ಶಿಕ್ಷಕನ ಡೈರಿಯಿಂದ
ತುಂಟ ಶಫೀಕನೂ, ಕಸದ ಬುಟ್ಟಿ ಸೇರಿದ ಹಾಳೆಯೂ…….
ನನ್ನ ಹಿಂದಿನ ಬರಹದಲ್ಲಿ ಶಿಕ್ಷಕರೊಳಗಿರುವ ದರ್ಪದ ಬಗ್ಗೆ ಬರೆಯುತ್ತಾ, ನಾನು ಕೋಪದಲ್ಲಿ ವಿದ್ಯಾರ್ಥಿನಿಯೊಬ್ಬಳ ಪುಟವನ್ನು ಹರಿದುದನ್ನೂ, ಅವಳ ಕಣ್ಣೀರು ನನ್ನೊಳಗೆ ಪಶ್ಚಾತ್ತಾಪ ಮೂಡಿಸಿದ್ದುದನ್ನೂ ಪ್ರಸ್ತಾಪಿಸಿದ್ದೆ. ಬಹಳಷ್ಟು ಜನರು ಶಿಕ್ಷಕರು ಸ್ವಲ್ಪವಾದರೂ ಒರಟಾಗಿ ವರ್ತಿಸಬೇಕು, ಇದು ಮಕ್ಕಳನ್ನು ಸಂವೇಗಾತ್ಮಕವಾಗಿ ಗಟ್ಟಿಗೊಳಿಸುತ್ತದೆ ಎಂದೇ ವಾದಿಸುತ್ತಾರೆ. ನಾನು ಅದಕ್ಕೆ ಪ್ರತಿವಾದಿಸಲಾರೆನಾದರೂ ಆ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಾಗಿಲ್ಲ. ಆದರೂ ಶಿಕ್ಷಕರು ಒರಟಾಗಿ ವರ್ತಿಸಿದರೆ ಸ್ವಲ್ಪವೂ ವಿಚಲಿತರಾಗದ, ಆದರೆ ನಗುತ್ತಾ ಹೇಳಿದಾಗ ಮನಸ್ಸಿಗೆ ತೆಗೆದುಕೊಳ್ಳುವ ಹಲವು ಮಕ್ಕಳನ್ನು ನೋಡಿದ್ದೇನೆ. ಅಂಥವರಲ್ಲೊಬ್ಬ ಶಫೀಕ್.
ಈ ಶಫೀಕ್ ಏಳನೇ ತರಗತಿಯಲ್ಲಿದ್ದಾಗ copy correctionಗೆ ಹೊಸ ವಿಧಾನವನ್ನು ಅನುಸರಿಸಿದ್ದೆ. ಇಂಗ್ಲಿಷ್ copyಯನ್ನು ಪ್ರತೀದಿನ ಪರಿಶೀಲಿಸುವ ಬದಲಾಗಿ ಮೂರೋ ನಾಲ್ಕೋ ದಿನಕ್ಕೊಮ್ಮೆ ಪರಿಶೀಲಿಸಿ, ಅಂಕಗಳನ್ನು ಹಾಕುತ್ತಿದ್ದೆ. ಪ್ರತೀಬೆಂಚಿನ ಸದಸ್ಯರ ಅಂಕಗಳ ಒಟ್ಟು ಮೊತ್ತದ ಆಧಾರದಲ್ಲಿ "Best copy writers" ಎನ್ನುವ ಪ್ರಶಸ್ತಿಯ ಫಲಕವೊಂದು ಡೆಸ್ಕಿಗೆ ಜೋತುಬೀಳುತ್ತಿತ್ತು. ನನ್ನ copy ಪರಿಶೀಲನೆ ಅನಿರೀಕ್ಷಿತವಾಗಿರುತ್ತಿತ್ತು. ಕೆಲವೊಮ್ಮೆ ಒಂದು ವಾರ ಬಿಟ್ಟು ಪರಿಶೀಲಿಸುವುದಿತ್ತು, ಕೆಲವೊಮ್ಮೆ ಮರುದಿನವೇ ಪರಿಶೀಲಿಸುವುದೂ ಇತ್ತು. ಹಾಗಾಗಿ ಮಕ್ಕಳು ಪ್ರತಿದಿನವೂ copy ಬರೆಯಲೇಬೇಕಿತ್ತು. ಆಕಸ್ಮಾತ್ ಒಂದೆರಡು ಪುಟಗಳು ಕಡಿಮೆಯಿದ್ದರೆ, ಅವರ ಬೆಂಚಿಗೇ ಅಂಕಗಳು ಮೈನಸ್ ಆಗುತ್ತಿದ್ದವು. ಈ ವಿಧಾನ ಬಹಳ ಯಶಸ್ವಿಯಾಗಿತ್ತು. ತರಗತಿಯ ಎಲ್ಲಾ ವಿದ್ಯಾರ್ಥಿಗಳು ಬಹಳ ಸುಂದರವಾಗಿ ಬರೆಯಲು ಪ್ರಯತ್ನಿಸುತ್ತಿದ್ದರು.
ಒಂದು ದಿನ ಹಾಗೇ copy ತಿದ್ದುತ್ತಿರುವಾಗ ಶಫೀಕನ ಸರದಿ ಬಂತು. ಅವನ copy ಯ ಎರಡು ಪುಟಗಳು ಸಂಪೂರ್ಣವಾಗಿ ಮುದ್ದೆಮುದ್ದೆಯಾಗಿದ್ದವು. ಕಲಿಕೆಯ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸದ, ಆದರೆ ಶಾಲೆಯೊಳಗಿನ ಪ್ರತೀಕ್ಷಣವನ್ನೂ ನಗುನಗುತ್ತಾ ಖುಷಿಖುಷಿಯಾಗಿ ಕಳೆವ ಶಫೀಕನ ತಪ್ಪುಗಳು ನಮ್ಮಲ್ಲಿ ಸಿಟ್ಟು ತರಿಸುವುದಕ್ಕಿಂತ ನಗೆ ತರಿಸುವುದೇ ಹೆಚ್ಚು.. ಈ ದಿನವೂ ಅವನ ಪುಸ್ತಕ ನೋಡಿ ನಗೆಯೇ ಬಂತು. "ಇದೆಂಥ ಅವಸ್ಥೆ ಮಾರಾಯ? ಪುಸ್ತಕ ಹೀಗಾ ಇಟ್ಟುಕೊಳ್ಳುವುದು?" ಕೇಳಿದೆ. ಹುಡುಗ ತಲೆ ತುರಿಸಿಕೊಳ್ಳುತ್ತಾ ತುಂಟ ನಗು ನಗುತ್ತಿದ್ದ. ತರಗತಿಯ ಮಕ್ಕಳೆಲ್ಲಾ ಮುಸಿ ಮುಸಿ ನಗುತ್ತಿದ್ದರು. ವಿಷಯ ಏನೆಂದು ವಿಚಾರಿಸಿದೆ. ನಡೆದದ್ದಿಷ್ಟು...ಎರಡು ದಿನದ ಹಿಂದೆ ವಿಜ್ಞಾನ ಪೀರಿಯಡ್ಡಿನಲ್ಲಿ ಈತ ಇಂಗ್ಲೀಷ್ ಕೋಪಿ ಬರೆಯುತ್ತಿದ್ದ. ಕೋಪೋದ್ರಿಕ್ತರಾದ ವಿಜ್ಞಾನ ಟೀಚರ್ ಅವನ ಪುಸ್ತಕದಿಂದ ಎರಡು ಪುಟಗಳನ್ನು ಹರಿದು ಮುದ್ದೆ ಮಾಡಿ ಕಸದ ಬುಟ್ಟಿಗೆ ಎಸೆದಿದ್ದರು. ಸ್ವಲ್ಪವೂ ವಿಚಲಿತನಾಗದ ಶಫೀಕ್, ಟೀಚರ್ ತರಗತಿಯಿಂದ ಹೊರ ಹೋದೊಡನೆ ಕಸದ ಬುಟ್ಟಿಯಿಂದ ಮುದ್ದೆಯಾಗಿದ್ದ ಆ ಪುಟಗಳನ್ನು ಮರಳಿ ತಂದು, ಅದನ್ನು ತನ್ನಿಂದ ಸಾಧ್ಯವಿದ್ದಷ್ಟು ಓರಣಗೊಳಿಸಿ, ತನ್ನ copy ಪುಸ್ತಕಕ್ಕೆ ಅಂಟಿಸಿಕೊಂಡಿದ್ದ. ತನ್ನ ಶ್ರಮ ವ್ಯರ್ಥವಾಗದಂತೆ ನೋಡಿಕೊಂಡಿದ್ದ. ವಿಷಯ ತಿಳಿದ ಮೇಲೆ ಮಕ್ಕಳ ನಗುವಿನಲ್ಲಿ ನಾನೂ ಭಾಗಿಯಾದೆ. ತಮಾಷೆಯಾಗಿಯೇ ಅವನ ಸಾಹಸಕ್ಕೊಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಇದಾಗಿ ಎರಡೋ ಮೂರೋ ದಿನಗಳಲ್ಲಿ ಶಫೀಕ್ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದ. ಅಂಥಾ ದೊಡ್ಡ ಸಾಹಸವೇನಲ್ಲ, ನನ್ನ ಇಂಗ್ಲೀಷ್ ಪೀರಿಯಡ್ಡಿನಲ್ಲಿ ವಿಜ್ಞಾನ ನೋಟ್ಸ್ ಬರೆಯುತ್ತಿದ್ದನಷ್ಟೆ. ಈಗ ನಾನೇನು ಮಾಡಬೇಕು? ನನಗೆ ಕೋಪವೇನೂ ಬರಲಿಲ್ಲ. ಆದರೆ ಕೀಟಲೆ ಮಾಡೋಣ ಅನ್ನಿಸಿತ್ತು. ಸುಮ್ಮನೆ ಪುಸ್ತಕ ಎತ್ತಿ ನಾನೇನು ಮಾಡಲಿ ಎಂಬಂತೆ ಮಕ್ಕಳೆಡೆಗೆ ದೃಷ್ಟಿ ಹಾಯಿಸಿದೆ. ನಾನು ಕೇಳುವ ಮೊದಲೇ "ಪೇಜ್ ಹರೀರಿ ಸರ್"ಎಂದು ಮಕ್ಕಳು ಒಕ್ಕೊರಲಿನಿಂದ ಹೇಳಿದ್ದರು. ಎರಡೇ ಗೆರೆಯಷ್ಟು ಬರೆದ ಪುಟವನ್ನು ಹರಿದುಬಿಟ್ಟೆ, ನಗುನಗುತ್ತಲೇ. ಹುಡುಗನೂ ನಗುತ್ತಿದ್ದ. "ನೋಡು, ನಾನು ಮುದ್ದೆ ಮಾಡುವುದಿಲ್ಲ, ಹರಿದು ಕಸದ ಬುಟ್ಟಿಗೆ ಹಾಕುತ್ತೇನೆ" ಎಂದೆ ನಗುತ್ತಲೇ. ಶಫೀಕನೂ ಸೇರಿದಂತೆ ಮಕ್ಕಳೆಲ್ಲರೂ ನನ್ನೊಂದಿಗೆ ನಗೆಯಲ್ಲಿ ಭಾಗಿಯಾದರು.
ಇದನ್ನು ಓದುವಾಗ ನಿಮಗನ್ನಿಸಬಹುದು. ಕೊನೆಯ ಕ್ಷಣದಲ್ಲಿ ಆ ಪುಸ್ತಕ ಹರಿದದ್ದು ತಪ್ಪಲ್ಲವೇ ಎಂದು. ನಿಜ, ನಾನಾಗ ಹರಿಯಬಾರದಿತ್ತು. ಆದರೂ ಅದೊಂದು ತಮಾಷೆಯ ಸನ್ನಿವೇಶವಷ್ಟೇ ಆಗಿತ್ತು. ಅದು ಶಫೀಕನೂ ಸೇರಿದಂತೆ ಮಕ್ಕಳೆಲ್ಲರಿಗೂ ಮನರಂಜನೆಯಷ್ಟೇ. ಹಾಗಾಗಿ ಆ ಕುರಿತಾಗಿ ನನಗೆ ಪಶ್ಚಾತ್ತಾಪವಂತೂ ಇಲ್ಲ. ಕೆಲವೊಮ್ಮೆ ಮಕ್ಕಳ ತುಂಟಾಟಗಳು, ಶಿಕ್ಷಕರೊಳಗಿನ ತುಂಟನನ್ನೂ ಜಾಗೃತಗೊಳಿಸುತ್ತದೆ ಎನ್ನುವುದಕ್ಕೆ ಇದೊಂದು ದೃಷ್ಟಾಂತವಷ್ಟೆ.
ಇಷ್ಟೆಲ್ಲಾ ಓದಿದ ಮೇಲೆ ನಿಮ್ಮೊಳಗಿನ ತುಂಟನನ್ನು ಜಾಗೃತಗೊಳಿಸಿದ ಮಕ್ಕಳನ್ನು ತುಸು ನೆನಪಿಸಿಕೊಳ್ಳಬಲ್ಲಿರಾ?
- ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799