ಶಿಕ್ಷಕನ ಡೈರಿಯಿಂದ
“ಏನಾಗ್ಲಿಲ್ಲ ಸರ್…..” ಎಂದು ಅವರು ಸಾಂತ್ವನ ಹೇಳಿದ್ದರು
ತಂದೆಯಾಗಿ, ತಾಯಿಯಾಗಿ, ಶಿಕ್ಷಕರಾಗಿ ಬಹುತೇಕ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳನ್ನು ಶಿಕ್ಷಿಸಿರುತ್ತೇವೆ. ಈ ಶಿಕ್ಷೆಯೆಲ್ಲವೂ ಕ್ರೌರ್ಯವೇ? ಶಿಕ್ಷೆ ಮತ್ತು ಕ್ರೌರ್ಯದ ನಡುವೆ ಇರುವುದು ಒಂದು ತೆಳುವಾದ ಗೆರೆಯಷ್ಟೇ. 'ನಾನು ಎಷ್ಟು ಶಿಕ್ಷೆ ಕೊಡುತ್ತೇನೆಯೋ ಅಷ್ಟಾದರೆ ಅಡ್ಡಿಯಿಲ್ಲ, ಯಾರಾದರೂ ನನಗಿಂತ ಹೆಚ್ಚು ಹೊಡೆದರೆ ಅದು ಕ್ರೌರ್ಯ' ಎನ್ನುವ ಹಿಪಾಕ್ರಸಿಯ ಮನಸ್ಥಿತಿ ನನ್ನಲ್ಲಿದೆಯೇ ಎಂದು ನಾನು ಪ್ರಶ್ನಿಸಿಕೊಳ್ಳುವುದುಂಟು. ಕ್ರೌರ್ಯವನ್ನು ಕೊಟ್ಟ ಶಿಕ್ಷೆಯ ಪ್ರಮಾಣಕ್ಕಿಂತ ಮಿಗಿಲಾಗಿ, ಶಿಕ್ಷೆ ಕೊಡುವಾಗಿನ ಮನಸ್ಥಿತಿಯ ಆಧಾರದಲ್ಲೇ ತೀರ್ಮಾನಿಸುವುದು ಸರಿ ಎಂದು ನನಗನಿಸುತ್ತದೆ. ಶಿಕ್ಷೆ ಕೊಡುವುದನ್ನು ಶಿಕ್ಷಕನ ಒಳಮನಸ್ಸು ಆನಂದಿಸುತ್ತದೆಂದಾದರೆ ಆತ ನೀಡುವ ಸಣ್ಣ ಶಿಕ್ಷೆಯೂ ಕ್ರೌರ್ಯವೇ..
ಒಬ್ಬ ಶಿಕ್ಷಕ ತನ್ನ ಕೌಶಲಗಳಲ್ಲಿ ಪರಿಪೂರ್ಣನೆಂದಾದರೆ ಆತನಿಗೆ ಮಕ್ಕಳನ್ನು ಶಿಕ್ಷಿಸಬೇಕಾದ ಸನ್ನಿವೇಶವೇ ಬರಲಾರದು. ಆದರೆ ನಾವು ಪರಿಪೂರ್ಣರಲ್ಲ ನೋಡಿ, ಆಗಾಗ ಮಕ್ಕಳನ್ನು ನಿಯಂತ್ರಿಸುವಲ್ಲಿನ ನಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಶಿಕ್ಷೆಯ ಮೊರೆಹೋಗುತ್ತೇವೆ. ಆಗ ನಮ್ಮಲ್ಲಿರುವುದು ಕ್ರೌರ್ಯವಲ್ಲ, ಅಸಹಾಯಕತೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಎಡವಟ್ಟುಗಳನ್ನೂ ಮಾಡಿಕೊಳ್ಳುತ್ತೇವೆ.
* * *
ಪಕ್ಕದ ತರಗತಿ ಶಿಕ್ಷಕರಿಲ್ಲದೇ ಖಾಲಿ ಇರುವಾಗ ಅಬ್ಬರಿಸಿ ಬೊಬ್ಬಿರಿಯುವ ಮಕ್ಕಳನ್ನು ನಿಯಂತ್ರಿಸುವುದೊಂದು ನಮಗೆದುರಾಗುವ ಬಹುದೊಡ್ಡ ಸವಾಲು. ಅಂತಹ ಸಂದರ್ಭದಲ್ಲಿ ಆ ತರಗತಿಯಲ್ಲಿ ಅತಿಯಾಗಿ ಗಲಾಟೆ ಮಾಡುತ್ತಿರುವ ಮಕ್ಕಳಿಗೊಂದೆರಡು ಬಾರಿಸಿ ಭಯ ಹುಟ್ಟಿಸಿ ಬಂದಿರುತ್ತೇವೆ. ಉಳಿದವರು ಅದೇ ಭಯದಲ್ಲಿ ಸುಮ್ಮನೆ ಕುಳಿತು ಬಿಡುತ್ತಾರೆ.
ಹೀಗೇ ಒಮ್ಮೆ ತರಗತಿಯಲ್ಲಿ ಕಿರುಚಾಟದ ನೇತೃತ್ವ ವಹಿಸಿದ್ದ ಮೂರನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತ್ ಎನ್ನುವ ಹುಡುಗನಿಗೆ ಬೆತ್ತ ಪ್ರಯೋಗ ಮಾಡಿ ಬಂದಿದ್ದೆ. ತರಗತಿ ಶಾಂತಗೊಂಡ ಖುಷಿಯಲ್ಲಿ ಬಂದು ಪಾಠ ಪ್ರಾರಂಭಿಸಿದರೆ ಮತ್ತೆ ಪಕ್ಕದ ತರಗತಿಯಿಂದ ದೂರು. "ಸರ್, ಹರ್ಷಿತನ ಕಾಲಿನಲ್ಲಿ ರಕ್ತ." ಓಡಿ ಹೋಗಿ ನೋಡಿದೆ. ನನ್ನ ಬೆತ್ತ ಅವನ ಕಾಲಿನಲ್ಲಿ ಉದ್ದ ಬರೆ ಎಳೆದು ತುದಿಯಲ್ಲಿ ಸಣ್ಣ ಗಾಯ ಮಾಡಿತ್ತು.. "ಇಷ್ಟು ಜೋರಾಗಿ ಹೊಡೆದೆನಾ?" ಎಂದು ನಾನು ಗಾಬರಿಯಿಂದ ಹೇಳಿದರೆ ಅವನು ನಗುತ್ತಿದ್ದ. "ಏನಾಗ್ಲಿಲ್ಲ ಸರ್" ಎಂದ ಅವನ ದನಿ ಮತ್ತು ಅವನ ಕಣ್ಣುಗಳು ನನಗೆ ಸಾಂತ್ವನ ಹೇಳುತ್ತಿದ್ದವು. ವಾಸ್ತವದಲ್ಲಿ ಅವನ ಚರ್ಮಕ್ಕಷ್ಟೇ ನೋವಾಗಿತ್ತು, ಮನಸ್ಸಿಗೆ ನೋವಾಗಿರಲಿಲ್ಲ.
* * *
ಕೆಲವೊಮ್ಮೆ ತಂದೆ ತಾಯಿಯರು ತಮ್ಮ ಪ್ರೀತಿಯ ಮಕ್ಕಳು ತೀರಾ ದಾರಿ ತಪ್ಪಿದ್ದಾರೆನಿಸಿದರೆ, ತುಂಬಾ ಬೇಸರದಿಂದ ಶಿಕ್ಷಿಸುವುದುಂಟು. ಶಿಕ್ಷಕರೂ ಆಗಾಗ ಇಂತಹುದೇ ಸನ್ನಿವೇಶ ಎದುರಿಸುತ್ತೇವೆ.
ಒಮ್ಮೆ ಕಂಪ್ಯೂಟರ್ ಕಲಿಸಲೆಂದು ಸ್ಥಳೀಯ ಯುವತಿಯೊಬ್ಬರನ್ನು ಶಿಕ್ಷಕಿಯಾಗಿ ನೇಮಕಗೊಳಿಸಲಾಗಿತ್ತು. ತರಬೇತಿ ಹೊಂದಿದ ಶಿಕ್ಷಕಿಯಲ್ಲದ ಕಾರಣ ಮಕ್ಕಳನ್ನು ನಿಯಂತ್ರಿಸುವುದು ಅವರಿಗೆ ಕಷ್ಟವಾಗುತ್ತಿತ್ತು. ಅದನ್ನೇ ಅಸ್ತ್ರವಾಗಿಸಿಕೊಂಡ ನಾಲ್ಕನೇ ತರಗತಿಯ ನಾಲ್ಕೈದು ಹುಡುಗರು ತರಗತಿಗೆ ಬಾರದೇ ಆ ಶಿಕ್ಷಕಿಯನ್ನು ಸತಾಯಿಸುತ್ತಿದ್ದರು. ನಾವು ತರಗತಿಗೆ ಬರುವುದಿಲ್ಲ, ಏನು ಮಾಡುತ್ತೀರಿ ಎನ್ನುತ್ತಾ, ಶಿಕ್ಷಕಿಯನ್ನು ಗೇಲಿ ಮಾಡಿ ಶಾಲೆಯ ಹಿಂಬದಿಯಿಂದ ಇಣುಕುತ್ತಿರುವ ಮಕ್ಕಳನ್ನು ದೂರದಿಂದ ನೋಡುತ್ತಿದ್ದ ನನ್ನ ಪಿತ್ತ ನೆತ್ತಿಗೇರಿತ್ತು. ಮಕ್ಕಳನ್ನು ನನ್ನ ಬಳಿ ಕರೆಸಿದೆ. ನನ್ನ ಮುಖದಲ್ಲಿದ್ದ ಸಿಟ್ಟು ಮತ್ತು ತಾವು ಮಾಡಿರುವ ತಪ್ಪಿನ ತೀವ್ರತೆಯ ಅರಿವು ಎರಡೂ ಸೇರಿ ಭಯದಿಂದ ನಡುಗುತ್ತಾ ಬಂದ ಅವರನ್ನು ನಾನು ಬುದ್ಧಿ ಹೇಳಿ ಕಳುಹಿಸಬಹುದಿತ್ತೇನೋ... ಆದರೆ ನಾನು ಪೆಟ್ಟು ಕೊಟ್ಟೇ ಕಳಿಸಿದ್ದೆ, ತುಸು ಜೋರಾಗಿಯೇ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತರಗತಿಗೆ ಮರಳುವಾಗ ಸಹಪಾಠಿಗಳು ನಗೆಯಾಡಬಾರದು ಎಂದೇ ಇರಬೇಕು, ಏನೂ ಆಗದವರಂತೆ ಸಣ್ಣ ನಗೆಯನ್ನು ಹೊತ್ತು ತರಗತಿಗೆ ಹೋಗಿದ್ದರು.
ಮುಂದಿನ ಅವಧಿಗೆ ನಾನು ಅವರ ತರಗತಿಗೆ ಹೋದಾಗ "ಸರ್, ಭವಿಷ್ ನ ಕಾಲು ನೋಡಿ" ಎಂದಳೊಬ್ಬಳು ಹುಡುಗಿ. ನೋಡಿದೆ. ಹಿಂದೆ ಹೇಳಿದ ಹರ್ಷಿತನ ಕಾಲಿನಲ್ಲಿ ಬಿದ್ದ ಬರೆಗಿಂತ ದೊಡ್ಡ ಬರೆ ಕೆಂಪಗೆ ಬಿದ್ದಿತ್ತು. ತುದಿಯಲ್ಲಿ ಸಣ್ಣ ಗಾಯವೂ ಆಗಿತ್ತು. ಇವನದ್ದೂ ಸಣ್ಣ ನಗು, ಮತ್ತು "ಏನಾಗ್ಲಿಲ್ಲ ಸರ್" ಎಂಬ ಸಾಂತ್ವನ. ಆ ಇವನಿಗೆ ನೋವಾಗದಿದ್ದರೂ ಇವನಮ್ಮನಿಗಾದರೂ ಬೇಜಾರಾಗುತ್ತದೆ, ಸಂಜೆ ಫೋನ್ ಬರಬಹುದು, ಒಂದು ಸ್ವಾರೀ ಹೇಳಬೇಕು ಎಂದುಕೊಂಡೆ. ಫೋನ್ ಬರಲಿಲ್ಲ, ನನಗೊಂಥರಾ ರಿಲೀಫ್ ಸಿಕ್ಕಿದ ಹಾಗಾಗಿತ್ತು.
* * *
ಕೆಲವೊಮ್ಮೆ ಶಿಕ್ಷಕರಿಗೆ ಶಿಕ್ಷೆ ನೀಡುವ ಯೋಚನೆ ಇರುವುದಿಲ್ಲ. ಮಕ್ಕಳನ್ನು ನಿಯಂತ್ರಿಸಲಾಗದೆ ಇದ್ದಾಗ ತುಂಬಾ ಕೋಪ ಬಂದಂತೆ, ಶಿಕ್ಷೆ ಕೊಡಲು ಹೊರಟವರಂತೆ ನಟಿಸಿ ಭಯ ಹುಟ್ಟಿಸುವುದುಂಟು.
ಆ ದಿನ ಒಂದನೇ ತರಗತಿಯಲ್ಲಿದ್ದೆ. ಮಕ್ಕಳೇಕೋ ನನ್ನ ನಿಯಂತ್ರಣ ತಪ್ಪಿ ಇಡೀ ತರಗತಿ ಓಡಾಡಿಕೊಂಡಿದ್ದರು. ನಲವತ್ತು ಮಕ್ಕಳಿದ್ದ ದೊಡ್ಡ ತರಗತಿ ನನ್ನ ನಿಯಂತ್ರಣಕ್ಕೆ ಸಿಗಲಿಲ್ಲ. ತರಗತಿಯ ಅಗ್ರ ಪೋಕರಿ ಧನುಷನ ಕಿತಾಪತಿಯಂತೂ ಮಿತಿಮೀರಿತ್ತು. ನನಗೆ ಕೋಪ ಬಂದಿತ್ತು. ಧನುಷನ ಕಪಾಲಕ್ಕೆ ಹೊಡೆಯುವ ರೀತಿ ಕೈ ಬೀಸಿದೆ. ನನ್ನದು ನಟನೆಯಾಗಿತ್ತು. ಅವನ ಮುಖದ ಎದುರು ಕೈ ಬೀಸಿ ಹೊಡೆದಂತೆ ನಟಿಸುವುದಷ್ಟೇ ನನ್ನ ಉದ್ದೇಶವಾಗಿತ್ತು, ಆದರೆ ದುರದೃಷ್ಟವಶಾತ್ ಧನುಷ್ ತನ್ನ ಮುಖವನ್ನು ಸ್ವಲ್ಪ ಮುಂದೆ ತಂದಿದ್ದ. ಬೀಸಿದ ನನ್ನ ಕೈ ಧನುಷನ ಕಪಾಲಕ್ಕೆ ತಾಗಿ ಟಪ್ ಎಂಬ ಶಬ್ದ ಬಂದಿತ್ತು. ಇಡೀ ತರಗತಿ ಒಮ್ಮೆಗೇ ನಿಶ್ಶಬ್ದವಾಗಿಬಿಟ್ಟಿತ್ತು. ನಾನು ದಂಗಾಗಿದ್ದೆ. ಧನುಷ್ ಮಾತ್ರ ಪೆಟ್ಟು ತಿಂದರೂ ನಗುತ್ತಲೇ ಇದ್ದ.
ನಾನು ಹೊಡೆದದ್ದು ಒಂದನೇ ತರಗತಿಯ ಎಳೆಯ ಹುಡುಗನ ಕೆನ್ನೆಗೆ. ಆಘಾತಗೊಂಡಿದ್ದ ನಾನು ಒಂದೆರಡು ನಿಮಿಷಗಳ ನಂತರ ಹುಡುಗನ ಬೆನ್ನು ಸವರುತ್ತಾ ನೋವಾಯಿತಾ ಎಂದು ವಿಚಾರಿಸಿದೆ. ಅಲ್ಲಿಯವರೆಗೆ ನಗುತ್ತಲೇ ಇದ್ದವ ಒಮ್ಮೆಗೇ ಬಿಕ್ಕಿದ. 'ಹೀಗೆಲ್ಲಾ ಇನ್ನು ತಂಟೆಮಾಡಬಾರದು' ಎಂದು ಹೇಳಿದ ನನ್ನ ದನಿಯಲ್ಲಿ ಪ್ರೀತಿಗಿಂತಲೂ ಹೆಚ್ಚು ಕ್ಷಮಾಪಣಾ ಭಾವವೇ ತುಂಬಿತ್ತು.
ಆ ದಿನ ಅವನ ಮನೆಯವರಿಗೆ ನಾನೇ ವಿಷಯ ತಿಳಿಸಬೇಕೆನಿಸಿತಾದರೂ ತಿಳಿಸಲಿಲ್ಲ. ಕೆಲವು ದಿನಗಳ ನಂತರ ಭೇಟಿಯಾದಾಗ ವಿಷಯ ತಿಳಿಸಿ 'ಮಗ ಹೇಳಿದ್ದನಾ' ಕೇಳಿದರೆ 'ಇಲ್ಲ' ಎನ್ನುವುದೇ ಅವರ ಉತ್ತರವಾಗಿತ್ತು.
* * *
ಮೂರೂ ಪ್ರಕರಣಗಳಲ್ಲಿ ಎದ್ದು ಕಾಣಿಸುವುದು ಆ ಮಕ್ಕಳ ದೊಡ್ಡತನವೇ. ಅವರು ನನ್ನನ್ನು ಕ್ಷಮಿಸಿದ್ದರು ಎಂಬ ವಾಕ್ಯ ಎಷ್ಟು ಸರಿಯೋ ನನಗೆ ತಿಳಿಯದು. ಅವರು ಕ್ಷಮೆಗೆ ನಾನು ಅರ್ಹ ಎಂದು ಅವರಿಗನ್ನಿಸಿದೆ ಎನ್ನುವುದಕ್ಕಿಂತ ಶಿಕ್ಷೆಗೆ ತಾವು ಅರ್ಹರಾಗಿದ್ದೆವು ಎಂದು ಅವರಿಗನ್ನಿಸಿತ್ತು ಎಂದರೇ ಸರಿಯಾದೀತೇನೋ.. ಏನೇ ಇರಲಿ, ಮೂರೂ ಪ್ರಕರಣಗಳಲ್ಲಿ ನಾನು ನೋವು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಇತ್ತಾದರೂ, ಆಗ ನನ್ನಲ್ಲಿದ್ದುದು ಕ್ರೌರ್ಯವಲ್ಲ ಎಂಬ ಸಮಾಧಾನವಂತೂ ಇದೆ.
- ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799