ಮುಗ್ಧ ಬಾಲಕ ಮತ್ತು ಕಳ್ಳತನವೆಂಬ ವ್ಯಸನ – ಶಿಕ್ಷಕನ ಡೈರಿಯಿಂದ 27

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ಮುಗ್ಧ ಬಾಲಕ ಮತ್ತು ಕಳ್ಳತನವೆಂಬ ವ್ಯಸನ…

      ಶಾಲೆಗೆ ಸೇರಿ ಒಂದೆರಡು ತಿಂಗಳೂ ಕಳೆಯದ ಆ ಒಂದನೆಯ ತರಗತಿಯ ಹುಡುಗನ ಬ್ಯಾಗಿಗೆ ಕೈ ಹಾಕಿದ ನನಗೆ ಅಕ್ಷಯಪಾತ್ರೆಯೊಂದಕ್ಕೆ ಕೈ ಹಾಕಿದ ಅನುಭವವಾಗಿತ್ತು. ಒಂದಿಷ್ಟು ಬಳಪದ ಕಡ್ಡಿಗಳು, ಪೆನ್ಸಿಲ್-ರಬ್ಬರ್ಗಳು, ಒಂದೋ ಎರಡೋ ಪುಸ್ತಕ ಪೆನ್ನುಗಳನ್ನು ಒಂದೊಂದಾಗಿ ತೆಗೆದಿದ್ದೆ. ಅವುಗಳನ್ನು ತೆಗೆಯುತ್ತಿರುವಾಗ ಸುತ್ತಲೂ ಕುಳಿತಿದ್ದ ಆ ತರಗತಿಯ ಮಕ್ಕಳು ಒಬ್ಬೊಬ್ಬರಾಗಿ 'ಇದು ನನ್ನದು, ಇದು ನನ್ನದು' ಎನ್ನುತ್ತಿದ್ದರು. ಅಷ್ಟಕ್ಕೂ ಆ ಮಕ್ಕಳು ತಾವು ಕಳೆದುಕೊಂಡ ವಸ್ತುಗಳ ಬಗ್ಗೆಯೇನೂ ದೂರು ಕೊಟ್ಟಿರಲಿಲ್ಲ. ನಾನೂ ಈ ಹುಡುಗನ ಬ್ಯಾಗಿಗೆ ಕೈ ಹಾಕಿದ್ದು ಅವನ ಬ್ಯಾಗಿನ ಪುಸ್ತಕಗಳನ್ನು ಓರಣಗೊಳಿಸಲಕ್ಕೆಂದು ಮಾತ್ರ.  ಎಂದೂ ಈ ಕೆಲಸಕ್ಕೆ ಹೋಗಿರದಿದ್ದ ನಾನು ಈ ದಿನ  ನನಗೆ ಪಾಠವಿಲ್ಲದ ಒಂದನೇ ತರಗತಿಗೆ ಸ್ಟಡೀ ಅವಧಿಯಲ್ಲಿ‌‌ ಹೋಗಿ ಈ ಕೆಲಸಕ್ಕೆ ಕೈ ಹಾಕಿದ್ದು ಮಾತ್ರ ಕಾಕತಾಳೀಯ. ಬಹುಶಃ ಅವನ ಬ್ಯಾಗನ್ನು ಉತ್ಖನನ ಮಾಡುವ ಭಾಗ್ಯ  ನನ್ನ ಹಣೆಯಲ್ಲಿ ಬರೆದಿತ್ತೇನೋ..

        ಇಮ್ರಾನನೆಂಬ ಈ ಪುಟ್ಟ ಹುಡುಗನಿಗೆ ಇನ್ನೊಬ್ಬರ ಚೀಲದಲ್ಲಿದ್ದ ವಸ್ತುಗಳನ್ನು ತನ್ನ ಬ್ಯಾಗಿಗಿಳಿಸುವ ಅಭ್ಯಾಸವಿತ್ತೆಂಬುದು ಮೊದಲು ಬೆಳಕಿಗೆ ಬಂದದ್ದು ಹೀಗೆ.  ಯಥಾಪ್ರಕಾರ ಅವನಿಗೆ ಜೋರು ಮಾಡಿ, ಇನ್ನು ಹೀಗೆಲ್ಲಾ ಮಾಡಬೇರದೆಂದು ಬುದ್ಧಿ ಹೇಳಿ ಸ್ಟಾಫ್ರೂಮಿಗೆ ಬಂದು ಕ್ಲಾಸ್ ಟೀಚರಿಗೆ ಸುದ್ದಿ ತಿಳಿಸಿ ಪ್ರಕರಣದ ವಿಶ್ಲೇಷಣೆಯನ್ನೆಲ್ಲಾ ಮುಗಿಸಿ ಬಿಟ್ಟೆ.

    ಅದಾದ ನಂತರ ಹಲವು ಬಾರಿ ಆಗಾಗ್ಗೆ ಯಾರದ್ದಾದರೂ ವಸ್ತುವನ್ನು ತೆಗೆದು ಸಿಕ್ಕಿಬೀಳುತ್ತಿದ್ದ ಇಮ್ರಾನ್. ಜೋರು ಮಾಡುವುದು, ಶಿಕ್ಷೆ ಕೊಡುವುದು, ಬುದ್ಧಿ ಹೇಳುವುದು ಎಲ್ಲಾ ಪ್ರಯೋಗಗಳನ್ನು ಅವನ ತರಗತಿ ಶಿಕ್ಷಕಿ ಮಾಡಿಯಾಗಿತ್ತು. ಒಮ್ಮೆ ಅವರು "ಕಳ್ಳತನ ಮಾಡಿದರೆ ಪೋಲೀಸರು ಎಳೆದುಕೊಂಡು ಹೋಗ್ತಾರೆ, ಜೈಲಿಗೆ ಹಾಕ್ತಾರೆ, ಸರೀ ಬಾರಿಸ್ತಾರೆ" ಎಂಬಿತ್ಯಾದಿ ವಿಚಾರಗಳನ್ನು ಬಗೆಬಗೆಯಾಗಿ ತಿಳಿಸಿದರಂತೆ. ಆಗ  ಇಮ್ರಾನ್ ತನ್ನ ಸಂಬಂಧಿಯೊಬ್ಬರು ಯಾವುದೋ ಕಾರಣಕ್ಕೆ ಪೋಲೀಸರಿಗೆ ಸಿಗದೇ ಅಡಗಿದ್ದ ಪ್ರಕರಣ ನೆನಪಿಸಿಕೊಂಡು ತಾನೂ ಹಾಗೇ ಅಡಗಬಹುದೇ ಎಂದು ಮುಗ್ಧತೆಯಿಂದ ಟೀಚರನ್ನು ಪ್ರಶ್ನಿಸಿದನಂತೆ. 

    ಅಷ್ಟಕ್ಕೂ ಈ ಇಮ್ರಾನ್ ದುಬಾರಿಯಾದದ್ದೇನೂ ಕದಿಯುತ್ತಿರಲಿಲ್ಲ.. ಮೊದಮೊದಲು ತನ್ನಲ್ಲಿಲ್ಲದ ವಸ್ತುವನ್ನು ಆಸೆಯಿಂದ ಕದ್ದ ಹಾಗೂ ಕಾಣಿಸುತ್ತಿರಲಿಲ್ಲ. ಕದ್ದ ವಸ್ತುಗಳನ್ನು ಅವನು ಉಪಯೋಗಿಸುತ್ತಿದ್ದುದೂ ಅಷ್ಟರಲ್ಲೇ ಇತ್ತು. ಇನ್ನೊಬ್ಬರ ವಸ್ತುವನ್ನು ತನ್ನ ಚೀಲಕ್ಕೆ ಸೇರಿಸುವುದು ನಮಗೆ ಒಂದು ಬಗೆಯ ಮಾನಸಿಕ ಸಮಸ್ಯೆಯಾಗಿಯೇ ಗೋಚರಿಸಿತ್ತು. ಆದರೆ ನಮ್ಮಲ್ಲಿದ್ದ ಸೀಮಿತ ಪರಿಹಾರ ‌ಮಾರ್ಗಗಳನ್ನು ನಾವು ಪ್ರಯೋಗಿಸಿಯಾಗಿತ್ತು.  ಪ್ರತೀ ಬಾರಿ ಸಿಕ್ಕಿ ಬಿದ್ದ ನಂತರವೂ ನಮ್ಮಸರ್ವಪ್ರಯೋಗಗಳನ್ನು ಮಾಡಿ, ಇನ್ನು ಮುಂದೆ ಅವನು ಈ ಬಗೆಯ ತಪ್ಪು ಮಾಡಲಿಕ್ಕೇ ಇಲ್ಲ ಎಂದುಕೊಳ್ಳುತ್ತಿದ್ದೆವು. ತುಂಬಾ ದಿನಗಳವರೆಗೆ ಅವನು ತನ್ನ ನಿಯಂತ್ರಣದಲ್ಲೇ ಇರುತ್ತಿದ್ದ. ಮಧ್ಯದಲ್ಲೊಮ್ಮೆ ನಿಯಂತ್ರಣ ತಪ್ಪುತ್ತಿದ್ದ. ಅವನ ತರಗತಿಯ ಮಕ್ಕಳೋ ಏನಾದರೂ ಕಳೆದು ಹೋದರೆ ಮೊದಲು ಅವನ ಮೇಲೇ ಸಂಶಯಪಡುತ್ತಿದ್ದರು. ದೊಡ್ಡ ತರಗತಿಗೆ ಹೋಗುತ್ತಿದ್ದಂತೆ ಅವನ ಈ ಬಗೆಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತಾದರೂ, ಅಪರೂಪಕ್ಕೊಮ್ಮೆ ನಡೆಯುವುದು ಮುಂದುವರೆದಿತ್ತು.

  ಇದೊಂದು ದುರಭ್ಯಾಸವನ್ನು ಬಿಟ್ಟರೆ ಇಮ್ರಾನ್ ಕೆಟ್ಟ ಹುಡುಗನೇನಲ್ಲ. ಶಾಲೆಯನ್ನು, ಶಿಕ್ಷಕರನ್ನು ಅಪಾರವಾಗಿ ಪ್ರೀತಿಸುತ್ತಿದ್ದ. ಆದರೆ ವೈಯಕ್ತಿಕ ಜೀವನದ ಶಿಸ್ತು ಮತ್ತು ಸ್ವಚ್ಛತೆ ತುಂಬಾ ಕಮ್ಮಿಯಿತ್ತು. ಕಲಿಕೆಯಲ್ಲಿ ಸ್ವಲ್ಪ ಹಿಂದೆಯಿದ್ದ. ಸ್ವಭಾವದಲ್ಲಿ ತೀರಾ ಮುಗ್ಧ. ಯಾರಿಗಾದರೂ ಸಹಾಯ ಮಾಡಲು ಓಡೋಡಿಬಬರುವ ಅಭ್ಯಾಸವಿತ್ತು.

        ಅವನಾಗ ನಾಲ್ಕನೆಯ ತರಗತಿಯಲ್ಲಿದ್ದಿರಬೇಕು‌. ಅವನ ಅಮ್ಮ ಬೆಳಿಗ್ಗೆ ಶಾಲೆಗೆ ಓಡೋಡಿ ಬಂದಿದ್ದರು. "ಸಾರ್, ಅವನಿಗೆ ನಿನ್ನೆ ತುಂಬಾ ಪೆಟ್ಟು ಬಿದ್ದಿದೆ ಸರ್, ಇನ್ನೊಮ್ಮೆ ಶಾಲೆಯಲ್ಲಿ ಹೊಡೆಯಬೇಡಿ" ಎಂಬ ಮನವಿಯೊಂದಿಗೆ ದಯನೀಯ ಮುಖ ಹೊತ್ತು ಬಂದಿದ್ದರು. ನನಗೆ ಅವರು ಏನು ಹೇಳುತ್ತಿದ್ದಾರೆಂದು ಅರ್ಥವಾಗಿರಲಿಲ್ಲ. ಮತ್ತೆ ವಿಚಾರಿಸಿದಾಗ ತಿಳಿಯಿತು. ಹಿಂದಿನ ದಿನ ಸಂಜೆ ಏಳನೇ ತರಗತಿಯ ಹುಡುಗ ಸಾತ್ವಿಕ್ ತನ್ನ ಸೈಕಲನ್ನು ಅಂಗಡಿಯ ಬಳಿಯಲ್ಲಿಟ್ಟು ಶಾಲೆಗೆ ಬಂದಿದ್ದ. ಸಂಜೆ ಅವನು ಹೋಗುವಷ್ಟರಲ್ಲಿ ಈ ಹುಡುಗ ಇಮ್ರಾನ್ ಸೈಕಲನ್ನು ದೂಡಿಕೊಂಡು ಮನೆಗೆ ಓಡಿದ್ದ. ಅವನಿಗೆ ಸೈಕಲ್ ಬಿಡಲೂ ಬರುತ್ತಿರಲಿಲ್ಲ. ತಾನು ಸೈಕಲನ್ನು ದೂಡಿಕೊಂಡು ಓಡುತ್ತಿರುವುದನ್ನು ಸುತ್ತಲಿನವರು ನೋಡುತ್ತಿರುವರೆಂಬ ಪರಿವೆಯೂ ಅವನಿಗಿರಲಿಲ್ಲವಂತೆ. ಹೀಗೆ ಹೋಗುತ್ತಿರುವಾಗ ಯಾರೋ ಹಿಡಿದು ಸೈಕಲನ್ನು ಅದರ ಮಾಲಕನಿಗೆ ಮರಳಿಸಿದರಂತೆ. ಅಪರಾಧ ಮಾಡಿದ್ದಾನೆಂಬ ಕಾರಣಕ್ಕೆ ಮಸೀದಿಯ ಗುರುಗಳಿಂದ ದಂಡಪ್ರಯೋಗವೂ ಆಗಿತ್ತಂತೆ. ಅವನಮ್ಮ ಬಂದಿದ್ದು ನಾವು ಮತ್ತೊಮ್ಮೆ ದಂಡಪ್ರಯೋಗ ಮಾಡದಿರಲಿ ಎಂದು. ನಾವು ದಂಡ ಪ್ರಯೋಗ ಮಾಡಲಿಲ್ಲ. ಒಂದಷ್ಟು ಉಪದೇಶವನ್ನಂತೂ ಮಾಡಿದೆವು. ಆದರೂ ನಮಗೆ ಅಚ್ಚರಿ.. ಎಲ್ಲರೂ ನೋಡುತ್ತಿರುವಾಗ ಅವನು ಹಾಗೆ  ಸೈಕಲ್ ಕದಿಯುವ ಯೋಚನೆ ಅವನಿಗೇಕೆ ಬಂತು? ಇದೊಂದು ಬಗೆಯ ಮಾನಸಿಕ ಸಮಸ್ಯೆ ಎನ್ನುವುದಕ್ಕೆ ಇದೂ ಒಂದು ಆಧಾರವಾಗಿತ್ತು.

    ಅದರ ನಂತರ ಇನ್ನೂ ಹಲವು ಬಾರಿ ಇಮ್ರಾನ್ ಈ ಬಗೆಯ ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಬಚಾವಾಗಲು ಒಂದಿಷ್ಟು ಸುಳ್ಳನ್ನು ಸೇರಿಸುವ ಪ್ರಯತ್ನವನ್ನೂ ಮಾಡುತ್ತಿದ್ದುದೂ ಇತ್ತು. ಅವನು ಆರನೇ ತರಗತಿಯಲ್ಲಿದ್ದಾಗ ಹುಡುಗಿಯೊಬ್ಬಳು ಕೈವಾರ ಕಳೆದುಕೊಂಡು ಇಮ್ರಾನ್ ನ ಕಡೆಗೆ ಬೊಟ್ಟು ಮಾಡಿದ್ದಳು. ಇವನ ಕೈಯಲ್ಲಿದ್ದ ಕೈವಾರ ಅವಳದ್ದೇ ಎನ್ನುವುದು ಅವಳ ವಾದ. ಹಿಂದಿನ ದಾಖಲೆಗಳ ಆಧಾರದ ಮೇಲೆ ತರಗತಿಯ ಮಕ್ಕಳೆಲ್ಲಾ ಇವನನ್ನೇ ಆರೋಪಿಯನ್ನಾಗಿಸಿದ್ದರು. ಇಮ್ರಾನ್ ಒಪ್ಪಲು ಸಿದ್ಧನಿರಲಿಲ್ಲ‌. ವಿಚಾರಿಸುತ್ತಿದ್ದ ನನಗೆ ಮೊಟ್ಟ ಮೊದಲ ಬಾರಿಗೆ ಇಮ್ರಾನ್ ನ ಕಣ್ಣಲ್ಲಿ ಒಂದು ಬಗೆಯ ಸಂಕಟ ಕಾಣಿಸಿತು. ಆ ದಿನ ನಿಜವಾಗಿಯೂ ಅವನು ಕದ್ದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಕಡೆ ಆ ಹುಡುಗಿಯ ಕೈವಾರ ಸಿಕ್ಕಿಬಿಟ್ಟಿತ್ತು. ಆ ದಿನ ಇಮ್ರಾನ್ ಪ್ರಾಮಾಣಿಕವಾಗಿ ಅತ್ತುಬಿಟ್ಟಿದ್ದ. ಅವನ ಅಳು ನನ್ನೊಳಗೂ ಒಂದು ದ್ವಂದ್ವವನ್ನು ಸೃಷ್ಟಿಸಿತ್ತು. ಈ ಪ್ರಕರಣವಾದರೂ ಅವನನ್ನು ಬದಲಿಸೀತೇ??

