ಕಬ್ಬಿಣದ ಸ್ಕೇಲು – ಶಿಕ್ಷಕನ ಡೈರಿಯಿಂದ 28

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ಕಬ್ಬಿಣದ ಸ್ಕೇಲು

        "ಸರ್, ಇಲ್ಲಿ ನೋಡಿ..." ನಾಲ್ಕನೇ ತರಗತಿಯ ಹುಡುಗನೊಬ್ಬ ಪಕ್ಕದಲ್ಲಿ ಕುಳಿತಿರುವ ಗೆಳೆಯನೆಡೆಗೆ ನನ್ನ ಗಮನ ಸೆಳೆದ. ತನ್ನ ಮುಖವನ್ನು ತುಸು ಮೇಲಕ್ಕೆತ್ತಿಕೊಂಡು ಬಾಯಿಯನ್ನು ತೆರೆದುಕೊಂಡಿದ್ದ ಆ ಗೆಳೆಯನ ಬಾಯಿಯಲ್ಲಿ ರಕ್ತ ತುಂಬಿಕೊಂಡಿರುವಂತೆ ಕಾಣಿಸಿತ್ತು. ಭಯಗೊಂಡು "ಏನಾಯಿತೋ..." ಕೇಳಿದೆ ಕರೆಂಟು ಶಾಕ್ ಹೊಡೆದವನ ರೀತಿಯಲ್ಲಿ. ನನ್ನ ಧ್ವನಿ ನಡುಗುತ್ತಿತ್ತು. ವೀಳ್ಯದೆಲೆ ಮೆಲ್ಲುತ್ತಾ ಬಾಯಿತುಂಬಾ ರಂಗೇರಿಸಿಕೊಂಡಿರುವ ಅಜ್ಜನ ಸ್ಟೈಲಿನಲ್ಲಿ "ಶಾ..........ಯಿ...." ಎಂದುಸುರಿದ ಹುಡುಗ. ನಾನು ನಿಟ್ಟುಸಿರು ಬಿಟ್ಟೆ. ಕೆಂಪುಶಾಯಿಯ ಪೆನ್ನೊಂದನ್ನು ಬಾಯಿಯೊಳಗಿಟ್ಟುಕೊಂಡು ಕಿತಾಪತಿಯನ್ನು ಮಾಡಿದ್ದ ಅವನ ಬಾಯಿಯೊಳಗೆ ಕೆಂಪುಶಾಯಿ ತುಂಬಿಕೊಂಡಿತ್ತು. " ಉಗುಳಿ ಬಾಯಿತೊಳೆದುಕೊಂಡು ಬಾ.." ಎಂದು ಸಿಟ್ಟಿನಿಂದಲೇ ಅವನನ್ನು ಕಳಿಸಿದ್ದೆ. ಅವನ ಅವಸ್ಥೆ ನಿಮಗೆ ನಗು ತರಿಸಿರಬಹುದು. ಆದರೆ ನನಗಾಗ ಸಿಕ್ಕಾಪಟ್ಟೆ ಭಯವಾಗಿತ್ತು‌. ಕಾರಣ... ಕಬ್ಬಿಣದ ಸ್ಕೇಲಿನ ನೆನಪು...

    *            *            *

   ಅದರಲ್ಲಿರುವುದು ಕಬ್ಬಿಣವೋ ಅಥವಾ ಬೇರಾವ ಲೋಹವೋ  ಸರಿಯಾಗಿ ತಿಳಿಯದಾದರೂ ಮೆಟಲ್ ರೂಲರನ್ನು ನಾವು ಕರೆಯುವುದು ಕಬ್ಬಿಣದ ಸ್ಕೇಲು ಅಂತಲೇ. ಕಬ್ಬಿಣದ ಸ್ಕೇಲು ನಮ್ಮ ಶಾಲೆಗೆ ಬರುವುದಕ್ಕೂ ಒಂದು ಹಿನ್ನೆಲೆಯಿತ್ತು.

   ಆ ದಿನ ಮಟಮಟ ಮಧ್ಯಾಹ್ನದ ಹೊತ್ತಿಗೆ ನಾಲ್ಕನೆಯ ತರಗತಿಯ ಅರುಣನ ತಂದೆ ಅಡಿಯಿಂದ ಮುಡಿಯವರೆಗೆ ಅಸಮಾಧಾನವನ್ನು ಹೊತ್ತುಕೊಂಡು ಶಾಲೆಗೆ ಬಂದಿದ್ದರು. ಅವರ ಕೈಯಲ್ಲಿ ತುಂಡಾಗಿದ್ದ ಸ್ಕೇಲೊಂದರ ಚೂರುಗಳಿದ್ದವು. " ಸರ್... ಇಲ್ಲಿ ನೋಡಿ.. ಮೊನ್ನೆ ತಂದ ಅಡಿಕೋಲು... ಮಕ್ಕಳು ತುಂಡು ಮಾಡಿದ್ದಾರೆ... ನಾವು ವರ್ಷಕ್ಕೆ ಎಷ್ಟು ತಂದುಕೊಡುವುದು...?" ತನ್ನ ಮಗನ ಸಹಪಾಠಿಗಳ ಮೇಲೆ ದೂರು ತಂದಿದ್ದ  ಅವರ ದನಿಯಲ್ಲಿ ಸಿಟ್ಟು, ಹತಾಶೆ, ಮುಗ್ಧತೆಗಳೆಲ್ಲಾ ಮಿಕ್ಸಾಗಿರುವಂತೆ ನನಗೆ ಗೋಚರಿಸಿತು. ಆ ತುಂಡುಗಳನ್ನೆಲ್ಲಾ ಪರಿಶೀಲಿಸಿದ ನನ್ನ ಸಹೋದ್ಯೋಗಿಯೊಬ್ಬರು " ರಟ್ಟಿನ ಸ್ಕೇಲಲ್ವೇ... ಇದು ಬೇಗ ತುಂಡಾಗ್ತದೆ.. ಮಕ್ಕಳನ್ನು ದೂರಿ ಪ್ರಯೋಜನವಿಲ್ಲ.." ಎಂಬ ಸಮಜಾಯಿಷಿಯಿಟ್ಟು, "ನಿಮಗೆ ತುಂಡಾಗಲೇ ಬಾರದು ಅಂತಿದ್ದರೆ ಅಂಗಡಿಯಲ್ಲಿ ಕಬ್ಬಿಣದ ಸ್ಕೇಲ್ ಸಿಗುತ್ತದೆ.. ಅದನ್ನು ಕೊಡಿಸಿ" ಎಂಬ ಸಲಹೆಯೊಂದನ್ನು ಕೊಟ್ಟುಬಿಟ್ಟಿದ್ದರು. ಅವರ ಸಲಹೆಯಿಂದ ಸಂಪ್ರೀತರಾದ ಮುಗ್ಧ ತಂದೆ, ತಲೆಯಾಡಿಸಿ ಮನೆಗೆ ಮರಳಿದ್ದರು.

      ಮರುದಿನ ಬೆಳಿಗ್ಗೆ ನಾವು ಶಾಲೆಗೆ ಹೋಗುವಾಗಲೇ ಮಾಸ್ಟ್ರ ಆ ಸಲಹೆ ಜಾರಿಗೆ ಬಂದದ್ದು ನಮ್ಮ ಕಣ್ಣಿಗೆ ಕಾಣಿಸಿತು. ಅರುಣನ ತಮ್ಮ, ಒಂದನೇ ತರಗತಿಯ ಚೋಟುಮೆಣಸಿನಕಾಯಿಯಂತಹ ಹುಡುಗ ತರುಣ್, ಕೈಯಲ್ಲಿ ಪಳಪಳನೇ ಹೊಳೆಯುವ ಕಬ್ಬಿಣದ ಸ್ಕೇಲನ್ನು ಬಗೆಬಗೆಯಾಗಿ ಝಳಪಿಸುತ್ತಾ, ಶಾಲೆಯ ಜಗಲಿಯ ಮೇಲೆಲ್ಲಾ ಸುತ್ತಾಡಿ, ಯಾರಲ್ಲೂ ಇಲ್ಲದ ವಸ್ತುವೊಂದು ತನ್ನಲ್ಲಿದೆ ಎಂಬ ಪ್ರದರ್ಶನ ಮಾಡಿ ಬಂದಿದ್ದ. ಅವನಣ್ಣ ಪಾಪದ ಹುಡುಗ ಅರುಣ್ ಅಂತಹ ಪ್ರದರ್ಶನವನ್ನೇನೂ ಮಾಡದೇ  ತನ್ನ ಪಾಡಿಗೆ ಕ್ಲಾಸಿನಲ್ಲಿ ಕುಳಿತಿದ್ದನಾದರೂ, ಅವನ ಸ್ಕೇಲು ಸಹಪಾಠಿಗಳಿಗೆ ಕಾಣಿಸುತ್ತಿರಲೆಂದು ಬ್ಯಾಗಿನ ಹೊರಗೇ ಕುಳಿತಿತ್ತು. ಅದೇ ಕಾರಣದಿಂದಲೋ ಏನೋ, ಕಬ್ಬಿಣದ ಸ್ಕೇಲು ತನ್ನ ಕರಾಮತ್ತನ್ನು ಆ ದಿನವೇ ತೋರಿಸಿಬಿಟ್ಟಿತ್ತು.

      ಮಧ್ಯಾಹ್ನದ ಮೊದಲ ಅವಧಿಯಲ್ಲಿ ನಾನು ನಾಲ್ಕನೇ ತರಗತಿಯಲ್ಲಿದ್ದೆ. ಕಿರಣ್ ಎಂಬ ಹುಡುಗ ತನ್ನ ನೋಟ್ ಪುಸ್ತಕವನ್ನು ನನಗೆ ತೋರಿಸಿ ವೇಗವಾಗಿ ಸ್ವಸ್ಥಾನಕ್ಕೆ ಮರಳುತ್ತಿದ್ದ. ಅವನ ಪಕ್ಕದಲ್ಲಿದ್ದ ಕಬ್ಬಿಣದ ಸ್ಕೇಲಿನ ಹುಡುಗ ಅರುಣ್ ಒಮ್ಮೆಗೇ "ಆ......" ಎಂದು ಜೋರಾಗಿ ಕಿರುಚಿದ್ದು ಕೇಳಿಸಿ ಅವನೆಡೆಗೆ ನೋಡಿದೆ.  ತೆರೆದುಕೊಂಡಿದ್ದ ಅವನ‌  ಬಾಯಿಯ ತುಂಬ ರಕ್ತ ತುಂಬಿ ಹೊರಗೆ ಹರಿಯುತ್ತಿತ್ತು. ಒಮ್ಮೆ ಉಗುಳಿದ. ನಾನವನ ಮುಖವನ್ನು ಎತ್ತಿ ಹಿಡಿದುಕೊಂಡೆ. ಮತ್ತೆ ಬಾಯಿ ತುಂಬಾ ರಕ್ತ ತುಂಬಿ, ನನ್ನ ಕೈಯ ಮೇಲೂ ಹರಿದುಬಂತು. 

       ಅರುಣನಿಗೆ ತನ್ನ ಕೈಯಲ್ಲಿದ್ದ ವಸ್ತುಗಳನ್ನು ಬಾಯಿಗೆ ಹಾಕುವ ಅಭ್ಯಾಸವೊಂದಿತ್ತು. ಈ ದಿನ ತನ್ನ ಕಬ್ಬಿಣದ ಸ್ಕೇಲನ್ನು ಬಾಯಿಗೆ ಹಾಕಿಕೊಂಡು ಕುಳಿತಿದ್ದ. ಅವನ ಪಕ್ಕದಲ್ಲಿದ್ದ ಕಿರಣ ವೇಗವಾಗಿ ತನ್ನ ಸ್ಥಳ ತಲುಪುವಾಗ ಕಿರಣನ ಕಾಲು, ಸ್ಕೇಲ್ ಹಿಡಿದಿದ್ದ ಅರುಣನ ಕೈಗೆ ಹೊಡೆದಿತ್ತು. ಬಾಯಿಯ ಒಳಗಿದ್ದ ಕಬ್ಬಿಣದ ಸ್ಕೇಲಿನ ಮೊನಚಾದ ಭಾಗ ಅವನ ಅಂಗುಳನ್ನು(palate) ಇರಿದು ಕತ್ತಿಯಿಂದ ಕಡಿದ ಹಾಗೆ ಗಾಯ ಮಾಡಿತ್ತು. ಹಾಗಾಗಿಯೇ ಅಷ್ಟೊಂದು ರಕ್ತ ಸುರಿದದ್ದು.

     ಸ್ವಲ್ಪ ಹೊತ್ತಿನಲ್ಲಿ ರಕ್ತ ಸುರಿಯುವುದು ನಿಂತಿತು. ಬಾಯೊಳಗಿದ್ದ ಗಾಯ ನೋಡಿ ನಾವು ಹೆದರಿಬಿಟ್ಟಿದ್ದೆವು. ನಾನೂ, ಮತ್ತೊಬ್ಬ ಶಿಕ್ಷಕರೂ  ರಿಕ್ಷಾದಲ್ಲಿ ಆಸ್ಪತ್ರೆಗೆ ದೌಡಾಯಿಸಿದೆವು. ಮಾರ್ಗ ಮಧ್ಯದಲ್ಲಿ ಸಿಗುವ ಅವನ ಮನೆಯಿಂದ ಅವನಮ್ಮನನ್ನೂ ಕರೆದುಕೊಂಡು ಹೋದೆವಾದರೂ ಅವರಿಗೆ  ಅವನ ಬಾಯಿ ತೆರೆಸಿ ಗಾಯದ ಆಳ- ಅಗಲ ತೋರಿಸುವ ಧೈರ್ಯ ಮಾಡಲಿಲ್ಲ. ಡಾಕ್ಟರು ಮದ್ದು ಕೊಟ್ಟರು. ಒಂದೆರಡು ದಿನಗಳ ಕಾಲ ಹುಡುಗ ತುಂಬ ಕಷ್ಟಪಟ್ಟನಾದರೂ, ಗಾಯ ಬೇಗನೆ ವಾಸಿಯಾಗಿತ್ತು. ಅವನ ಕಬ್ಬಿಣದ ಸ್ಕೇಲಿನ ಬಳಕೆ ಒಂದೇ ದಿನಕ್ಕೆ ಮುಗಿದು ಹೋಗಿತ್ತು.

      ಆ ಘಟನೆಯ ನಂತರ ಯಾವ ಮಗುವಿನ ಕೈಯಲ್ಲಿ ಕಬ್ಬಿಣದ ಸ್ಕೇಲನ್ನು ಕಂಡರೂ ಮಗು ಮಾರಕಾಯುಧವೊಂದನ್ನು ಹಿಡಿದುಕೊಂಡಂತೆ ಭಾಸವಾಗುತ್ತದೆ. ಬಾಯೊಳಗೆ ಇಟ್ಟುಕೊಂಡ ಕೇಸನ್ನು ಬಿಡಿ, ಮಗುವೊಂದು ತನ್ನ ಕೈಯಲ್ಲಿದ್ದ ಸ್ಕೇಲನ್ನು ಆಟಕ್ಕಾಗಿ ಬೀಸಿ, ಅದು ಇನ್ನೊಬ್ಬರ ಕೈಗೆ ತಾಕಿದರೂ ಅಪಾಯದ ಸಾಧ್ಯತೆ  ಹೆಚ್ಚು. ಇದನ್ನು ಯೋಚಿಸಿದಾಗೆಲ್ಲ ಮಕ್ಕಳು ಉಪಯೋಗಿಸುವ ವಸ್ತುಗಳ ಕುರಿತಾಗಿ ನಮಗೊಂದಿಷ್ಟು ಎಚ್ಚರ ಸದಾ ಇರಬೇಕು ಅನಿಸುತ್ತದೆ.

        *           *             * 

       ಆ ಕಬ್ಬಿಣದ ಸ್ಕೇಲು ನನಗೆ‌ ಕಲಿಸಿ ಹೋದ ಪಾಠ ಇದಷ್ಟೇ ಆಗಿರಲಿಲ್ಲ. ಎರಡೋ ಮೂರೋ ದಿನ ಬಿಟ್ಟು ಅರುಣ್ ಗುಣಮುಖನಾದ ನಂತರ ಅವನ ತಾಯಿ ಶಾಲೆಗೆ ಬಂದಿದ್ದರು. ಅವರ ಪ್ರಕಾರ ಅರುಣನ ಗಾಯಕ್ಕೆ ಅವನ ಗೆಳೆಯ ಕಿರಣ ಕಾರಣನಾಗಿದ್ದ. ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ಅವರು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. "ಮಾಸ್ಟ್ರಾಗಿ ನೀವು ಮಕ್ಕಳಲ್ಲಿ ಭೇದ ಮಾಡ್ಬಾರದು... ಸಾರ್.. ಆ ಹುಡುಗ ನನ್ನ ಮಗನಿಗೆ ಪೆಟ್ಟು ಮಾಡಿದ್ದಾನೆ, ನೀವವ್ನಿಗೆ ಚೂರೂ ಜೋರು ಮಾಡಿಲ್ಲ..." ಎಂದು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದರು. ನಾನು ಕಿರಣನದ್ದೇನೂ ತಪ್ಪಿಲ್ಲ, ಆಕಸ್ಮತ್ತಾಗಿ ನಡೆದ ಘಟನೆಗೆ ಸಣ್ಣ ಹುಡುಗನನ್ನು ಹೊಣೆ ಮಾಡಬಾರದು ಎಂದು ಖಡಾಖಂಡಿತವಾಗಿ ಹೇಳಿ ಕ್ಲಾಸಿಗೆ ತೆರಳಿದ್ದೆ. ಸ್ವಲ್ಪ ಹೊತ್ತು ಬಿಟ್ಟು ಸ್ಟಾಫ್ರೂಮಿಗೆ ಮರಳಿದರೆ, ಅದೇ ತಾಯಿ ನನ್ನಲ್ಲಿ ಕ್ಷಮೆ ಕೇಳಲು ಸಿದ್ಧರಾಗಿ ನಿಂತಿದ್ದರು. " ನೀವು ನಮ್ಗೆ ತುಂಬಾ ಉಪಕಾರ ಮಾಡಿದ್ರಿ ಸರ್.... ಆಗ ಹಾಗೆ ಮಾತನಾಡಿದ್ದು ತಪ್ಪಾಯಿತು" ಎಂದ ಅವರ ಧ್ವನಿಯಲ್ಲಿ ನಾನೇನೋ ಅವರ ಮಗನಿಗಾಗಿ ದೊಡ್ಡ ತ್ಯಾಗ ಮಾಡಿದ್ದೇನೆ ಎಂಬ ಭಾವವಿತ್ತು. ಅಷ್ಟಕ್ಕೂ ನಾನು ಅವರ ಮಗನಿಗಾಗಿ ವಿಶೇಷವಾದದ್ದೇನೂ ಮಾಡಿರಲಿಲ್ಲ. ಆ ಕ್ಷಣದಲ್ಲಿ ಯಾರೇ ಇದ್ದರೂ ಮಾಡಬಹುದಾಗಿದ್ದ ಮತ್ತು ಮಾಡಲೇಬೇಕಾಗಿದ್ದ ಕೆಲಸವನ್ನಷ್ಟೇ ಮಾಡಿದ್ದೆ ನಾನು.    ಅವರೊಂದಿಗೆ ವಾದ ಮಾಡಿ ನಾನು ಕ್ಲಾಸಿಗೆ ಹೋದ ನಂತರ ಸ್ಟಾಫ್ರೂಮಿನಲ್ಲಿದ್ದ ಮುಖ್ಯೋಪಾಧ್ಯಾಯರು ಮತ್ತು ಹಿರಿಯ ಶಿಕ್ಷಕರು ಆ ಮಹಿಳೆಗೆ ತಿಳಿಹೇಳಿ ನನ್ನ ಬಗ್ಗೆ ಕೃತಜ್ಞತಾಭಾವವನ್ನು ಮೂಡಿಸಿಬಿಟ್ಟಿದ್ದರು. ನನ್ನ ಕುರಿತಾಗಿ ಆ ಕುಟುಂಬಕ್ಕೆ ಆಗ ಹುಟ್ಟಿದ ಕೃತಜ್ಞತಾ ಭಾವ ಮತ್ತು ಪ್ರೀತಿ ಹಲವು ವರ್ಷಗಳವರೆಗೆ ಮುಂದುವರೆಯಿತು. ಮಕ್ಕಳ ಕಲಿಕೆ ಮಾತ್ರವಲ್ಲದೇ ಇನ್ನಾವುದೇ ವಿಷಯದ ಸಮಸ್ಯೆ ಬಂದರೂ ಫೋನಾಯಿಸಿ ನನ್ನೊಂದಿಗೆ ಹಂಚಿಕೊಳ್ಳುವಷ್ಟು ಗೌರವವನ್ನು ತೋರಿಸುತ್ತಿದ್ದ ಆ ದಂಪತಿಗಳು, ಅಪರೂಪಕ್ಕೆ  ಮೀನು, ಏಡಿ ಮತ್ತಿತರ ಶಿಕಾರಿ ಮಾಡಿದಾಗಲೂ ನನ್ನನ್ನು ನೆನಪಿಸಿಕೊಳ್ಳುತ್ತಿದ್ದರು. ಆ ಮಟ್ಟದ ಅಭಿಮಾನವನ್ನು ಅವರಲ್ಲಿ ಮೂಡಿಸಿದ ಮುಖ್ಯೋಪಾಧ್ಯಾಯರಾದ ರೇವತಿ ಮೇಡಂ ಮತ್ತು  ಕೃಷ್ಣಪ್ಪ ಮಾಸ್ಟರಿಂದ ಸಹೋದ್ಯೋಗಿಯೊಬ್ಬರ ಘನತೆಯನ್ನು ಎತ್ತರಿಸುವ, ಆಕ್ರೋಶ-ಅಭಿಮಾನಗಳನ್ನೆಲ್ಲ ಏಕರೂಪದಲ್ಲಿ ವ್ಯಕ್ತಪಡಿಸುವ ಹಳ್ಳಿಯ  ಮುಗ್ಧ ಜನರಲ್ಲಿ ಸದ್ಭಾವನೆಯನ್ನೇ ಮುನ್ನೆಲೆಗೆ ತರುವ  ಪಾಠವನ್ನು ನಾನು ಕಲಿತಿದ್ದೆ.

         *         *          *

  ಈಗಲೂ ನನ್ನ ತರಗತಿಗಳಲ್ಲಿ ಆಗಾಗ ಕಬ್ಬಿಣದ ಸ್ಕೇಲು ಕಾಣಿಸಿಕೊಳ್ಳುತ್ತದೆ. ನನಗೆ ಈ ರಕ್ತದ ಕತೆಯೊಂದಿಗೆ ಶಾಯಿಯ ಕತೆಯೂ ನೆನಪಾಗುತ್ತದೆ. ಮಕ್ಕಳೊಂದಿಗೆ ಹಂಚಿಕೊಂಡು ಅವರನ್ನು ಚಿಂತನೆಗೆ ಹಚ್ಚುವುದೂ, ಜೊತೆಗೊಂದಿಷ್ಟು ಮನರಂಜಿಸುವುದೂ ನನಗೆ ಸಾಧ್ಯವಾಗುತ್ತದೆ. ಜೊತೆಜೊತೆಗೆ ಆ ಕುಟುಂಬ ತೋರಿದ ಅತಿಶಯವಾದ ಪ್ರೀತಿಯೂ ನೆನಪಾಗಿ ಮನಸ್ಸು ತುಂಬಿಬರುತ್ತದೆ.

          - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment