ಪೋಷಕರಲ್ಲಿ ವಿಶ್ವಾಸ ತುಂಬುವುದೆಂದರೆ – ಶಿಕ್ಷಕನ ಡೈರಿಯಿಂದ 35

ಶಿಕ್ಷಕನ ಡೈರಿಯಿಂದ

ಪೋಷಕರಲ್ಲಿ ವಿಶ್ವಾಸ ತುಂಬುವುದೆಂದರೆ……….


Hruthik student calling..... ...
            ರಿಂಗಿಣಿಸಿದ ಫೋನಿನ ಮೇಲೆ ಬೆರಳೊತ್ತಿದೆ. "ಸರ್... ನಾನು ಹೃತಿಕ್ ನ ಅಮ್ಮ ಮಾತಾಡ್ತಿರುವುದು..." ಆಕೆಯ ದನಿ ನಡುಗುತ್ತಿತ್ತು. "ಹೇಳಿ....." ಎಂದೆ. ಆಕೆ ಮಾತಾಡತೊಡಗಿದರು. ಅವರ ಮಾತುಗಳಲ್ಲಿ ಕೋಪ, ಹತಾಶೆ, ಅಳು, ಸಿಟ್ಟು, ಆತಂಕಗಳೆಲ್ಲವೂ ಒಟ್ಟುಗೂಡಿರುವಂತೆ ಅನ್ನಿಸಿತು. ಅವರು ಆರಂಭದಲ್ಲಿ ಹೇಳಿದ್ದು ನನ್ನ ವಿಷಯ ಇಂಗ್ಲೀಷಿನಲ್ಲಿ ಅವನು ಹಿಂದಿರುವ ಬಗ್ಗೆ... "ಅವನಿಗೆ ಇಂಗ್ಲೀಷ್ ಪಾಠದ ಬಗ್ಗೆ ಏನೂ ಗೊತ್ತಿಲ್ಲ, ನೀವು ಇಂಗ್ಲೀಷಿನಲ್ಲಿ ಹೇಳುವುದು ಏನೂ ಗೊತ್ತಾಗುವುದಿಲ್ಲ ಅಂತಾನೆ.." ಅವರು ತನ್ನ ಮಗನನ್ನೂ, ನನ್ನನ್ನೂ ಒಟ್ಟಿಗೆ ದೂರುತ್ತಿರುವಂತೆ ಭಾಸವಾಯಿತು. ಇಂಗ್ಲೀಷ್ ಶಿಕ್ಷಕನಾದ ನಾನು ಅದೇ ಭಾಷೆಯನ್ನು ಹೆಚ್ಚು ಬಳಸಬೇಕಾದ ಅಗತ್ಯತೆಯ ಬಗ್ಗೆ ತಿಳಿಸಿದೆ. "ಏನಾದರೂ ಗೊತ್ತಾಗದಿದ್ದರೆ ನನ್ನೊಂದಿಗೆ ಕೇಳಲಿ, ಇನ್ನು ನಾನೂ ಸ್ವಲ್ಪ ಅವನ ಕಡೆಗೆ ಹೆಚ್ಚು ಗಮನ‌ಕೊಡುವ ಪ್ರಯತ್ನ ಮಾಡುತ್ತೇನೆ." ಸಾಂತ್ವನದ ಮಾತುಗಳನ್ನಾಡಿದೆ. ಅವರ ಆತಂಕ ಮುಂದುವರೆದಿತ್ತು.

        ತರಗತಿಯ ಅತೀ‌ ತುಂಟ ಮಕ್ಕಳಲ್ಲಿ ಹೃತಿಕ್ ಕೂಡ ಒಬ್ಬನಾಗಿದ್ದ.‌ ಪಠ್ಯ ವಿಷಯಗಳಲ್ಲಿ ತೀರಾ ಕಡಿಮೆ ಆಸಕ್ತಿ ಹೊಂದಿದ್ದವ, ಕಲಿಕೆಯಲ್ಲೂ ನಿಧಾನಿ. ಶಿಕ್ಷಕರೆದುರಿಗೆ ತರಗತಿಯಲ್ಲಿ ತೀರಾ ಮುಗ್ಧನಂತಿರುತ್ತಿದ್ದ ಈತ ಶಿಕ್ಷಕರು ಹೊರಬಂದ ಕೂಡಲೇ‌‌ ಆ್ಯಕ್ಷನ್ ಹೀರೋ ಆಗಿ ಬದಲಾಗುತ್ತಿದ್ದ. ತನಗೆ ಎದುರಾಡಿದ ಸಹಪಾಠಿಗಳ ಮೇಲೆ ನೇರ ಆಕ್ರಮಣ ಮಾಡಿಬಿಡುವ ಪ್ರವೃತ್ತಿ ಇವನದ್ದು. ಹೃತಿಕ್ ಹೊಡೆದ ಎಂದು ಮಕ್ಕಳು ದೂರು ತರುವುದು ತೀರಾ ಮಾಮೂಲಾಗಿತ್ತಾದರೂ, ಆ ಕರೆ ಬಂದ ದಿನಗಳಲ್ಲಿ ಅದು ತುಸು ಇಳಿಮುಖದಲ್ಲಿತ್ತು. ಹೃತಿಕ್ ತರಗತಿಯೊಳಗೆ ಕೂಡ ಪುಸ್ತಕಗಳಿಗಿಂತ ಹೆಚ್ಚು ರಟ್ಟು, ಕಾಗದದ ಚೂರುಗಳು, ಗಮ್, ಬ್ಯಾಟರಿ ಇತ್ಯಾದಿಗಳನ್ನು ಬಳಸುತ್ತಿದ್ದುದೇ ಹೆಚ್ಚು. ಗಮ್, ಬಣ್ಣ ಇತ್ಯಾದಿಗಳನ್ನು‌ ತರಗತಿಯಲ್ಲಿ ಚೆಲ್ಲಿ, ಆಗಾಗ  ತರಗತಿಯಲ್ಲಿ ಅವಾಂತರ ಮಾಡುವುದೂ ಇತ್ತು. 
         
          ಹೃತಿಕ್ ನ ತಾಯಿ ಶಾಲಾ ಶಿಕ್ಷಕರ ಬಗ್ಗೆ ಸದ್ಭಾವನೆ ಹೊಂದಿರುವವರು ಎನ್ನುವುದು ನಾವೆಲ್ಲರೂ ತಿಳಿದಿದ್ದ ವಿಷಯವೇ ಆಗಿತ್ತು. ಹಿಂದೊಮ್ಮೆ ತರಗತಿಯಲ್ಲಿ ತಂಟೆ‌ ಮಾಡಿ ಬಿದ್ದು ಹೃತಿಕ್ ದೊಡ್ಡ ಗಾಯಮಾಡಿಕೊಂಡಿದ್ದ.  ಇಂತಹ ಸಂದರ್ಭಗಳಲ್ಲಿ ಪೋಷಕರು ಶಿಕ್ಷಕರ ಮೇಲೋ, ಅಥವಾ ಬೀಳಲು ಕಾರಣವಾದ ಸಹಪಾಠಿಗಳ ಬಗ್ಗೆ ಅಸಹನೆ ವ್ಯಕ್ತಪಡಿಸುವುದು ತೀರಾ ಸಾಮಾನ್ಯ ಸಂಗತಿ. ಆದರೆ ಆ ಸಂದರ್ಭದಲ್ಲಿ ಈ ತಾಯಿ ಪ್ರಬುದ್ಧತೆಯನ್ನು ತೋರಿದ್ದರು. ತನ್ನ ಮಗನ ನೋವು ಸ್ವಯಂಕೃತ ಮತ್ತು ಆಕಸ್ಮಿಕ ಎನ್ನುವುದನ್ನು ಅರ್ಥಮಾಡಿಕೊಂಡಿದ್ದರು. ಆವತ್ತು ಅವರು ತೋರಿದ ಸಮಚಿತ್ತ ನನ್ನ ಅಂತರಂಗದಲ್ಲಿ ಅವರ ಬಗ್ಗೆ ಒಂದಿಷ್ಟು ಗೌರವವನ್ನು ಮೂಡಿಸಿತ್ತು. ಹಾಗಾಗಿಯೇ ಅವರು ಫೋನ್ ಮಾಡಿ ಮಾತಾಡಿದಾಗ ನನ್ನಲ್ಲಿ ತುಸು ಹೆಚ್ಚೇ ಸಹಾನುಭೂತಿ ಮೂಡಿತ್ತು.

          ಆಕೆ ಮಾತು ಮುಂದುವರೆಸಿದರು. ತನ್ನ ಮಗ ಕಲಿಕೆಯಲ್ಲಿ ತೀರಾ ಹಿಂದುಳಿದಿರುವುದರ ಕುರಿತು ನೋವು ತೋಡಿಕೊಂಡರು. ತನ್ನ ಪ್ರತಿದಿನದ ದುಡಿಮೆಯ ಒತ್ತಡದ ನಡುವೆ ಪ್ರತೀದಿನ ಮಗನ ಕಡೆ ಗಮನ ಕೊಡಲಾಗದ ಅಸಹಾಯಕತೆ, ಮಗನ ವರ್ತನೆಯ ಬಗ್ಗೆ ಕೋಪ, ಅವನ ಭವಿಷ್ಯದ ಬಗ್ಗೆ ಆತಂಕ ಎಲ್ಲವನ್ನೂ ಒಂದೇ ಸಮನೆ ವ್ಯಕ್ತಪಡಿಸಿದರು. ಅವರ ತೊಳಲಾಟ ನನಗರ್ಥವಾಗುತ್ತಿತ್ತು. ಅವನು ಪುಸ್ತಕ ಬಿಟ್ಟು ಬರೀ ಬ್ಯಾಟರಿ, ಮೋಟಾರ್ ಇತ್ಯಾದಿಗಳ ಕಡೆ ಆಸಕ್ತಿ ತೋರಿಸುತ್ತಿರುವುದರ ಬಗ್ಗೆ ಹೇಳಿಕೊಂಡಾಗ, ಅದು ಚಿಂತಿಸಬೇಕಾದ ವಿಷಯವೇನಲ್ಲ, ಅವನ ಆಸಕ್ತಿಯನ್ನು ಪ್ರೋತ್ಸಾಹಿಸುವುದು ಒಳ್ಳೆಯದೇ ಎಂದು ಹೇಳಿದೆನಾದರೂ ಅದು ಆಕೆಯ ಮನಸ್ಸಿಗೆ ನಾಟಿದಂತೆ ಕಾಣಲಿಲ್ಲ. ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು  ನಾನು ತುಸು ಹೆಚ್ಚೇ ಮಾತನಾಡಬೇಕಾದೀತು ಅನ್ನಿಸಿತು. ಆದರೆ ಅದು ಮಾತಾಡುವ ಸಮಯವಾಗಿರಲಿಲ್ಲ. "ಟೆನ್ಷನ್ ಮಾಡ್ಕೊಳ್ಬೇಡಿ... ಅವನು ಹುಶಾರಾಗ್ತಾನೆ. ಫ್ರೀ ಇದ್ದಾಗ ಒಮ್ಮೆ ಶಾಲೆಗೆ ಬನ್ನಿ. ಅವನನ್ನು ಇಂಪ್ರೂವ್ ಮಾಡುವ ಬಗ್ಗೆ ಸ್ವಲ್ಪ ಮಾತಾಡ್ಬಹುದು.." ಎಂದೆ. ಸಮ್ಮತಿ ಸೂಚಿಸಿದ ಆಕೆ ಫೋನ್ ಕೆಳಗಿಟ್ಟರು.

           *        *        *
        ಮಕ್ಕಳ ಭವಿಷ್ಯದ ಕುರಿತಾಗಿ ಆತಂಕಿತರಾಗಿರುವ ಪೋಷಕರಲ್ಲಿ ವಿಶ್ವಾಸ ತುಂಬುವುದು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಹೃತಿಕ್ ನ ತಾಯಿಯ ಆತಂಕವನ್ನು ದೂರ ಮಾಡುವುದು ಈಗಿನ ನನ್ನ ಕರ್ತವ್ಯವಾಗಿತ್ತು. ಆಕೆಗೆ ಧೈರ್ಯ ತುಂಬಲು ನನ್ನ ಅನುಭವದಲ್ಲೇ ಹಲವು ದೃಷ್ಟಾಂತಗಳಿದ್ದವು.

         ಕಲಿಕೆಯಲ್ಲಿ ಅಷ್ಟೇನೂ ಆಸಕ್ತಿ ತೋರಿಸದ ನನ್ನ ವಿದ್ಯಾರ್ಥಿಯೊಬ್ಬ ಜೇಸೀಬಿಗಳ ಮಾಲಿಕನಾದ ಕತೆಯನ್ನು ಹಿಂದೊಮ್ಮೆ ನಾನು ಬರೆದುಕೊಂಡಿದ್ದೆ. ನನ್ನ ಸಂಬಂಧಿಯೊಬ್ಬರು  ಬಹಳ ಕಷ್ಟದಲ್ಲೇ ಐಟಿಐ ಮುಗಿಸಿ, ಯಾವುದೇ ಆರ್ಥಿಕ ಹಿನ್ನೆಲೆ ಇಲ್ಲದೇ ಇದ್ದರೂ ಫ್ಯಾಕ್ಟರಿಯೊಂದರ ಮಾಲಿಕನಾದ ಉದಾಹರಣೆಯೊಂದು ನನ್ನ ಮುಂದಿತ್ತು.  ನನ್ನ ಸಂಬಂಧಿಗಳ  ಮನೆಯಲ್ಲಿ  ಸಮವಯಸ್ಕ ಹುಡುಗರಿಬ್ಬರಲ್ಲಿ ಒಬ್ಬ ಹುಡುಗ ಕಲಿಕೆಯಲ್ಲಿ ಮುಂದೆ ಇದ್ದು, ಇನ್ನೊಬ್ಬ ಹೃತಿಕ್ ನ ಹಾಗೆ ತೀರಾ ನಿಧಾನ ಕಲಿಕೆಯವನಾಗಿದ್ದ. ಆ ಹುಡುಗನ ತಾಯಿ ಇವರಂತೆಯೇ ತೀರಾ ಚಿಂತಿತರಾಗಿದ್ದರು. ಅವನಲ್ಲಿ ಕೆಲವು ಕೌಶಲಗಳು ಉತ್ತಮವಾಗಿವೆ, ಬದುಕಲ್ಲಿ ಆತ ಗೆಲ್ಲಬಲ್ಲ ಎಂದು ನಾನಾಗ ಅವರಿಗೆ ಧೈರ್ಯ ತುಂಬುತ್ತಿದ್ದೆ. ಮುಂದೆ ಆತ ಐಟಿಐ ಮುಗಿಸಿ, ಬುದ್ಧಿವಂತನಾಗಿದ್ದ ತನ್ನ ಸಮವಯಸ್ಕನಿಗಿಂತ ಮೊದಲು ಬದುಕಲ್ಲಿ ಸೆಟಲ್ ಆಗಿದ್ದ.
        ಶಾಲಾ ದಿನಗಳಲ್ಲಿ ಮಕ್ಕಳ ಕಲಿಕಾನ್ಯೂನತೆಯ ಕಾರಣದಿಂದ ಚಿಂತಿತರಾಗಿದ್ದ ಕೆಲವು ಪೋಷಕರು, ಮುಂದೆ ತಮ್ಮ ಮಗ ತಮ್ಮ ಊರಲ್ಲೇ ಸಣ್ಣ ಉದ್ಯಮ ಅಥವಾ ಸಣ್ಣ ಕೆಲಸಗಳಲ್ಲಿ ನೆಲೆನಿಂತು, ದೊಡ್ಡ ಸಾಧನೆ ಮಾಡಿದವರಿಗಿಂತಲೂ ಮಿಗಿಲಾಗಿ ತಂದೆ ತಾಯಿಯರಿಗೆ ಒಳ್ಳೆಯ ಮಗನೆನಿಸಿಕೊಂಡಿದ್ದರ ಕುರಿತಾಗಿ ಹರುಷ ಹಂಚಿಕೊಂಡಿದ್ದರ ಕುರಿತಾಗಿಯೂ ನೆನಪಿಸಿಕೊಂಡೆ. 
            ಇದೆಲ್ಲವನ್ನೂ ಆ ತಾಯಿಗೆ ತಿಳಿಸಬೇಕು. ಜೊತೆಗೆ ರಟ್ಟು, ಗಮ್, ಬ್ಯಾಟರಿ ಇತ್ಯಾದಿಗಳ ಕುರಿತಾದ ಆತನ ಕ್ರೇಜ್ ಕೆಟ್ಟದಲ್ಲ, ಇದರಿಂದಲೇ ಅವನ ಭವಿಷ್ಯ ಉಜ್ವಲವೆನಿಸಬಹುದು ಎಂದು‌ ಆಕೆಗೆ ಮನದಟ್ಟು‌ ಮಾಡಬೇಕು ಎಂದೆಲ್ಲಾ ಯೋಚಿಸಿದೆ.  ನಾನೊಬ್ಬ ಒಳ್ಳೆಯ ಆಪ್ತಸಮಾಲೋಚಕನಾದೆ ಎಂದಕೊಂಡು ಮನಸ್ಸಲ್ಲೇ ಬೀಗಿದೆ.

          ಆದರೆ.... ಆಕೆ ಶಾಲೆಗೆ ಬರಲಿಲ್ಲ. ಬಹುಶಃ ಅವರದ್ದು ಅಲ್ಪಕಾಲದ ಆತಂಕವಾಗಿರಲೂಬಹುದು, ಅಥವಾ ಆ ಆತಂಕಕ್ಕೆ ತನ್ನೊಳಗೇ ಪರಿಹಾರ ಕಂಡುಕೊಂಡಿರಲೂಬಹುದು ಎಂದುಕೊಂಡೆ. ಈಗ ನಾನು ನೆನಪಿಸಿಕೊಂಡ ಉದಾಹರಣೆಗಳು ಬೇರೆ ಕಡೆ ಉಪಯೋಗಕ್ಕೆ ಬರಬಲ್ಲವೆಂಬ ಅರಿವಂತೂ ನನ್ನಲ್ಲಿತ್ತು.

             *        *          *

          ಅದಾಗಿ ಒಂದೆರಡು ತಿಂಗಳುಗಳ ನಂತರ ಊರ ಉತ್ಸವದಲ್ಲಿ ನಮ್ಮ ಮಕ್ಕಳ‌ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಜವಾಬ್ದಾರಿ ನಮ್ಮ ಹೆಗಲೇರಿತು‌. ಹಿಂದೊಮ್ಮೆ ಕಲಿಸಿದ ನಾಟಕವನ್ನೇ ಇಲ್ಲಿ ಪ್ರದರ್ಶಿಸುವುದೆಂದು ತೀರ್ಮಾನಿಸಿದೆ. ಮೊದಲು ಅಭಿನಯಿಸಿದ ಕೆಲವು ಮಕ್ಕಳು ಉತ್ಸವಕ್ಕೆ ಅಲಭ್ಯರಾದ್ದರಿಂದ ಹೃತಿಕ್ ನನ್ನು ಪಾತ್ರವೊಂದಕ್ಕೆ ಆರಿಸಿಕೊಂಡೆ.
          ನಾನು ನಿರೀಕ್ಷಿಸಿದ್ದಕ್ಕಿಂದ ಒಳ್ಳೆಯ ಧ್ವನಿ ಹೃತಿಕ್ನಿಗಿತ್ತು. ಅದ್ಭುತ ಎನ್ನಲಾಗದಿದ್ದರೂ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಹೃತಿಕ್ ಅಭಿನಯಿಸಿದ್ದ. ಕಾರ್ಯಕ್ರಮ ಮುಗಿದ ನಂತರ ಹೃತಿಕ್ ನ ತಾಯಿ ನನ್ನನ್ನು ಭೇಟಿಯಾದರು. ಅವರ ಕಣ್ಣುಗಳು ಮಿನುಗುತ್ತಿದ್ದವು‌‌. "ಸರ್... ನೀವು‌ ಅವನಲ್ಲಿರುವ ಪ್ರತಿಭೆಯನ್ನು ಗುರುತಿಸಿದಿರಿ.." ಎಂದ ಆಕೆಯ ಧ್ವನಿಯಲ್ಲಿ‌ ಕೃತಜ್ಞತೆಯೊಂದಿಗೆ ಆತ್ಮವಿಶ್ವಾಸವೂ ತುಂಬಿದಂತೆ ಕಾಣಿಸಿತು..
          
         ನಾನು ಯೋಚಿಸಿದೆ.. ಪೋಷಕರಲ್ಲಿ ವಿಶ್ವಾಸ ತುಂಬುವುದೆಂದರೆ ಇಷ್ಟೇ ಅಲ್ಲವೇ? ನಾನಂದು ತಯಾರಿಸಿಕೊಂಡ ಉದ್ದದ ಭಾಷಣದ ಅಗತ್ಯವೇನಿದೆ...? ಆ ಹುಡುಗನ ನೆಚ್ಚಿನ ಬ್ಯಾಟರಿ, ಮೋಟಾರು, ರಟ್ಟು ಗಮ್ಮುಗಳ ಕುರಿತಾದ ಆಸಕ್ತಿಗೂ ಒಂದು ವೇದಿಕೆ ಸಿಕ್ಕರೆ ಅವರೆಷ್ಟು ಹರ್ಷಗೊಳ್ಳಬಹುದು?
            
         ಹೊಸ ಹೊಳಹೊಂದು ಮನಸ್ಸಲ್ಲಿ ಹುಟ್ಟಿಕೊಂಡೆ. ಖುಷಿಪಟ್ಟೆ.

‌               - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment