲವರು ಈ ಮಕ್ಕಳಿಗೆ ಅವರದಲ್ಲದ ಕ್ಷೇತ್ರದಲ್ಲಿ ಮುಂದೆ ಬರಲು ಅತಿಯಾದ ಒತ್ತಡ ಹಾಕುವುದರ ಬದಲು ಅವರ ಸಾಮರ್ಥ್ಯಗಳನ್ನು ಗೌರವಿಸುತ್ತಾ ಮತ್ತು ಅವರಿಂದ ಎಷ್ಟು ಸಾಧ್ಯವೋ ಅಷ್ಟು ಕಲಿಯಲಿ, ಅನಗತ್ಯ ಒತ್ತಡ ನೀಡದೇ, ಸಾಧ್ಯವಿದ್ದಷ್ಟು ಕಲಿಕೆಗೆ ಬೆಂಬಲಿಸುವುದೇ ಉತ್ತಮ ಎಂಬ ಧೋರಣೆಯನ್ನು ಬೆಳೆಸಿಕೊಂಡಿರುತ್ತೇವೆ. ಈ ಧೋರಣೆಯೇನೋ ಸರಿ, ಆದರೆ ನಮ್ಮ ಇತರ ಕೆಲಸಗಳ ನಡುವೆ ಈ ಮಕ್ಕಳಿಗೆ  ಕೊಡಬೇಕಾದಷ್ಟು ಸಮಯ ಕೊಟ್ಟಿರುತ್ತೇವೆಯೇ??

          ನಾನು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದು ನನ್ನ ವಿದ್ಯಾರ್ಥಿಯಾಗಿದ್ದ ಪ್ರವೀಣ ಕುಮಾರನ ಬಗ್ಗೆ ಬರೆಯಲು. ಪ್ರವೀಣಕುಮಾರ ಏಳನೇ ತರಗತಿಯವರೆಗೆ ನಮ್ಮ ಶಾಲೆಯಲ್ಲಿ ಕಲಿತಿದ್ದ. ಕಲಿಕೆಯಲ್ಲಿ ತೀರಾ ಹಿಂದೆ ಇದ್ದವ. ಮುಗ್ಧ, ಎಲ್ಲರನ್ನೂ ಪ್ರೀತಿಸುವವ, ಶ್ರಮಜೀವಿ. ಮುಂದೆ ಹೈಸ್ಕೂಲಿಗೆ ಹೋದನಾದರೂ ಹತ್ತನೇ ತರಗತಿ ಪಾಸಾಗಲಾರದೇ ಯಾವುದೋ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ. ಅಲ್ಲಿ ಇಲ್ಲಿ ಸಿಕ್ಕಿದಾಗ ಬಹಳ ಗೌರವದಿಂದ ಮಾತನಾಡಿಸುತ್ತಿದ್ದ, ನಾನೂ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ.

          ಹೊಸತೊಂದು ಮೊಬೈಲ್ ತೆಗೆದುಕೊಂಡಿದ್ದ ಪ್ರವೀಣಕುಮಾರ ನನಗೆ ವಾಟ್ಸಾಪಿನಿಂದ ಹಾಯ್ ಎಂದು ಮೆಸೇಜಿಸಿದ್ದ. ಯಾರೆಂದು ಕೇಳಿದಾಗ ಅವನು ಕಳಿಸಿದ್ದು "Praveeha kumara" ಎಂದು. ಎನ್ ಜಾಗದಲ್ಲಿ  ಕೈತಪ್ಪಿನಿಂದ ಎಚ್ ಟೈಪಿಸಿದನೇನೋ ಎಂದುಕೊಂಡರೆ,  ವಾಟ್ಸಾಪಿನ ಇನ್ಫೋದಲ್ಲೂ ಪ್ರವೀಹಕುಮಾರ ಎಂದೇ ಹಾಕಿಕೊಂಡಿದ್ದ.‌ ಮರುದಿನ ಅವನ ಫೇಸ್ಬುಕ್ ಅಕೌಂಟ್ ಕ್ರಿಯೇಟಾಗಿತ್ತು. ಅದರಲ್ಲೂ ಪ್ರವೀಹಕುಮಾರನೇ... ತಪ್ಪಾಗಿದ್ದನ್ನು ತಿಳಿಸೋಣ ಅಂದುಕೊಂಡೆನಾದರೂ, ಅವನದನ್ನು ಹೇಗೆ ಸ್ವೀಕರಿಸಿಯಾನೋ, ಅವನಿಗೆ ಕಿರಿಕಿರಿಯಾಗಬಹುದು, ಸರಿಯಾದ ಸಮಯ ಸಿಕ್ಕಾಗ ಹೇಳಿದರಾಯಿತು ಅಂದುಕೊಂಡೆ.

