ಮೌಲ್ಯಾಧಾರಿತ ಶಿಕ್ಷಣ – ಬೆಳಕು 10

ಬೆಳಕು

“ಮೌಲ್ಯಾಧಾರಿತ ಶಿಕ್ಷಣ”

ನಮ್ಮ ಅಜ್ಜ -ಅಜ್ಜಿಯಂದಿರು ಹೇಳುತಿದ್ದರು,ನಾವು ಶಾಲೆಗೆ ಹೋಗಿಲ್ಲ ,ಆದರೂ ಹತ್ತಾರು ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹಿಲ್ವ.ಅದು ಸತ್ಯ.ಅದಕ್ಕೆ ಕಾರಣಗಳಿವೆ.ಅಂದು ಶಾಲೆಗೆ ಹೋಗದಿದ್ದರೂ ಜೀವನ ಸಾಗುತ್ತಿತ್ತು.ಬಡತನವಿದ್ದರೂ ಸ್ನೇಹಕ್ಕೆ ಬಡತನವಿರಲಿಲ್ಲ.ಅಂದು ಕೂಲಿಕಾರ್ಮಿಕರಿಗೆ ಬರವಿರಲಿಲ್ಲ.ಕಾರಣ ಅಂದು ಅವಿಭಕ್ತ ಕುಟುಂಬ ಪದ್ದತಿಯಿತ್ತು.ಅವರವರ ಮನೆಯ ಕೆಲಸಗಳನ್ನು ಅವರವರೆ ಮಾಡಿಕೊಳ್ಳುತ್ತಿದ್ದರು.ಶಾಲೆಗೆ ಹೋಗದಿರಲು ಕಾರಣ,ಶಾಲೆಗಳು ಕೂಡಾ ಹಳ್ಳಿಗಳಿಂದ ಬಹಳ ದೂರವಿರುತ್ತಿದ್ದವು.ಇನ್ನೊಂದು ‌ಪ್ರಮುಖ ಕಾರಣ ಅಂದು ಶಾಲೆಗೆ ಹೋಗದಿದ್ದರೂ ವ್ಯವಹಾರ ಜ್ಞಾನವಿತ್ತು.ಅಂದು ತಂತ್ರಜ್ಞಾನ ಮುಂದುವರೆದಿರಲಿಲ್ಲ.ಸಮಾಜದಲ್ಲಿ ಪ್ರೀತಿ, ಪ್ರೇಮ ,ವಿಶ್ವಾಸವಿತ್ತು.ಸಮಾಜದಲ್ಲಿ ಜಾತಿ ಪದ್ದತಿಗಳಿದ್ದರೂ ಕೋಮು ಗಲಭೆಗಳಿರಲಿಲ್ಲ.

ವಿವಿಧ ಧರ್ಮಗಳಿದ್ದರೂ ಅವುಗಳ ನಡುವೆ ಒಳ್ಳೆಯ ಬಾಂಧವ್ಯವಿತ್ತು.ಹಿರಿಯರ ಮಾತುಗಳಿಗೆ ತೂಕವಿತ್ತು.ಕೋರ್ಟು ಕಟ್ಟಳೆಗಳಿರಲಿಲ್ಲ.ಸರಕಾರಿ ಉದ್ಯೋಗಳಲ್ಲಿ ಯಾವುದೇ ಸ್ಪರ್ಧೆಯಿರಲಿಲ್ಲ.ಈ ಎಲ್ಲಾ ಕಾರಣಗಳಿಂದಾಗಿ ಶಾಲೆಗೆ ಹೋಗದಿದ್ದರೂ ಸಮಾಜದಲ್ಲಿ ಜೀವನ ಮಾಡಲು ಯಾವುದೇ ಸಮಸ್ಯೆಗಳಿರಲಿಲ್ಲ.ಮತ್ತೊಂದು ವಿಷಯ ‌ಹೇಳಲೇ ಬೇಕು.ಅಂದು ಧರ್ಮಾಂಧರು,ಕಪಟ ಸ್ವಾಮಿಜಿಗಳಿರಲಿಲ್ಲ.ವಾಸ್ತುಪುರುಷರು ಇರಲಿಲ್ಲ.ಕಪಟ ಜ್ಯೋತಿಷಿಗಳಿರಲಿಲ್ಲ.ಆದುದರಿಂದ ವಿದ್ಯಭ್ಯಾಸದ ಕೊರತೆ ಕಾಡುತ್ತಿರಲಿಲ್ಲ.

ಆದರೆ ಇಂದು ಹುಟ್ಟಿದ ಪ್ರತಿ ಮಗುವಿಗೂ ವಿದ್ಯಭ್ಯಾಸದ ಅವಶ್ಯಕತೆಯಿದೆ.ಅದಕ್ಕಾಗಿ ಪ್ರತಿ ಕಿಲೋಮೀಟರಿಗೊಂದರಂತೆ ಸರಕಾರಿ ‌ಪ್ರಾಥಮಿಕ ಶಾಲೆಗಳನ್ನು ಸರಕಾರಗಳು ತೆರೆಯಿತ್ತಿವೆ.ವಿದ್ಯಭ್ಯಾಸ ಪ್ರತೀ ಮಗುವಿನ‌ ಹಕ್ಕು ಎಂದು ಸುಪ್ರೀಂಕೋರ್ಟ್ ಘೋಷಿಸಿದೆ.ಕಾರಣವಿದೆ,ಉಳ್ಳವರಿಗೆ ಮಾತ್ರ ವಿದ್ಯಭ್ಯಾಸ‌ ದೊರೆತರೆ ಸಾಲದು,ಹಿಂದುಳಿದ ವರ್ಗದವರಿಗೂ ದೊರೆತಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.ಶಾಲೆಗಳು ಹೆಚ್ಚಾದರೂ ಸಮಾಜದಲ್ಲಿ ಜ್ಞಾನ ಹೆಚ್ಚಾಗಳಿಲ್ಲ.ಜೀವನ ಮೌಲ್ಯಗಳು ಹೆಚ್ಚಾಗಳಿಲ್ಲ.ಇಂದು ಮಾನವೀಯತೆ ಮರೆಯಾಗುತ್ತಿದೆ.ಮನುಷ್ಯತ್ವ ಕಡಿಮೆಯಾಗಿದೆ.ತಂತ್ರಜ್ಞಾನ ಮುಂದುವರೆದಿದೆ.ಸಾಮಾಜಿಕ ಜ್ಞಾನ ಕಡಿಮೆಯಾಗಿದೆ. ವಿಭಕ್ತ ಕುಟುಂಬ ಪದ್ದತಿ ರೂಡಿಯಲ್ಲಿದೆ.ಪರಸ್ಪರ ವಿಶ್ವಾಸ ಕಡಿಮೆಯಾಗಿದೆ. ಅಸಹಕಾರ ಹೆಚ್ಚಾಗಿದೆ.ಕರ್ತವ್ಯ ಮಾಡುವವರಿಗಿಂತ ಬೋಧನೆ ಮಾಡುವವರು ಜಾಸ್ತಿಯಾಗಿದ್ದಾರೆ.

ಮೂಲ ಕೃಷಿ ನಾಶವಾಗಿದೆ.ಹಳ್ಳಿ ಜೀವನ ಬಿಟ್ಟು ನಗರಗಳತ್ತ ಯುವಜನತೆ ವಲಸೆ ಹೋಗುತ್ತಿದ್ದಾರೆ.ಸರಕಾರಿ ಉದ್ಯೋಗದ ಹಂಬಲ ಜಾಸ್ತಿಯಾಗುತ್ತಿದೆ. ಧರ್ಮ-ಧರ್ಮಗಳ ಮಧ್ಯೆ ಶೀತಲ ಸಮರ ಹೆಚ್ಚಾಗುತ್ತಿದೆ.ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಜಾಸ್ತಿಯಾಗುತ್ತಿದೆ.ಆದುದರಿಂದ ಸಮಾಜದಲ್ಲಿ ಸಾಮರಸ್ಯ ಇಲ್ಲವಾಗಿದೆ.ಜೀವನ ಮೌಲ್ಯಕ್ಕಿಂತ ಹಣದ ಮೌಲ್ಯ ಜಾಸ್ತಿಯಾಗುತ್ತಿದೆ.ಧಾರ್ಮಿಕ ಮುಖಂಡರು ಜಾಸ್ತಿಯಾದರೂ ಧಾರ್ಮಿಕ ಭಾವನೆ ಕಡಿಮೆಯಾಗಿದೆ. ‘ಹಣ ಎಂದರೆ ಹೆಣ ಕೂಡ ಬಾಯ್ಬಿಡುತ್ತದೆ’ ಎಂಬ ವೇದವಾಕ್ಯ ನಿಜವೆನಿಸುತ್ತದೆ.ಹಣವೆಂದರೆ ದೇಶಾಭಿಮಾನ ಕೂಡ ಮರೆತಂತಿದೆ.ಧರ್ಮ -ಧರ್ಮಗಳ ನಡುವೆ ವಿಶ್ವಾಸವಿಲ್ಲ.ಇಂದು ಶಾಲೆಗಳಲ್ಲಿ ಈ ಕೊರತೆಗಳನ್ನೆಲ್ಲ ನೀಗಿಸುವ ಕೆಲಸವಾಗಬೇಕಿದೆ.ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ.ಪ್ರಾಥಮಿಕ ಹಂತದಲ್ಲೇ ಮಾನವೀಯತೆಯ ಪಾಠ ಪ್ರಾರಂಭಿಸಬೇಕಿದೆ.

ಬಾಲ್ಯದಲ್ಲೇ ದೇಶಾಭಿಮಾನ ಮೂಡಿಸಬೇಕಿದೆ.ಮನುಷ್ಯತ್ವ,ಮಾನವೀಯತೆ ,ಸಹಕಾರ ಮನೋಭಾವ, ಸಹಭಾಳ್ವೆ,ವಿವಿಧ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಬೇಕಿದೆ.ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.ರಾಜಕೀಯ ಪಕ್ಷಗಳಲ್ಲಿ ಮೌಲ್ಯಾಧಾರಿತ ರಾಜಕೀಯ ಪ್ರಜ್ಞೆ ಬರಬೇಕಿದೆ.ವಿಶ್ವಶಾಂತಿ ನೆಲೆಯಾಗಬೇಕಾದರೆ ದೇಶ ,ದೇಶಗಳ ನಡುವೆ ಪ್ರೀತಿ ವಿಶ್ವಾಸ ಮೂಡಿಸಬೇಕಿದೆ.ಆಗ ಮಾತ್ರ ಜಗತ್ತಿನಲ್ಲಿ ಮಾನವೀಯತೆ, ಪರಸ್ಪರ ಸ್ನೇಹಭಾವ ಇರಲು ಸಾಧ್ಯ.ಇವೆಲ್ಲವೂ ಪ್ರಾಥಮಿಕ ಶಾಲೆಗಳಿಂದ ಪ್ರಾರಂಭವಾಗಬೇಕಿದೆ.ಸರಕಾರಗಳು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ.ದೇಶಾದ್ಯಂತ ಒಂದೇ ರೀತಿಯ ಶಿಕ್ಷಣ ನೀತಿ ಜಾರಿ ಬರಬೇಕಿದೆ.

ಇದು ಬರಬೇಕಾದರೆ ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಚ್ಚೆತ್ತುಕೊಳ್ಳಬೇಕಿದೆ.ಪ್ರಾಥಮಿಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ.ಪ್ರತಿಯೊಂದು ವಿಷಯಗಳಿಗೂ ಸಮಾನ ಮಹತ್ವ ನೀಡಬೇಕಿದೆ.ಪ್ರತಿ ತರಗತಿಗೂ ವಿಷಯಾಧಾರಿತ ಶಿಕ್ಷಕರ ನೇಮಕ ಆಗಬೇಕಿದೆ.ದೈಹಿಕ ಶಿಕ್ಷಣದ ಕಡೆಗಣನೆ ಸತತ ನಡೆಯುತ್ತಲೇ ಇದೆ.ಪ್ರತೀ ಪ್ರಾಥಮಿಕ ಶಾಲೆಗಳಿಗೂ ಮಕ್ಕಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಆಗಬೇಕು.ಆಗ ಸಮಾಜದಲ್ಲಿ ಶಿಸ್ತು ತನ್ನಿಂದ ತಾನೇ ಬರುತ್ತದೆ.ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಪದಕಗಳ ನಿರೀಕ್ಷೆ ಮಾಡಬಹುದು.

ಆದುದರಿಂದ ದೇಶದ ಸಮಾಜದಲ್ಲಿ ಸಾಮರಸ್ಯ,ಶಾಂತಿ,ಒಳ್ಳೆಯ ಬಾಂಧವ್ಯ, ದೇಶಾಭಿಮಾನ, ಕೊನೆಗೆ ವಿಶ್ವಶಾಂತಿ ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಕರಿಂದ ಮಾತ್ರ ಸಾಧ್ಯ. ಇದು ವಿಶ್ವ ಸತ್ಯ.ಇದನ್ನು ನಾವು ಎಷ್ಟೇ ಕೂಗಿ ಬೊಬ್ಬಿಟ್ಟರು ಸಾಧ್ಯವಿಲ್ಲ. ಅದಕ್ಕೆ ಸರಕಾರಗಳ ,ಅದರಲ್ಲೂ ವಿದ್ಯಾಮಂತ್ರಿಗಳು ಇಚ್ಚಾಶಕ್ತಿ ತೋರಬೇಕಿದೆ.ಇದು ನನ್ನ ನಿಮ್ಮೆಲ್ಲರ ಪ್ರಾರ್ಥನೆಯಲ್ಲವೆ? 🙏.

‌‌✍️ಬಿ ಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

Sharing Is Caring:

Leave a Comment