ಮಣ್ಣು – ಬೆಳಕು 7

WhatsApp Group Join Now
Telegram Group Join Now

ಬೆಳಕು

ಮಣ್ಣು


‌‌‌ “ಮಣ್ಣು,ಹೊನ್ನು ,ಹೆಣ್ಣು ” ಈ ಮೂರು ಶಬ್ದಗಳು ಬಹಳ ವಿಶೇಷ ಅರ್ಥವನ್ನು ಪಡೆದುಕೊಂಡಿವೆ.ಹೊನ್ನು ಮತ್ತು ಹೆಣ್ಣು ಮೊದಲ ಪದ ಮಣ್ಣಿನಿಂದಲೇ ಹುಟ್ಟಿಕೊಳ್ಳುತ್ತವೆ ಎಂದರೂ ತಪ್ಪಾಗದು. ಹೊನ್ನು ಮಣ್ಣಿನಿಂದಲೇ ದೊರೆಯುವುದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಹೆಣ್ಣು,ಹೇಗೆ ಮಣ್ಣಿನಿಂದ ಹುಟ್ಟಲು ಸಾಧ್ಯ ಎಂದು ಹುಬ್ಬೇರಿಸಬೇಡಿ.ಇದಕ್ಕೂ ಸಂಬಂಧವಿದೆ.ನಾವು ಪ್ರಕೃತಿಯ ಆರಾಧಕರು.ಪ್ರಕೃತಿಯನ್ನು ತಾಯಿಗೆ ಹೋಲಿಸುತ್ತೇವೆ.ಎಲ್ಲವನ್ನೂ ಕೊಡುವ ಔದಾರ್ಯತೆ ಇರುವುದಾದರೆ ಅದು ಹೆಣ್ಣಿಗೆ ಮಾತ್ರ.
ನಾವು ಚರಿತ್ರೆ ಓದಿದಾಗ ಗೊತ್ತಾಗುತ್ತೆ,ರಾಜ್ಯ ರಾಜ್ಯಗಳ ನಡುವೆ,ಯುದ್ಧ ನಡೆಯುತ್ತಿದ್ದದ್ದು ಈ ಮೂರು ವಿಷಯಗಳಿಗಾಗಿಯೇ ಎಂಬುದು ನಮಗೆಲ್ಲ ತಿಳಿದಿರುವ ಸಾಮಾನ್ಯ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಶೀತಲ ಸಮರ ನಡೆಯುತ್ತಿರುವುದು ಮುಖ್ಯವಾಗಿ ಮಣ್ಣಿಗಾಗಿ.

ಈ ಮಾನವ ಕುಲದ ಅಸ್ತಿತ್ವ ಇರುವುದೇ ಮಣ್ಣಿನಿಂದ. ಮನುಷ್ಯನ ಸಾಂದ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಆದರೆ ಮಣ್ಣು ,ಭೂಮಿಯ ಉದ್ದ ಅಗಲ ಎಂದಾದರೂ ಜಾಸ್ತಿಯಾದದನ್ನು ಯಾರಾದರೂ ಕೇಳಿದ್ದೀರ? ಇಲ್ಲ ತಾನೆ.ಒಬ್ಬ ರೈತನಲ್ಲಿ 10 ಎಕರೆ ಭೂಮಿ ಇದ್ದರೆ,ಅದು ಕಡಿಮೆಯಾಗುತ್ತದೆಯೇ ಹೊರತು ಜಾಸ್ತಿಯಾಗಲು ಸಾಧ್ಯವೇ?
ವರ್ಷದಿಂದ ವರ್ಷಕ್ಕೆ ಭೂಮಿಯ ಸಾಂದ್ರತೆ, ವಿಸ್ತಾರ ಕಡಿಮೆಯಾಗುವುದಂತು ಖಂಡಿತ.ಮನುಷ್ಯನ ಅತಿಯಾಸೆಯಿಂದಾಗಿ,ಪ್ರಕೃತಿಯು ತನ್ನ ಸೌಂದರ್ಯ ವನ್ನೇ ಕಳೆದುಕೊಂಡಿದ್ದಾಳೆ.ವರ್ಷದಿಂದ ವರ್ಷಕ್ಕೆ ಕಾಡು ಕಡಿಮೆಯಾಗುತ್ತಿದೆ,ಬೆಟ್ಟಗುಡ್ಡಗಳ ನಾಶ ಸತತ ನಡೆಯುತ್ತಿದೆ,ಕೃತಕ ಭೂಕಂಪಗಳು ನಡೆಯುತ್ತಿವೆ,ಅಣುಬಾಂಬ್ ಸ್ಪೋಟದ ಪ್ರಯೋಗದಿಂದ,ಜಲಪ್ರಳಯದಿಂದ,ಸಮುದ್ರ ಕೊರೆತದಿಂದ,ಭೂಮಾಫಿಯಾದಿಂದ,ಹೀಗೆ ಹಲವಾರು ಮಾನವ ನಿರ್ಮಿತ ಅಪರಾಧಗಳಿಂದ ನಮ್ಮ ಭೂಮಿಯ ವಿಸ್ತಾರ ಕಡಿಮೆಯಾಗುತ್ತಿದೆ.

ಅಷ್ಟೇ ಅಲ್ಲ ಭೂಮಿಯ ಸಾರ ಅಂದರೆ ಅದರ ಫಲವತ್ತತೆ ಕೂಡಾ ಕಡಿಮೆಯಾಗುತ್ತಿದೆ. ನಮಗೆ ಏನಿದ್ದರೂ ಕೂಡಲೇ ಸಿಗ್ಬೇಕು.ಅದಕ್ಕಾಗಿ ವಿಪರೀತ ರಾಸಾಯನಿಕ ಗೊಬ್ಬರಗಳ ಬಳಕೆ, ವಿಪರೀತ ನೀರಿನ ಬಳಕೆ,ಅವೈಜ್ಞಾನಿಕ ಕೃಷಿ ಪದ್ಧತಿ, ಅತಿಯಾದ ವಾಸ್ತು ಮೋಹ,ಇತ್ಯಾದಿಗಳಿಂದ ನಮಗೆ ನಾವೇ ಸ್ಮಶಾನ ನಿರ್ಮಿಸಿಕೊಳ್ಳುತ್ತಿದ್ದೇವೆ ಎಂದರೂ ತಪ್ಪಾಗಲಾರದು.
ನಮ್ಮ ಮುಂದಿನ ಪೀಳಿಗೆಗೆ ಫಲವತ್ತಾದ, ಕೃಷಿ ಯೋಗ್ಯವಾದ ಮಣ್ಣು,ಸ್ವಚ್ಚ ಪರಿಸರ,ಶುದ್ಧ ಗಾಳಿ,ಮಲೀನಮುಕ್ತ ನೀರು,ಬೆಟ್ಟ ಗುಡ್ಡಗಳು ,ಸ್ವಚ್ಚವಾದ ನದಿಗಳು, ಸ್ವಚ್ಚಂದವಾಗಿ ಹಾರುವ ಪಕ್ಷಿ ವರ್ಗ,ನಿರ್ಭೀತಿಯಿಂದ ಓಡಾಡುವ ಪ್ರಾಣಿಗಳು ಇರಬೇಕಾದರೆ ನಾವು ಇವತ್ತಿನಿಂದಲೇ ಎಚ್ಚೆತ್ತುಕೊಳ್ಳಬೇಕು.ಇನ್ನೊಬ್ಬರಿಗೆ ಉಪದೇಶ ಮಾಡುವುದನ್ನು ಬಿಟ್ಟು ಕಾರ್ಯಪ್ರವೃತ್ತರಾಗಬೇಕುಮಾತ್ರವಲ್ಲದೆ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ.ವಾಣಿಜ್ಯ ಬೆಳೆಗಳೊಂದಿಗೆ ಆಹಾರ ಬೆಳೆಗಳನ್ನು ಬೆಳೆಸಬೇಕು.ನಾವು ಮಾತ್ರ ವಾಣಿಜ್ಯ ಬೆಳೆ ಬೆಳೆಯುತ್ತೇವೆ,ಉಳಿದವರು ಆಹಾರ ಬೆಳೆಗಳನ್ನು ಬೆಳೆಯಲಿ ಎನ್ನುವ ತಪ್ಪು ಕಲ್ಪನೆಗಳನ್ನು ಬಿಡಬೇಕು.

ನಮ್ಮ ಹಿರಿಯರು ಬಿಟ್ಟು ಹೋದ ನಾಗ ಬನಗಳನ್ನು ನಾಶ ಮಾಡದೆ ಅವುಗಳನ್ನು ಉಳಿಸುವ ಕೆಲಸ ಮಾಡಬೇಕಿದೆ.ನಾವು ನಾಗನ ಆರಾಧಕರು,ಹಾಗಂತ ಹೇಳಿ ಕಾಡು ಕಡಿದು ಸುಂದರವಾದ ಸಿಮೆಂಟಿನಿಂದ ರಚಿಸಲ್ಪಟ್ಟ ನಾಗನ ಕಟ್ಟೆಗಳನ್ನು ಕಟ್ಟುವುದು ಬೇಡವೇ ಬೇಡ.ಆ ನಾಗ ಬನಗಳನ್ನು ಹಿರಿಯರು ಯಾಕೆ ಬೆಳೆಸಿದ್ದಾರೆ,ಅದರ ಹಿಂದೆ ಒಂದು ಒಳ್ಳೆಯ ಸಂದೇಶವಿದೆ.ನಾಗನ ಭಯದಿಂದಲಾದರೂ ಕಾಡು ಉಳಿಯಲಿ ಎಂಬುದು ಅವರ ಆಶಯವಾಗಿತ್ತು.
ಮಣ್ಣನ್ನು ನಾವು ಸರಿಯಾಗಿ ಬಳಸದೇ ಹೋದಲ್ಲಿ ಕೆಲವೇ ಕೆಲವು ವರ್ಷಗಳಲ್ಲಿ ಇಡೀ ಮಾನವ ಕುಲವೇ ಆಹಾರದ ಅಭಾವದಿಂದ ನರಳುವುದು ಖಂಡಿತ.

ನಮ್ಮಲ್ಲಿ ಒಂದು ಕೆಟ್ಟ ಅಭ್ಯಾಸ, ಯಾವ ಬೆಳೆಗೆ ಹೆಚ್ಚು ಬೇಡಿಕೆಯಿದೆ,ಯಾವುದಕ್ಕೆ ಹೆಚ್ಚು ಬೆಲೆಯಿದೆ,ಅದನ್ನು ಯಥೇಚ್ಛವಾಗಿ ಬೆಳೆಯುವುದು.ಕಾಡನ್ನು ನಾಶ ಮಾಡಿ ನಾಡು ಮಾಡಿ,ಪ್ರಕೃತಿಯ ಮೇಲೆ ‌ದೌರ್ಜನ್ಯಮಾಡುವುದು.
ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಪ್ರತಿಯೊಬ್ಬ ರೈತನು ವಾಣಿಜ್ಯ ಬೆಳೆಯೊಂದಿಗೆ ಆಹಾರ ಬೆಳೆಗಳನ್ನು ಬೆಳೆಯಬೇಕು,ಮಾತ್ರವಲ್ಲದೆ ಸಾವಯವ ಗೊಬ್ಬರವನ್ನು ಮಾತ್ರ ಬಳಸಬೇಕು,ಪ್ರತಿಯೊಬ್ಬರಿಗೂ ಇಂತಿಷ್ಟೇ ಜಮೀನು ಇರಬೇಕು,ಪ್ರತಿಯೊಬ್ಬರ ಜಮೀನಿನಲ್ಲಿ ಇಂತಿಷ್ಟು ಕಾಡು ಇರಬೇಕು ಎನ್ನುವ ಇಚ್ಚಾಶಕ್ತಿಯಿಂದ ಕೂಡಿದ ಕಾನೂನು ಜಾರಿ ಬರಬೇಕು,ಮಾತ್ರವಲ್ಲದೆ ಅದರ ಪಾಲನೆ ಖಡ್ಡಾಯವಾಗಿ ಆಗುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಾಮರ್ಶೆ ಮಾಡಬೇಕು.

ಹೀಗಿದ್ದಾಗ ಮಾತ್ರ ನಾವು ಅನುಭವಿಸುವ ಸುಖ,ನೆಮ್ಮದಿ,ವೈಭೋಗ,ಶುದ್ಧ ಗಾಳಿ,ಶುದ್ಧ ನೀರು, ಆಹ್ಲಾದಕರವಾದ ಪರಿಸರ, ಸುಂದರ ದೃಶ್ಯ, ಮನೋಹರವಾದ ನೋಟಗಳು,ಫಲವತ್ತಾದ ಮಣ್ಣು ನಮ್ಮ ಭವಿಷ್ಯದ ಪೀಳಿಗೆಗೆ ಕೊಡಲು ಸಾಧ್ಯ.
ಇದರಲ್ಲಿ ಜಾತಿ,ಧರ್ಮ, ಮತ ಭೇದ ಮತ್ತು ಹೊಲಸು ರಾಜಕೀಯ ಮಾಡಲು ಹೊರಟರೆ ನಮ್ಮ ಈ ಹಚ್ಚ ಹಸುರಿನ ಪ್ರಕೃತಿ ಮಾತೆ ಭದ್ರ ಕಾಳಿಯಾಗಿ ಇಡೀ ಜೀವರಾಶಿಯನ್ನೇ ಬಲಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಅದಕ್ಕಾಗಿ ನಾವು ಇವತ್ತಿನಿಂದಲೇ ಮಣ್ಣಿನೊಡನೆ ಆಟವಾಡುವುದನ್ನು ನಿಲ್ಲಿಸಬೇಕು.ಬಹಳ ಜಾಗರೂಕತೆಯಿಂದ ಪ್ರಕೃತಿ ಮಾತೆಯನ್ನು ನಡೆಸಿಕೊಳ್ಳಬೇಕು.ಮನುಜರೆಲ್ಲರೂ ಒಂದೇ ಜಾತಿ ಎಂದು ತಿಳಿದು ಬಾಳಬೇಕು.
✍️ಬಿಕೆ ಸವಣೂರು.
IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

WhatsApp Group Join Now
Telegram Group Join Now
Sharing Is Caring:

Leave a Comment