ಭೂ ಕುಸಿತಕ್ಕೆ ಕಾರಣಗಳೇನು – ಬೆಳಕು 2

ಬೆಳಕು

ಭೂ ಕುಸಿತಕ್ಕೆ ಕಾರಣಗಳೇನು

ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಪ್ರಾರಂಭವಾಗುವುದೇ ತಡ ಪ್ರತಿಯೊಂದು ಮಾಧ್ಯಮಗಳಲ್ಲೂ ,ಭೂ ಕುಸಿತದ ಬಗ್ಗೆಯೇ ಹೆಚ್ಚು ವರದಿಗಳು ಬರುತ್ತಿರುತ್ತವೆ.ಎಲ್ಲರೂ ಗಮನಿಸುತ್ತಿರಬಹುದು.
ಆದರೆ ಯಾರೂ ಕೂಡ ಅದರ ಬಗ್ಗೆ ಗಂಭೀರವಾಗಿ ಚಿಂತಿಸುವ ಹಾಗೆ ಕಾಣುತ್ತಿಲ್ಲ.ನಾವು ಮಾಡುವ ಕೆಲಸ :ಸರಕಾರಗಳನ್ನು ದೂರುವುದು,ಪರಿಹಾರವನ್ನು ಕೇಳುವುದು,ಕೊಡ್ಲಿಲ್ಲ ಎನ್ನುವ ಆರೋಪ, ರೋಧನ.
ಅದಕ್ಕೆ ಕಾರಣವೇನು,ಯಾರಿಂದ,ಎಲ್ಲಿ ತಪ್ಪಾಗಿದೆ,ಅದನ್ನು ತಡೆಗಟ್ಟಲು ಏನು ಮಾಡಬೇಕೆಂಬುದರ ಬಗ್ಗೆ ಗಮನ ಹರಿಸುವುದೇ ಇಲ್ಲ.
ಮಳೆಗಾಲ ಪ್ರಾರಂಭವಾದದ್ದು ಇತ್ತೀಚೆಗಂತು ಅಲ್ಲ,ಅದು ಪ್ರಾರಂಭವಾಗಿ ಸಾವಿರಾರು ವರ್ಷಗಳೇ ಆಗಿ ಹೋಗಿವೆ.ಇತ್ತೀಚಿನ ವರ್ಷಗಳಲ್ಲಿ ಆದಂತೆ ಭೂಕುಸಿತಗಳು ಆಗುತಿದ್ದರೆ ನಮಗೆ ಇರಲು ಭೂಮಿಯೇ ಇರುತ್ತಿರಲ್ಲಿವೇನೋ?
ಕೇವಲ 30ರಿಂದ 40 ವರ್ಷಗಳಲ್ಲಿ ಇಷ್ಟೋಂದು ಬದಲಾವಣೆಗಳಾಗಲು ಏನಾದರೂ ಪ್ರಮುಖ ಕಾರಣಗಳಿರಬೇಕಲ್ವೇ.
ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿರಬೇಕಾದರೆ,ಸರಿಯಾದ ಕೊಡೆಯಿರುತ್ತಿರಲಿಲ್ಲ,ಇಬ್ಬರಿಗೆ ಒಂದು ಕೊಡೆ,ನಡೆದುಕೊಂಡು ಹೋಗಲು ಸರಿಯಾದ ಮಾರ್ಗಗಳಿರುತ್ತಿರಲಿಲ್ಲ,ಗದ್ದೆ ಹುಣಿಯ ಮೇಲೆ ಹೋಗ್ಬೇಕಿತ್ತು.ಭಯಂಕರ ಗಾಳಿ,ಕೊಡೆ ಉಲ್ಟ ಆಗುವುದು, ಬಟ್ಟೆಯೆಲ್ಲ ಒದ್ದೆಯಾಗಿಕೊಂಡೆ ತರಗತಿಗೆ ಹೋಗುವುದು ಸಾಮಾನ್ಯವಾಗಿತ್ತು.ಅದಲ್ಲದೆ ಹಳ್ಳ,ತೊರೆಗಳಿಗೆ ಯಾವುದೇ ರೀತಿಯ ಕಾಲು ಸೇತುವೆ ಇರಲಿಲ್ಲ.ಸಾಧರಣ ನೀರನ್ನು ದಾಟಿಕೊಂಡು ಹೋಗುತ್ತಿದ್ದೇವು.ತಂದೆ ತಾಯಿ ಅದಕ್ಕೆ ಹೆದರುತ್ತಿರಲಿಲ್ಲ.ಗುಡ್ಡೆಯಲೆಲ್ಲ ನೀರೇ ನೀರು, ಎಲ್ಲಿ ಹೋದರು ನೀರಿನ ಒಸರು,ಅದರೊಟ್ಟಿಗೆ ನೀರಿನಲ್ಲಿ ಚಿಕ್ಕ ಚಿಕ್ಕ ಮೀನಿನ ಮರಿಗಳು, ಕು೦ಟಲ ಮರದಲ್ಲಿ ಬಡವರ ಕಪ್ಪು ದ್ರಾಕ್ಷಿ, ಅದನ್ನು ತಿಂದುಕೊಂಡು ಬಾಯೆಲ್ಲ ನೀಲಿ,ತಂದೆ ತಾಯಿ ಮನೆಯಲ್ಲಿ ನೋಡಿ ಜೋರು ಮಾಡುತ್ತಾರೆನ್ನುವ ಭಯ,ಅದನ್ನು ಹಾಕಿದ ಬಟ್ಟೆಯಲ್ಲೇ ಒರೆಸಿಕೊಂಡು ಹೋಗುವುದು.ಇದೆಲ್ಲ ಹಿಂದಿನ ಕಾಲದ ಶಾಲಾ ಮಕ್ಕಳ ಜೀವನ ಪದ್ದತಿ.


ಆದರೆ ಈಗಿನ ಮಕ್ಕಳಿಗೆ ಇದೆಲ್ಲ ಮರೀಚಿಕೆಯೇ ಸರಿ.ಮಕ್ಕಳಿಗೆ ನಡೆಯಲು ಗೊತ್ತಿಲ್ಲ, ಪರಿಸರದ ಸೌಂದರ್ಯವನ್ನು ಸವಿಯುವ ಅವಕಾಶವೂ ಇಲ್ಲ,ಆ ಮನಸ್ಸು ಇಲ್ಲ.ಕಾಲಿಗೆ ಶೂ,ಸೂಟ್ ಬೂಟ್ ಹಾಕಿಕೊಂಡು ಮನೆಯಿಂದ ಶಾಲೆಗೆ,ಶಾಲೆಯಿಂದ ಮನೆಗೆ,ಮನೆ ಬಾಗಿಲಿಗೆ ಸ್ಕೂಲ್ ಬಸ್,ಬಸ್ಸಲ್ಲಿ ಚಿಕ್ಕ ಮಕ್ಕಳ ನಿದ್ದೆ.ಇವೆಲ್ಲ ಮಕ್ಕಳ ಜೀವನ ಶೈಲಿ.


ಹಿಂದಿನ ಕಾಲದಲ್ಲಿ ಎಷ್ಟು ದೊಡ್ಡ ಮನೆ ಕಟ್ಟಲಿ,ನೆಲ ತಟ್ಟು ಮಾಡುವ ಕೆಲಸ‌ ಇರಲಿ,ತೋಟಕ್ಕೆ ಮಣ್ಣು ಹಿಡಿಯುವ ಕೆಲಸ ಇರಲಿ,ಏನಿದ್ದರೂ ಬರೀ ಕೂಲಿ ಕಾರ್ಮಿಕರಿಂದ ,ಅದೂ ಕೇವಲ ಹಾರೆ,ಗುದ್ದಲಿಯಿಂದ ಮಾತ್ರ.ಮಾರ್ಗ ಮಾಡಲಿ ಅದೂ ಕೂಡ ಹಾರೆ ಪಿಕ್ಕಾಸುಗಳಿಂದ ಜನರೇ ಮಾಡುತ್ತಿದ್ದರು. ಯಾವುದೇ ರೀತಿಯ ಜೆಸಿಬಿಯಾಗಲಿ,ಹಿಟಾಚಿಯಾಗಲಿ ಅಲ್ಲಿರುತ್ತಿರಲಿಲ್ಲ.ಭೂಮಾತೆಗೆ ಯಾವುದೇ ರೀತಿಯ ದೊಡ್ಡ ಗಾಯವಾಗುತ್ತಿರಲಿಲ್ಲ,ಕಂಪನವಾಗುತ್ತಿರಲಿಲ್ಲ,ದೊಡ್ಡ ದೊಡ್ಡ ದಿಣ್ಣೆಗಳಾಗುತ್ತಿರಲಿಲ್ಲ,ಭಾರೀ ಗಾತ್ರದ ಹೊಂಡಗಳಾಗುತ್ತಿರಲಿಲ್ಲ.ರೈತರಿಗೆ ತಮಗೆ,ತಮ್ಮ ದನಕರುಗಳಿಗೆ ,ಊಟ, ಮೇವು ಕೊಡುತ್ತಿರುವ ಭೂಮಾತೆಯ ಭಯ ಮತ್ತು ಪ್ರೀತಿ,ಜಾಗೃತಿ ಇತ್ತು.ಯಾವುದೇ ರೀತಿಯ ದೊಡ್ಡ ದೊಡ್ಡ ತೋಟಗಳಿರಲಿಲ್ಲ.ಎಲ್ಲಿ ನೋಡಿದರೂ ಭತ್ತದ ಗದ್ದೆಗಳೇ ಕಾಣುತ್ತಿದ್ದವು.ಅವುಗಳಲ್ಲಿ ನೀರು ತುಂಬಿಕೊಂಡು ನೋಡುವಾಗ ಸಾಗರದಂತೆ ಕಾಣುತ್ತಿದ್ದವು.ಪ್ರತೀ ಗದ್ದೆಯ ಮೂಲೆಯಲ್ಲೊಂದು ಕೆದು ಅಥವಾ ಚಿಕ್ಕ ಕೆರೆ ಇರುತಿತ್ತು.ಅದರಲ್ಲಿ ಯಾವಾಗಲೂ ನೀರು ಬತ್ತುತಿರಲಿಲ್ಲ.ಗದ್ದೆಯ ಕೊಯ್ಲು ಮುಗಿದ ಕೂಡಲೇ ಮಿಶ್ರ ಬೆಳೆಯಾಗಿ ಬೇಳೆಕಾಳುಗಳನ್ನು ಬಿತ್ತನೆ ಮಾಡುತ್ತಿದ್ದರು ಅದರಿಂದಾಗಿ ಭೂಮಿಯ ಫಲವತ್ತತೆ ಹೆಚ್ಚಾಗುತಿತ್ತು.ಗದ್ದೆಯ ಬದಿಯಲ್ಲಿ ಹರಿಯುತ್ತಿದ್ದ ತೊರೆಗಳನ್ನು ರೈತರು ತಪ್ಪದೆ ನೀರು ಸರಿಯಾಗಿ ಹರಿದು ಹೋಗುವಂತೆ ಮಾಡುತ್ತಿದ್ದರು.ಆಗ ಮಳೆಗಾಲದಲ್ಲಿ ಹರಿಯುವ ನೀರಿಗೆ ಯಾವುದೇ ತಡೆಗಳಿಲ್ಲದೆ,ನೀರು ಅಲ್ಲಿಂದ ಇತರೆಡೆಗೆ ನುಗ್ಗುತ್ತಿರಲಿಲ್ಲ.


ಈಗ ನಮ್ಮ ಬುದ್ದಿವಂತರಿರುವ ಈಗಿನ ಕೃಷಿ ಪದ್ದತಿ, ಮನೆ ಕಟ್ಟುವ ,ನೆಲ ಸಮತಟ್ಟು ಮಾಡುವ ,ತೋಟಗಳಿಗೆ ಮಣ್ಣು ಹಿಡಿಯುವ ಕ್ರಮ,ನಾವೀನ್ಯತೆಯಿಂದ ಕೂಡಿದ ಜೀವನ ಶೈಲಿಯನ್ನು ಒಮ್ಮೆ ಚಿಂತನ -ಮಂಥನ ಮಾಡುವ.ನಾವು ಮಾಡುವ ಕೆಲಸಗಳ ಬಗ್ಗೆ ಇಣುಕಿ ನೋಡುವ,ನಾವೇಷ್ಟು ಮುಂದುವರಿದಿದ್ದೇವೆ,ನೂತನ ಕೃಷಿ ಉಪಕರಣಗಳ ಬಗ್ಗೆ ,ನೂತನ ಮಾದರಿಯ ಕೃಷಿ ಪದ್ದತಿ, ನೂತನ ಮಾದರಿಯ ಯಂತ್ರೋಪಕರಣಗಳ ಬಗ್ಗೆ ಒಂದಿಷ್ಟು ಚರ್ಚಿಸುವ,ಆಗ ಗೊತ್ತಾಗುತ್ತದೆ,ಈಗಿನ ಭೂ ಕುಸಿತ,ಕೃತಕ ಜಲಪ್ರಳಯಗಳು ಯಾಕಾಗುತ್ತವೆ ಎಂಬುದು.
ಭತ್ತದ ಬೇಸಾಯ ಈಗಿನ ಕಾಲದಲ್ಲಿ ಲಾಭದಾಯಕವಲ್ಲ ಒಪ್ಪಿಕೊಳ್ಳುವ ವಿಚಾರವೆ.ಅದಕ್ಕಾಗಿ ನಾವು ಏನು ಮಾಡಿದ್ದೇವೆ,ವಿಶಾಲವಾಗಿ ಹಚ್ಚ ಹಸುರಿನಿಂದ ಶೋಭಿಸುತ್ತಿದ್ದ ಹೊಲ ಗದ್ದೆಗಳಲ್ಲಿ ಅಡಿಕೆ,ತೆಂಗು,ಕೊಕ್ಕ ಗಿಡ,ಬಾಳೆ,ಭೂಮಿಯ ಫಲವತ್ತತೆಯನ್ನು ಸರ್ವನಾಶ ಮಾಡುವ ರಬ್ಬರ್ ಇವುಗಳನ್ನು ಪ್ರೀತಿಯಿಂದ ಅಪ್ಪಿಕೊಂಡು ಕೃಷಿ ಮಾಡುತ್ತಿದ್ದೇವೆ.ಇದರಿಂದಾಗಿ ವಿಶಾಲವಾಗಿ ಸ್ವಚ್ಚಂದವಾಗಿ ಹರಿಯುತ್ತಿದ್ದ ನೀರಿಗೆ ಹರಿಯಲು ಅವಕಾಶ ಇಲ್ಲವಾಗಿದೆ,ಮತ್ತು ತೊರೆಗಳಲ್ಲಿ ನೇರೇ ಹರಿದು ಹೋಗುತ್ತಿಲ್ಲ,ಕೃಷಿಗೆ ನೀರು ಸಾಕಾಗುತ್ತಿಲ್ಲ,ಗದ್ದೆಗಳ ಮೂಲೆಯಲ್ಲಿರುತ್ತಿದ್ದ ಚಿಕ್ಕ ಕೆರೆಗಳು ಇಲ್ಲವೇ ಇಲ್ಲ,ಅದನ್ನು ಮುಚ್ಚಿ ಅಲ್ಲಿ ಅಡಿಕೆ,ತೆಂಗು ಅಥವಾ ಇನ್ನಾವುದೋ ಗಿಡಗಳನ್ನು ನೆಡುತ್ತೇವೆ.


ಈಗ ರೈತಾಪಿ ಜನ ನಾವೆನಿದ್ದೇವೆ,ನಾವು ನೀರಿಗಾಗಿ ಪರದಾಡುತ್ತೇವೆ.ನಮ್ಮ ಮನಸ್ಸಿಗೆ ತಟ್ಟನೆ ಹೊಳೆದದ್ದು ಕೊಳವೆ ಬಾವಿ.ನಿಶ್ಯಬ್ದವಾಗಿದ್ದ ನಮ್ಮ ಭೂಮಿಗೆ ಬಕಾಸುರನ ಪ್ರವೇಶ, ಅದು ಬರುವಾಗಲೇ ಭೂಮಾತೆ ನಡುಗಿ ಹೋಗಿರುತ್ತಾಳೆ,ನೂರಾರು ಮೀಟರ್ ಗಳಷ್ಟು ದೂರಕ್ಕೆ ಬಕಾಸುರನ ಕರ್ಕಶ ಶಬ್ದ,ಮಾತ್ರವಲ್ಲದೆ,ನೂರಾರು ಅಡಿಗಳಷ್ಟು ದೂರದವರೆಗೆ ವಿಶೇಷ ಕಂಪನ,ವಿಶೇಷವಾದ ಗಾಳಿ,ಇದರಿಂದಾಗಿ ಭೂಮಿ ನಲುಗಿ ಹೋಗಿರುವುದಂತು ಸತ್ಯ.ನೂರಾರು ಅಡಿಗಳಷ್ಟು ಆಳಕ್ಕೆ ಯಂತ್ರದ ಮೂಲಕ ಕಪ್ಪು ಕಲ್ಲಿನ ಕೊರೆತ,ಕೊನೆಗೆ ನಮಗೆ ತೃಪ್ತಿಯಾಗುವಷ್ಟು ನೀರು ಬರುತ್ತದೆ,ಕೃಷಿ ಕೂಡ ಆಗುತ್ತದೆ ಆದರೆ ಎಷ್ಟು ವಿಸ್ತಾರವಾದ ಜಾಗದಲ್ಲಿದ್ದ ತೆರೆದ ಬಾವಿಗಳ ಮಾರಣಹೋಮ ಆಗಿ ಭೂಮಿಯ ಮೇಲ್ಪದರದಲ್ಲಿದ್ದ ನೀರಿನ ಒಸರು ಬತ್ತಿ ಹೋಗುತ್ತದೆ.
ಒಬ್ಬ ರೈತನಲ್ಲಿ ಒಂದು ಕೊಳವೆ ಬಾವಿಯಾದರೆ ಪರ್ವಾಗಿಲ್ಲ,ಅದು ಒಂದಲ್ಲ,ಎರಡಲ್ಲ,ನಾಲ್ಕೈದು ಬಾವಿಗಳು.ಅದೇ ರೀತಿಯಲ್ಲಿ ಎಲ್ಲಾ ಕೃಷಿಕರು ಇದೇ ಮಾದರಿಯಾಗಿದ್ದರೆ.ಆಗ ಭೂಮಿಯ ಮಣ್ಣು ಎಷ್ಟು ಸಡಿಲಗೊಂಡಿರಬಹುದು ಊಹಿಸಲು ಅಸಾಧ್ಯ.
ಅದೇ ರೀತಿ ನಮಗೆ ವಾಸ ಮಾಡಲು ಮನೆ ಬೇಕು ತಾನೆ? ಅದಕ್ಕೆ ವಾಸ್ತು ಬೇರೆ,ಎತ್ತರವಾದ ಆಯ್ದ ಜಾಗ ಬೇಕು,ಅದನ್ನು ಸಮತಟ್ಟು ಮಾಡಲು ಈಗಿನ ಕಾರ್ಮಿಕರಿಂದ ಅಸಾಧ್ಯ. ಅದಕ್ಕೆ ಬಂತು ಮತ್ತೊಂದು ಬೃಹದಾಕಾರದ ಜೆಸಿಬಿ,ಬೆಟ್ಟ ಗುಡ್ಡ ಎಂಬುದನ್ನು ಲೆಕ್ಕಿಸದೆ ಹರಿದಾಡಿಕೊಂಡು ಹೋಗುವ ಹಿಟಾಚಿ.ಅವುಗಳ ಶಬ್ದವಂತೂ ಇಡೀ ಭೂಮಿಯನ್ನು ಹೆದರಿಸಿ ಬಿಡುತ್ತದೆ.ಎತ್ತರವಾದ ಜಾಗದಲ್ಲಿ ಮುಗಿಲೆತ್ತರದ ಭವ್ಯ ಬಂಗಲೆಗಳು ಎದ್ದು ನಿಲ್ಲುತ್ತವೆ.ಬೆಟ್ಟ ಗುಡ್ಡದಲ್ಲಿದ್ದ ಮರಗಳೆಲ್ಲ ಮಾಯವಾಗಿ ಅಲ್ಲಿ ಐಷಾರಾಮಿ ರೆಸಾರ್ಟ್ ಗಳು,ಹೋಟೆಲ್ ಗಳು ನಿಂತು ಗಹ ಗಹಿಸಿ ನಗುತ್ತಿವೆ.ಆದರೆ ಭೂಮಿ ತಾಯಿ ಕಣ್ಣೀರು ಹಾಕುತ್ತಾಳೆ.ಎಲ್ಲಿ ನೋಡಿದರು ಕಣ್ಣಿಗೆ ಕಾಣುತ್ತಿದ್ದ ಬೆಟ್ಟ ಗುಡ್ಡಗಳ ಜಾಗದಲ್ಲಿ ಬೃಹತ್ ಗಾತ್ರದ ಗಗನಚುಂಬಿ ಕಟ್ಟಡಗಳದ್ದೇ ಕಾರ್ಬಾರ್.


ಈಗ ಹೇಳಿ,ಈಗಿನ ಪ್ರಕೃತಿ ವಿಕೋಪಕ್ಕೆ ಕಾರಣವೇನು ಮತ್ತು ಯಾರು.ಭೂಮಿಯ ಮಣ್ಣಿನ ಕಣಗಳು ಸಡಿಲಗೊಂಡಿವೆ,ಭೂಮಿಯ ಮೇಲಿದ್ದ ಹಚ್ಚ ಹಸುರಿನ ಕಾಡುಗಳು ಇಲ್ಲವೇ ಇಲ್ಲ.ನಮ್ಮ ಹಿರಿಯರು ಮಣ್ಣು ಕೊಚ್ಚಿಕೊಂಡು ಹೋಗ್ಬಾರದು ಎಂದು ಹಳ್ಳ ತೊರೆಗಳ ಬದಿಯಲ್ಲಿ ಮುಂಡೋವು ಎನ್ನುವ ಒಂದು ಜಾತಿಯ ಗಿಡವನ್ನು ನೆಡುತ್ತಿದ್ದರು.ಈಗಿನವರಿಗೆ ಅದರ ಹೆಸರು ಬಿಡಿ ಪರಿಚಯವೇ ಇರದು.
ಆದುದರಿಂದ ಈಗ ನಾವು ಮನೆ ಮಠ ಕಳೆದು ಹೋಯಿತು, ಬೆಳೆ ನಾಶವಾಯಿತು, ಬೆಳೆದ ಬೆಳೆ ಕೊಚ್ಚಿಕೊಂಡು ಹೋಯಿತು, ಮಾರ್ಗ ತುಂಡಾಯಿತು,ಸೇತುವೆ ಮುಳುಗಿ ಹೋಯಿತು,ಮನೆಗಳಿಗೆ ನೀರು ನುಗ್ಗಿತ್ತು,ಧರೆ ಕುಸಿಯಿತು, ಯಾತ್ರಾಸ್ಥಳಗಳಿಗೆ ಹೋದವರು ಜಲಪ್ರಳಯದೊಂದಿಗೆ ಕೊಚ್ಚಿಕೊಂಡು ಹೋದರು,ನಾವೆಲ್ಲರೂ ಮನೆ ಮಠಗಳಿಲ್ಲದೆ ದಿಕ್ಕು ದೆಸೆಯಿಲ್ಲದಾಗಿದ್ದೇವೆ,ಪಾಠ ಪ್ರವಚನಗಳಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಹೋಯಿತು,ಸರಕಾರಗಳು ಸ್ಪಂದಿಸುತ್ತಿಲ್ಲ,ಪರಿಹಾರ ಸಿಕ್ಕಿಲ್ಲ,ಸಿಕ್ಕಿದರೂ ಕಡಿಮೆಯಾಯಿತು ಎಂದು ಅಳುವುದರಲ್ಲಿ ಅರ್ಥವಿಲ್ಲ.ಭೂಮಿ ಮುನಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ನಮಗೆ ಮೊದಲೇ ತಿಳಿದಿರಬೇಕಿತ್ತು.ನಮ್ಮ ಆಸೆಗಳಿಗೆ ಕಡಿವಾಣ ಹಾಕ್ಬೇಕಿತ್ತು.ಒಂದು ಗಾದೆ ಮಾತು ನೆನಪಾಯಿತು,’ಅಡಿ ತಪ್ಪಿದರೆ ಆನೆಯೂ ಬೀಳುತ್ತದೆ’ ಭೂಮಿಯ ಬುಡ ಅಲುಗಾಡಲು ಪ್ರಾರಂಭವಾಗಿದೆ.ಅದಕ್ಕೇ ಭೂಕುಸಿತಗಳು ಪ್ರಾರಂಭವಾಗಿವೆ,ನೀರಿಗೆ ಹರಿಯಲು ಸರಿಯಾದ ಜಾಗವಿಲ್ಲ ಅದಕ್ಕೆ ಜಲಪ್ರಳಯ ಪ್ರಾರಂಭದವಾಗಿದೆ.ಇದಕ್ಕೆ ಯಾರನ್ನೂ ದೂರಿ ಪ್ರಯೋಜವಿಲ್ಲ.ಈಗ ಆಗುತ್ತಿರುವ ಎಲ್ಲಾ ಅನಾಹುತಗಳಿಗೆ ನಾವು ಮತ್ತು ನಮ್ಮ ಆಸೆಗಳೇ ಕಾರಣ ಹೊರತು ದೇವರಲ್ಲ.ಉಂಡಿದುಣ್ಣೋ ಮಹರಾಯ ಎಂಬ ನಾಣ್ಣುಡಿ ಎಷ್ಟು ಸತ್ಯವಲ್ಲವೆ.
✍️ಬಿಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

Sharing Is Caring:

Leave a Comment