ಶಾಂತಿ ಮತ್ತು ನೆಮ್ಮದಿ – ಬೆಳಕು 8

ಬೆಳಕು

ಶಾಂತಿ ಬೇಕ,ಬೇಡ್ವ ಎಂಬ ಪ್ರಶ್ನೆ ಬಂದಾಗ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.ಸಜ್ಜನರಾದರೆ ಶಾಂತಿಯನ್ನು,ಮತ್ತು ದುರ್ಜನರಾದರೆ ಅಶಾಂತಿಯನ್ನು ಆಯ್ಕೆ ಮಾಡುಕೊಳ್ಳುತ್ತಾರೆ.
ಶಾಂತಿಯುತ ಜೀವನ ದೀರ್ಘ ಕಾಲ ಬದುಕಲು ಬಿಡುತ್ತದೆ.ಅಶಾಂತಿ ,ಅಲ್ಪ ತೃಪ್ತಿಯನ್ನು ಕೊಡುತ್ತದೆ,ಮತ್ತು ಅಲ್ಪ ಕಾಲದ ಜೀವನವನ್ನು ಕೊಡುತ್ತದೆ.


‘ ತಾಳಿದವನು ಬಾಳಿಯಾನು’ ಎಂಬ ನಾಣ್ಣುಡಿ ಇಲ್ಲಿ ಪ್ರಸ್ತುತವಾಗುತ್ತದೆ.
ಇವತ್ತಿನ ಜಗತ್ತನ್ನು ನೋಡಿದಾಗ ಸಜ್ಜನರು ಭಯಭೀತರಾಗುತ್ತಾರೆ.ಯಾಕೆಂದರೆ :ಶಾಂತಿಯನ್ನು ಬಯಸುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರೂ ಬಯಸುವುದು ಅಲ್ಪ ತೃಪ್ತಿ ಮತ್ತು ಅತಿಯಾದ ಆಸೆ ಮತ್ತು ಸಂಪತ್ತಿನ ಕ್ರೋಢೀಕರಣ,ಇನ್ನೊಬ್ಬರ ಜಾಗ,ದ್ರವ್ಯದ ಮೇಲೆ ಕಣ್ಣು.
ಯಾರು ಇದ್ದುದರಲ್ಲಿ ಸಮಧಾನ ಮತ್ತು ಆತ್ಮತೃಪ್ತಿಯನ್ನು ಪಡೆಯುತ್ತಾರೋ ಅವರು ಯಾವಾಗಲೂ ಇನ್ನೊಬ್ಬರ ಏಳಿಗೆಯನ್ನು ಮತ್ತು ಅಭಿವೃದ್ಧಿಯನ್ನು ಬಯಸುತ್ತಾರೆ.


ಇಂದು ಸಮಾಜದಲ್ಲಿ ನಾವು ಕಾಣುತ್ತಿರುವುದು,ಅತೃಪ್ತರ ಮತ್ತು ಅಶಾಂತಿ,ಆಸೆಬುರುಕರ ದೊಡ್ಡ ಸಂಘಟನೆಯನ್ನು.
ಸಜ್ಜನರು ಯಾವಾಗ ಅಸತ್ಯವನ್ನು ಖಂಡಿಸುವುದಿಲ್ಲವೋ,ಅನ್ಯಾಯವನ್ನು ವಿರೋಧಿಸುವುದಿಲ್ಲವೋ ಅಲ್ಲಿ ದುರ್ಜನರ ಅಟ್ಟಹಾಸ ಮೇರೆ ಮೀರುತ್ತಿರುತ್ತದೆ.ಇದು ಒಳ್ಳೆಯ ಬೆಳವಣಿಗೆಯಲ್ಲ.ಸಜ್ಜನರಾದವರು ನ್ಯಾಯ,ಶಾಂತಿ ನೆಲೆಸುವಂತೆ ಮಾಡಬೇಕು.
ಇಂದು ವಿಶ್ವದಲ್ಲಿ ನಾವು ಕಾಣುತ್ತಿರುವ ಮೂರನೇ ಮಹಾಯುದ್ದದ ಪೂರ್ವ ತಯಾರಿ,ಒಂದು ಚಿಕ್ಕ ದೇಶವನ್ನು ಒಂದು ಬಲಾಡ್ಯ ದೇಶವೊಂದು ಇಡೀಯಾಗಿ ನುಂಗಲು ಹೊರಟಿದೆ ನೋಡಿ, ಇದು ಆಸೆ ಬುರುಕರ ಮತ್ತು ಅತಿಯಾಸೆ ಹೊಂದಿದವರ ಒಂದು ಗುಂಪು.ಆ ಚಿಕ್ಕ ದೇಶ ತಪ್ಪು ಮಾಡಿರಬಹುದು,ಆದರೆ ಅದಕ್ಕೆ ಯುದ್ದವೆ ಪರಿಹಾರವಾಗಿರಬೇಕಿರಲಿಲ್ಲ.ಅದನ್ನು ಮಾತುಕತೆಯಿಂದ ಸರಿಪಡಿಸಬಹುದಿತ್ತು.ಆದರೆ ದುರ್ನಡತೆಯಿಂದ ಕೂಡಿದ ದೊಡ್ಡ ದೇಶಕ್ಕೆ ಅದು ಬೇಕಿರಲಿಲ್ಲ,ಅದಕ್ಕೆ ಬೇಕಿದ್ದದ್ದು ಸೇಡು ತೀರಿಸಿಕೊಳ್ಳುವುದು ಮತ್ತು ತನ್ನಲ್ಲಿರುವ ಅಸ್ತ್ರಗಳ ಪ್ರಯೋಗ ಮಾಡುವುದು.


ಆದರೆ ಇದರಿಂದ ಒಂದು ಸುಂದರವಾದ ,ವಿಶ್ವ ಪ್ರವಾಸಿಕೇಂದ್ರ ಸಂಪೂರ್ಣ ನಾಶವಾಗಬೇಕಾಯಿತು ಮತ್ತು ಇಡೀ ವಿಶ್ವವೇ ಪಶ್ಚತ್ತಾಪ ಪಡುವಂತಾಯಿತು.ಸುಂದರವಾದ ಬದುಕನ್ನು ಕಟ್ಟಿಕೊಂಡು ಬದುಕುತ್ತಿದ್ದವರ ಬದುಕು ಬೀದಿಯಲ್ಲಿ ಭಿಕ್ಷೆ ಬೇಡುವಂತಾಯಿತು.ಸುಂದರವಾದ ಪ್ರಕೃತಿ ಸುಟ್ಟು ಕರಕಲಾಯಿತು.ಪ್ರಕೃತಿ ಮಾತೆಯ ಅಸ್ಥಿಪಂಜರ ಮಾತ್ರ ಉಳಿಯುವಂತಾಯಿತು.
ಇದು ಯಾಕಾಯಿತು,ಸಜ್ಜನರು ಮೌನವಾಗಿ,ತಮ್ಮಷ್ಟಕ್ಕೆ ತಾವು ಇದ್ದದ್ದೇ ಮುಳುವಾಯಿತು.ಮೊದಲೇ ಸ್ವಲ್ಪ ಆಲೋಚನೆ ಮಾಡುತ್ತಿದ್ದರೆ ಅನಾಹುತವನ್ನು ಚಿಕ್ಕದರಲ್ಲಿ ಮುಗಿಸಬಹುದಿತ್ತೋ ಏನೋ.


ಆದರೆ ಕಾಲ ಮಿಂಚಿ ಹೋಗಿದೆ.ಇದು ಇಡೀ ಪ್ರಪಂಚಕ್ಕೇ ಮುನ್ನೆಚ್ಚರಿಕೆ ಕೊಟ್ಟಿದೆ.ಎಚ್ಚೆತ್ತುಕೊಳ್ಳಲು ಸಕಾಲವಾಗಿದೆ.
ಅದರಲ್ಲಿಯೂ ಭಾರತ ದೇಶ ಅಂದರೆ ಶಾಂತಿದೂತ ದೇಶ ಎಂದೇ ಖ್ಯಾತಿ ಪಡೆದ ದೇಶ ಇಡೀ ಪ್ರಪಂಚಕ್ಕೇ ಶಾಂತಿಯ ಪಾಠವನ್ನು ಮಾಡಲು ಸಕಾಲವಾಗಿದೆ.ನಾವು ಎಲ್ಲಿಯವರೆಗೆ ಮುಂದಾಳತ್ವ ವಹಿಸುವುದಿಲ್ಲವೋ ಅಲ್ಲಿಯವರೆಗೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.ಯಾಕೆಂದರೆ ಭಾರತ ಸಜ್ಜನರಿಂದ ಕೂಡಿದ ದೇಶ.ಇಂದಿನ ಯುದ್ಧ ಎಂದರೆ ಬರೀ ಖಡ್ಗ ಗುರಾಣಿ ಹಿಡಿದು, ಹಗಲು ಮಾತ್ರ ಯುದ್ಧ ಮಾಡುವ ಕಾಲವಲ್ಲ.ಇಂದು ಏನಿದ್ದರು ಕದ್ದು ,ನಿದ್ದೆ ಮಾಡುತ್ತಿರುವಾಗ,ವೈರಿ ವಿಶ್ರಮಿಸುತ್ತಿರುವಾಗ ಸೇಡು ತೀರಿಸಿಕೊಳ್ಳುವ ಕಾಲ,ಅದೂ ಅಲ್ಲದೆ ಕೈಯಲ್ಲಿರುವುದು ಅಣ್ವಸ್ತ್ರಗಳು.ಅವುಗಳು ಒಂದು ದೇಶವನ್ನು ಮಾತ್ರ ಭಸ್ಮಮಾಡುವುದಲ್ಲ.ಇಡೀ ವಿಶ್ವವೇ ಸರ್ವನಾಶವಾಗಬಹುದು.


ಆದುದರಿಂದ ಮಾನವರಾದ ನಾವು ಪರಸ್ಪರ ಮಾತುಕತೆ,ಪರಸ್ಪರ ಉತ್ತಮ ಬಾಂಧವ್ಯ, ಸಹಕಾರ ಮನೋಭಾವ, ಪ್ರೀತಿ ,ವಿಶ್ವಾಸ,ನಂಬಿಕೆ,ಪ್ರಕೃತಿಯ ಮೇಲೆ ಪ್ರೀತಿ, ಮುಂದಿನ ಸಮಾಜದ ಅರಿವು,ಇವುಗಳೆಲ್ಲವನ್ನು ಮನಸಲ್ಲಿಟ್ಟುಕೊಂಡು ಬದುಕಬೇಕಿದೆ.ಅದಕ್ಕೆ ಒಂದು ಸಂಸ್ಕಾರಯುತ ದೇಶದ ನಾಯಕತ್ವದ ಅಗತ್ಯವಿದೆ.ಆ ನಾಯಕತ್ವ ವಹಿಸಲು ಭಾರತ ಮಾತ್ರ ಸೂಕ್ತ.ಕಾರಣ ನಮಗೆ ಶಾಂತಿಪ್ರಿಯರು ಎನ್ನುವ ಇತಿಹಾಸವೇ ಇದೆ.


ಭಾರತ ವಿಶ್ವದ ನಾಯಕತ್ವ ವಹಿಸಿಕೊಳ್ಳಬೇಕಾದರೆ,ಪ್ರತಿಯೊಬ್ಬ ಪ್ರಜೆ‌ ಕೂಡಾ ನಾಯಕರಾಗಬೇಕು.ಶಾಂತಿಪ್ರಿಯರಾಗಬೇಕು.ಸಜ್ಜನರಾಗಬೇಕು.ನಂಬಿಕೆಯ ಮೇಲೆ ವಿಶ್ವಾಸವಿಡಬೇಕು.ಪ್ರೀತಿ ವಿಶ್ವಾಸದಿಂದ ಬದುಕಬೇಕು.ಅಸೂಯೆ,ದ್ವೇಷ, ಇವುಗಳನ್ನು ತ್ಯಜಿಸಬೇಕು.ಧರ್ಮ ಧರ್ಮ ಗಳ ನಡುವಿನ ಬಿರುಕು ಸರಿಯಾಗಬೇಕು.ದೇಶದ ಕಾರ್ಯಾಂಗ,ನ್ಯಾಯಾಂಗದ ಮೇಲೆ ನಂಬಿಕೆ ಮತ್ತು ವಿಶ್ವಾಸ ಬರಬೇಕು.ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಪವಿತ್ರ ಸ೦ವಿಧಾನದ ಆಶಯದಂತೆ ಬದುಕಬೇಕು.ಎಲ್ಲಿಯೂ ಕೂಡಾ ಭಾರತದ ಸ೦ವಿಧಾನಕ್ಕೆ ಧಕ್ಕೆ ತರಬಾರದು.ಒಂದೇ ಧ್ವನಿಯಲ್ಲಿ ಭಾರತ ಮಾತಕೀ ಜೈ ಎನ್ನುವ ಮನೋಭಾವ ಬರಬೇಕು.ಆಗ ಭಾರತ ಇಡೀ ವಿಶ್ವಕ್ಕೇ ನಾಯಕನಾಗಬಹುದಲ್ಲವೇ?.
✍️ಬಿಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

Sharing Is Caring:

Leave a Comment