     ಆ ಘಟನೆಯ ನಂತರ  ಮುಂದಿನ ಒಂದು-ಒಂದೂವರೆ ವರ್ಷದಲ್ಲಿ, ಅವನು ಏಳನೇ ತರಗತಿ ಮುಗಿಸಿ ಹೋಗುವವರೆಗೆ ಅವನ ಮೇಲೆ ಯಾವುದೇ ಆರೋಪ - ದೂರುಗಳು ಬಂದಿರಲಿಲ್ಲ.  ಅವನು ನಿಜವಾಗಿಯೂ ಬದಲಾದನೇ?  ಅಥವಾ ತಪ್ಪು ಮಾಡಿಯೂ ಅವನು ಸಿಕ್ಕಿಬಿದ್ದಿಲ್ಲವೇ ಎಂಬುದರ ಕುರಿತು  ನನಗೆ ಸ್ಪಷ್ಟತೆಯಿಲ್ಲ. ಆದರೆ ಆ ಸಣ್ಣ ಕೈವಾರದ ಪ್ರಕರಣ ಅವನೊಳಗೆ ನಿಜವಾಗಿಯೂ ಪರಿವರ್ತನೆ ತಂದಿದ್ದರೆ ಅದಕ್ಕಿಂತ ಖುಷಿಯ ಸಂಗತಿ ಏನಿದೆ ಹೇಳಿ...

     *          *          *

  ಇತ್ತೀಚೆಗೆ ಶಿಕ್ಷಕ ಮಿತ್ರರೊಬ್ಬರು ನನ್ನೊಡನೆ ನಾನು ಹಿಂದೆ ಬರೆದಿದ್ದ "ನನ್ನ ಗೆಳತಿಯೇ ಹಣ ಕದ್ದಿದ್ದಾಳೆ ಸರ್!" ಎಂಬ ಬರಹದ ಬಗ್ಗೆ ಮಾತಾಡುತ್ತಿದ್ದರು. "ಮಕ್ಕಳು  ಕಳ್ಳತನದಂತಹ ತಪ್ಪು ಮಾಡಿದರೆ ಅದು ಗಂಭೀರ ವಿಚಾರವೇನಲ್ಲ. ನಾನು ಸಣ್ಣವನಾಗಿದ್ದಾಗ ಮಾಡಿದ ಕಳ್ಳತನವನ್ನೆಲ್ಲಾ ಗಂಭೀರವಾಗಿ ತೆಗೆದುಕೊಂಡರೆ ನಾನು ಜೈಲಿನಲ್ಲೇ ಇರಬೇಕಾಗುತ್ತಿತ್ತು" ಎಂದರು ತನ್ನ ಬಾಲ್ಯವನ್ನು ನೆನಪಿಸಿಕೊಂಡು. ಆ ಕ್ಷಣಕ್ಕೆ ನನಗೆ ಇಮ್ರಾನ್ ನೆನಪಾದ. ಒಂದು ಪಾಸಿಟಿವ್ ಹೊಳಹೊಂದು ನನ್ನ ಮನದೊಳಗೆ ಮಿಂಚಿದಂತಾಯಿತು.

             - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment