---Advertisement---

ಶಿಕ್ಷಕ ಮತ್ತು ದರ್ಪ – ಶಿಕ್ಷಕನ ಡೈರಿಯಿಂದ 22

By kspstadk.com

Published On:

Follow Us
Shikshakana diary
---Advertisement---
WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ಶಿಕ್ಷಕ ಮತ್ತು ದರ್ಪ

            ನನ್ನ ವೃತ್ತಿ ಜೀವನದ ಆರಂಭದ ವರ್ಷವದು. ಎರಡನೇ ತರಗತಿಯಲ್ಲಿ ಚಟುವಟಿಕೆಯೊಂದನ್ನು‌ ಮಾಡಲು ಹೊರಟಿದ್ದೆ‌. ಮೂಲೆಯಲ್ಲಿ ಕುಳಿತಿದ್ದ ಆಶೀಕ್ ಎನ್ನುವ ಹುಡುಗ ಜೋರಾಗಿ ನಿದ್ದೆ ಮಾಡುತ್ತಿದ್ದ. ನನಗೆ ನಗು ಬಂತು, ಜೊತೆಗೆ ತುಸು ಕೋಪವೂ.. ನನ್ನ ತರಗತಿಯಲ್ಲಿ ರಾಜಾರೋಷವಾಗಿ ನಿದ್ದೆ ಮಾಡುವಷ್ಟು ಧೈರ್ಯವೇ? ಜೊತೆಗೆ ಸಣ್ಣ ಕೀಟಲೆ ಮಾಡೋಣ ಎನ್ನಿಸಿತು. ಮೆಲ್ಲನೆ ಅವನ ಬಳಿ ಹೋಗಿ ಅವನ ಬೆನ್ನ ಮೇಲೆ ಸಣ್ಣ ಪೆಟ್ಟೊಂದನ್ನು ಕೊಟ್ಟೆ, ನೋವಾಗದ ಹಾಗೆ. ಆಶೀಕ್ ಬೆಚ್ಚಿ ಬಿದ್ದು ಕಣ್ಣುಬಿಟ್ಟ. ಉಳಿದ ಮಕ್ಕಳೆಲ್ಲಾ ಜೋರಾಗಿ ನಗುತ್ತಿದ್ದರು. ಆಶೀಕ್ ಬಿಕ್ಕಿದ.. ನೋವಾಗದ ಹಾಗೆ ಹೊಡೆದಿದ್ದೆನೆಂದುಕೊಂಡಿದ್ದೆ. ಅವನ ಮನಸ್ಸಿಗೆ ಬಹಳ ನೋವಾಗಿತ್ತು. ನನಗೆ ಪಿಚ್ಚೆನಿಸಿತು. 

               ಅವನನ್ನು ನಿದ್ದೆಯಿಂದ ಎಬ್ಬಿಸಲು ಹಾಗೆ ಮಾಡಲೇಬೇಕಿತ್ತೇ? ಬರೀ ಹೆಸರು ಕರೆದರೆ ಸಾಕಾಗುತ್ತಿರಲಿಲ್ಲವೇ? ವಾಸ್ತವದಲ್ಲಿ ಅಷ್ಟು ಸಣ್ಣ ಹುಡುಗ ತರಗತಿಯಲ್ಲಿ  ನಿದ್ದೆ ಮಾಡುತ್ತಾನೆಂದರೆ ಅವನಿಗೆ ಅನಾರೋಗ್ಯವೋ ಅಥವಾ ರಾತ್ರಿ ನಿದ್ದೆ ಮಾಡದೇ ಇರುವುದೋ, ಹೀಗೆ ಏನಾದರೂ ಕಾರಣವಿರಬಹುದು. ಆ ಕುರಿತು ನಾನು ಯೋಚಿಸಬೇಕಿತ್ತು. ಈಗೆಲ್ಲಾ ನಾನು ಮಕ್ಕಳ್ಯಾರಾದರೂ ನಿದ್ದೆ ಮಾಡುತ್ತಿರುವುದನ್ನು ಗಮನಿಸಿದರೆ ಅವರ ಹೆಸರು ಕರೆಯುವುದೂ ಇಲ್ಲ. ಯಾವುದಾದರೂ ಸದ್ದು ಮಾಡಿ ಅವರನ್ನು ಎಚ್ಚರಿಸುತ್ತೇನೆ. ಅವರು ನಿದ್ದೆ ಮಾಡುತ್ತಿದ್ದುದು ನನಗೆ ತಿಳಿದಿಲ್ಲ ಎಂಬಂತೆಯೇ ವರ್ತಿಸುತ್ತೇನೆ.

                   *              *               *

             ಎರಡು ವರ್ಷದ ಬಳಿಕ‌ ಅದೇ ಮಕ್ಕಳು ನಾಲ್ಕನೇ ತರಗತಿಯಲ್ಲಿದ್ದರು. ನಾನು ಇಂಗ್ಲೀಷ್ ಕಲಿಸುತ್ತಿದ್ದೆ. ಸೌಜನ್ಯ ಎನ್ನುವ ಹುಡುಗಿ ಇನ್ಯಾವುದೋ ವಿಷಯದ ನೋಟ್ಸ್ ಬರೆಯುತ್ತಿದ್ದಳು. ತನ್ನ ಪಾಠದ ಅವಧಿಯಲ್ಲಿ ಇನ್ನೊಂದು ವಿಷಯದ ನೋಟ್ಸ್ ಬರೆದಾಗ ತಡೆಯಲಾರದ ಕೋಪ ಬರುವುದು ಹೆಚ್ಚಿನ ಶಿಕ್ಷಕರ ದೌರ್ಬಲ್ಯ. ಆ ದೌರ್ಬಲ್ಯ ಆ ಕ್ಷಣದಲ್ಲಿ ನನ್ನನ್ನೂ ಆವರಿಸಿತ್ತು. ನಖಶಿಖಾಂತ ಉರಿಯುತ್ತಾ ಸೌಜನ್ಯಳೆಡೆಗೆ ಧಾವಿಸಿ ಅವಳ ಕೈಯಲ್ಲಿದ್ದ ನೋಟ್ಸ್ ಕಸಿದುಕೊಂಡೆ‌. ಆ ಅವಧಿಯಲ್ಲಿ ಅವಳು ಬರೆಯುತ್ತಿದ್ದ ಪುಟವನ್ನು ಒಳ್ಳೇ ಸಿನೆಮಾ ಹೀರೋನ ಸ್ಟೈಲಿನಲ್ಲಿ ಹರಿದು ಕಸದಬುಟ್ಟಿಗೆ ಹಾಕಿದೆ. ಇನ್ನು ನನ್ನೆದುರು ಈ ಬಗೆಯ ತಪ್ಪು ಮಾಡುವ ಧೈರ್ಯ ಮಾಡಲಾರರು ಎನ್ನುವ ವಿಚಿತ್ರ ಹೆಮ್ಮೆಯ ಭಾವ ನನ್ನಲ್ಲಾಗ ತುಂಬಿಕೊಂಡಿತ್ತು. 

               ಸೌಜನ್ಯ ಅಳುತ್ತಿದ್ದಳು. ಅಳುವಾದರೂ ಸಹಜ, ಆದರೆ ಅವಳ ಮುಖ ನೋಡಿದರೆ ಅವಳ ಮನಸ್ಸಿಗೆ ಬಹಳ ನೋವಾಗಿದ್ದುದು ಗೋಚರಿಸುತ್ತಿತ್ತು. ನಾಲ್ಕನೆಯ ತರಗತಿಯ ಉಳಿದ ಮಕ್ಕಳಿಗಿಂತ ತುಸು ಹೆಚ್ಚು ಪ್ರೌಢಿಮೆ ಹೊಂದಿದ್ದ ಹುಡುಗಿಯವಳು‌. ಶಿಕ್ಷಕರ ಮೇಲಂತೂ ವಿಪರೀತ ಪ್ರೀತಿ. ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾ ನಮ್ಮಿಂದ ಪದೇ ಪದೇ ಬಯ್ಯಿಸಿಕೊಂಡರೂ, ಬೇಸರಿಸದೇ  ಬಿಡುವಿನ ಅವಧಿಯಲ್ಲಿ ನಮ್ಮ ಹಿಂದೆಮುಂದೆಯೇ ಸುತ್ತಾಡುವ ಹುಡುಗಿ. ನನ್ನ ಈ ವರ್ತನೆಯಿಂದ ವಿಪರೀತ ಘಾಸಿಗೊಂಡಿದ್ದಳು. 

             ನಾನು ಹಾಗೆ ವರ್ತಿಸುವ ಅಗತ್ಯ ನಿಜವಾಗಿಯೂ ಇತ್ತೇ? ಅಥವಾ ನಾನು ಕಕ್ಕಿಕೊಂಡಿದ್ದು ನನ್ನೊಳಗಿನ ವಿಷವನ್ನೇ? ನನ್ನ ಅವಧಿಯಲ್ಲಿ ಇನ್ನೊಂದು ವಿಷಯದ ನೋಟ್ಸ್ ಬರೆಯಬಾರದು ಎಂಬುದನ್ನು ಅವಳಿಗೆ ಮತ್ತು ಇತರ ಮಕ್ಕಳಿಗೆ ಅರ್ಥ ಮಾಡಿಸಲು ನನ್ನಲ್ಲಿ ಬೇರೆ ವಿಧಾನಗಳಿರಲಿಲ್ಲವೇ? ಶಿಕ್ಷಕನ ವರ್ತನೆಗಳನ್ನು ದರ್ಪಮುಕ್ತಗೊಳಿಸಲು ಸಾಧ್ಯವಿಲ್ಲವೇ? ಸೌಜನ್ಯಳ ಕಣ್ಣೀರು ಮುಂದೆಂದೂ ನಾನು ಆ ಬಗೆಯಲ್ಲಿ ವರ್ತಿಸದ ಹಾಗೆ ಮಾಡುವಲ್ಲಿ ಯಶಸ್ವಿಯಾಗಿತ್ತು.

                      *          *          *

                ಒಬ್ಬ ವ್ಯಕ್ತಿಗೆ ಅಧಿಕಾರ ಅಥವಾ   ಶಕ್ತಿ ದೊರಕಿದ ಬೆನ್ನಲ್ಲೇ, ಅದರೊಂದಿಗೆ ದರ್ಪವೂ ಬಂದುಬಿಡುತ್ತದೆ. ನಮಗಿಂತ ಬಲಶಾಲಿಗಳೊಂದಿಗೆ, ಹೆಚ್ಚು ಅಧಿಕಾರ ಹೊಂದಿರುವ ವ್ಯಕ್ತಿಗಳೊಂದಿಗೆ ಎಷ್ಟು ಬೇಕಾದರೂ ವಿನಯ ತೋರಿಸುವ ನಮಗಿಂತ ಕೆಳಸ್ತರದವರೊಂದಿಗೆ ಮಾತನಾಡುವಾಗ, ನಮ್ಮ ಧಾಟಿಯೇ ಬದಲಾಗಿಬಿಡುತ್ತದೆ. ಈ ದರ್ಪ ಎನ್ನುವುದರಿಂದ ಸಂಪೂರ್ಣ ಮುಕ್ತರಾಗಿರುವ ವ್ಯಕ್ತಿಗಳಿದ್ದಾರೆಯೇ? ಇಲ್ಲ ಎನಿಸಿದರೆ, ನಾವಾದರೂ ಅಂತಹ ವ್ಯಕ್ತಿಯಾಗುವ ಪ್ರಯತ್ನ ಮಾಡಬೇಕು.

               ತರಗತಿ ಕೊಠಡಿಯ ಒಳಗೆ ಶಿಕ್ಷಕನಿಗೆ ತುಂಬು ಅಧಿಕಾರವಿರುತ್ತದೆ. ಸಹಜವಾಗಿ ಆ ಅಧಿಕಾರದೊಡನೆ  ದರ್ಪ ಬೆರೆಯುವ ಸಾಧ್ಯತೆಯೂ ಇರುತ್ತದೆ‌. ತನ್ನ ವರ್ತನೆಯನ್ನು  ದರ್ಪರಹಿತವಾಗಿಸಬೇಕಾದುದು ಶಿಕ್ಷಕ ತನ್ನೊಳಗೆ ತಂದುಕೊಳ್ಳಲೇಬೇಕಾದ ಬದಲಾವಣೆ. ಹೇಳಬೇಕಾದುದನ್ನು ಹೇಗೆ ಹೇಳಬೇಕು, ಎಷ್ಟು ಹೇಳಬೇಕು ಎಂಬ ಅರಿವು ನಮ್ಮೊಳಗೆ ಮೂಡಿದರೆ ನಮ್ಮೊಳಗಿನ ದರ್ಪವು ತಾನಾಗೇ ದೂರವಾಗುತ್ತದೆ. ಆ ಅರಿವನ್ನು ಮೂಡಿಸಿಕೊಳ್ಳುವ ಬದ್ಧತೆ ನಮ್ಮಲ್ಲಿರಬೇಕಷ್ಟೆ. 

‌‌ - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment