ನಮ್ಮನ್ನು ನಾವು ಯಾಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು – ಬೆಳಕು 9

WhatsApp Group Join Now
Telegram Group Join Now

ಬೆಳಕು

“ನಮ್ಮನ್ನು ನಾವು ಯಾಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು”

“ದಯವಿಟ್ಟು ಜನರಲ್ ಪರೀಕ್ಷೆ ಮಾಡಿಕೊಳ್ಳಿ ಪ್ಲೀಸ್” ಇದು ಆರೋಗ್ಯ ಇಲಾಖೆಯ ಉದ್ಘೋಷ.
ಮನುಷ್ಯರಾದ ನಮಗೆ ರೋಗಗಳು ಬರುವುದು ಸರ್ವೆ ಸಾಮಾನ್ಯ. ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯ.ಆದರೆ ನಾವು ಎಂದಾದರು ರೋಗ ಬಾರದೆ ಆಸ್ಪತ್ರೆಗೆ ಹೋಗುತೆವೆಯೋ ಒಮ್ಮೆ ಯೋಚಿಸಿ ನೋಡಿ. ಆದರೆ ಬರುವ ಉತ್ತರ,ಏನು ಗೊತ್ತೆ,ಯಾಕೆ ಹೋಗ್ಬೇಕು.ಯಾವುದೇ ರೋಗವಿಲ್ಲವಲ್ಲ,ಮತ್ಯಾಕೆ ಹೋಗ್ಬೇಕು.


ಆದರೆ ನಮ್ಮ ನಿಮ್ಮಲ್ಲಿ ಒಂದು ಹಾಲು ಕರೆಯುವ ದನವಿರಲಿ,ಅಥವಾ ಉತ್ತಮ ಜಾತಿಯ ನಾಯಿಯಿರಲಿ ಅಥವಾ ಯಾವುದೇ ಒಂದು ಬೆಲೆ ಬಾಳುವ ಸಾಕು ಪ್ರಾಣಿ, ಪಕ್ಷಿಯಿರಲಿ ಅವುಗಳನ್ನು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಸಂಬಂಧಿಸಿದ ವೈದ್ಯರಲ್ಲಿಗೆ ತೆಗೆದುಕೊಂಡು ಹೋಗುತ್ತೇವೆ.ಯಾಕೆ ಗೊತ್ತೆ ,ಅದಕ್ಕೆ ನಾವು ದುಬಾರಿ ಹಣ ತೆತ್ತು, ತಂದಿರುತ್ತೇವೆ ,ಅಥವಾ ಅವುಗಳಿಂದ ನಮಗೆ ಲಾಭವಿದೆ,ಅಥವಾ ಅವುಗಳಲ್ಲಿ ನಮಗೆ ಬಹಳ ಪ್ರೀತಿಯಿದೆ.ಆ ಕಾರಣದಿಂದ,ಅವುಗಳಿಗೆ ಯಾವುದೇ ರೋಗಗಳ ಲಕ್ಷಣಗಳು ಇವೆಯೇ ಎಂಬುದನ್ನು ಮುಂಜಾಗ್ರತಾ ದೃಷ್ಟಿಯಿಂದ ಪರೀಕ್ಷೆಗೆ ಒಳಪಡಿಸುತ್ತೇವೆ.


ಅದೇ ರೀತಿ ನಮ್ಮಲ್ಲಿ ಪ್ರಯಾಣಕ್ಕೆ ಬಳಸುವ ವಾಹನವಿದೆ ಎಂದಿಟ್ಟುಕೊಳ್ಳಿ,ಅದನ್ನು ತೆಗೆದುಕೊಂಡು ಒಂದು ತಿಂಗಳಲ್ಲಿಯೇ ನಮಗೆ ಶೋ ರೂಮ್ ನಿಂದ ಫೋನ್ ಕಾಲ್ ಬರುತ್ತದೆ,ನಿಮ್ಮ ವಾಹನದ ಪ್ರಥಮ ಸರ್ವಿಸ್ ನ ಸಮಯ ಆಯಿತು, ತೆಗೆದುಕೊಂಡು ಬನ್ನಿ ಎನ್ನುತ್ತಾರೆ.ನಮ್ಮಲ್ಲಿ ದುಬಾರಿ ಬೆಲೆಯ ಕಾರಿದೆ ಎಂದಿಟ್ಟುಕೊಳ್ಳೋಣ,ಅದನ್ನು ಪ್ರತೀ ತಿಂಗಳು ಶೋ ರೂಮ್ ನಲ್ಲಿ ತೋರಿಸುತ್ತೇವೆ.ಸ್ವಲ್ಪ ಏನಾದರೂ ಸಮಸ್ಯೆ ಕಂಡು ಬಂದರೂ ಕೂಡಲೇ ಅದರ ಮೆಕ್ಯಾನಿಕ್ ನನ್ನು ಭೇಟಿಯಾಗುತ್ತೇವೆ.ಅದರ ಚಕ್ರಗಳ ಬದಲಾವಣೆ, ಆಯಿಲ್ ಬದಲಾವಣೆ ಹೀಗೆ ವಿವಿಧ ರೀತಿಯಿಂದ ಜಾಗರುಕತೆ ನೋಡಿಕೊಳ್ಳುತ್ತೇವೆ.ಯಾಕೆಂದರೆ ಮಧ್ಯದಾರಿಯಲ್ಲಿ ಕೈಕೊಡಬಾರದೆನ್ನುವ ದೃಷ್ಟಿಯಿಂದ.


ಕೃಷಿಕರಾದ ನಾವು ಬೆಳೆದ ಯಾವುದೇ ರೀತಿಯ ಬೆಳೆಯಾಗಲಿ,ಅದರಲ್ಲಿ ಸರಿಯಾದ ಫಸಲು ಬರದಿದ್ದರೆ ಕೂಡಲೇ ಕೃಷಿ ತಜ್ಞರನ್ನು ಭೇಟಿಯಾಗುತ್ತೇವೆ.ಯಾಕೆಂದರೆ ಅದರಿಂದ ನಮಗೆ ಲಾಭವಿದೆ.ಕೃಷಿ ಭೂಮಿಯನ್ನು ಕೂಡ ವರ್ಷಕ್ಕೊಮ್ಮೆ ,ಭೂಮಿ ಅಂದರೆ ,ಮಣ್ಣಿನ ಪರೀಕ್ಷೆ ಮಾಡಿಸುತ್ತೇವೆ.ಯಾಕೆಂದರೆ ಮಣ್ಣಿನ ಫಲವತ್ತತೆ ದೀರ್ಘ ಕಾಲ ಬರಲಿ ಎನ್ನುವ ದೂರಾಲೋಚನೆಯ ದೃಷ್ಟಿಯಿಂದ.
ಆದರೆ ನಮಗೆ ದೇವರು ಕೊಟ್ಟ ಈ ದೇಹವನ್ನು ನಾವು ಎಂದಾದರೂ ಚೆಕ್ ಅಪ್ ಮಾಡಿಸುತ್ತೇವೆಯೇ? ಇಲ್ಲ.ಯಾಕೆಂದರೆ ಅದಕ್ಕೆ ನಾವು ದುಡ್ಡು ಕೊಡ್ಲಿಲ್ಲ.ಅದು ನಮಗೆ ಪುಕ್ಸಟೆಯಾಗಿ ಸಿಕ್ಕಿದ್ದು ತಾನೆ,ಅದಕ್ಕಾಗಿ ಅದರ ಬೆಲೆ ನಮಗೆ ಗೊತ್ತಿಲ್ಲ. ಆದರೆ ನಮ್ಮ ದೇಹದ ಪ್ರತಿಯೊಂದು ಅಂಗಗಳಿಗೂ ಆಯಾಸವಾಗುತ್ತದೆ.ಅದಕ್ಕೂ ಕೂಡಾ ವಿಶ್ರಾಂತಿಯ ಅಗತ್ಯವಿದೆ.ದೇಹದ ಪ್ರಮುಖ ಎಂಜಿನ್ ಹೃದಯ. ಅದನ್ನು ನಾವು ಪ್ರತೀ ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವುದು ಹೃದಯ ತಜ್ಞರ ಸೂಚನೆ ಮತ್ತು ಸಲಹೆ.ಆದರೆ ನಾವು ಮಾತ್ರ ಎಚ್ಚರವಾಗುವುದು ಹೃದಯ ಸಂಬಂಧಿ ಸಮಸ್ಯಗಳು ಕಂಡು ಬಂದಾಗ ಮಾತ್ರ. ಅದೇ ರೀತಿ ಶರೀರದ ಪ್ರತಿಯೊಂದು ಅಂಗಗಳು ಕೂಡಾ ಬಹಳ ಅಮೂಲ್ಯವಾದವುಗಳು.ಆದರೆ ನಮಗೆ ಅವುಗಳ ಮೌಲ್ಯ ಗೊತ್ತಾಗುವುದು,ಅವುಗಳಿಗೆ ಏನಾದರೂ ಸಮಸ್ಯೆಗಳು ಕಂಡುಬಂದಾಗ ಮಾತ್ರ. ನಾವು ಮೊದಲಾಗಿ ನಮ್ಮ ದೇಹ ಅರ್ಥಾತ್ ಶರೀರವನ್ನು ಪ್ರೀತಿಸಬೇಕು ಮತ್ತು ಅದರ ಬಗ್ಗೆ ಜಾಗೃತೆ ವಹಿಸಬೇಕು.ಆಗ ಅದರ ಬಾಳ್ವಿಕೆ ಜಾಸ್ತಿ ಯಾಗುತ್ತದೆ ಅಥವಾ ನಾವು ಜಾಸ್ತಿ ವರ್ಷ ಬದುಕಬಹುದು.


ನಾವು ತಿನ್ನುವ ಆಹಾರ ಕೂಡಾ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಿಂದಿನ ಕಾಲದ ಅಂದರೆ ನಮ್ಮ ಹಿರಿಯರು ತಾವೇ ಬೆಳೆದ,ತಯಾರಿಸಿದ ಆಹಾರವನ್ನು ಸೇವಿಸುತ್ತಿದ್ದರು, ಕಾರಣ ಅವರು ಹೆಚ್ಚು ಕಾಲ ಬದುಕುತ್ತಿದ್ದರು.ನಮ್ಮ ಶರೀರಕ್ಕೆ ಒಗ್ಗುವ ಆಹಾರ ಪದ್ದತಿ ಯನ್ನು ನಾವು ಅಳವಡಿಸಿಕೊಳ್ಳಬೇಕು.ರುಚಿಯಿದೆ ಎಂದು ಹೊಟ್ಟೆ ಬೇಡವೆಂದರೂ ತಿನ್ನಬಾರದು.ತರಕಾರಿ, ಕಾಯಿ ಪಲ್ಲೆಗಳ ಸೇವನೆ ಉತ್ತಮ. ಮಾಂಸಾಹಾರಿ ಆಹಾರ ನಮ್ಮ ದೇಹಕ್ಕೆ ಒಳ್ಳೆಯ ಆಹಾರವಲ್ಲ.ಹಾಗಂತ ತಿನ್ನಲೇ ಬಾರದೆಂದಿಲ್ಲ.ಅದಕ್ಕೂ ಇತಿ ಮಿತಿಯಿದೆ.ಈಗ ಪ್ರತಿಯೊಂದು ಕಾರ್ಯಕ್ರಮಗಳಿಗೂ ಹೆಚ್ಚಾಗಿ ಮಾಂಸಾಹಾರ.ಆಗ ನಮ್ಮ ಆರೋಗ್ಯ ಕೆಡುತ್ತದೆ.ತೆಗೆದುಕೊಳ್ಳುವ ಆಹಾರಕ್ಕೆ ಕೂಡಾ ಸಮಯದ ಅಂತರ ಬಹಳ ಮುಖ್ಯ.
ಉದಾಹರಣೆಗೆ ನಾಯಿಯನ್ನು ನೋಡಿ ,ಅದರ ಆರೋಗ್ಯ ಸರಿಯಿಲ್ಲ ಎಂದ ಕೂಡಲೇ ಆಹಾರ ತಿನ್ನುವುದನ್ನು ತಕ್ಷಣ ನಿಲ್ಲಿಸುತ್ತದೆ.ಅದು ತೋಟಕ್ಕೆ ಹೋಗಿ ಅದರ ದೇಹದ ಆರೋಗ್ಯಕ್ಕೆ ಸರಿಯಾದ ಹುಲ್ಲನ್ನು ಹುಡುಕಿ ತಿನ್ನುತ್ತದೆ.ಆರೋಗ್ಯ ಸರಿಯಾದ ಮೇಲೆ ಆಹಾರ ಸೇವಿಸುತ್ತದೆ.ಹಾಗೇಯೆ ನಾವು ಕೂಡಾ ಆರೋಗ್ಯ ಹಾಳಾದ ಕೂಡಲೇ ಆಹಾರ ಸೇವನೆಯನ್ನು ನಿಲ್ಲಿಸಬೇಕು ಅಥವಾ ಒಂದು ಹೊತ್ತಾದರೂ ಉಪವಾಸವಿರಬೇಕು.


ನಮಗೆ ನಮ್ಮ ದೇಹವೆ ಪವಿತ್ರ ದೇಗುಲ. ಅದನ್ನು ಜೋಪಾನವಾಗಿ ನೋಡಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯ. ಅದಕ್ಕೆ ತಿಂಗಳಿಗೊಮ್ಮೆಯಾದರೂ ವೈದ್ಯಕೀಯ ಸಲಹೆ ಪಡೆದುಕೊಳ್ಳಬೇಕು.ಆಗ ಭವಿಷ್ಯದಲ್ಲಿ ಬರುವ ರೋಗಗಳಿಂದ ಮುಕ್ತರಾಗಬಹುದು.ಹಾಗಂತ ಅಮರರಾಗಲು ಸಾಧ್ಯವಿಲ್ಲ.
ಮಿತ್ರರೇ ನಮ್ಮ ದೇಹ ಉಚಿತವಾಗಿ ಸಿಕ್ಕಿದರೂ ಅದನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವ.ನಾವು ಆರೋಗ್ಯವಾಗಿದ್ದರೆ ಇಡೀ ಸಮಾಜ ಆರೋಗ್ಯವಾಗಿರುತ್ತದೆ.ಸಮಾಜ ಆರೋಗ್ಯವಾಗಿದ್ದಾಗ ಇಡೀ ದೇಶ ಆರೋಗ್ಯವಂತ ಪ್ರಜೆಗಳಿಂದ ಕೂಡಿರುತ್ತದೆ.ಅದಕ್ಕಾಗಿ ಸರಕಾರ ಒಂದು ಕಾನೂನು ತರಬೇಕು.ಅಥವಾ ಪ್ರತಿಯೊಬ್ಬ ಪ್ರಜೆಗಳನ್ನು ಕೂಡ ತಿಂಗಳಿಗೊಮ್ಮೆ ಉಚಿತವಾಗಿ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು.ಆಗ ದೇಶದ ಪ್ರಜೆಗಳು ರೋಗಮುಕ್ತರಾಗಿ ಸಂತೋಷದಿಂದ ಇರಬಹುದು ಅಲ್ಲವೇ.
✍️ಬಿಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

WhatsApp Group Join Now
Telegram Group Join Now
Sharing Is Caring:

Leave a Comment