ಮನುಷ್ಯನಲ್ಲಿರಬೇಕಾದ ಆರು ರತ್ನಗಳು – ಬೆಳಕು 11

WhatsApp Group Join Now
Telegram Group Join Now

ಬೆಳಕು

“ಮನುಷ್ಯನಲ್ಲಿರಬೇಕಾದ ಆರು ರತ್ನಗಳು”

ಮಮತೆ,ಕರುಣೆ,ಪ್ರೀತಿ,ಹಾಗೆಯೇ ಸ್ನೇಹ, ಗೌರವ ,ಗೆಳೆತನ ಇವು ಒಬ್ಬ ಮನುಷ್ಯನಲ್ಲಿ ಇರಬೇಕಾದ ಆರು ರತ್ನಗಳು. ಇವುಗಳನ್ನು ಯಾವಾಗ, ಎಲ್ಲಿ ಮತ್ತು ಯಾರ ಮೇಲೆ ವ್ಯಕ್ತಪಡಿಸಬೇಕು,ಯಾಕೆ ವ್ಯಕ್ತಪಡಿಸಬೇಕು ಎಂಬುದು ಆಯಾಯ ವ್ಯಕ್ತಿಗಳಿಗೆ,ಮನುಷ್ಯನಿಗೆ ಅಥವಾ ಬುದ್ದಿವಂತರಾದ ನಮಗೆ ಬಿಟ್ಟದ್ದು.
ನಾವು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ನಾನು ಮೇಲೆ ಉಲ್ಲೇಖಿಸಿದ ಎಲ್ಲಾ ಗುಣಗಳನ್ನು ಯಾವುದರ ಮೇಲೆ ಅಥವಾ ಯಾರ ಮೇಲೆ ತೋರಿಸಬೇಕು ಎಂಬುದು.ಈ ಪ್ರಪಂಚ, ಪ್ರಕೃತಿ ಎಂಬುದು ಇರುವುದೇ ಜೀವಿಗಳಿಂದ ತಾನೆ? ಆದುದರಿಂದ ಜೀವಿಗಳೆಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವಂತ ಜೀವಿಗಳು ಉದಾಹರಣೆಗೆ ಪ್ರಾಣಿಗಳು. ಚಲಿಸದ ಜೀವಿಗಳು. ಅಂದರೆ ಸಸ್ಯವರ್ಗ.


ಇವುಗಳಲ್ಲಿ ಎರಡನೆಯ ವರ್ಗ ಬಹಳ ಅಂದರೆ ಬಹಳ ಮಹತ್ವವನ್ನು ಪಡೆದುಕೊಂಡಿದೆ.ಕಾರಣ ಎಲ್ಲಾ ಜೀವಿಗಳಿಗೆ ಪ್ರಾಣವಾಯು ಮತ್ತು ಆಹಾರದ ಮೂಲ.
ವಿಪರ್ಯಾಸವೆಂದರೆ ಇವತ್ತು ನಾವು ಎಲ್ಲವನ್ನೂ ಮರೆತು ನಿದ್ರಾವಸ್ಥೆಯಲ್ಲಿದ್ದೇವೆ.ನಮಗೆ ಯಾರು ಆಹಾರವನ್ನು ಉದ್ಪಾದಿಸಿ ಕೊಡುತ್ತಾರೆ,ಎಲ್ಲಿಂದ ಪ್ರಾಣವಾಯು ಅರ್ಥಾತ್ ಆಮ್ಲಜನಕ ದೊರೆಯುತ್ತದೆ ಎಂಬುದು ಗೊತ್ತೆ ಇಲ್ಲದವರಂತೆ ವರ್ತಿಸುತ್ತಿದ್ದೇವೆ.

ಇದಕ್ಕೆಲ್ಲಾ ಕಾರಣ ನಮ್ಮಲ್ಲಿರುವ ಸ್ವಾರ್ಥ, ದುರಾಸೆ,ಕ್ರೌರ್ಯ ,ಅಸೂಯೆ,ಧಿಮಾಕು ಮತ್ತು ಕೊಬ್ಬು ಅಥವಾ ಅಹಂಕಾರ.ಮತ್ತು ಆಲಿಸುವ ವ್ಯವಧಾನವಿಲ್ಲದಿರುವ
ದು.ನಾವು ಆಧುನಿಕತೆಯ ಹೆಸರಿನಲ್ಲಿ ಕಣ್ಣಿಗೆ ಕಾಣುವ ದೇವರುಗಳನ್ನು ಪೂಜಿಸುವ,ಗೌರವಿಸುವ,ಗುಣಗಳನ್ನು ಮರೆತಿದ್ದೇವೆ.
ಆದರೆ ನಾವು ಮನುಷ್ಯರು ಎಷ್ಟು ಬುದ್ದಿವಂತರಾದರು,ಏನನ್ನೂ ಬೇಕಾದರೂ ಉತ್ಪಾದಿಸುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡರೂ ಒಂದೇ ಒಂದು ಜೀವಿಗೆ ಜೀವ ಕೊಡಲು ಸಾಧ್ಯವೇ? ಇಲ್ಲ ತಾನೆ,ಹಾಗಿದ್ದ ಮೇಲೆ ನಾವು ಬುದ್ದಿವಂತರಾಗುವುದು ಹೇಗೆ? ಈ ಪ್ರಕೃತಿಯ ಮುಂದೆ ನಾವು ತೃಣಕ್ಕೆ ಸಮಾನ.ನಾವು ಝೀರೊ.
ನಾವು ವಾಸಿಸುವ ಈ ಪ್ರಕೃತಿಯಲ್ಲಿ ನಮ್ಮದು ಎಂಬುದು ಏನೂ ಇಲ್ಲ.ಎಲ್ಲವೂ ಯಾವುದೋ ಒಂದು ಅಸದೃಶ ಶಕ್ತಿಯದ್ದು.ಅಥವಾ ಕಷ್ಟ ಬಂದಾಗ ನಮಗೆಲ್ಲ ನೆನಪಾಗುವ ದಯಾಮಯ ಪರಮಾತ್ಮನದ್ದು.


ಅಂದ ಮೇಲೆ ಭೂಮಿಯ ಮೇಲಿರುವ ಯಾವುದೇ ಜೀವಿಯನ್ನು ಕೊಲ್ಲುವ ಅಧಿಕಾರ ನಮಗಿಲ್ಲ.ಅದು ಪ್ರಾಣಿಯಾಗಿರಬಹುದು,ಸಸ್ಯವಾಗಿರಬಹುದು.ಅದಕ್ಕೆ ನಾನು ಹೇಳಿದ್ದು ನಮ್ಮಲ್ಲಿ ಆರು ಗುಣಗಳಿರಬೇಕು.
ಸಸ್ಯಗಳನ್ನು ಕಡಿಯುವ ಅಧಿಕಾರವಿಲ್ಲ.ನೆಡುವ ,ಪೋಷಿಸುವ ಅಧಿಕಾರವಿದೆ.ಅಥವಾ ಕರ್ತವ್ಯವಾಗಿದೆ.ಅಭಯಾರಣ್ಯ ಗಳಿದ್ದಾಗ ಪ್ರಕೃತಿ ಸಮತೋಲನದಲ್ಲಿರುತ್ತದೆ,ಪ್ರಪಂಚದಲ್ಲಿ ಎಲ್ಲಾ ಜೀವಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ.ಆದರೆ ನಮ್ಮ ದುರಾಸೆ,ಅಧಿಕಾರದ ದಾಹ ಪ್ರಕೃತಿಯ ಮೇಲೆ ದೌರ್ಜನ್ಯ, ಅತ್ಯಾಚಾರ,ಮಾಡುತ್ತ ಬಂದಿದ್ದೇವೆ.ವೇದಿಕೆ ಸಿಕ್ಕಾಗ ಬಣ್ಣ ಬಣ್ಣದ ಮಾತುಗಳನ್ನಾಡುತ್ತೇವೆ.ಜನ ಸಂದಣಿ ಇದ್ದರಂತೂ ಕೇಳುವುದೇ ಬೇಡ.ನಾವು ಪ್ರತಿಜ್ಞೆ ಮಾಡುವುದಕ್ಕೂ ಹೇಸುವುದಿಲ್ಲ.ಈಗ ನೋಡಿ ನಾವು ಕಾಣುವ ಕಾಡುಗಳು. ಎದುರುಗಡೆ ದಟ್ಟ ಅರಣ್ಯ. ಒಳಗೆ ಆಟದ ಮೈದಾನ ಮಾಡಬಹುದಾದ ಖಾಲಿ ಜಾಗ.ರಾಜಕೀಯ ಬಲ ,ಹಣ ಬಲದಿಂದ ಬೆಲೆ ಬಾಳುವ ಮರಗಳನ್ನೆಲ್ಲಾ ರಾತ್ರೋರಾತ್ರಿ ಎತ್ತಂಗಡಿ ಮಾಡಿಯಾಗುತ್ತದೆ.


ಅವರಿಗೆ ,ಆ ಮರಗಳೇ ನಮಗೆ ಆಹಾರ ಮತ್ತು ಪ್ರಾಣವಾಯುವನ್ನು ಕೊಡುತ್ತವೆ ಎಂಬುದು ಮರೆತುಹೋದಂತಿದೆ.
ಕಾಡುಗಳಿದ್ದಲ್ಲಿ ಪ್ರಾಣಿ ಪಕ್ಷಿಗಳಿರುತ್ತವೆ.ಪ್ರಾಣಿ ಪಕ್ಷಿಗಳಿದ್ದಾಗ ಕಾಡು ಸೊಂಪಾಗಿ ಇಂಪಾಗಿರುತ್ತದೆ.ಕಾಡಿನ ಸೊಬಗನ್ನು ಸವಿದವರಿಗೇ ಗೊತ್ತು ಅದರ ಬೆಲೆ. ಆದರೆ ಕೆಲವು ಮಂದಿಗೆ ಪ್ರಾಣಿ ಪಕ್ಷಿಗಳ ಬೇಟೆಯ ಹುಚ್ಚು.ರಾತ್ರಿ ಗೆಳೆಯರೊಂದಿಗೆ ಸೇರಿಕೊಂಡು ಪ್ರಾಣಿಗಳ ಬೇಟೆ.ಅದೊಂದು ಅವರಿಗೆ ಹುಚ್ಚು.ನಿಜವಾಗಿಯೂ ಅವರಿಗೆ ‘ಹುಚ್ಚು’ ಅವರ ಪ್ರಕಾರ,ಕೆಲವು ಪ್ರಾಣಿಗಳನ್ನು ಕೊಂದು ತಿಂದರೆ ಕೆಲವು ರೋಗಗಳು ವಾಸಿಯಾಗುತ್ತವೆ ಎಂಬ ಒಣ ನಂಬಿಕೆ.ಒಂದು ವೇಳೆ ಅದು ನಿಜವಾದರೂ ಸಹ,ಆ ಪ್ರಾಣಿಗಳಿಗೆ ಆಗುವ ನೋವು , ಭಯ,ಹೆದರಿಕೆ ಈ ‘ಹುಚ್ಚರಿಗೇನು’ ಗೊತ್ತು.ಅಂದರೆ ಬೇಟೆಯ ಹುಚ್ಚು.ಆದರೆ ಅದೇ ಬೇಟೆಗಾರರು,ಒಂದೇ ಒಂದು ಜೀವಿಯನ್ನು ಸೃಷ್ಟಿ ಮಾಡಲಿ ನೋಡೋಣ.


ನಮ್ಮ ರೋಗಗಳಿಗೆ ,ಪ್ರಾಣಿಗಳ ಮಾಂಸ ಔಷಧಿಯಾಗುತ್ತದೆ ಎಂದು ಕಾಡುಪ್ರಾಣಿಗಳನ್ನು ದಯವಿಟ್ಟು ಕೊಲ್ಲಬೇಡಿ.ನಿಮಗೆ ಕೊಲ್ಲುವ ಅಧಿಕಾರವಿಲ್ಲ ಎಂಬುದು ಗೊತ್ತಿರಲಿ.
ಅದೇ ರೀತಿ ಪುಟ್ಟ ಪಕ್ಷಿಗಳು. ಉದಾಹರಣೆಗೆ ಕೋಗಿಲೆ,ಪಾರಿವಾಳ ಜಾತಿಯ ಕೆಲವು ಪಕ್ಷಿಗಳು. ಕಾಡುಕೋಳಿ.ಇನ್ನು ಕೆಲವರು ನವಿಲನ್ನೂ ಬಿಡುವುದಿಲ್ಲ.ಇದೇ ಕಾರಣಕ್ಕೆ ನಮ್ಮ ಹಿರಿಯರು,ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ದೇವ,ದೇವತೆಗಳ ವಾಹನಗಳನ್ನಾಗಿ ಮಾಡಿದ್ದಾರೆ.ಸಿ೦ಹ,ಹುಲಿ ,ಕುದುರೆ.ಹಾಗೆಯೇ ಪಕ್ಷಿಗಳಾದ ನವಿಲು,ಗಿಡುಗ,ಹ೦ಸ ಹಾಗೆಯೇ ಕಾಗೆ.ಈ ರೀತಿಯಿಂದಲಾದರೂ ಪ್ರಾಣಿ ಸಂಕುಲವನ್ನು ದುರ್ಬುದ್ದಿ ಮನುಷ್ಯರಿಂದ ರಕ್ಷಿಸುವ ಪಣ ತೊಟ್ಟಿರುವುದು.
ನಾವು ಇವತ್ತು ಪೂಜಿಸುವ ಗೋಮಾತೆಯನ್ನು ಕಾಮಧೇನು ಎಂಬುದಾಗಿ ಕರೆದಿದ್ದಾರೆ ಅಥವಾ ಕರೆಯುತ್ತಿದ್ದೇವೆ.ಬಸವನನ್ನು ನಂದಿಯ ರೂಪದಲ್ಲಿ ಪೂಜಿಸುತ್ತಿದ್ದೇವೆ.
ಕಾಡಿನ ಪ್ರಾಣಿಗಳು ನಾಡಿಗೆ ಬಂದು ನಾವು ಬೆಳೆದ ಬೆಳೆಗಳನ್ನು ನಾಶ ಮಾಡುತ್ತವೆ ಕಾರಣ ಯಾರು,ನಾವೆ.ಕಾಡಿನಲ್ಲಿ ಅವುಗಳಿಗೆ ತಿನ್ನಲು ಆಹಾರ ಇಲ್ಲ.ಅದಕ್ಕಾಗಿ ಹಸಿವು ನೀಗಿಸಲು ನಾಡಿಗೆ ಬರಲೇ ಬೇಕು ತಾನೆ.
ಈಗ ನೀವು ಕೇಳಬಹುದು,ನಾವು ಕೋಳಿಯನ್ನು ಕೊಲ್ಲುವುದಿಲ್ಲವೆ ಎಂದು.
ಮಿತ್ರರೆ,ಅವುಗಳು ಸಾಕು ಪ್ರಾಣಿಗಳ ಜಾತಿಗೆ ಸೇರಿವೆ.ಅವುಗಳು ನಾವಿಲ್ಲದೆ ಬದುಕಲು ಸಾಧ್ಯವಿಲ್ಲ.ಅವುಗಳ ಮೇಲೆ ನಮಗೆ ಸ್ವಲ್ಪ ಅಧಿಕಾರವಿದೆ.ಅದೊಂದು ಉದ್ಯೋಗವಾಗಿದೆ.
ಹಿಂದಿನ ಕಾಲದಲ್ಲಿ ರಾಜರುಗಳು ಬೇಟೆಗೆ ಹೋಗುತ್ತಿದ್ದರು ಎಂಬುದನ್ನು ನಾವು ಕಥೆಗಳಲ್ಲಿ, ಅಥವಾ ಚರಿತ್ರೆಯಲ್ಲಿ ಓದುತ್ತೇವೆ.ಪ್ರಜೆಗಳ ಬೆಳೆ ನಾಶವಾದಾಗ,ಅವರು ತಮ್ಮ ರಾಜರಲ್ಲಿ ದೂರು ಕೊಡುತಿದ್ದರು.ಆಗ ರಾಜ ಬೇಟೆಗೆ ಸ್ವತಃ ತಾನೇ ಪರಿವಾರ ಸಮೇತ ಹೋಗುತ್ತಿದ್ದ. ಅವನು ಬೇಟೆಗೆ ಹೋಗಿ ಪ್ರಾಣಿಗಳನ್ನು ಕೊಲ್ಲುತ್ತಿದ್ದ ಎಂಬುದನ್ನು ಮತ್ತು ತಿನ್ನಲು ಉಪಯೋಗಿಸುತ್ತಿದ್ದ ಎಂಬುದನ್ನು ಎಲ್ಲಿಯಾದರೂ ಕೇಳಿದ್ದೀರ.ಇದ್ದರೂ ಬಹಳ ಕಡಿಮೆ.ಅವರು ಪ್ರಾಣಿಗಳನ್ನು ಹೆದರಿಸಿ ದೂರ ಓಡಿಸುತ್ತಿದ್ದರು ಹೊರತು ಕೊಲ್ಲುತ್ತಿರಲಿಲ್ಲ.ಅವರಿಗೆ ಯಾವುದೇ ಕಾನೂನುಗಳಿರಲಿಲ್ಲ.ಅವರೇ ಕಾನೂನು. ಆದರೆ ಈಗ ಹಲವಾರು ಕಾನೂನುಗಳು ಪುಸ್ತಕದಲ್ಲಿವೆ.ಕಾರ್ಯರೂಪದಲ್ಲಿ ಇಲ್ಲ.ಅದುವೇ ದೊಡ್ಡ ದುರಂತ.


