ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

(ಕೃತಿ ಪರಿಚಯ – 14)
ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಇಂದು ಪರಿಚಯಿಸಲಾಗುತ್ತಿರುವ ಕೃತಿ – ‘ಮಕ್ಕಳು ಎಲ್ಲಿ, ಹೇಗಿರ್ಬೇಕು?’
(ತಂದೆ ತಾಯಿ,ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ತಿಳಿಸಿಕೊಡಲೇಬೇಕಾದ ಸಂಗತಿಗಳು)
ಲೇಖಕರು:- ನಾರಾಯಣ ಭಟ್.,ಟಿ.,ರಾಮಕುಂಜ
(ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು.)
ಪುಟಗಳು:- 104
ಬೆಲೆ:- 60ರೂ
ಪ್ರಕಾಶಕರು:- ಮೌಲಿಕಾ ಪ್ರಕಾಶನ.
ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಮಕ್ಕಳ ವರ್ತನೆಗಳು ಅತ್ಯಂತ ವೇಗವಾಗಿ ಬದಲಾಗುತ್ತ ಬಾಹ್ಯ ಆಕರ್ಷಣೆಗಳಿಗೆ ಸುಲಭವಾಗಿ ಸೋತು ಮೌಲ್ಯಯುಕ್ತ ಬದುಕನ್ನು ನಡೆಸುವಲ್ಲಿ ವಿಫಲರಾಗುತ್ತಿರುವುದು ಅಲ್ಲಲ್ಲಿ ಗೋಚರವಾಗುತ್ತಿರುವ ದೃಶ್ಯ.
ಮಕ್ಕಳ ಈ ಎಲ್ಲಾ ಋಣಾತ್ಮಕ ಬದಲಾವಣೆಗಳಿಂದ ಪೋಷಕರು, ಶಿಕ್ಷಕರು ಹೈರಾಣಾಗಿ ಒಂದಿಷ್ಟು ತಲ್ಲಣಗೊಳ್ಳುತ್ತಿರುವುದು ನಮ್ಮ ನಿಮ್ಮೆಲ್ಲರ ನಡುವೆ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಸನದ ಜವಾಬ್ಧಾರಿ ಪ್ರತಿಯೊಬ್ಬ ಪೋಷಕರದು ಮತ್ತು ಶಿಕ್ಷಕರದು ಹಾಗೆಯೇ ಸಮಾಜದ್ದೂ ಕೂಡ ಆಗಿದೆ. ಈ ನಿಟ್ಟಿನಲ್ಲಿ ನಮಗೆ ಬೆಂಬಲವಾಗಿ ನಿಲ್ಲುವಂತಹ ಒಂದು ಅತ್ಯುತ್ತಮವಾದ ಪುಸ್ತಕ ಇದಾಗಿದೆ.
ಈ ಪುಸ್ತಕದಲ್ಲಿ ಲೇಖಕರು ಒಬ್ಬ ಹಿರಿಯನ ಸ್ಥಾನದಲ್ಲಿದ್ದುಕೊಂಡು ಪೋಷಕರಿಗೆ ಮಕ್ಕಳನ್ನು ಪೋಷಿಸುವ ಬಗೆ,ಸಂಸ್ಕಾರಯುತರನ್ನಾಗಿ ಮಾಡುವ ಬಗ್ಗೆ ಸಲಹೆಗಳನ್ನು ನೀಡುತ್ತಾರೆ.
ಈ ಹೊತ್ತಗೆಯಲ್ಲಿ ಹಲವಾರು ಅಂಶಗಳು,ವಿಚಾರಗಳು ನಮ್ಮ ನಿಮ್ಮೊಳಗೆ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರವಾಗಿಬಲ್ಲದು. ಶಿಕ್ಷಕರಾದ ನಾವುಗಳು ಕೂಡ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸಬಹುದು ಅನ್ನುವುದನ್ನು ಕೂಡ ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ನಿರ್ಮಾಣ ಕಾರ್ಯದಲ್ಲಿ ಈ ಪುಸ್ತಕ ಆಧಾರವಾಗಬಲ್ಲದು ಎಂಬುದು ನನ್ನ ಅನಿಸಿಕೆ.
ಲೇಖಕರು ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾದ ಭಾಷೆಯಲ್ಲಿ ಮೌಲ್ಯಯುತ ವಿಚಾರಗಳನ್ನು ಹಂಚಿಕೊಂಡಿರುವ ಕಾರಣ ಎಲ್ಲಾ ಪೋಷಕರೂ ಕೂಡ ಓದಿ ಸಂಸ್ಕಾರಯುತರಾಗುವುದರೊಂದಿಗೆ ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ..
ಒಟ್ಟಾರೆಯಾಗಿ ಹೇಳುವುದಾದರೆ ಲೇಖಕರು ಈ ಹೊತ್ತಗೆಯಲ್ಲಿ ಮಕ್ಕಳ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಸೋಲು-ಗೆಲುವು,ಕಷ್ಟ-ನಷ್ಟ, ಹಣದ ಬಳಕೆ,ಆರೋಗ್ಯಮತ್ತು ಪರೀಕ್ಷೆಯ ತಯಾರಿ ಹೀಗೆ ಹತ್ತು ಹಲವು ವಿಚಾರಗಳು ಸಾವಿರ ಆಲೋಚನೆಗಳನ್ನು ಹುಟ್ಟಿಸಿ ಓದುಗರನ್ನು ಸುದೀರ್ಘ ಚಿಂತನೆಗೆ ಹಚ್ಚುವಂತೆ ಮಾಡಿಬಿಡುತ್ತದೆ.
ಹೀಗೆ ನಮ್ಮ ಸುತ್ತಮುತ್ತ ಅಯಸ್ಕಾಂತದಂತೆ ಸೆಳೆಯುವ ಮಾಧ್ಯಮಗಳಿಂದ ವೇಗವಾಗಿ ಬದಲಾಗುತ್ತಿರುವ ಮಕ್ಕಳ ಸೂಕ್ಷ್ಮ ಮನಸ್ಸುಗಳನ್ನು ಸಂಸ್ಕಾರಯುತವಾಗುವಂತೆ ಮಾಡುವಲ್ಲಿ ಮನೆಮದ್ದಿನಂತೆ ವರ್ತಿಸಬಹುದಾದ ಈ ಹೊತ್ತಗೆಯನ್ನು ನಾವೆಲ್ಲರೂ ತಮ್ಮದಾಗಿಸಿಕೊಂಡು ಸದೃಢ ಶಾಂತಿಯುತ ಸಮಾಜದ ಬೆಳವಣಿಗೆಗೆ ಕಾರಣರಾಗೋಣ ಎನ್ನುತ್ತಾ ನನ್ನ ಪುಸ್ತಕ ಪರಿಚಯವನ್ನು ಸಮಾಪ್ತಿಗೊಳಿಸುತ್ತಿದ್ದೇನೆ.
ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ನಾನು ಓದಿರುವ ಪುಸ್ತಕವನ್ನು ಪರಿಚಯಿಸಲು ಅವಕಾಶ ನೀಡಿರುವ…
ಅಧ್ಯಕ್ಷರು/ಕಾರ್ಯದರ್ಶಿ
ಕ.ರಾ.ಪ್ರಾ.ಶಾಲಾ .ಶಿಕ್ಷಕರ ಸಂಘ.ದ.ಕ ಜಿಲ್ಲೆ.
ಇವರಿಗೆ ಹೃದಯಪೂರ್ವಕ ನಮನಗಳು.
ಪರಮೇಶ್ವರಿ ಪ್ರಸಾದ್.
ಸಹಶಿಕ್ಷಕರು ಸ.ಉ.ಹಿ.ಪ್ರಾ.ಶಾಲೆ.ಜಾಲ್ಸೂರು
ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ಕೂಡ ಇದೇ ರೀತಿ ಹಲವು ಉತ್ತಮ ಪುಸ್ತಕಗಳನ್ನು ಓದಿ ತಮ್ಮದಾಗಿಸಿ ಜ್ಞಾನವನ್ನು ಹೆಚ್ಚಿಸಿಕೊಂಡಿರಬಹುದು. ನೀವು ಓದಿದ ಹೊತ್ತಗೆಯ ಪರಿಚಯವನ್ನು ನಮ್ಮೊಂದಿಗೆ ಇದೇ ರೀತಿ ಹಂಚುವ ಮೂಲಕ ನಮಗೂ ಜ್ಞಾನದ ಬೆಳಕನ್ನು ಹಚ್ಚುವಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ತಮ್ಮ ಬರಹವನ್ನು ಕಳಿಸಬೇಕಾದ ಸಂಖ್ಯೆ :- 8970260893