2026-27ನೇ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿಸದಂತೆ ಮನವಿ
ಬೆಂಗಳೂರು: 2027ರ ಜನಗಣತಿಯ ಜನಸಂಖ್ಯಾ ಗಣತಿ ಕಾರ್ಯಕ್ಕೆ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ನಿಯೋಜಿಸುವ ಪ್ರಸ್ತಾವನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ನವೆಂಬರ್ 17, 2026ರಂದು ಕರ್ನಾಟಕದ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಮುಖ್ಯ ಪ್ರಧಾನ ಜನಗಣತಿ ಅಧಿಕಾರಿ ರಾಮಚಂದ್ರನ್ ಆರ್. ಅವರಿಗೆ ಪತ್ರ ಬರೆದಿದ್ದಾರೆ.
2027ರ ಜನವರಿ 25ರಿಂದ ಮಾರ್ಚ್ 5ರವರೆಗೆ ಜನಗಣತಿ ಕಾರ್ಯ ನಡೆಸಲು ಉದ್ದೇಶಿಸಲಾಗಿದ್ದು, ಈ ಅವಧಿಯು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಅತ್ಯಂತ ನಿರ್ಣಾಯಕ ಹಂತವಾಗಿದೆ. ಪಠ್ಯಕ್ರಮ ಪೂರ್ಣಗೊಳಿಸುವಿಕೆ, ಪರೀಕ್ಷಾ ಸಿದ್ಧತೆ ಹಾಗೂ ಪರೀಕ್ಷೆಗಳ ನಿರ್ವಹಣೆಗೆ ಶಿಕ್ಷಕರ ಉಪಸ್ಥಿತಿ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಜೂನ್ 2026ರಿಂದ ಅಕ್ಟೋಬರ್ 2026ರವರೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರಾಗಿ ನಿಯೋಜಿಸಲಾಗಿತ್ತು. ಇದರಿಂದ ಶಾಲಾ-ಕಾಲೇಜುಗಳ ಸಾಮಾನ್ಯ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಇಲಾಖೆ ಉಲ್ಲೇಖಿಸಿದೆ.
2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE) ಪ್ರಕಾರ ಶಿಕ್ಷಕರು ಸಿದ್ಧತಾ ಅವಧಿ ಸೇರಿದಂತೆ ವಾರಕ್ಕೆ ಕನಿಷ್ಠ 45 ಕೆಲಸದ ಗಂಟೆಗಳನ್ನು ನೀಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಜನಗಣತಿ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವುದರಿಂದ ಪಠ್ಯಕ್ರಮ ಪೂರ್ಣಗೊಳಿಸುವಿಕೆ, ಪರೀಕ್ಷೆಗಳ ನಿರ್ವಹಣೆ ಹಾಗೂ ವಿಶೇಷವಾಗಿ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.
ಇದಲ್ಲದೆ, 10ನೇ ತರಗತಿಯ ವಾರ್ಷಿಕ ಹಾಗೂ ಮೂರು ಪೂರ್ವಸಿದ್ಧತಾ ಪರೀಕ್ಷೆಗಳು 04.01.2027ರಿಂದ 27.02.2027ರವರೆಗೆ ನಡೆಯಲಿದ್ದು, ಅಂತಿಮ ಪರೀಕ್ಷೆಗಳು 22.03.2027ರಿಂದ 31.05.2027ರವರೆಗೆ ನಿಗದಿಯಾಗಿವೆ. ದ್ವಿತೀಯ ಪಿಯುಸಿಯ ಮೊದಲ ಮತ್ತು ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು 02.01.2027ರಿಂದ 29.01.2027ರವರೆಗೆ ಹಾಗೂ ಅಂತಿಮ ಪರೀಕ್ಷೆಗಳು 27.02.2027ರಿಂದ 15.05.2027ರವರೆಗೆ ನಡೆಯಲಿವೆ.
ಪ್ರಸ್ತುತ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿಶೇಷ ತರಗತಿಗಳ ಮೂಲಕ ಪಠ್ಯಕ್ರಮ ಪೂರ್ಣಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ ಎಂಬುದು ಇಲಾಖೆಯ ಆತಂಕವಾಗಿದೆ.
ಆದ್ದರಿಂದ, 2026-27ನೇ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಕರ್ನಾಟಕದಲ್ಲಿ ಯಾವುದೇ ಜನಗಣತಿ ಕಾರ್ಯಕ್ಕೆ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ನಿಯೋಜಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಶಿಕ್ಷಣ ಇಲಾಖೆ ಪತ್ರದ ಮೂಲಕ ಮನವಿ ಮಾಡಿದೆ.
View Document