ಆದರೆ ಇತ್ತೀಚಿನ ದಿನಗಳಲ್ಲಿ ಬೇಟೆಯಾಡುವ ಮಂದಿ ಕಡಿಮೆಯಾಗಿದ್ದಾರೆ ಅನಿಸುತ್ತಿದೆ.ಈಗ ನಾವು ಹಲವು ಜಾತಿಯ ಪ್ರಾಣಿಗಳನ್ನು ಪ್ರತಿನಿತ್ಯ ನೋಡಲು ಸಾಧ್ಯವಾಗಿದೆ.ಪಕ್ಷಿಗಳು ಉದಾಹರಣೆಗೆ ನವಿಲು,ಕಾಡುಕೋಳಿ, ಕೋಗಿಲೆ ಮತ್ತು ನಾವು ತಿನ್ನುವ ಹಲವಾರು ಪಕ್ಷಿಗಳು. ಇದೊಂದು ಒಳ್ಳೆಯ ಬೆಳವಣಿಗೆ. ಆದರೆ ಕಾಡು ಮಾತ್ರ ನಾಶವಾಗುತ್ತಲೇ ಹೋಗುತ್ತಿದೆ.ಕಾಡು ಕಡಿದು ನಾಡು ಮಾಡುತ್ತಿದ್ದೇವೆ.ದಟ್ಟವಾದ ಕಾಡುಗಳಿಲ್ಲ.ಕಾಡು ಪ್ರಾಣಿಗಳಿವೆ.ಅವುಗಳು ನಾಡಿಗೆ ಬರದೆ ಇನ್ನೆಲ್ಲಿಗೆ ಹೋಗ್ಬೇಕು ನೀವೆ ಹೇಳಿ?.
‌ ಅದಕ್ಕಾಗಿಯೇ ಪ್ರಕೃತಿ ವಿಕೋಪಗಳು ಜಾಸ್ತಿಯಾಗಿವೆ.ನಾವು ಚಿಕ್ಕವರಿರುವಾಗ ಮೂರು ಕಾಲಗಳಿದ್ದವು.ಬೇಸಿಗೆ,ಮಳೆ ಮತ್ತು ಚಳಿಗಾಲ.ಆದರೆ ಈಗ ಚಳಿಗಾಲವೇ ಇಲ್ಲ.ಈಗ ಯಾವಾಗ ನೋಡಿದರೂ ಚಂಡಮಾರುತ.ನಾಡೆಲ್ಲ ಕೊಚ್ಚಿಕೊಂಡು ಹೋಗುವ ಭಯಂಕರ ಮಳೆ.ಅದಕ್ಕೆ ತುಳುವಿನಲ್ಲಿ ಹೇಳುವುದು,’ಪೋಕಾಲ’ ಅಂದರೆ ಹೋಗುವ ಕಾಲ.ಅಂದರೆ ನಮ್ಮ ಅಂತ್ಯ ನಮ್ಮಿಂದಲೇ ಆದಷ್ಟು ಬೇಗನೆ ಬರುತಿದೆ ಎಂಬುದರ ಸೂಚಕ.


ಮಿತ್ರರೆ,ಯಾರಿಗೂ ಯಾವುದೇ ಜೀವಿಯನ್ನು ಕೊಲ್ಲುವ ಅಧಿಕಾರವಿಲ್ಲ.ಕಾಡನ್ನು ಕಡಿಯುವ ಅಧಿಕಾರವಿಲ್ಲ.ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ.ದುರಾಸೆ ಬಿಟ್ಟು ಎಲ್ಲಾ ಜೀವಿಗಳನ್ನೂ ಪ್ರೀತಿಯಿಂದ, ಕರುಣೆಯಿಂದ ,ಮಮತೆಯಿಂದ ಗೌರವದಿಂದ ನೋಡುವ.ಹೆಚ್ಚು ಆರೋಗ್ಯವಾಗಿ ಆದಷ್ಟು ಹೆಚ್ಚು ದಿನ ಬದುಕುವ.ಪ್ರಕೃತಿಯನ್ನು ಅದರಷ್ಟಕ್ಕೆ ಬಿಡುವ.ಹಿ೦ಸೆಯನ್ನು ಬಿಟ್ಟು ಅಹಿ೦ಸೆಯಿಂದ ಬಾಳುವ.ಎಲ್ಲವನ್ನೂ ಸುಂದರವಾಗಿ ಮತ್ತು ಎಲ್ಲದರಲ್ಲೂ ಸೌಂದರ್ಯವನ್ನು ಕಾಣುವ.
✍️ ಬಿ ಕೆ ಸವಣೂರು.
‌‌‌

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

WhatsApp Group Join Now
Telegram Group Join Now
Sharing Is Caring:

Leave a Comment