ಪ್ರಾಮಾಣಿಕತೆ, ನೈಜತೆ,ಇಚ್ಚಾ ಶಕ್ತಿ ಮತ್ತು ಕರ್ತವ್ಯ ಪರತೆ – ಬೆಳಕು 1

ಬೆಳಕು

ಪ್ರಾಮಾಣಿಕತೆ, ನೈಜತೆ,ಇಚ್ಚಾ ಶಕ್ತಿ ಮತ್ತು ಕರ್ತವ್ಯ ಪರತೆ

ಈ ಮೇಲೆ ಉಲ್ಲೇಖಿಸಿದ ಅಂಶಗಳನ್ನು ಗಮನಿಸಿ. ಇವುಗಳು ಪ್ರತಿಯೊಬ್ಬ ಮನುಷ್ಯನಲ್ಲಿರಬೇಕಾದ ,ಅಪ್ಪಟ ಮುತ್ತುಗಳು.ಇವುಗಳು
ಪಾಲಿಶ್ ಮಾಡಿದಷ್ಟು ಹೊಳಪನ್ನು ಪಡೆಯುತ್ತವೆ.
ಪ್ರಾಮಾಣಿಕತೆ ಎಂದರೇನು ಎಲ್ಲರಿಗೂ ತಿಳಿದಿರತಕ್ಕ ಸತ್ಯ.ತಾನು ಮಾಡುವ ಕೆಲಸವನ್ನು ನಿಯಮಬದ್ದವಾಗಿ,ಕಾನೂನು ಬದ್ದವಾಗಿ,ಎಲ್ಲೂ ಲೋಪ ಬಾರದಂತೆ,ಕರ್ತವ್ಯಕ್ಕೆ ಚ್ಯುತಿ ಬಾರದಂತೆ,ಯಾರಿಗೂ ಅನ್ಯಾಯ ಆಗದಂತೆ,ಲೋಕ ಒಪ್ಪುವಂತೆ,ಸತ್ಯ ಕಣ್ಣಿಗೆ ಕಾಣುವಂತೆ, ಆತ್ಮವಂಚನೆ ಮಾಡಿಕೊಳ್ಳದೆ ಇನ್ನೊಬ್ಬರ ಮುಲಾಜಿಗೆ ಒಳಗಾಗದೆ,ಮಿತೃತ್ವವನ್ನು ಪರಿಗಣಿಸದೆ,ವೈಯಕ್ತಿಕ ದ್ವೇಷ, ಮತ್ಸರವನ್ನು ತನ್ನ ಹತ್ತಿರ ಸುಳಿಯದಂತೆ,ಒಬ್ಬರ ಪ್ರತಿಭೆಗೆ ಅನ್ಯಾಯ ಆಗದಂತೆ,ತಪ್ಪುಗಳು ಕಣ್ಣಿಗೆ ಕಂಡಾಗ ಅವುಗಳನ್ನು ಅಲ್ಲೇ ತುಂಡರಿಸುವ,ನೂರಲ್ಲಿ 75% ಜನ ಒಪ್ಪತಕ್ಕ ನ್ಯಾಯವನ್ನು ಒದಗಿಸಿಕೊಡುವ,ಕಣ್ಣಿಗೆ ಕಾಣದ ಶಕ್ತಿಯೇ ಪ್ರಾಮಾಣಿಕತೆ. ಇದು ಕೂಲಿ ಕಾರ್ಮಿಕರಿಂದ ಹಿಡಿದು ಇಡೀ ಜನಾಂಗದ ಬೆನ್ನೆಲುಬು ರೈತಾಪಿ ದೇವರುಗಳನ್ನು ಒಳಗೊಂಡಂತೆ, ದೇಶವನ್ನಾಳುವ ಜನ ನಾಯಕರು,ಕೊನೆಗೇ ಇಡೀ ಸರಕಾರದ ಆದೇಶಗಳನ್ನು ಜಾರಿಗೆ ತರುವ,ಕಟ್ಟಕಡೆಯ ಜನರಿಗೂ ತಲಪಿಸುವ ಅಧಿಕಾರಿಗಳು.
ಅಧಿಕಾರಿಗಳು ಎಂದರೆ ಸರಕಾರದಿಂದ ಸಂಬಳ ಪಡೆಯುವ ವರ್ಗ.ಈಗ ನನ್ನ ನೆನಪಿಗೆ ಬಂದದ್ದು ಶಿಕ್ಷಣ ಇಲಾಖೆ. ಅದರಲ್ಲೂ ಶಿಕ್ಷಕರು.ಶಿಕ್ಷಕರು ಅಂದ್ರೆ ಮಾರ್ಗದರ್ಶಕರು.ತಮ್ಮನ್ನು ಕಣ್ಣಿಗೆ ಕಾಣುವ ದೇವರೆಂದೇ ನಂಬಿ ಬರುವ ವಿದ್ಯಾರ್ಥಿ ದೇವರುಗಳು.ಪ್ರಾಮಾಣಿಕತೆ ಅಂದ್ರೆ ಶಿಕ್ಷಕರು. ಅಂದ್ರೆ ಅವರು ಹೇಗಿರಬೇಕು, ಹೇಗೆ ವರ್ತಿಸಬೇಕು,ಅವರಿಗೆ ಹೇಗೆ ನ್ಯಾಯ ಒದಗಿಸಬೇಕು,ಅವರನ್ನು ಹೇಗೆ ಸತ್ಪ್ರಜೆಗಳನ್ನಾಗಿ ಮಾಡಬೇಕು,ಅವರ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ನೀರೇರೆಯುವುದು,ಪ್ರತಿಭೆ ಎಲ್ಲಿಯೇ ಇರಲಿ ಅವರನ್ನು ಪ್ರೋತ್ಸಾಹಿಸಬೇಕೇ ವಿನ:ಅವುಗಳನ್ನು ಆತ್ಮವಂಚನೆಗೆ ಬಲಿಯಾಗಿ,ಮಿತೃತ್ವಕ್ಕೆ ಬಲಿಬಿದ್ದು,ವೈಯಕ್ತಿಕ ದ್ವೇಷವನ್ನು ಮಕ್ಕಳಲ್ಲಿ ತೋರಿಸುವುದು,ತಪ್ಪುಗಳು ಕಣ್ಣಿಗೆ ಕಾಣುತ್ತಿದ್ದರೂ ಕುರುಡರಂತೆ ನಟಿಸುವ,ತನ್ನವರಿಗಾಗಿ, ಕಠಿಣವಾಗಿ ಅಭ್ಯಾಸಿಸಿ ಅದನ್ನು ಒರೆಗೆ ಹಚ್ಚುವ ಸಮಯದಲ್ಲಿ ಅವರನ್ನು ಪ್ರೋತ್ಸಾಹಿಸುವುದನ್ನು ಬಿಟ್ಟು ತಪ್ಪು ನಿರ್ಣಯಗಳನ್ನು ಕೊಡುವುದು ಪ್ರಾಮಾಣಿಕತೆಯ ಇನ್ನೊಂದು ಮುಖ.ಇದು ಶಿಕ್ಷಕರಲ್ಲೂ ದೈಹಿಕ ಶಿಕ್ಷಣದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಕಟು ಸತ್ಯ.ಇಪ್ಪತ್ತು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಇದ್ದ ಮರ್ಯಾದೆಯೇ ಬೇರೆಯಾಗಿತ್ತು.ಆದರೆ ಈಗ ಅದು ಕೂಡಾ ಆಹಾರ ಪದಾರ್ಥಗಳು ಹೇಗೆ ವಿಷಯುಕ್ತವಾಗುತ್ತಿವೆಯೋ ಹಾಗೇಯೇ ನಮ್ಮ ಶಿಕ್ಷಕರ ತೀರ್ಪುಗಳು ಕೂಡಾ ಹಾಗೇಯೇ ಆಗಿವೆ ಎಂದು ಹೇಳಲು ತುಂಬಾ ಬೇಸರವಾಗುತ್ತದೆ.ಇತ್ತೀಚಿಗೆ ಒಂದು ಘಟನೆ ನಡೆಯಿತು. ಅದನ್ನು ಯೋಚಿಸಿದಾಗ ಪ್ರಾಮಾಣಿಕತೆಗೆ ಎಲ್ಲಿದೆ ಬೆಲೆ.

ಅತೀ ಶ್ರೀಮಂತ‌ ಕ್ರೀಡೆ ಕ್ರಿಕೆಟನ್ನು ನೋಡಿ ಅಲ್ಲಿ ಫಿಕ್ಸಿಂಗ್,ಅದೇ ರೀತಿಯಲ್ಲಿ ಇನ್ನುಳಿದ ಕ್ರೀಡೆಗಳು.

ಒಂದು ಚಿಕ್ಕ ಉದಾಹರಣೆ ತೆಕೊಳ್ಳುವ,ಶಾಲೆ ಶಾಲೆಗಳ ನಡುವೆ ನಡೆಯುವ ಸ್ಪರ್ಧೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನೇ ಒಂದು ರೀತಿಯಲ್ಲಿ ಫಿಕ್ಸ್ ಮಾಡುವುದು.ಅಂದ್ರೆ ಹಣದಿಂದಲ್ಲ,ಬದಲಿಗೆ,friendship,ತನ್ನ ಶಾಲೆಯೇ ಗೆಲ್ಲಬೇಕೆಂಬ ಕೆಟ್ಟ,ನೀಚ,ಹೇಯ,ಸಮಾಜ ಮೆಚ್ಚದ ದುರಾಲೋಚನೆಯಿಂದ,ನಿಜವಾದ ಪ್ರತಿಭೆಗಳನ್ನು ತಮ್ಮ ಕೈಯಿಯಿಂದಲೇ ಕೊಲ್ಲುವ ಕೆಟ್ಟ ನಿರ್ಣಯಗಳು.ಇದನ್ನು ಉಲ್ಲೇಖ ಮಾಡಬಾರದಿತ್ತು,ಆದರೆ ಹೀಗೆ ಮುಂದುವರೆದರೆ ಯಾವುದೇ ಬೆಂಬಲವಿಲ್ಲದ ದೈಹಿಕ ಶಿಕ್ಷಣ ಶಿಕ್ಷಕರ ಪ್ರತಿಭಾವಂತ ವಿದ್ಯಾರ್ಥಿ ದೇವರುಗಳಿಗೆ ಅನ್ಯಾಯ ಆಗುತ್ತಲೇ ಹೋಗುತ್ತದೆ.ಇದು ಪ್ರಾಮಾಣಿಕತೆಯೆಂಬ ಹೊಳಪಿನ ಮುತ್ತನ್ನು ಕುರೂಪಿಗೊಳಿಸುವ ಹೇಯ ಕೃತ್ಯವಲ್ಲದೆ ಇನ್ನೇನು.

ಕೆಲವೇ ದಿನಗಳ ಹಿಂದೆ ನಡೆದ ಒಂದು ಘಟನೆ,ನೆನಪಿಗೆ ಬರುತ್ತದೆ.ನಾನೇ ಎರಡನೇ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ.ಮುಖ್ಯ ತೀರ್ಪುಗಾರರಾಗಿ ನುರಿತ,ಪ್ರಾಮಾಣಿಕ,ಆ ಪಂದ್ಯದ ಸಂಪೂರ್ಣ ಮಾಹಿತಿ ಇರುವ ಮಾತ್ರವಲ್ಲದೆ,ದೇಶದ ಒಂದು ಕ್ರೀಡಾಕೂಟದಲ್ಲಿ ತರಬೇತುದಾರರಾಗಿ ಹೋಗುವವರು ಇದ್ರು.ಒಬ್ಬ ಕ್ರೀಡಾಪಟು ಒಂದು ತಪ್ಪು ಮಾಡಿದ ಆಗ ನಾನು ಅದನ್ನು ಫೌಲ್ ಕೊಟ್ಟೆ.ಆಗ ಆ ತಂಡದ ದೈಹಿಕ ಶಿಕ್ಷಣ ಶಿಕ್ಷಕರ ಬಾಯಿಯಿಂದ ಮಾತು ಏನು ಗೊತ್ತೇ,ಇವರಿಗೆ ಏನೂ ಗೊತ್ತಿಲ್ಲ, ತಾನೊಬ್ಬ ದ್ರೋಣಾಚಾರ್ಯ ಎಂಬಂತೆ ವರ್ತಿಸಿದ.ಉಳಿದ ವಿಷಯ ಬೇಡ ಬಿಡಿ.ಅಂದ್ರೆ ತಾನೇ ಗೆಲ್ಲಬೇಕು.ಅದು ಯಾವ ದಾರಿಯಿಂದಾದರೂ ಆಗ್ಬಹುದು. ಇದು ಇಂದಿನ ನೈಜತೆ.

ಇದೆಲ್ಲಾ ಸರಿಯಾಗಬೇಕಿದ್ದರೆ ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಕೊಳ್ಬೇಕು.ಅದು ಬಿಟ್ಟು ಅವರನ್ನು ಹಾಗೇಯೇ ಬಿಟ್ಟರೆ ದೈಹಿಕ ಶಿಕ್ಷಣ ಕ್ಷೇತ್ರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಮೌಲ್ಯ,ಪ್ರಾಮಾಣಿಕತೆ ತುಕ್ಕು ಹಿಡಿದ ಕಬ್ಬಿಣದಂತಾಗುವುದರಲ್ಲಿ ಎರಡು ಮಾತಿಲ್ಲ.ಇದು ಈ ಒಂದು ಕ್ಷೇತ್ರಕ್ಕೆ ಮಾತ್ರ ಅಂಟಿಕೊಂಡಿರುವ ರೋಗವಲ್ಲ.ಪ್ರತಿಯೊಂದು ಕ್ಷೇತ್ರದಲ್ಲೂ ಮೇರೆ ಮೀರುತ್ತಿದೆ.ಈಗ ಇನ್ನೊಂದು ಘಟನೆ ನೆನಪಿಗೆ ಬಂತು,ಸರಕಾರದ ಯೋಜನೆಯನ್ನು ಜಾರಿಗೆ ತರುವ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಆತ್ಮೀಯ ಮಿತ್ರರ ಕರ್ತವ್ಯ ಪರತೆ,ಪ್ರಾಮಾಣಿಕತೆ, ಇಚ್ಚಾಶಕ್ತಿ,ಬದ್ದತೆ.ಇದು ಶಿಕ್ಷಕರಿಂದ ಪ್ರಾರಂಭವಾಗಬೇಕು.ಇದು ಮೊದಲು ಇತ್ತು,ಈಗ ಮರೆತಂತೆ ನಟಿಸುತ್ತಾರೆ.ಶಿಕ್ಷಣ ಕ್ಷೇತ್ರ ಪರಿಶುದ್ದವಾದರೆ ಇಡೀ ಸಮಾಜವೇ ಹೊಳಪನ್ನು ಪಡೆಯುವುದರಲ್ಲಿ ಎರಡು ಮಾತಿಲ್ಲ.ಈಗ ನಾವು ಪ್ರತೀ ನಿತ್ಯ ಮಾಧ್ಯಮದಲ್ಲಿ ಬರುವ ಬಣ್ಣದ,ಹಗರಣಗಳು,ಅದೂ ಪರೀಕ್ಷಾ ಹಗರಣಗಳು.
ಇವುಗಳನ್ನು ಬಾಲ್ಯದಲ್ಲಿಯೇ ಚಿವುಟಿ ಹಾಕಿದರೆ ಹೆಮ್ಮರವಾಗಲು ಸಾಧ್ಯವೇ?

ನಾವು ಭಾಷಣದಲ್ಲಿ,ಸಭೆಗಳಲ್ಲಿ,ಬೇರೆ ಬೇರೆ ಸಂದರ್ಭದಲ್ಲಿ ವೇದವಾಕ್ಯಗಳನ್ನು ಉದ್ಗರಿಸುತ್ತೇವೆ.ಆದರೆ ಕಾರ್ಯದಲ್ಲಿ ಮಾತ್ರ ಶೂನ್ಯ.
ಆದುದರಿಂದ ಮಿತ್ರರೇ, ನಾವು ಪ್ರಾಮಾಣಿಕತೆಯಿಂದ,ಇಚ್ಚಾಶಕ್ತಿಯಿಂದ,ಬದ್ದತೆಯಿಂದ,ನೈಜತೆಯಿಂದ ಕೆಲಸ ಮಾಡಿದಾಗ,ಆತ್ಮವಂಚನೆ ಮಾಡಿಕೊಳ್ಳದೆ,ತಪ್ಪುಗಳು ನಡೆದಾಗ ಅವುಗಳನ್ನು ಸರಿಯೆಂದು ವಾದಿಸದೆ,ನಿಜವಾದ ಪ್ರತಿಭೆಗಳನ್ನು ಚಿವುಟಿ ಹಾಕದೇ,ವೈಯಕ್ತಿಕ ದ್ವೇಷಕ್ಕೆ ಬಲಿಯಾಗದೇ,ಪರಿಚಯಕ್ಕೆ ಮಾರುಹೋಗದೇ,ತಾನೇ ಗೆಲ್ಲಬೇಕೆಂಬ ಹುಂಬತನವನ್ನು ಬಿಟ್ಟು ಪ್ರಾಮಾಣಿಕರಾಗಿ,ನ್ಯಾಯಲಯದಲ್ಲೊಂದು ಮಾತಿದೆ,”
ನೂರು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಒಬ್ಬ ನಿರಾಪರಾಧಿಗೆ ಶಿಕ್ಷೆ ಆಗಬಾರದು.”
ನಮ್ಮ ಹುದ್ದೆಗೆ ಗೌರವ ಕೊಡುವ,ಸರಿ ಮಾಡದಿದ್ದರೂ ತಪ್ಪು ಮಾಡದಿರೋಣ.ಇದುವೇ ನಮ್ಮ ನಿತ್ಯ ಕರ್ಮವಾಗಲಿ,ಧ್ಯೇಯವಾಗಲಿ,ಇಚ್ಚಾಶಕ್ತಿಯನ್ನು ಪ್ರದರ್ಶಿಸೋಣ,ಬದ್ದತೆಯಿಂದ ಬದುಕೋಣ,ನೈಜತೆಯನ್ನು ಮೈಗೂಡಿಸಿಕೊಳ್ಳೋಣ,ಪ್ರೀತಿ ವಾತ್ಸಲ್ಯದಿಂದ ಬದುಕೋಣ,ಶಿಕ್ಷಕರು ಶಿಕ್ಷಕರಾಗಿರೋಣ,ಸರಕಾರದ ಋಣವನ್ನು ನ್ಯಾಯಯುತವಾಗಿ ತೀರಿಸೋಣ,ಯಾವ ಮಗುವಿಗೂ ಅನ್ಯಾಯ ಮಾಡದಿರೋಣ,ಎಲ್ಲಾ ಮಕ್ಕಳೂ ನಮ್ಮೆಲ್ಲರ ಆಸ್ತಿಯೆಂದು ನಂಬಿ ಬದುಕೋಣವಲ್ಲವೇ.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

Sharing Is Caring:

Leave a Comment