       ಇವನೇಕೆ ಹೀಗೆ ಬರೆದ ಎಂದು ಯೋಚಿಸತೊಡಗಿದೆ. ಇವನಿಗೆ ಇಂಗ್ಲೀಷಿನಲ್ಲಿ ಹೆಸರು ಬರೆಯಲು ಬರುವುದಿಲ್ಲವೆಂದರೆ ಅದಕ್ಕೆ ಅವನಿಗೆ ನಾಲ್ಕೈದು ವರ್ಷ ಇಂಗ್ಲೀಷ್ ಕಲಿಸಿದ ನಾನಲ್ಲದೇ ಇನ್ಯಾರು ಹೊಣೆಯಾಗಲು ಸಾಧ್ಯ? ಅವನ ಬರಹವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ.  ನನ್ನ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಅವನು n ಬರೆಯುತ್ತಿದ್ದಾಗ ಸ್ವಲ್ಪ ಉದ್ದಕ್ಕೆ h ರೀತಿ ಬರೆಯುತ್ತಿದ್ದುದು ಅಸ್ಪಷ್ಟವಾಗಿ ನೆನಪಿಗೆ ಬಂತು. ಅದು ಅಸ್ಪಷ್ಟ ನೆನಪೋ ಅಥವಾ ನನ್ನ ಕಾಮನ್ಸೆನ್ಸಿಗೆ ಹೊಳೆದಿದ್ದೋ, ಸ್ಪಷ್ಟವಾಗಿ ಹೇಳಲಾರೆ. ಏನೇ ಆಗಲಿ ನನ್ನ ಕಡೆಗಣನೆಯಿಂದಾಗಿಯೇ ಅವನ ಮನಸ್ಸನಲ್ಲಿ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿ ಅಚ್ಚೊತ್ತಿಬಿಟ್ಟಿತ್ತೆನ್ನುವುದು ಸತ್ಯ. 

 ಕೆಲವು ದಿನಗಳ ನಂತರ ಪ್ರವೀಣಕುಮಾರ ಸಿಕ್ಕಿದ್ದ. ಮಾತಾಡುತ್ತಾ "ಫೇಸ್ಬುಕ್ಕಿನಲ್ಲಿ  ಹೆಸರು...... " ಎಂದು ಹೇಳುವಷ್ಟರಲ್ಲಿ "ಗಡಿಬಿಡಿಯಲ್ಲಿ ಹೆಸರು ತಪ್ಪಾಗಿತ್ತು, ಸರಿಮಾಡಿದೆ" ಎಂದು ಬಿಟ್ಟ.  ಬಹುಶಃ ಅಷ್ಟರಲ್ಲಾಗಲೇ ಯಾರೋ ಅವನ ತಪ್ಪನ್ನು ಸರಿಪಡಿಸಿದ್ದರು.    ನನಗೆ ಗಡಿಬಿಡಿಯಲ್ಲಿ ತಪ್ಪಾಗಿದ್ದು ಬರೀ ಅವನಿಂದಲ್ಲ, ನನ್ನಿಂದಲೂ ಅನಿಸಿತು. ಮನಸ್ಸಲ್ಲಿ ಮೂಡಿದ sorry ಎನ್ನುವ ಪದ ಬಾಯಿಗೆ ಬರಲಿಲ್ಲ.

     ಇದೊಂದು ಉದಾಹರಣೆ ಅಷ್ಟೆ. ಶಿಕ್ಷಕರಾದ ನಮ್ಮಿಂದ ಈ ಬಗೆಯ ನೂರಾರು ತಪ್ಪುಗಳು ಆಗಿಹೋಗಿರಬಹುದು. ಸುದೈವವಶಾತ್ ನಮ್ಮ ವಿದ್ಯಾರ್ಥಿಗಳು ನಮ್ಮಿಂದಾದ ತಪ್ಪುಗಳನ್ನು ಪರಿಗಣಿಸದೇ, ನಮ್ಮ ಒಳ್ಳೆಯ ಕಾರ್ಯಗಳಿಗೋಸ್ಕರ ನಮ್ಮನ್ನು ಅಪಾರವಾಗಿ ಗೌರವಿಸುತ್ತಾರೆ. ನಮ್ಮ ಕರ್ತವ್ಯ ಅವಧಿಯ ಒಂದಿಷ್ಟು ಒಳ್ಳೆಯ ಕಾರ್ಯಗಳನ್ನು ಬರಹಗಳಲ್ಲಿ ಹಂಚಿಕೊಂಡು ಪೋಸು ಕೊಡುವ ನಾನೂ, ನನ್ನಂಥವರೂ ಇಂತಹ ಘಟನೆಗಳನ್ನೂ ಹಂಚಿಕೊಳ್ಳದೆ ಹೋದರೆ ಅದು ಆತ್ಮವಂಚನೆಯಲ್ಲವೇ?

                  - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment