ಶಿಕ್ಷಕನ ಡೈರಿಯಿಂದ
“Sorry…” ಅದೆಷ್ಟು ಶಕ್ತಿಯಿದೆ ಈ ಪದದಲ್ಲಿ..!
ಸಂಜೆ ಏಳೂವರೆಯ ಹೊತ್ತು. ರಿಂಗಿಣಿಸಿದ ಫೋನ್ ಎತ್ತಿದ ನನಗೆ ಆಚೆ ಕಡೆಯಿಂದ ಅನಿರೀಕ್ಷಿತ ಪ್ರಶ್ನೆಯೊಂದು ಬಂದಿತ್ತು. "ನಾನು ಆಶಿಕನ ಅಪ್ಪ ಮಾತಾಡ್ತಿರುವುದು. ನೀವಿವತ್ತು ಅವನಿಗೆ ಹೊಡ್ದಿದ್ದೀರಾ?" ತುಸು ಜೋರು ಮಾಡುವ ಧ್ವನಿಯಲ್ಲೇ ಪ್ರಶ್ನಿಸಿದ್ದರು. "ಹೌದು..... ಆದರೆ ಅಷ್ಟೇನೂ ಜೋರಾಗಿ ಹೊಡೆದಿಲ್ಲವಲ್ಲ.." ತಡವರಿಸಿದೆ. "ನಿಮಗೆ ಮೆಲ್ಲ ಅನಿಸಿರಬಹುದು ಸರ್, ಆದರೆ ಅವನಿಗೆ ತುಂಬಾ ನೋವಾಗಿದೆ. ಅವನು ಅಳುತ್ತಾ ಮನೆಗೆ ಬಂದಿದ್ದ. ಅವನು ಮೊದಲೇ ವೀಕಾಗಿದಾನೆ.. ನಾನೇ ಹೊಡೆಯುವುದಿಲ್ಲ ಅವನಿಗೆ.." ಅವರ ಆಕ್ಷೇಪಣೆಯ ದನಿ ಮುಂದುವರೆದಿತ್ತು.
ಹಲವಾರು ವರ್ಷಗಳ ಶಿಕ್ಷಕ ವೃತ್ತಿ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಇಂಥದ್ದೊಂದು ಕರೆ ನನಗೆ ಬಂದಿತ್ತು. ಗಮ್ಮತ್ತೆಂದರೆ ಸರಿಯಾಗಿ ಎರಡು ದಿನಗಳ ಹಿಂದೆ ಸಹೋದ್ಯೋಗಿಯೊಬ್ಬರು "ನಿಮ್ಮ ಮೇಲೆ ಕ್ಲಾಸ್ ಲೀಡರ್ಗಳದ್ದು ದೂರು ನೋಡಿ, ಅವರು ತಂಟೆ ಮಾಡಿದವರ ಹೆಸರು ಬರೆದರೆ ನೀವು ಹೊಡೆಯುವುದಿಲ್ಲವಂತೆ." ಎಂದು ತಮಾಷೆಯಲ್ಲಿ ಹೇಳಿದ್ದರು. ನಾನದನ್ನೊಂದು ಕಾಂಪ್ಲಿಮೆಂಟ್ ಎಂಬಂತೆಯೇ ಸ್ವೀಕರಿಸಿದ್ದೆ. ಹಾಗಂತ ನಾನು ಆ ದಿನ ಆಶಿಕ್ ನಿಗೊಂದು ಪೆಟ್ಟು ಕೊಟ್ಟಿದ್ದುದು ಸುಳ್ಳಲ್ಲ. ಮಕ್ಕಳನ್ನು ನಿಯಂತ್ರಿಸುವ ಭರದಲ್ಲಿ ಪೆಟ್ಟೊಂದನ್ನು ಕೊಟ್ಟಿದ್ದೆ. ಮಕ್ಕಳಿಗೆ ಆ ದಿನ ಪರೀಕ್ಷೆಯಿತ್ತು. ಟೈಂಟೇಬಲ್ ಮಾಡಿದವರ ಕೃಪೆಯಿಂದ ಎಲ್ಲಾ ತರಗತಿಗಳಿಗೂ ಇಂಗ್ಲೀಷ್ ಪರೀಕ್ಷೆಯೇ ಇದ್ದದ್ದು. ನಾಲ್ಕು ಕ್ಲಾಸಿನ ನೂರೈವತ್ತಕ್ಕೂ ಹೆಚ್ಚು ಮಕ್ಕಳುಳ್ಳ ಪರೀಕ್ಷಾ ಹಾಲಿನಲ್ಲಿ ನಾನೊಬ್ಬನೇ ಇದ್ದೆ. ಪರೀಕ್ಷೆ ಬರೆದು ಮುಗಿಸಿದ ನಂತರ ಮಕ್ಕಳು ಮಂಗಚೇಷ್ಟೆ ಆರಂಭಿಸಿದ್ದರು. ಶಾಲೆ ಬಿಡಲು ಸ್ವಲ್ಪ ಹೊತ್ತಿರುವಾಗ ಆಫೀಸ್ರೂಮಿಂದ ಕರೆ ಬಂತು. ಅಲ್ಲಿ ನಡೆದ ಮಾತುಕತೆಯಿಂದ ಮೂಡ್ ಕೆಡಿಸಿಕೊಂಡು ವಾಪಸ್ ಬರುವಾಗ ಮಕ್ಕಳ ತಂಟೆ ಮಿತಿಮೀರಿತ್ತು. ಒಂದೆರಡು ಮಕ್ಕಳಿಗೆ ಪೆಟ್ಟುಕೊಟ್ಟರೆ ಉಳಿದವರು ನಿಯಂತ್ರಣಕ್ಕೆ ಬರುತ್ತಾರೆಂದು ಆಶಿಕನಿಗೊಂದು ಪೆಟ್ಟು ಕೊಟ್ಟಿದ್ದೆ. ನನ್ನ ಪ್ರಕಾರ ಆಶಿಕ್ ತಂಟೆ ಮಾಡುತ್ತಿದ್ದ ಮತ್ತು ನಾನವನಿಗೆ ಅಷ್ಟು ಜೋರಾಗೇನೂ ಹೊಡೆದಿರಲಿಲ್ಲ.
ಆಶಿಕ್ ಮಹಾ ತುಂಟನೇನಲ್ಲವಾದರೂ ಒಂದು ಬಗೆಯ ಫನ್ನೀ ಹುಡುಗನೆನ್ನಲು ಅಡ್ಡಿಯಿರಲಿಲ್ಲ. ತನ್ನ ವರ್ತನೆಗಳಿಂದ ತರಗತಿಯ ಮಕ್ಕಳನ್ನು ನಗಿಸುತ್ತಾ, ತಾನೂ ನಗುತ್ತಿರುತ್ತಿದ್ದ ಅವನಿಗೆ ನಾನೆಂದರೆ ವಿಚಿತ್ರ ಸಲಿಗೆ. ನನ್ನ ಅವಧಿಯಲ್ಲಿ ಅವನ ಚೇಷ್ಟೆಗಳು ತುಸು ಹೆಚ್ಚೇ ಇರುತ್ತಿದ್ದವು. ಹುಡುಗಿಯರ ತರವಲ್ಲವಾದರೂ, ಅವನದ್ದೇ ಶೈಲಿಯ ಒಂದು ವಿಶಿಷ್ಟ ವಯ್ಯಾರ ಮಾಡುವ ಅವನ ಚೇಷ್ಟೆಗಳು ನನಗೆ ನಗು ತರಿಸುತ್ತಿದ್ದವೇ ವಿನಃ ಕೋಪ ಬರಿಸುತ್ತಿರಲಿಲ್ಲ. ಆಗಾಗ ನಾನು ಹುಸಿಕೋಪ ತೋರಿಸುತ್ತಿದ್ದೆ. ಅವನು ಇನ್ನಷ್ಟು ನಗುತ್ತಿದ್ದ; ನಾನೂ ನಗುತ್ತಿದ್ದೆ . ಅವನ ತಂದೆಯೂ ನನ್ನೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಎದುರು ಸಿಕ್ಕಾಗೆಲ್ಲಾ ಬಹಳ ಸೌಜನ್ಯಯುತವಾಗಿ ಮಾತಾಡುತ್ತಿದ್ದರು. ನಾನೂ ಅವರಷ್ಟೇ ಆತ್ಮೀಯತೆಯಿಂದ ಮಾತನಾಡುತ್ತಿದ್ದೆ.
ಇಂತಿಪ್ಪ ಆಶಿಕ್ ನ ತಂದೆಯ ಮಾತಿನ ಧಾಟಿ ಈ ದಿನ ಬೇರೆಯೇ ಆಗಿತ್ತು. "ಅವನು ಮನೆಗೆ ಅಳುತ್ತಾ ಬಂದಿದ್ದ, ನಾನೇ ಅವನಿಗೆ ಹೊಡೆಯುವುದಿಲ್ಲ......" ಎಂಬ ಅವರ ಜೋರಿನ ದನಿಯಲ್ಲಿನ ನೋವನ್ನು ನಾನು ಗುರುತಿಸಬಲ್ಲವನಾಗಿದ್ದೆ. ನನ್ನ ಮಗ ಶಿಕ್ಷಕರಿಂದ ಸಣ್ಣ ವಿಚಾರಕ್ಕೆ ಪೆಟ್ಟು ತಿಂದು ಅಳುತ್ತಾ ಮನೆಗೆ ಬಂದರೆ ನನ್ನ ಪ್ರತಿಕ್ರಿಯೆಯೂ ಹೀಗೇ ಇರಬಹುದಲ್ಲವೇ? "Sorry... ಮಕ್ಕಳನ್ನು ಕಂಟ್ರೋಲಿಗೆ ತರುವ ಭರದಲ್ಲಿ ಹೊಡೆದೆ. ಅಷ್ಟು ನೋವಾಗುತ್ತದೆಂಬ ಅಂದಾಜಿರಲಿಲ್ಲ" ಹೃದಯಪೂರ್ವಕವಾಗಿಯೇ ಕ್ಷಮೆ ಕೇಳಿದ್ದೆ. "ನೀವು Sorry ಅಂದ ಮೇಲೆ ನಾನೇನು ಹೇಳುವುದು...." ಈಗ ಅವರು ತಡವರಿಸುತ್ತಿದ್ದರು. ಬಹುಶಃ ಏನು ಹೇಳುವುದೆಂದು ತೋಚಿರಲಿಕ್ಕಿಲ್ಲ. "ನಾನು ತುಂಬಾ ನೋವಾಗುವ ಹಾಗೆ ಹೊಡೆದಿರಲಿಲ್ಲ. ಬಹುಶಃ ಸಣ್ಣ ತಪ್ಪಿಗೆ ಪೆಟ್ಟು ಬಿದ್ದಿತೆಂದು ಮನಸ್ಸಿಗೆ ನೋವಾಗಿ ಅತ್ತನೇನೋ... ಅವನಿಗೊಮ್ಮೆ ಫೋನ್ ಕೊಡುತ್ತೀರಾ?" ಕೇಳಿದೆ. ಫೋನ್ ಹುಡುಗನ ಕೈಗೆ ಹೋಯಿತು. "ತುಂಬಾ ನೋವಾಯಿತಾ?" ಆಪ್ತವಾಗಿಯೇ ಕೇಳಿದೆ. "ಹೌದು ಸರ್, ಆಗ ನೋವಾಗಿತ್ತು" ಹಿಂಜರಿಕೆಯಿಂದಲೇ ಉತ್ತರಿಸಿದ. "ಈಗ ನೋವಿದೆಯಾ" ಕೇಳಿದೆ. "ಇಲ್ಲ.." ಎಂದ ಹುಡುಗನ ದನಿಯಲ್ಲಿ ಗೊಂದಲ, ಸಂಕೋಚ, ಸಮಾಧಾನಗಳೆಲ್ಲ ಮಿಶ್ರಣಗೊಂಡ ಭಾವವಿದ್ದಂತೆ ಕಾಣಿಸಿತು.
ಮರುದಿನ ಶಾಲೆಯಲ್ಲಿ ಎದುರಾದ ಆಶಿಕ್ ನನ್ನನ್ನು ಕಂಡು ನಾಚಿಕೊಳ್ಳುತ್ತಿದ್ದ. ಹತ್ತಿರ ಕರೆದು ಹೆಗಲ ಮೇಲೆ ಕೈಯಿಟ್ಟು ಅವನಿಗೆ ನಿಜವಾಗಲೂ ಪೆಟ್ಟಿನಿಂದ ನೋವಾಗಿತ್ತೇ ಎಂಬುದನ್ನು ಪ್ರಶ್ನಿಸಿದೆ. "ಬೆನ್ನ ಮೇಲೆ ಐದು ಬೆರಳಿನ ಅಚ್ಚು ಬಿದ್ದಿತ್ತು ಸರ್.." ಎಂದ. ಸುಳ್ಳು ಹೇಳುವ ಹುಡುಗ ಅವನಾಗಿರಲಿಲ್ಲ. ನನಗೆ ಸತ್ಯ ಅರ್ಥವಾಗಿತ್ತು. ಅವನಿಗೆ ಹೊಡೆಯುವ ಮುನ್ನ ಆಫೀಸ್ರೂಮಿಗೆ ಹೋಗಿ ಮೂಡ್ ಕೆಡಿಸಿಕೊಂಡು ಬಂದಿದ್ದ ಪರಿಣಾಮವಾಗಿ ನನ್ನ ಕೈ ತುಸು ಜೋರಾಗಿ ಬೀಸಿರಬೇಕು. ಅದರ ಅಂದಾಜಿಲ್ಲದೇ ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೆ.
ಒಂದೆರಡು ದಿನಗಳ ಬಳಿಕ ಆಶಿಕ್ ತಮ್ಮ ಬಿಡುವಿನ ಅವಧಿಯಲ್ಲಿ ಆಟದ ಮೈದಾನಕ್ಕೆ ಹೋಗಲು ಅನುಮತಿ ಕೇಳಿಕೊಂಡು ನನ್ನ ಬಳಿ ಬಂದಿದ್ದ. "ಉಳಿದವರೆಲ್ಲಾ ಹೋಗಲಿ, ನೀನೊಬ್ಬ ಬೇಡ" ಎಂದೆ ನಗುವಿನೊಂದಿಗೆ ಹುಸಿಗೋಪ ಬೆರೆಸಿ. ಆಶಿಕ್ ತನ್ನ ಸಹಜ ನಗು ವಯ್ಯಾರಗಳೊಂದಿಗೆ ನಿಂತಿದ್ದ. ನಾನು ತಮಾಷೆ ಮಾಡುತ್ತಿರುವೆನೆಂದು ಅವನಿಗೂ ಗೊತ್ತಿತ್ತು. ಅರ್ಧ ನಿಮಿಷ ಬಿಟ್ಟು "ಹೋಗು ಮಾರಾಯ.." ಎಂದು ನಕ್ಕೆ. ನಗುತ್ತಾ ಹೊರಟ. ನಾಲ್ಕು ಹೆಜ್ಜೆ ಮುಂದೆ ಹೋದವ ಮತ್ತೆ ಹಿಂದಕ್ಕೆ ಬಂದ.
"Sorry sir.." ಎಂದವನ ಮುಖದಲ್ಲಿ ನಗುವಿದ್ದರೂ ದನಿಯಲ್ಲಿ ಗಂಭೀರತೆಯಿತ್ತು. "ಯಾಕೆ?" ಎಂದು ಕೇಳಿದ ನನಗೆ ಅವನ ಕಣ್ಣುಗಳೇ ಉತ್ತರಿಸಿದ್ದವು. ನಾನು ಸ್ತಬ್ಧನಾಗಿದ್ದೆ. ನನ್ನ ಹೃದಯ ಆರ್ದ್ರಗೊಂಡಿತ್ತು.
- ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799